ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅಣೆಕಟ್ಟಿನ ಬಗ್ಗೆ ಇರಲಿ ಎಚ್ಚರ

02:35 AM Aug 20, 2024 IST | Samyukta Karnataka

ತುಂಗಭದ್ರಾ ಜಲಾಶಯದ ಕ್ರಸ್ಟ್ ತೂಬಿನಲ್ಲಿ ತಲೆದೋರಿದ್ದ ಸೋರಿಕೆ ಗಂಡಾಂತರ ತಜ್ಞರ ಅನುಭವದ ಕ್ರಮದಿಂದಾಗಿ ನಿವಾರಣೆಯಾಗಿದೆ. ಆದರೆ, ನಿವಾರಣೆ ಆಗಿದೆ ಎಂದು ಯಾರೊಬ್ಬರೂ ನಿಟ್ಟುಸಿರುಬಿಡುವಂತಿಲ್ಲ. ಏಕೆಂದರೆ, ಈ ತೂಬು ಆಧುನಿಕ ಕ್ರಸ್ಟ್ ತೂಬಿನಂತೆ ನಿರ್ಮಾಣಗೊಂಡಿಲ್ಲ. ಹಳೆ ತಂತ್ರಜ್ಞಾನ ಆಧರಿಸಿದ್ದು. ಹೀಗಾಗಿ ಮತ್ತೆ ಮರುಕಳಿಸುವ ಅಪಾಯವನ್ನು ತಳ್ಳಿಹಾಕುವಂತಿಲ್ಲ ಎಂಬುದು ತಜ್ಞರೇ ಒಪ್ಪಿಕೊಂಡಿರುವ ಮಾತು. ಈ ಹಿನ್ನೆಲೆಯಲ್ಲಿ ಜಲಾಶಯದ ರಕ್ಷಣೆಯ ನಿರ್ಣಾಯಕ ಭಾಗವಾದ ಕ್ರಸ್ಟ್ ತೂಬುಗಳ ಮೇಲ್ವಿಚಾರಣೆ ಬಗ್ಗೆ ಕಟ್ಟೆಚ್ಚರದ ನಿಗಾ ವಹಿಸುವುದು ಅಗತ್ಯ. ಈ ಗಂಡಾಂತರವನ್ನು ನಿವಾರಣೆಗೆ ಸೂತ್ರ ರೂಪಿಸುವ ಸಂದರ್ಭದಲ್ಲಿ ತಂತ್ರಜ್ಞ ಕನ್ನಯ್ಯ ನಾಯ್ಡು ಅಭಿಪ್ರಾಯಪಟ್ಟಿರುವಂತೆ ಈ ಜಲಾಶಯದ ಆಯುಷ್ಯ ಇನ್ನು ಹೆಚ್ಚೆಂದರೆ ೩೦ ವರ್ಷ ಮಾತ್ರ. ಈಗಾಗಲೇ ನಿರ್ಮಾಣಗೊಂಡು ೭೦ ವರ್ಷಗಳ ಉರುಳಿರುವ ಸಂದರ್ಭದಲ್ಲಿ ಹೊಸ ಅಣೆಕಟ್ಟಿನ ನಿರ್ಮಾಣಕ್ಕೆ ಈಗಲೇ ಕ್ರಮ ಕೈಗೊಳ್ಳುವುದು ಸೂಕ್ತ ಎಂಬ ಮುನ್ನೆಚ್ಚರಿಕೆಯ ಮಾತನ್ನು ಅವರು ಆಡಿರುವುದನ್ನು ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಸರ್ಕಾರಗಳು ಗಮನಹರಿಸಬೇಕು. ಏಕೆಂದರೆ, ಈ ಜಲಾಶಯದ ನೀರು ಉಪಯೋಗವಾಗುವುದು ಈ ಮೂರು ರಾಜ್ಯಗಳಿಗೆ. ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಯಾವುದೇ ಒಂದು ರಾಜ್ಯದ ಸ್ವಾಮ್ಯದಲ್ಲಿಲ್ಲ. ಕೇಂದ್ರ ಸರ್ಕಾರದ ಕಣ್ಗಾವಲಿನಲ್ಲಿ ಮೂರು ರಾಜ್ಯಗಳ ಪ್ರತಿನಿಧಿಗಳು ಈ ಆಡಳಿತ ಮಂಡಳಿಯ ಸದಸ್ಯರಾಗಿರುತ್ತಾರೆ. ಆದರೆ, ಇದುವರೆಗೆ ಆಂಧ್ರಪ್ರದೇಶದವರ ಪ್ರಾತಿನಿಧ್ಯವೇ ಈ ಮಂಡಳಿಯಲ್ಲಿ ಹೆಚ್ಚಿತ್ತು ಎಂಬುದು ಅಂಕಿ-ಅಂಶಗಳ ಮೂಲಕ ಗೊತ್ತಾಗುವ ಮಾತು. ಇನ್ನು ಮುಂದಾದರೂ ಎಲ್ಲರಿಗೂ ಸಮಪಾಲಿನ ರೀತಿಯಲ್ಲಿ ಆಡಳಿತ ಮಂಡಳಿಯಲ್ಲಿ ಪ್ರಾತಿನಿಧ್ಯ ಒದಗುವಂತೆ ನಿಯಮಾವಳಿಯನ್ನು ಮಾರ್ಪಾಟುಗೊಳಿಸುವುದು ಆಗಬೇಕಾಗಿರುವ ಕೆಲಸ.
ಜಲಾಶಯದ ತೂಬಿನ ನಿವಾರಣೆಯಾಗಿ ಗಂಡಾಂತರ ತಪ್ಪಿದ್ದು ಸಂತಸದ ವಿಷಯವೇ. ಆದರೆ, ಬೇಸರದ ವಿಷಯವೆಂದರೆ ಸುಮಾರು ೩೦ ಟಿಎಂಸಿ ನೀರು ವ್ಯರ್ಥವಾಗಿ ನದಿಗೆ ಹರಿದುಹೋಗಿರುವುದು. ಇದು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ಬಳಕೆಯಾಗಬಹುದು. ಅವರಿಗೂ ಅದು ಸಾಧ್ಯವಾಗದಿದ್ದರೆ ಸಮುದ್ರ ಸೇರುವುದೊಂದೇ ದಾರಿ. ಇದೇ ಸಂದರ್ಭದಲ್ಲಿ ತುಂಗಭದ್ರಾ ಜಲಾಶಯಕ್ಕೆ ಸುಮಾರು ಎರಡು ಟಿಎಂಸಿ ನೀರು ಮತ್ತೆ ಹರಿದುಬಂದಿರುವುದು ನೆಮ್ಮದಿಯ ಸಂಗತಿ. ಕರ್ನಾಟಕದ ಮಲೆನಾಡಿನ ಭಾಗದಲ್ಲಿ ಸುರಿಯುತ್ತಿರುವ ಮಳೆಯ ಕೃಪೆಯಿಂದಾಗಿ ಈ ನೀರು ಜಲಾಶಯಕ್ಕೆ ಹರಿದುಬರುತ್ತಿದೆ. ಮಳೆಗಾಲ ಮುಗಿಯುವ ಹೊತ್ತಿಗೆ ಜಲಾಶಯ ಭರ್ತಿಯಾಗುವ ಆಶಾಭಾವನೆ ರೈತರಲ್ಲಿ ಮೂಡಿದೆ. ಈಗಾಗಲೇ ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ರೈತರ ಬೆಳೆಗಳಿಗೆ ಹಾಗೂ ಕುಡಿಯುವ ನೀರಿನ ಸೌಕರ್ಯಕ್ಕೆ ಯಾವುದೇ ಸಮಸ್ಯೆ ಇರಲಾರದು. ಆಂಧ್ರಪ್ರದೇಶದವರಿಗೆ ಇದರಿಂದ ಅಷ್ಟೇನೂ ತೊಂದರೆಯಾಗುವುದಿಲ್ಲ. ಏಕೆಂದರೆ, ಅವರಿಗೆ ದೊರೆಯಬೇಕಾದ ನೀರಿನ ಪ್ರಮಾಣದ ಪೈಕಿ ಬಹುತೇಕ ಈಗಾಗಲೇ ಹರಿದುಹೋಗಿದೆ.

ಜಲಾಶಯದ ತೂಬುಗಳ ದೋಷದ ನಿವಾರಣೆಗೆ ಅಹರ್ನಿಶಿ ಶ್ರಮಿಸಿದ ತಂತ್ರಜ್ಞರು ಹಾಗೂ ಕಾರ್ಮಿಕರ ಕೌಶಲ್ಯ ಹಾಗೂ ಪರಿಶ್ರಮವನ್ನು ಗೌರವಿಸುವುದು ಅತ್ಯಗತ್ಯ. ನುರಿತ ತಂತ್ರಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಹರಿಯುವ ನೀರಿನಲ್ಲಿ ತೂಬುಗಳನ್ನು ಜೋಡಿಸಿದ್ದು ಮಾತ್ರ ದೊಡ್ಡ ಸಾಹಸವೇ. ತಂತ್ರಜ್ಞರು ಹಾಗೂ ಅಧಿಕಾರಿಗಳಲ್ಲಿ ವಿಶ್ವಾಸ ಮೂಡಿಸಿ ಅವರ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕ್ರಮಗಳು ಮೆಚ್ಚಬೇಕಾದದ್ದೆ. ಇಷ್ಟಲ್ಲದೆ ಅಹರ್ನಿಶಿ ಶ್ರಮಿಸಿದ ಕಾರ್ಮಿಕರಿಗೆ ಸರ್ಕಾರದ ಪರವಾಗಿ ಯಾವುದಾದರೂ ರೂಪದಲ್ಲಿ ಬಹುಮಾನ ಸಿಗುವಂತೆ ಮಾಡುವುದರಲ್ಲಿ ಕಾಯಕ ಸಂಸ್ಕೃತಿಯನ್ನು ಗೌರವಿಸುವ ಶಕ್ತಿ ಇದೆ. ವಿಜಯನಗರ ಜಿಲ್ಲೆ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಈಗಾಗಲೇ ತಮ್ಮ ಸ್ವಂತ ಹಣದಿಂದ ಕಾರ್ಮಿಕರಿಗೆ ನಗದು ಪರಿಹಾರ ಕೊಟ್ಟಿದ್ದಾರೆ. ಆದರೆ, ಸರ್ಕಾರದ ನೆರವಿನ ಮುಂದೆ ವೈಯಕ್ತಿಕ ನೆರವುಗಳು ಅಷ್ಟೊಂದು ಮುಖ್ಯವಾಗುವುದಿಲ್ಲ. ಹೀಗಾಗಿ ಸರ್ಕಾರ ಈ ವಿಚಾರದಲ್ಲಿ ಗಮನಹರಿಸುವುದು ಸೂಕ್ತ.
ತುಂಗಭದ್ರಾ ಜಲಾಶಯಕ್ಕೆ ಒದಗಿದ ಗಂಡಾಂತರವನ್ನು ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದಲ್ಲಿರುವ ಉಳಿದ ಜಲಾಶಯಗಳ ಕ್ರಸ್ಟ್ ಗೇಟುಗಳ ಸುಸ್ಥಿತಿಗೆ ಕ್ರಮ ಕೈಗೊಳ್ಳಲು ಈಗಲೇ ಮುಂದಾಗಬೇಕು.. ಇದಕ್ಕಾಗಿ ಎಲ್ಲಾ ಜಲಾಶಯಗಳಿಗೂ ಅನ್ವಯವಾಗುವಂತೆ ಒಂದು ತಜ್ಞರ ಸಮಿತಿಯನ್ನು ರಚಿಸುವುದು ಸಮಯೋಚಿತ ಕ್ರಮವಾದೀತು.

Next Article