ಅಕ್ರಮ ಮರಳು ಅಡ್ಡೆಗೆ ದಾಳಿ: 20 ದೋಣಿಗಳು ವಶಕ್ಕೆ
ಬಂಟ್ವಾಳ: ತಾಲೂಕಿನ ತುಂಬೆ, ಮಾರಿಪಳ್ಳ, ಭಾಗದ ನೇತ್ರಾವತಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ಬಂಟ್ವಾಳ ಕಂದಾಯ ಇಲಾಖೆ ಹಾಗೂ ಗಣಿ ಇಲಾಖೆ ಅಧಿಕಾರಿಗಳ ತಂಡ ಜಂಟಿ ದಾಳಿ ನಡೆಸಿ ಒಟ್ಟು 20 ದೋಣಿಗಳನ್ನು ವಶಪಡಿಸಿಕೊಂಡಿದೆ.
ದ.ಕ. ಜಿಲ್ಲಾಧಿಕಾರಿಯ ನಿರ್ದೇಶನದಂತೆ ಗಣಿ ಇಲಾಖೆ, ಬಂಟ್ವಾಳ ಕಂದಾಯ ಇಲಾಖೆಯು ಬಂಟ್ವಾಳ ಗ್ರಾಮಾಂತರ ಪೊಲೀಸ್ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಸಿದೆ. ಈ ಸಂದರ್ಭ ಮರಳು ತುಂಬಿಸಲೆಂದು ನದಿ ತೀರದಲ್ಲಿದ್ದ ಸುಮಾರು 20 ದೋಣಿಗಳನ್ನು ವಶಪಡಿಸಿಕೊಂಡು, ಮಂಗಳೂರು ತಾಲೂಕಿನ ಅಡ್ಯಾರಿಗೆ ಸ್ಥಳಾಂತರಿಸಲಾಗಿದೆ.
ವಶಪಡಿಸಿಕೊಂಡ ಯಾವುದೇ ದೋಣಿಗಳಲ್ಲಿ ಮರಳು ಪತ್ತೆಯಾಗಿಲ್ಲ. ದಾಳಿಯ ವೇಳೆ ಮರಳುಗಾರಿಕೆಯಲ್ಲಿ ತೊಡಗಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ, ಹಿರಿಯ ಭೂ ವಿಜ್ಞಾನಿ ಗಿರೀಶ್ ಮೋಹನ್, ಭೂ ವಿಜ್ಞಾನಿ ಮಹಾದೇಶ್ವರ, ಬಂಟ್ವಾಳ ತಹಶೀಲ್ದಾರ್ ಡಿ. ಅರ್ಚನಾ ಭಟ್, ಮಂಗಳೂರು ಕಂದಾಯ ಇಲಾಖೆಯ ಪ್ರಶಾಂತ್ ಪಾಟೀಲ್, ಬಂಟ್ವಾಳ ಕಂದಾಯ ನಿರೀಕ್ಷಕ ಜನಾರ್ದನ, ಗ್ರಾಮಕರಣಿಕರು ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರ ತಂಡ ಭಾಗವಹಿಸಿತ್ತು.