ಅಣೆಕಟ್ಟಿನ ಕಾಟಾಚಾರದ ನಿರ್ವಹಣೆ
ಆಧುನಿಕ ಭಾರತದ ಮಟ್ಟಿಗೆ ಜಲಾಶಯಗಳಿಗೆ ದೇವರ ಗುಡಿ ಎಂಬ ಅಭಿದಾನ ಬರಲು ಕಾರಣಗಳು ಹಲವಾರು. ಭಾರತ ಕೃಷಿ ಆಧಾರಿತ ದೇಶ, ಕೃಷಿಗೆ ಮೂಲವೇ ನೀರು. ಹೀಗಾಗಿ ಜಲಾಶಯಗಳನ್ನು ದೇವರಗುಡಿ ಎಂಬ ಗೌರವದ ದೃಷ್ಟಿಕೋನದಿಂದಲೇ ಕಾಣುವ ರೈತರಿಗೆ ಅವು ಭರ್ತಿಯಾದಗಲ್ಲೆಲ್ಲಾ ಬಾಗಿನ ಅರ್ಪಿಸಿ ಆರಾಧನಾ ಭಾವ ತೋರುವುದು ವಾಡಿಕೆ. ಕರ್ನಾಟಕದ ಮೂರನೇ ಮುಖ್ಯ ಜಲಾಶಯವಾಗಿರುವ ತುಂಗಭದ್ರಾ ಅಣೆಕಟ್ಟೆಯ ಗೇಟುಗಳಲ್ಲಿ ದೋಷ ಕಾಣಿಸಿಕೊಂಡು ಹಠಾತ್ತನೆ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದು ನಿಜಕ್ಕೂ ರೈತರಿಗೆ ಎದೆ ಒಡೆಯುವ ಬೆಳವಣಿಗೆ. ೧೦೫ ಟಿಎಂಸಿ ನೀರಿನ ಸಂಗ್ರಹಣೆ ಇರುವ ಈ ಜಲಾಶಯದಿಂದ ನೀರು ಒಂದೇ ಸಮನೇ ಹರಿಯುತ್ತಿರುವುದನ್ನು ನೋಡಿದರೆ ಎಂಹವರಿಗೂ ಕೋಪ ನೆತ್ತಿಗೇರುವುದು ನಿಜ. ಏಕೆಂದರೆ ಈ ಅಣೆಕಟ್ಟು ಭರ್ತಿಯಾಗುವುದೇ ವಿರಳ, ಅಂತಹ ಸಂದರ್ಭದಲ್ಲಿ ಭರ್ತಿಯಾಗುತ್ತಿದ್ದಂತೆಯೇ ಗೇಟಿನಲ್ಲಿ ದೋಷ ಕಾಣಿಕೊಂಡು ಗಂಡಾಂತರದ ಪರಿಸ್ಥಿತಿ ಉದ್ಭವಿಸಿರುವುದು ನಿಜಕ್ಕೂ ಕರ್ನಾಟಕಕ್ಕೆ ದೊಡ್ಡ ಅಗ್ನಿಪರೀಕ್ಷೆ. ಇಂತಹ ಗಂಡಾಂತರಕ್ಕೆ ಹೊಣೆ ಹೊರಬೇಕಾದವರು ಅಣೆಕಟ್ಟಿನ ನಿರ್ವಹಣೆ ಜವಾಬ್ದಾರಿ ಹೊತ್ತ ಅಧಿಕಾರಿಗಳು ಇದೊಂದು ಗುರುತರ ಕರ್ತವ್ಯ ಲೋಪ. ಈ ಅಶಿಸ್ತಿಗೆ ತಕ್ಕ ಶಾಸ್ತಿಯಾದರಷ್ಟೇ ಉಳಿದ ಅಣೆಕಟ್ಟುಗಳಿಗೆ ಸುರಕ್ಷತೆ ಒದಗಿಸುವ ಎಚ್ಚರ ಬಂದೀತು.
ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಸುಮಾರು ೧೫ ಲಕ್ಷ ಹೆಕ್ಟೇರ್ ಭೂಮಿಗೆ ನೀರನ್ನು ಒದಗಿಸುವ ಈ ಅಣೆಕಟ್ಟಿನ ದುರಂತದಿಂದಾಗಿ ಕೃಷಿ ಉತ್ಪನ್ನದ ಮೇಲೆ ಆಗುವ ನಷ್ಟ ಅಷ್ಟಿಷ್ಟಲ್ಲ. ಈಗಿನ ಗೇಟುಗಳ ಲೋಪದೋಷಗಳ ನಿವಾರಣೆಗೆ ತಂತ್ರಜ್ಞರು ಕಾರ್ಯೋನ್ಮುಖರಾಗಿದ್ದಾರೆ. ಆದರೆ ಇದಕ್ಕಾಗಿ ಅಣೆಕಟ್ಟಿನ ನೀರನ್ನು ಖಾಲಿ ಮಾಡಲೇಬೇಕಾದ ಅನಿವಾರ್ಯತೆ. ತಂತ್ರಜ್ಞರು ಹೇಳುವುದನ್ನು ನಂಬುವುದಾದರೆ ನಾಲ್ಕು ದಿನಗಳ ಒಳಗೆ ಗೇಟಿನ ದೋಷಗಳನ್ನು ಸರಿಪಡಿಸಬಹುದು. ಆದರೆ ಇದಕ್ಕೆ ಮೊದಲು ಅಪಾರ ಪ್ರಮಾಣದ ನೀರನ್ನು ಹೊರ ಹಾಕಬೇಕು. ಇನ್ನೂ ಕೆಲವರು ತಂತ್ರಜ್ಞರು ಸೂಚಿಸುವಂತೆ ಕನಿಷ್ಠ ೬ ಟಿಎಂಸಿ ನೀರು ಖಾಲಿ ಮಾಡಿದರಷ್ಟೇ ದುರಸ್ತಿ ಸಾಧ್ಯ. ಕೆಲವರಂತೂ ೫೦ ಟಿಎಂಸಿ ನೀರನ್ನು ಬಿಡಬೇಕಾಗಿ ಬರಬಹುದು ಎಂಬ ಕಳವಳದ ಮಾತನ್ನು ಆಡುತ್ತಿದ್ದಾರೆ. ಒಟ್ಟಾರೆ ಈಗಿನ ಪರಿಸ್ಥಿತಿ ತುಂಬಾ ಗಂಭೀರ.
ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಟೀಕೆ, ಟಿಪ್ಪಣಿಗಳು ನಿರರ್ಥಕ. ಮೊದಲಿಗೆ ಆಗಬೇಕಾದದ್ದು ಬಿಕ್ಕಟ್ಟು ನಿವಾರಣೆಗೆ ಸೂತ್ರ. ಪ್ರಕರಣದ ತನಿಖೆ ನಿರ್ಧಾರವನ್ನು ನಂತರ ಕೈಗೊಳ್ಳಲು ಅವಕಾಶವುಂಟು. ರಾಜಕಾರಣಿಗಳು ಈ ಸಂದರ್ಭದಲ್ಲಿ ಸಂಯಮ ಕಾಯ್ದುಕೊಂಡು ಅಣೆಕಟ್ಟಿನ ಬಿಕ್ಕಟ್ಟು ಸುಸ್ಥಿತಿಗೆ ಬರುವಂತೆ ಸಹಕರಿಸುವುದು ಜವಾಬ್ದಾರಿಯ ವರ್ತನೆಯಾಗುತ್ತದೆ. ಅಣೆಕಟ್ಟಿಗೆ ಭೇಟಿ ನೀಡುತ್ತಿರುವ ರಾಜಕಾರಣಿಗಳು ವಸ್ತುಸ್ಥಿತಿಯನ್ನು ಅರಿತು ಸಾರ್ವಜನಿಕರಿಗೆ ಮಾಹಿತಿಯನ್ನು ಒದಗಿಸುವುದು ಸೂಕ್ತ. ಇಂತಹ ಮಹತ್ವದ ಚರ್ಚೆ ಹಾಗೂ ಅಂತಿಮ ನಿರ್ಧಾರಕ್ಕೆ ಶಾಸನಸಭೆಯ ವಿಶೇಷ ಅಧಿವೇಶನದ ಅಗತ್ಯ ಕಂಡುಬಂದರೆ ಸರ್ಕಾರ ಅದಕ್ಕೆ ಹಿಂದೆಗೆಯಬಾರದು. ಏಕೆಂದರೆ, ಇದು ಕೇವಲ ಒಂದು ಅಣೆಕಟ್ಟಿನ ಪ್ರಶ್ನೆಯಲ್ಲ. ರಾಜ್ಯದಲ್ಲಿರುವ ಆಲಮಟ್ಟಿ, ನಾರಾಯಣಪುರ, ಕೆಆರ್‌ಎಸ್, ಹೇಮಾವತಿ, ಕಬಿನಿ ಮೊದಲಾದ ಜಲಾಶಯಗಳ ಗೇಟುಗಳ ಸ್ಥಿತಿಗತಿಯ ಸುಧಾರಣೆಗೆ ಕ್ರಮ ಕೈಗೊಳ್ಳುವುದು ಅಷ್ಟೇ ಮುಖ್ಯವಾದ ಕೆಲಸ. ಅಣೆಕಟ್ಟುಗಳ ನಿರ್ವಹಣೆಗೆ ಪ್ರತ್ಯೇಕ ವಿಭಾಗವನ್ನು ಸೃಷ್ಟಿಸುವುದು ಕೂಡ ಅಗತ್ಯ.
ಯಾವುದೇ ಕಾರಣಕ್ಕೆ ರಾಜಕೀಯದ ಒಳಸುಳಿಗಳು ಈ ವಿಚಾರದಲ್ಲಿ ನುಸುಳದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ದುರ್ಘಟನೆ ಜರುಗಿರುವ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮಯಪ್ರಜ್ಞೆ ಪ್ರದರ್ಶಿಸಿ ತುರ್ತುಕ್ರಮ ಕೈಗೊಂಡಿದ್ದು ಮೆಚ್ಚತಕ್ಕ ಸಂಗತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡುತ್ತಿರುವುದು ಗಾಬರಿಗೊಂಡಿರುವ ರೈತರಿಗೆ ಒಂದು ರೀತಿಯಲ್ಲಿ ಭರವಸೆ ಹುಟ್ಟಿಸುವ ಕ್ರಮ.