ಅಡ್ವಾಣಿಗೆ ರಾಮಲಲ್ಲಾನ ಪೂರ್ಣ ಕೃಪೆ: ಪೇಜಾವರ ಶ್ರೀ
ಉಡುಪಿ: ದೇಶದ ಮೌಲ್ಯಾಧಾರಿತ ರಾಜಕಾರಣದ ಪ್ರತಿನಿಧಿಯಾಗಿ ದಶಕಗಳ ಕಾಲ ಅಮೂಲ್ಯ ಸೇವೆ ಸಲ್ಲಿಸಿದ ಮತ್ತು ಅಯೋಧ್ಯೆ ರಾಮ ಮಂದಿರ ಆಂದೋಲನದಲ್ಲಿ ಅತ್ಯಂತ ಶ್ರದ್ಧಾಪೂರ್ವಕ ನೇತೃತ್ವ ನೀಡಿದ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ದೇಶದ ಪರಮೋಚ್ಛ ಪ್ರಶಸ್ತಿಯಾದ ಭಾರತ ರತ್ನ ಘೋಷಣೆ ಮೂಲಕ ರಾಮಲಲ್ಲಾನ ಪೂರ್ಣ ಕೃಪೆಯಾಗಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ವಾರ್ತಾ ಮಂತ್ರಿ, ಗೃಹಮಂತ್ರಿ, ಉಪಪ್ರಧಾನಿ ಮೊದಲಾಗಿ ಹಲವು ಮಹತ್ವದ ಜವಾಬ್ದಾರಿ ನಿರ್ವಹಿಸಿದ ಆಡ್ವಾಣಿ , ಒಂದೊಮ್ಮೆ ತಮ್ಮ ಮೇಲೆ ಹವಾಲಾ ಹಗರಣದ ಆರೋಪ ಬಂದಾಗ ಆರೋಪ ಮುಕ್ತನಾಗುವ ವರೆಗೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಉಲ್ಲೇಖನೀಯ. ಇದು ದೇಶದ ಎಲ್ಲ ಸ್ತರದ ರಾಜಕಾರಣಿಗಳಿಗೂ ಮಾದರಿ.
ರಾಮ ಜನ್ಮಭೂಮಿ ಆಂದೋಲನದಲ್ಲಿ ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ವಿಶ್ವ ಹಿಂದೂ ಪರಿಷತ್ತಿನ ನೇತಾರರಾಗಿದ್ದ ಅಶೋಕ್ ಸಿಂಘಲ್, ಮುರಳಿ ಮನೋಹರ ಜೋಶಿ ಮೊದಲಾದವರೊಂದಿಗೆ ಮುಂಚೂಣಿಯಲ್ಲಿದ್ದ ಆಡ್ವಾಣಿ, ಆ ಉದ್ದೇಶಕ್ಕಾಗಿ ದೇಶಾದ್ಯಂತ ರಾಮರಥಯಾತ್ರೆ ಮಾಡಿ ಜನರಲ್ಲಿ ಸುಪ್ತವಾಗಿದ್ದ ರಾಮಭಕ್ತಿಯನ್ನು ಜಾಗೃತಗೊಳಿಸಿದ್ದು ಚರಿತ್ರಾರ್ಹ. ನ್ಯಾಯಾಲಯದಿಂದ ಜನ್ಮಭೂಮಿ ಪರ ತೀರ್ಪು ಬಂದ ಹೊತ್ತಲ್ಲಿ ಅವರನ್ನು ಅವರ ಮನೆಯಲ್ಲೇ ಭೇಟಿ ಮಾಡಿ ಅಭಿನಂದಿಸಿದ ಹೊತ್ತಲ್ಲಿ ಇಳಿವಯಸ್ಸಲ್ಲೂ ಅವರು ತೋರಿದ್ದ ಸೌಜನ್ಯ , ಶ್ರದ್ಧೆ ಮರೆಯಲು ಸಾಧ್ಯವಿಲ್ಲ ಎಂದ ಶ್ರೀಗಳು ಅಡ್ವಾಣಿಯವರನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ.