ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅತಿಸಣ್ಣ ಕೈಗಾರಿಕೆಗಿಲ್ಲ ಕಾನೂನು ಆಸರೆ

03:00 AM May 24, 2024 IST | Samyukta Karnataka

ಕರ್ನಾಟಕದಲ್ಲಿ ಅತಿಸಣ್ಣ, ಸೂಕ್ಷ್ಮ, ಸಣ್ಣ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಪ್ರತ್ಯೇಕ ಕಾಯ್ದೆ ಮಾತ್ರ ಇಲ್ಲ. ಕೇಂದ್ರ ಸರ್ಕಾರ ಮಾದರಿ ಕಾಯ್ದೆಯನ್ನೂ ನೀಡಿದೆ. ಹಲವು ರಾಜ್ಯಗಳು ಅದರಲ್ಲೂ ಜಾರ್ಖಂಡ್‌ನಂಥ ಸಣ್ಣ ರಾಜ್ಯಗಳು ಪ್ರತ್ಯೇಕ ಕಾಯ್ದೆ ರಚಿಸಿಕೊಂಡಿವೆ. ಕರ್ನಾಟಕದಲ್ಲಿ ಕೈಗಾರಿಕೆ ನೀತಿ ಏನೋ ಇದೆ. ಅದರಲ್ಲೇ ಅತಿ ಸಣ್ಣ ಕೈಗಾರಿಕೆಗಳನ್ನು ಸೇರ್ಪಡೆ ಮಾಡಲಾಗಿದೆ. ಆದರೆ ಅತಿ ಸಣ್ಣ ಕೈಗಾರಿಕೆಗಳ ಸಮಸ್ಯೆಗಳೇ ಬೇರೆ. ಅದಕ್ಕೆ ಪ್ರತ್ಯೇಕ ಕಾಯ್ದೆ ರಚಿಸುವುದು ಅಗತ್ಯ. ದೊಡ್ಡ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಮಸ್ಯೆಗಳು ರಾಜಕೀಯ ಮತ್ತು ಆರ್ಥಿಕ ಪ್ರಭಾವದಿಂದ ಒಳಗಿನಿಂದ ಒಳಗೇ ಬಗೆಹರಿದು ಬಿಡುತ್ತವೆ. ಅವುಗಳ ವಿಷಯ ಹೊರ ಬರುವುದೇ ಇಲ್ಲ. ಅತಿ ಸಣ್ಣ ಕೈಗಾರಿಕೆಗಳ ಉದ್ಯಮಿಗಳಿಗೆ ಆ ರೀತಿಯ ವರ್ಚಸ್ಸು ಇರುವುದಿಲ್ಲ. ಕಾನೂನು ಬಲ ಇದ್ದಲ್ಲಿ ಉಸಿರಾಡಲು ಸಾಧ್ಯ. ಸಾಮಾನ್ಯವಾಗಿ ಯುವ ಜನಾಂಗದವರು ಹೊಸ ಉದ್ಯಮವನ್ನು ಆರಂಭಿಸಲು ಬಯಸುತ್ತಾರೆ. ಅವರಿಗೆ ಸರ್ಕಾರದ ನಿಯಮ, ರೀತಿ ರಿವಾಜು ತಿಳಿದಿರುವುದಿಲ್ಲ. ಅವರಿಗೆ ಕಾನೂನು ಆಸರೆ ಇದ್ದಲ್ಲಿ ಮಾತ್ರ ಮುಂದುವರಿಯಲು ಸಾಧ್ಯ. `ಸಂಥಿಂಗ್ ಕೊಟ್ಟರೆ ಆಗುತ್ತೆ' ಎಂದು ಎಲ್ಲರೂ ಹೇಳುತ್ತಾರೆ. ಈಗಿನ ಕಾನೂನು ಬದ್ಧವಾಗಿ ಕೆಲಸವಾಗಬೇಕಾದರೂ ಹಣ ಕೊಡಲೇಬೇಕು. ಹೀಗಿರುವಾಗ ಕಾನೂನೇ ಇಲ್ಲ ಎಂದರೆ ಏನು ಮಾಡಬೇಕು ಎಂಬುದೇ ಈಗಿನ ಪ್ರಶ್ನೆ. ಸೂಕ್ತ ಕಾನೂನು ಇಲ್ಲ ಎಂದರೆ ಅಧಿಕಾರಿಗಳು ಹೇಳಿದ್ದೇ ಕಾನೂನಾಗಿ ಬಿಡುತ್ತದೆ.
ಸಣ್ಣ-ಅತಿಸಣ್ಣ- ಸೂಕ್ಷ್ಮ ಕೈಗಾರಿಕೆ
ಸಣ್ಣ-ಅತಿಸಣ್ಣ- ಸೂಕ್ಷ್ಮ ಕೈಗಾರಿಕೆ ಎಂದರೆ ಅದಕ್ಕೊಂದು ಆರ್ಥಿಕ ಮಾನದಂಡಗಳಿವೆ. ಕೇಂದ್ರ ಸರ್ಕಾರ ಅವುಗಳನ್ನು ಸ್ಪಷ್ಟವಾಗಿ ತಿಳಿಸಿದೆ. ಅತಿ ಸಣ್ಣ ಎಂದರೆ ೧ ಕೋಟಿ ರೂ. ಒಳಗೆ ಬಂಡವಾಳ ಹೂಡಿಕೆ ಆಗಿರಬೇಕು. ವಾರ್ಷಿಕ ವಹಿವಾಟು ೫ ಕೋಟಿ ರೂ. ಮೀರಬಾರದು. ಸಣ್ಣ ಎಂದರೆ ೧೦ ಕೋಟಿ ರೂ. ಬಂಡವಾಳ ಹೂಡಿಕೆ, ವಾರ್ಷಿಕ ೫೦ ಕೋಟಿ ರೂ. ಒಳಗೆ ವಹಿವಾಟು ಇರಬೇಕು. ಮಧ್ಯಮ ಕೈಗಾರಿಕೆ ಎಂದರೆ ೫೦ ಕೋಟಿ ರೂ. ಬಂಡವಾಳ ಹೂಡಿಕೆ, ವಾರ್ಷಿಕ ೨೫೦ ಕೋಟಿ ರೂ. ವಹಿವಾಟು ಹೊಂದಿರಬಹುದು.
ಇವುಗಳನ್ನು ಗಮನಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೆರವು ನೀಡುತ್ತದೆ. ಇಂಥ ಉದ್ಯಮಕ್ಕೆ ಪ್ರತ್ಯೇಕ ನೀತಿ ಮತ್ತು ಕಾಯ್ದೆ ರಚಿಸುವ ಕಡೆ ಸರ್ಕಾರ ಗಮನಹರಿಸಿಲ್ಲ. ಕರ್ನಾಟಕ ಆರ್ಥಿಕ ಸಮೀಕ್ಷೆಯನ್ನು ಅವಲೋಕಿಸಿದರೆ ಸಣ್ಣ ಕೈಗಾರಿಕೆಗಳ ಮಹತ್ವ ತಿಳಿಯುತ್ತದೆ. ಒಟ್ಟು ೧೧೭೬ ಲಕ್ಷ ಘಟಕಗಳಿವೆ. ೧ ಕೋಟಿಗೂ ಅಧಿಕ ಜನ ಉದ್ಯೋಗ ಪಡೆದಿದ್ದಾರೆ. ಎಲ್ಲ ವಿಷಯದಲ್ಲಿ ಬೆಂಗಳೂರು ಮುಂದಿರುವ ಹಾಗೆ ಸಣ್ಣ ಕೈಗಾರಿಕೆಗಳು ಕೂಡ ಬೆಂಗಳೂರಿನಲ್ಲೇ ಕೇಂದ್ರೀಕೃತಗೊಂಡಿದೆ. ಒಟ್ಟು ೩೨೩೪೮೩ ಘಟಕಗಳು ಬೆಂಗಳೂರಿನಲ್ಲಿ ಇವೆ. ೩೦,೭೧,೨೪೪ ಜನ ಇದರಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಬೆಂಗಳೂರು ಹೊರತುಪಡಿಸಿದರೆ ಬೆಳಗಾವಿಯಲ್ಲಿನ ಅತಿ ಹೆಚ್ಚು ಕೈಗಾರಿಕೆಗಳಿವೆ. ಧಾರವಾಡ, ಕಲ್ಬುರ್ಗಿ, ವಿಜಯಪುರ, ಬೀದರ್, ಬೆಳಗಾವಿ, ಬೆಂಗಳೂರು, ರಾಮನಗರ, ಮೈಸೂರು, ಉತ್ತರ ಕನ್ನಡ, ಚಿತ್ರದುರ್ಗ ಸೇರಿದಂತೆ ಹಲವು ಕಡೆ ವಿಶೇಷ ಕೈಗಾರಿಕಾ ಕ್ಲಸ್ಟರ್‌ಗಳು ತಲೆ ಎತ್ತಿವೆ.
ಸರ್ಕಾರದ ನೆರವು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಂಎಸ್‌ಎಂಇಗಳಿಗೆ ಹಲವು ಸಬ್ಸಿಡಿಗಳನ್ನು ಘೋಷಿಸಿದೆ. ಸಾಮಾನ್ಯವಾಗಿ ಯಾರೇ ಉದ್ಯಮ ಆರಂಭಿಸಬೇಕಾದರೆ ಬಂಡವಾಳ ಹೂಡಿಕೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಇವುಗಳಿಗೆ ಬ್ಯಾಂಕ್‌ಗಳು ನೆರವು ನೀಡುತ್ತವೆ. ಆದರೆ ಎಲ್ಲದ್ದಕ್ಕೂ ಗ್ಯಾರಂಟಿ ಬೇಕು. ಭೂಮಿ, ಸೈಟು, ಮನೆ ಯಾವುದನ್ನಾದರೂ ಆಧಾರ ತೋರಿಸಬೇಕು. ಸರ್ಕಾರ ಮಾತ್ರ ಯಾವುದೇ ಆಧಾರವಿಲ್ಲದೆ ಸಾಲ ಸಿಗುತ್ತದೆ ಎಂದು ಬಹಿರಂಗವಾಗಿ ಹೇಳಿದರೂ ಬ್ಯಾಂಕ್‌ಗೆ ಹೋದಾಗ ಮ್ಯಾನೇಜರ್ ಕೇಳುವುದು ಆಧಾರ. ಅದರಲ್ಲೂ ಮನುಷ್ಯರ ಶ್ಯೂರಿಟಿ ಉಪಯೋಗಕ್ಕೆ ಬರುವುದಿಲ್ಲ. ಚಿರಾಸ್ತಿಬೇಕು. ಈಗಿನ ಕಾಲದಲ್ಲಿ ಸ್ವಂತ ಆಸ್ತಿ ಇರುವವರು ಕಡಿಮೆ. ಕುಟುಂಬದ ಎಲ್ಲ ಸದಸ್ಯರು ಒಪ್ಪಬೇಕು. ಮೂಲ ಬಂಡವಾಳ ಹಾಕಿದ ಮೇಲೆ ಸರ್ಕಾರದ ನೆರವು ಬರುತ್ತದೆ.
ಮೂಲಬಂಡವಾಳ ವ್ಯವಸ್ಥೆಯಾದ ಮೇಲೆ ಸಾಲದ ಮೇಲಿನ ಬಡ್ಡಿಗೆ ಸರ್ಕಾರ ನೆರವು ನೀಡುತ್ತದೆ. ಕೈಗಾರಿಕೆ ಶೆಡ್‌ಗಳನ್ನು ಕೆಲವು ಕಡೆ ಸರ್ಕಾರ ನಿರ್ಮಿಸಿಕೊಡುತ್ತದೆ. ಅದಕ್ಕೆ ಸಾಲವೂ ಸಿಗುತ್ತದೆ. ಮತ್ತೆ ಕೆಲವು ಕಡೆ ಖಾಸಗಿ ಶೆಡ್‌ಗಳಿವೆ. ಅವುಗಳಿಗೆ ಬ್ಯಾಂಕ್‌ನಿಂದ ಸಾಲವನ್ನು ವೈಯಕ್ತಿಕವಾಗಿ ಪಡೆಯಬೇಕು. ಖಾದಿ ಮತ್ತಿತರ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಸರ್ಕಾರ ಕಾರ್ಮಿಕರ ಕೂಲಿಯಲ್ಲೂ ಕೆಲವು ಭಾಗವನ್ನು ನೀಡುತ್ತದೆ.
ಸಮೀಕ್ಷೆಗಳು
ರಾಜ್ಯದಲ್ಲಿ ಯಾವ ಕ್ಷೇತ್ರಗಳಲ್ಲಿ ಅತಿ ಸಣ್ಣ ಕೈಗಾರಿಕೆ ತಲೆ ಎತ್ತಬಹುದು ಎಂಬುದಕ್ಕೆ ಹಲವು ಸಮೀಕ್ಷೆಗಳು ನಡೆದು ಆಹಾರ ಸಂಸ್ಕರಣೆ, ಜವಳಿ, ಐಟಿ ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳನ್ನು ಗುರುತಿಸಲಾಗಿದೆ. ಈಗ ವೈಮಾನಿಕ ಮತ್ತು ಆಂತರಿಕ್ಷ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೈಗಾರಿಕೆಗಳು ತಲೆಎತ್ತಬಹುದು. ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಬೆಳವಣಿಗೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ನೆರವು ನೀಡುತ್ತಿದೆ. ಕೇಂದ್ರದ ದಾಪುಗಾಲಿಗೆ ಅನುಗುಣವಾಗಿ ರಾಜ್ಯ ಸರ್ಕಾರ ಹೆಜ್ಜೆ ಇಡುವ ವೇಗ ಹೆಚ್ಚಿಸಬೇಕಿದೆ.
ಸ್ಟಾರ್ಟ್ ಅಪ್
ಎಂಎಸ್‌ಎಂಇಗೂ ಸ್ಟಾರ್ಟ್ ಅಪ್‌ಗೂ ನಿಕಟ ಸಂಪರ್ಕ ಇದೆ, ಐಟಿ ಕಂಪನಿಗಳಲ್ಲಿ ಯುವಕರು ಕೆಲಸ ಮಾಡಿ ತಮ್ಮದೇ ಆದ ಸ್ಟಾರ್ಟ್ ಅಪ್‌ಗಳನ್ನು ಆರಂಭಿಸುತ್ತಿದ್ದಾರೆ. ಇಂಥ ಸ್ಟಾರ್ಟ್ಅಪ್‌ಗಳಿಗೆ ಬೆಂಗಳೂರು ರಾಜಧಾನಿ. ಯುವ ಪೀಳಿಗೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗೆ ಯುವಕರು ಎರಡು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನು ದೊಡ್ಡ ಉದ್ಯಮಿಗಳು ಒಪ್ಪಿರಲಿಲ್ಲ. ಒಂದೇ ಕಂಪನಿಯಲ್ಲಿ ಕೆಲಸ ಮಾಡಬೇಕು. ಇಲ್ಲವೆ ಕೆಲಸ ಬಿಡಬೇಕು ಎಂದರು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಲಿಲ್ಲ. ಸ್ಟಾರ್ಟ್ ಅಪ್ ಬರಬೇಕು ಎಂದರೆ ಅವರು ಕೆಲಕಾಲ ಎರಡೂ ಕಡೆ ಕೆಲಸ ಮಾಡಬೇಕು. ಅವರು ನಿಮ್ಮ ಸಂಬಳಕ್ಕೆ ವಂಚನೆ ಬಗೆಯುವುದಿಲ್ಲ. ೮ ಗಂಟೆ ಕೆಲಸ ಮಾಡಿದ ಮೇಲೆ ಅವರು ಬೇರೆ ಕೆಲಸ ಮಾಡುವುದಕ್ಕೆ ಅಡ್ಡಿ ಪಡಿಸುವಂತಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿತು. ಇದರಿಂದ ಯುವಕರು ಹೊಸ ಹೊಸ ಕೈಗಾರಿಕೆಗಳನ್ನು ತೆರೆಯಲು ಸಾಧ್ಯವಾಗಿದೆ. ಈಗ ಇದಕ್ಕೆ ಒಂದು ಕಾನೂನಿನ ನೆಲೆಗಟ್ಟು ನಿರ್ಮಿಸುವುದು ಅಗತ್ಯ. ಈ ನೆಲೆಗಟ್ಟಿಗೆ ರಾಜ್ಯ, ದೇಶದ ಸರಹದ್ದು ವಿಧಿಸಬಾರದು.
ಈಗ ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ, ಒಡಿಶಾ, ಜಾರ್ಖಂಡ್ ರಾಜ್ಯಗಳು ಎಂಎಸ್‌ಎಂಇ ನೀತಿಯನ್ನು ರೂಪಿಸಿದೆ. ಕರ್ನಾಟಕ ಈ ವಿಷಯದಲ್ಲಿ ಹಿಂದೆ ಬಿದ್ದಿದೆ.
ಸಣ್ಣ ಕೈಗಾರಿಕೆಗೆ ನೂರೆಂಟು ಸಮಸ್ಯೆ
ಹೆಸರಿಗೆ ಸಣ್ಣ ಕೈಗಾರಿಕೆಯಾದರೂ ನೂರೆಂಟು ಸಮಸ್ಯೆ ಎದುರಿಸಬೇಕು. ಮೊದಲನೆಯದಾಗಿ ಸ್ಥಳೀಯ ಪುರಸಭೆ, ನಗರಸಭೆ, ಪಂಚಾಯ್ತಿಗೆ ಅಲೆಯಬೇಕು. ಅವರು ಖಾತೆ ಮಾಡಕೊಡಬೇಕು. ರಾಜ್ಯದಲ್ಲಿ ಎಲ್ಲ ಕೈಗಾರಿಕೆಗಳಿಗೆ ಅನ್ವಯವಾಗುವ ಹಾಗೆ ತೆರಿಗೆ ಪದ್ಧತಿಯನ್ನು ಸರ್ಕಾರ ಘೋಷಿಸಬೇಕು. ದೊಡ್ಡ ಕೈಗಾರಿಕೆಗಳಿಗೆ ಈ ಸಮಸ್ಯೆ ಇರುವುದಿಲ್ಲ.
ಕಾರ್ಮಿಕರ ಸಮಸ್ಯೆ
ಸಣ್ಣ ಕೈಗಾರಿಕೆಗಳಿಗೆ ಮೊದಲ ಸಮಸ್ಯೆ ಎಂದರೆ ನುರಿತ ಕಾರ್ಮಿಕರ ಕೊರತೆ. ಕನ್ನಡದ ಅಭಿಮಾನ ಕೇವಲ ಭಾಷಣಗಳಲ್ಲಿ ಉಳಿದುಕೊಂಡಿದೆ. ಈಗಲೂ ಕನ್ನಡದ ಉದ್ಯಮಿಗಳು ಕನ್ನಡಿಗರಿಗೆ ಉದ್ಯೋಗ ನೀಡಲು ಹಿಂಜರಿಯುತ್ತಾರೆ. ತಮಿಳುನಾಡು, ಒರಿಸ್ಸಾ ಮತ್ತು ಬಿಹಾರದಿಂದ ಬರುವವರು ಹಗಲು ರಾತ್ರಿ ದುಡಿಯುತ್ತಾರೆ. ಬಾಂಗ್ಲಾದಿಂದ ಬಂದ ಕಾರ್ಮಿಕರು ಬೆಂಗಳೂರಿನಲ್ಲಿದ್ದಾರೆ. ಈ ಸಮಸ್ಯೆಗೆ ಕನ್ನಡಿರೇ ಹೊಣೆ ಹೊರಬೇಕು. ನಂತರದ ಸಮಸ್ಯೆ ಎಂದರೆ ಕಚ್ಚಾವಸ್ತುಗಳ ಕೊರತೆ. ಇವುಗಳು ಹಲವು ಕಡೆಗಳಿಂದ ಬರಬೇಕು. ಅವುಗಳ ಬೆಲೆ ನಿಯಂತ್ರಣದಲ್ಲಿ ಇರುವುದಿಲ್ಲ. ಇವುಗಳ ಸರಬರಾಜಿಗೆ ಸರ್ಕಾರ ವ್ಯವಸ್ಥೆ ಕಲ್ಪಿಸಬಹುದು. ಸುಲಭ ವ್ಯವಹಾರಕ್ಕೆ ಎಂದು ಪ್ರತ್ಯೇಕ ಕಾಯ್ದೆ ರಚಿಸಿದ್ದೇವೆ ಅಷ್ಟೆ. ಮತ್ತೊಂದು ಸಮಸ್ಯೆ ಎಂದರೆ ಮಾರುಕಟ್ಟೆ ಕಂಡುಕೊಳ್ಳುವುದು. ಇದಕ್ಕೂ ಸರ್ಕಾರ ಪ್ರತ್ಯೇಕ ವ್ಯವಸ್ಥೆ ಮಾಡುವುದು ಅಗತ್ಯ.
ಎಂಎಸ್‌ಎಂಇ ಪ್ರಾಧಿಕಾರ
ರಾಜ್ಯ ಮಟ್ಟದಲ್ಲಿ ಒಂದು ಎಂಎಸ್‌ಎಂಇ ಪ್ರಾಧಿಕಾರ ಅಗತ್ಯ. ಇದರಲ್ಲಿ ವಿದ್ಯುತ್, ಕಂದಾಯ, ಹಣಕಾಸು ಸೇರಿದಂತೆ ಸಣ್ಣ ಕೈಗಾರಿಕೆಗಳ ಸಮಸ್ಯೆ ಬಗೆಹರಿಸುವ ಕೆಲಸ ಆಗಬೇಕು. ಉದ್ಯಮಿ ಕಚೇರಿಯಿಂದ ಕಚೇರಿಗೆ ಅಲೆಯುವುದು ತಪ್ಪಬೇಕು. ಮಧ್ಯವರ್ತಿಗಳಿಗೆ ಹಣ ಸುರಿಯುವುದು ನಿಲ್ಲಬೇಕು. ಈ ಪ್ರಾಧಿಕಾರದ ಶಾಖೆಗಳನ್ನು ಅಗತ್ಯ ಇರುವ ಕಡೆ ತೆರೆದು ಕಂಪ್ಯೂಟರ್ ಸಂಪರ್ಕ ಏರ್ಪಡಿಸಿದರೆ ಸಾಕು.

Next Article