ಅಡಕೆಗೆ ಕ್ಯಾನ್ಸರ್‌ಕಾರಕ ಪಟ್ಟ ಅಸಮರ್ಥನೀಯ
ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನಾ ಅಂಗ ಘಟಕಗಳಲ್ಲಿ ಒಂದಾಗಿರುವ `ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ' (ಐಎಆರ್‌ಸಿ) ಅಡಕೆಗೆ ಕ್ಯಾನ್ಸರ್‌ಕಾರಕ ಪಟ್ಟವನ್ನು ನೀಡಿರುವುದು ಅಸಮರ್ಥನೀಯ ಮತ್ತು ಅಸಂಗತ.
ಬಾಯಿ ಕ್ಯಾನ್ಸರ್ ಬಗ್ಗೆ ಸಂಶೋಧನೆ ನಡೆಸುವ ಐಎಆರ್‌ಸಿ ಪ್ರತಿ ಐದು ವರ್ಷಕ್ಕೊಮ್ಮೆ ತನ್ನ ವರದಿಯನ್ನು ನೀಡುತ್ತದೆ. ಹಿಂದೆ ನೀಡಿದ್ದ ವರದಿಯಲ್ಲೂ ಇದನ್ನೇ ಸಂಸ್ಥೆ ಹೇಳಿತ್ತು. ಈಗ ಅಡಕೆ ಉತ್ಪನ್ನಗಳನ್ನು ನಿಯಂತ್ರಿಸಿದರೆ ಬಾಯಿ ಕ್ಯಾನ್ಸರ್ ತಡೆಯಬಹುದು ಎಂಬ ಸಲಹೆ ನೀಡುವ ಮೂಲಕ ತಜ್ಞರಿಂದಲೇ ತಿರಸ್ಕಾರಗೊಳ್ಳದಿರುವ ಅಡಕೆಯ ಮೇಲೆ ವಕ್ರದೃಷ್ಟಿ ಹಾಕಿದೆ. ಇದರಿಂದ ದೇಶದ ಅಡಕೆ ಬೆಳೆಯುವ ರಾಜ್ಯಗಳಲ್ಲಿ ಒಂದನೇ ಸ್ಥಾನದಲ್ಲಿರುವ ಕರ್ನಾಟಕ ಮಾತ್ರವಲ್ಲದೇ ಎಲ್ಲೆಲ್ಲಿ ಅಡಕೆ ಬೆಳೆಗಾರರಿದ್ದಾರೋ ಅಲ್ಲೆಲ್ಲ ಆತಂಕ ಶುರುವಾಗಿದೆ. ಜೊತೆಗೆ ಅಡಕೆಯನ್ನು ಸೇವಿಸುವ ಕೋಟ್ಯಂತರ ಸಂಖ್ಯೆಯ ಭಾರತೀಯ ಗ್ರಾಹಕ ವರ್ಗ ಮತ್ತು ಮಾರುಕಟ್ಟೆಗಳೆರಡಕ್ಕೂ ಕಳವಳ ತಂದೊಡ್ಡಿದೆ. ಐಎಆರ್‌ಸಿ ವರದಿಯ ಹಿಂದೆ ಅಡಕೆ ವಿರೋಧಿ ಪ್ರಬಲ ಕಾರ್ಪೋರೇಟ್ ಲಾಬಿಯೊಂದು ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವುದು ಸ್ಪಷ್ಟ.
ಕರ್ನಾಟಕ, ಕೇರಳ ಮತ್ತು ಗೋವಾದ ಪಶ್ಚಿಮ ಮಲೆನಾಡು ಮತ್ತು ಕರಾವಳಿ ಭಾಗ; ತಮಿಳುನಾಡು, ಆಂಧ್ರಪ್ರದೇಶದ ಪೂರ್ವ ಕರಾವಳಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ ಅಡಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅಲ್ಲದೇ, ಇದಕ್ಕಿರುವ ಸಕಾರಾತ್ಮಕ ಆರ್ಥಿಕತೆಯ ಆಯಾಮದಿಂದಾಗಿ ಬೆಳೆಯುವ ಪ್ರದೇಶ ವಿಸ್ತರಿಸುತ್ತ ಹೋಗುತ್ತಿದೆ.
ಕರ್ನಾಟಕದಲ್ಲಿ ನಾಲ್ಕು ವರ್ಷಗಳ ಹಿಂದಿನವರೆಗೆ ೪,೫೨,೬೫೦ ಹೆಕ್ಟೇರ್ ಅಡಕೆ ಬೆಳೆಯುವ ಪ್ರದೇಶವಿತ್ತು. ಅಡಕೆಗೆ ಬಂದ ಉತ್ತಮ ಬೆಲೆಯ ಪರಿಣಾಮವಾಗಿ ೨೦೨೩ರ ಹೊತ್ತಿಗೆ ಇದು ದುಪ್ಪಟ್ಟಾಗಿ ೭.೩೬ ಲಕ್ಷ ಹೆಕ್ಟೇರ್‌ಗೆ ವಿಸ್ತರಿಸಿತು. ಸದ್ಯದ ಅಂದಾಜಿನ ಪ್ರಕಾರ, ಬೆಳೆ ಪ್ರದೇಶ ಇನ್ನಷ್ಟು ವಿಸ್ತರಣೆಯಾಗಿದ್ದು, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಬೇರೆ ಬೇರೆ ಬಯಲು ಪ್ರದೇಶಗಳಲ್ಲಿ ರೈತರು ಅಡಕೆ ಬೆಳೆಯಲಾರಂಭಿಸಿದ್ದಾರೆ.
ರಾಜ್ಯದ ಸಹ್ಯಾದ್ರಿ ಶ್ರೇಣಿಯ ಎಂಟು ಜಿಲ್ಲೆಗಳಲ್ಲಂತೂ ಅಡಕೆ ಬದುಕಿನ ಬೆಳೆಯಾಗಿದೆ. ಅಷ್ಟೇ ಅಲ್ಲ. ಒಂದು ಮೂಲದ ಪ್ರಕಾರ ಈಗ ಕರ್ನಾಟಕದ ವಾಣಿಜ್ಯ ಬೆಳೆಗಳ ಪೈಕಿ ಅಡಕೆಗೇ ಮುಂಚೂಣಿ ಸ್ಥಾನ. ರಾಜ್ಯ ಆರ್ಥಿಕತೆ ಆರೋಗ್ಯವರ್ಧನೆ ಮಾಡಿರುವ ಅಡಕೆಯ ಕುರಿತ ಈ ಆಕ್ಷೇಪಾರ್ಹ ಸಂಶೋಧನೆ ಯಾವ ಕೋನದಿಂದ ನೋಡಿದರೂ ಒಪ್ಪಲು ಸಾಧ್ಯವಿಲ್ಲದ್ದು. ಏಕೆಂದರೆ ತಜ್ಞರು ಮೊದಲಿನಿಂದ ಸಿದ್ಧಪಡಿಸಿರುವ ಪ್ರಕಾರ ಅಡಕೆ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಲ್ಲ.
ತಂಬಾಕು ಮಿಶ್ರಿತ ಅಡಕೆ, ಅಡಕೆಯೊಂದಿಗೆ ತಂಬಾಕು ಅಥವಾ ಗುಟ್ಕಾ ಸೇವನೆ ಕ್ಯಾನ್ಸರ್‌ಕಾರಕ ಎಂದು ಸಾಕಷ್ಟು ಸಂಶೋಧನೆಗಳು ಈಗಾಗಲೇ ಒಪ್ಪಿವೆ. ಆದರೆ ಅಡಕೆಯೊಂದನ್ನು ಮಾತ್ರ ಸೇವಿಸಿದರೆ ಅದು ಕ್ಯಾನ್ಸರ್ ನಿವಾರಕ ಕೂಡ ಆಗುವ ಸಾಧ್ಯತೆ ಇರುತ್ತದೆ ಎಂದು ನಿಟ್ಟೆ ವಿಶ್ವವಿದ್ಯಾಲಯ ಸೇರಿ ಕೆಲ ಅಧ್ಯಯನಗಳು ಪ್ರತಿಪಾದಿಸಿವೆ.
ಇದಲ್ಲದೇ ಮನುಷ್ಯನ ಆರೋಗ್ಯಕ್ಕೆ ಅಡಕೆಯಿಂದ ಹಲವಾರು ಲಾಭಗಳಿವೆ. ದೇಹದ ಪಿತ್ತ ಮತ್ತು ಕಫ ದೋಷಗಳ ನಿವಾರಣೆಯಲ್ಲಿ, ಬಾಯಿ ಹುಣ್ಣು ಕಡಿಮೆ ಮಾಡಲು, ಋತುಸ್ರಾವ ಸಮಸ್ಯೆಗಳ ನೀಗುವಿಕೆ, ಚರ್ಮದ ಆರೋಗ್ಯ, ದೇಹದ ತೂಕ ನಿರ್ವಹಣೆ ಸೇರಿದಂತೆ ಇನ್ನೂ ಹತ್ತಾರು ಸಮಸ್ಯೆಗಳಿಗೆ ಅಡಕೆ ಕಷಾಯ ಲಾಭಕಾರಿ ಎಂಬುದಾಗಿ ಆಯುರ್ವೇದ ಹೇಳುತ್ತದೆ. ಗ್ಲುಕೋಮಾ, ಸ್ಕಿಜೋಫ್ರೇನಿಯಾ ಮೊದಲಾದ ಕೆಲ ಅನಾರೋಗ್ಯದ ಸಂದರ್ಭದಲ್ಲೂ ಇದು ಔಷಧಿಯಾಗಿ ಬಳಕೆಯಾಗುತ್ತದೆ ಎಂಬುದಾಗಿ ಗೂಗಲ್ ಅಭಿಪ್ರಾಯಪಡುತ್ತದೆ. ದೇಶದ ಏಮ್ಸ್ ಸೇರಿದಂತೆ ಹೆಸರಾಂತ ವೈದ್ರ‍್ಯಾರೂ ಈ ಅಂಶಗಳನ್ನು ಅಲ್ಲಗಳೆದಿಲ್ಲ.
ಅಡಕೆ ಕ್ಯಾನ್ಸರ್‌ಕಾರಕವೇ ಎಂಬ ವಿಷಯವಾಗಿ ಸುಪ್ರೀಂ ಕೋರ್ಟಿನಲ್ಲಿ ಹಲವಾರು ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು, ಪ್ರಮುಖ ಅಡಕೆ ಸಹಕಾರ ಸಂಸ್ಥೆಗಳು ಇದರ ಆರೋಗ್ಯಕರ ಪ್ರಯೋಜನದ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿವೆ. ಪರಿಣಾಮವಾಗಿ ಕೇಂದ್ರ ಸರ್ಕಾರ ಅಡಕೆ ಬಗ್ಗೆ ಸಂಶೋಧನೆಗೆ ತಜ್ಞರ ಸಮಿತಿಯನ್ನು ರಚಿಸಿ ೧೦ ಕೋಟಿ ರೂಪಾಯಿ ಅನುದಾನವನ್ನೂ ಒದಗಿಸಿದೆ.
ಆದ್ದರಿಂದಲೇ ಕ್ಯಾಂಪ್ಕೊ, ತುಮ್ಕೋಸ್, ಅಡಕೆ ಮಾರಾಟ ಮಹಾಮಂಡಳ ಸೇರಿದಂತೆ ರಾಜ್ಯದ ಎಲ್ಲ ಅಡಕೆ ಸಹಕಾರ ಸಂಘಗಳು ಈ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿರುವುದು ಸರಿಯಾಗಿದೆ. ಅಲ್ಲದೇ, ತಂಬಾಕುಮಿಶ್ರಿತ ಅಡಕೆಯ ಬಗ್ಗೆ ಮಾತ್ರ ವರದಿ ಹೇಳುವುದರಿಂದ ಹೆದರಬೇಡಿ ಎಂಬುದಾಗಿ ಕ್ಯಾಂಪ್ಕೊ ಸ್ಪಷ್ಟಪಡಿಸಿರುವುದು ಸ್ವಾಗತಾರ್ಹ. ಈ ಕೆಲಸವನ್ನು ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿರುವ ಪ್ರಮುಖರು ಕೂಡ ವರದಿ ಹೊರಬೀಳುತ್ತಿದ್ದಂತೇ ಮಾಡಬೇಕಾಗಿತ್ತು. ಅಡಕೆ ಬೆಳೆಗಾರರ ನ್ಯಾಯಸಮ್ಮತ ಭಾವನೆಯ ಪರವಾಗಿ ಇದುವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದು ದುರದೃಷ್ಟಕರ.