ಅತ್ಯಾಚಾರ, ಕಾಡು ನ್ಯಾಯಕ್ಕೆ ಬೇಕಿದೆ ನಿಯಂತ್ರಣ
ರೇಪಿಸ್ಟ್‌ಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಮಸೂದೆ ಜಾರಿಗೆ ಬರಲೇಬೇಕು…
ಕೋಲ್ಕತ್ತಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಹೀಗೆಂದು ಗರ್ಜಿಸಿದರು.
ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೆ ದೇಶಾದ್ಯಂತ ಆಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಮೇಲೆಯೇ ಎಲ್ಲ ಮುಗಿಬಿದ್ದಿದ್ದರು.
ಪಶ್ಚಿಮ ಬಂಗಾಳದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ಅಬಲರಿಗೆ ರಕ್ಷಣೆಯೇ ಇಲ್ಲ. ಈ ಮಾತು ವ್ಯಾಪಕವಾಗಿ ಕೇಳಿಬರಲಾರಂಭಿಸಿತ್ತು. ಆಸ್ಪತ್ರೆಯಲ್ಲೇ ವೈದ್ಯೆಯ ಮೇಲೆ ಅತ್ಯಾಚಾರ ನಡೆದದ್ದಲ್ಲದೇ ಅದನ್ನು ಮುಚ್ಚಿ ಹಾಕಲು ಕುತ್ಸಿತ ಯತ್ನ ನಡೆದಿದ್ದು ಜಾಗತಿಕವಾಗಿ ಭಾರತ ತಲೆ ತಗ್ಗಿಸುವಂತೆ ಮಾಡಿದೆ ಎಂಬ ಸಿಟ್ಟು ವ್ಯಕ್ತವಾಗತೊಡಗಿತ್ತು.
ಮಮತಾ ಈ ದುಷ್ಕೃತ್ಯವನ್ನು ಖಂಡಿಸಿದರೂ, ರಾಜ್ಯ ಸರ್ಕಾರ ಒಂದೇ ಅಲ್ಲ, ಕೇಂದ್ರದ ಸಹಕಾರ ಕೂಡ ಅಗತ್ಯ ಎಂದು ಬೊಟ್ಟು ಮಾಡಿ ಸಮರ್ಥನೆಗಿಳಿದರು. ದೇಶ ಮಾತ್ರವಲ್ಲ, ನ್ಯಾಯಾಂಗದಲ್ಲೂ ಈ ದುಷ್ಕೃತ್ಯ ಚರ್ಚೆಗೆ ಒಳಪಟ್ಟ ಸಂದರ್ಭದಲ್ಲಿಯೇ ರಾಜಧಾನಿ ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಾಲಕಿಯರು, ಮಹಿಳೆಯರ ಮೇಲೆ ಇನ್ನಷ್ಟು ಅತ್ಯಾಚಾರದ ವರದಿಗಳು ಬಂದವು.
ಪ್ರಶ್ನೆ ಎದ್ದದ್ದು, ಹನ್ನೆರಡು ವರ್ಷಗಳ ಹಿಂದೆ ನಿರ್ಭಯಾ ಪ್ರಕರಣ ಜರುಗಿದ ನಂತರ ತಂದ ಕಾನೂನು ಮತ್ತು ವ್ಯವಸ್ಥೆ ಸಮಾಜದಲ್ಲಿ ಪರಿಣಾಮ ಬೀರಿದೆಯೇ? ಅಥವಾ ಪರಿವರ್ತನೆಯಾಗಿದೆಯೇ? ಕಾನೂನು ಕುಣಿಕೆ ರೇಪಿಸ್ಟ್ಗಳ ವಿರುದ್ಧ ಬಿಗಿಗೊಂಡಿದೆಯೇ ಎನ್ನುವುದು.
ಇಲ್ಲ. ನಿರ್ಭಯಾ ಕಾನೂನು ವರ್ಷದವರೆಗೆ ಮಾಧ್ಯಮ ಮತ್ತು ರಾಜಕೀಯದಲ್ಲಿ ಮಹತ್ವ ಪಡೆಯಿತೇ ವಿನಾ ಮುಂದೆ ಅಷ್ಟೇ ಸಡಿಲಗೊಂಡಿತು. ಯುವತಿಯ ಮೇಲೆ ಅತ್ಯಾಚಾರಗೈದ ನಾಲ್ವರಿಗೆ ಗಲ್ಲು ಶಿಕ್ಷೆಯಾಯಿತು. ಅಪ್ರಾಪ್ತ ಅಪರಾಧಿಯ ಬಿಡುಗಡೆಯಾಯಿತು. ಅಷ್ಟೇ. ನಿರ್ಭಯಾಳ ಪೋಷಕರು ತಮ್ಮ ಮಗಳಿಗಾದ ಗತಿ ಬೇರೆಯವರಿಗೆ ಆಗಬಾರದು ಎಂದು ದೇಶಾದ್ಯಂತ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಕೇಂದ್ರ ಸರ್ಕಾರವೇನೋ ಆಗ ಮಹಿಳೆಯರ ಸುರಕ್ಷತೆಗೆ ಕಟ್ಟುನಿಟ್ಟಿನ ನಿರ್ಭಯಾ ಕಾನೂನು ತಂದಿತು. ಅಲ್ಲದೇ ವಿಶೇಷ ಅನುದಾನವನ್ನು ಘೋಷಿಸಿತು.
ದುರಂತ ನೋಡಿ. ೨೦೧೨ರಲ್ಲಿ ನಿರ್ಭಯಾ ಕಾನೂನು ಜಾರಿಗೆ ಬಂದರೆ, ನಂತರದ ಹತ್ತು ವರ್ಷದಲ್ಲಿ ಈ ದೇಶದಲ್ಲಿ ನಿತ್ಯ ಸರಾಸರಿ ೮೯ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿರುವ ಅಂಕಿಸಂಖ್ಯೆಗಳಿವೆ. ೨೦೨೨ರಲ್ಲಿ ೩೧,೫೧೬ ಅತ್ಯಾಚಾರ ಪ್ರಕರಣಗಳು ನಡೆದರೆ, ೪,೪೫,೨೫೬ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿವೆ. ಪ್ರತಿ ಗಂಟೆಗೆ ೪೯ ಮಹಿಳೆಯರ ಮೇಲೆ ದೌರ್ಜನ್ಯ, ಕಿರುಕುಳ, ಶೋಷಣೆ ನಡೆದಿರುವುದು ಸ್ಪಷ್ಟವಾಗುತ್ತಿದೆ. ಇವು ಬೆಳಕಿಗೆ ಬಂದಂಥವು.
ಅಂದರೆ ನಿರ್ಭಯಾ ಪ್ರಕರಣದ ನಂತರ ಈಗ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಪೈಶಾಚಿಕ ಕೃತ್ಯಗಳು ಶೇ. ೯೬ರಷ್ಟು ಹೆಚ್ಚಿವೆ. ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಪ್ರಕಾರ ಹತ್ತು ವರ್ಷದಲ್ಲಿ (೨೦೧೨ರಿಂದ ೨೦೨೨) ೩,೫೯,೧೪೭ ಮಹಿಳೆಯರ ಮೇಲೆ ಅತ್ಯಾಚಾರ ಆಗಿವೆ. ೨೦೧೬ರಲ್ಲೇ ೩೮೯೪೭ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇವು ದಾಖಲಾದವು ಅಷ್ಟೇ. ಇನ್ನುಳಿದ ಸಾವಿರಾರು ಪ್ರಕರಣಗಳು ಪೊಲೀಸ್ ಠಾಣೆ ಬಿಡಿ. ಊರ ಗಡಿ ದಾಟಿಲ್ಲ. ಮಾನ ಮರ್ಯಾದೆ, ಸಾಮಾಜಿಕ ಗೌರವ ಹಾಗೂ ಪುರುಷಕೇಂದ್ರಿತ ಸಮಾಜದ ಬಾಹ್ಯ ಸಂಕಷ್ಟಗಳೆಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು ಮಹಿಳೆಯರು ಬದುಕು ಸಾಗಿಸುತ್ತಿದ್ದಾರೆ.
ಇಷ್ಟಿದ್ದೂ ನಿರ್ಭಯಾ ಪ್ರಕರಣವನ್ನು ಕೆಲವೇ ವರ್ಷಗಳಲ್ಲಿ ಈ ದೇಶ ಮರೆತುಬಿಟ್ಟಿತೇ ಎನ್ನುವುದು ಕೋಲ್ಕತ್ತಾ ಪ್ರಕರಣದ ನಂತರ ಮೂಡಿರುವ ದಟ್ಟ ವಿಷಾದ. ನಿರ್ಭಯಾ ಕಾಯ್ದೆ ಪ್ರಯೋಜನಕ್ಕೆ ಬರಲೇ ಇಲ್ಲವೇ? ಕೋಲ್ಕತ್ತಾ ಒಂದೇ ಅಲ್ಲ. ದೇಶಾದ್ಯಂತ ಈಗ ಹತ್ತು ವರ್ಷದಲ್ಲಿ ಹೆಚ್ಚಾಗಿರುವ ಶೇ. ೯೬ರಷ್ಟು ಇಂತಹ ಪ್ರಕರಣಗಳು ಇದೇ ಪ್ರಶ್ನೆಯನ್ನು ಮುಂದೊಡ್ಡುತ್ತಿವೆ.
ಏನು ಕಾಯ್ದೆ ತಂದು, ಏನು ಯೋಜನೆ ರೂಪಿಸಿ ಏನು ಪ್ರಯೋಜನ? ಮಹಿಳೆಯರ ರಕ್ಷಣೆ ಎಷ್ಟರ ಮಟ್ಟಿಗೆ ಆಗಿದೆ? ನಿರ್ಭಯಾ ಪ್ರಕರಣದಿಂದ ಪಾಠ ಕಲಿಯಬೇಕಾಗಿದ್ದ ಸರ್ಕಾರ ಅದನ್ನು ಮಾಡಿತೇ? ಕೇವಲ ರಾಜಕೀಯ ಕೆಸರೆರಚಾಟಕ್ಕೆ ಪ್ರಕರಣ ಬಳಕೆಯಾಯಿತೇ ವಿನಾ, ಯಾವ ಭಯವನ್ನೂ ಹುಟ್ಟಿಸಲೇ ಇಲ್ಲವಲ್ಲ!?
ಇದಕ್ಕೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆತಂಕ ವ್ಯಕ್ತಪಡಿಸಿದ್ದು, ಈ ಸಮಾಜದ, ಜನರ ಮರೆವು ಇಂತಹ ಅನಾಹುತವನ್ನು ತಂದಿತು' ಎಂದು. ನಿರ್ಭಯಾ ಪ್ರಕರಣವನ್ನು ಜನ ಮರೆತುಬಿಟ್ಟರು. ದೇಶದ ಹಲವೆಡೆ ನಡೆದಂತಹ ಇಂತಹ ಪ್ರಕರಣಗಳನ್ನು ಜನ ಎಷ್ಟು ಬೇಗ ಮರೆತು ನಿರ್ಭಯವಾಗಿ ಮತ್ತೆ ಮತ್ತೆ ಇಂತಹ ಕೃತ್ಯ ಎಸಗುತ್ತಾರೆ... ಎನ್ನುವ ಆತಂಕವನ್ನು ಅವರು ವ್ಯಕ್ತಪಡಿಸಿದ್ದು ಸಹಜವೇ. ಇದಕ್ಕೆ ಪ್ರತಿರೋಧವೂ ವ್ಯಕ್ತವಾಯಿತು. ಮಣಿಪುರದಲ್ಲಿ, ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರಗಳಲ್ಲಿ ನಡೆದ ಅತ್ಯಾಚಾರ, ಗಲಭೆ, ಕೋಮು ಘರ್ಷಣೆಗಳ ಸಂದರ್ಭದಲ್ಲಿ ರಾಷ್ಟçಪತಿ ಏಕೆ ಸುಮ್ಮನಿದ್ದರು? ರಾಷ್ಟ್ರಪತಿಗಳಿಗೆ ಕೋಲ್ಕತ್ತಾ ಘಟನೆಯೊಂದೇ ಕಾಣುತ್ತದೆಯೇ ಎಂದು ಅಲ್ಲಿನ ಸಿಎಂ ಪ್ರಶ್ನಿಸಿದ್ದೂ ಆಯ್ತು. ರಾಜಕೀಯ ಏನೇ ಇರಲಿ.
ಯತ್ರ ನರ‍್ಯಸ್ತು ಪೂಜ್ಯತೆ….'ಎನ್ನುವ ದೇಶದಲ್ಲಿ ಈಗಂತೂ ಮಹಿಳೆಯರಿಗೆ ಸಂರಕ್ಷಣೆಯ ಅಗತ್ಯ ಎಲ್ಲಕ್ಕಿಂತಲೂ ಹೆಚ್ಚಿದೆ. ಕೇವಲ ಬಾಯುಪಚಾರ ಬೇಕಿಲ್ಲ.
ಕೋಲ್ಕತ್ತಾ ವಿಧಾನಸಭೆ ಮಂಗಳವಾರ ಅಂಗೀಕರಿಸಿದ ಮಸೂದೆ ಅತ್ಯಾಚಾರಿಗಳಿಗೆ, ಪೀಡಕರಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸುತ್ತದೆ (ಇನ್ನಷ್ಟೇ ರಾಷ್ಟ್ರಪತಿ, ರಾಜ್ಯಪಾಲರ ಅಂಕಿತವಾಗಬೇಕಿದೆ). ಈ ವಿಧೇಯಕವನ್ನು ಸರ್ವಾನುಮತದಿಂದ ಅಂಗೀಕೃತವಾಗಿದೆ. ಹಾಗಾಗಿ ಇದರ ಅಂಕಿತ ಮತ್ತು ನಂತರದ ಕಾಯ್ದೆ ಜಾರಿಗೆ ರಾಜಕೀಯ ಬೆರೆಯಲಾರದು ಎನ್ನುವ ನಿರೀಕ್ಷೆ.
ಇಷ್ಟಕ್ಕೂ ಮಮತಾ ದಿದಿ ಒಂದು ಸವಾಲು ಹಾಕಿದ್ದಾರೆ. ಈ ಮಸೂದೆಯನ್ನು ದೇಶದ ಎಲ್ಲ ರಾಜ್ಯಗಳಲ್ಲೂ ತನ್ನಿ. ಕಠಿಣವಾಗಿ ಅನುಷ್ಠಾನಗೊಳಿಸಿ. ಕೇಂದ್ರಕ್ಕೆ ಇಚ್ಛಾಶಕ್ತಿ ಇದ್ದರೆ ಪ್ರಬಲ ಕಾನೂನು ತಂದು ಅನುಷ್ಠಾನಕ್ಕೆ ಛಾತಿ ತೋರಿಸಲಿ ಎಂದು.
ನಿರ್ಭಯಾ ಕಾನೂನು ನಂತರ ಸಾವಿರಾರು ಕೋಟಿ ಅನುದಾನವನ್ನು ಕೇಂದ್ರ ಘೋಷಿಸಿತು. ಆದರೆ ಬಹತೇಕ ರಾಜ್ಯಗಳು, ವಿಶೇಷವಾಗಿ ಬಿಜೆಪಿ ಆಡಳಿತದ ರಾಜಸ್ಥಾನ, ಉತ್ತರಾಖಂಡ, ಗುಜರಾತ್‌ನಂತಹ ರಾಜ್ಯಗಳಲ್ಲಿ ಅನುದಾನ ಸದ್ಬಳಕೆಯಾಗಿಲ್ಲ. ರಾಷ್ಟ್ರೀಯ ಮಹಿಳಾ ಮತ್ತು ಮಕ್ಕಳ ಆಯೋಗ ಮಂಡಿಸಿರುವ ವರದಿಯಲ್ಲಿ ರಾಜಸ್ಥಾನದಲ್ಲೇ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ಸಂಭವಿಸಿವೆ. ಎರಡನೆಯದ್ದು ಉತ್ತರಾಖಂಡ. ಕರ್ನಾಟಕದಲ್ಲೂ ೫ ಸಾವಿರಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ಒಂದು ವರ್ಷದಲ್ಲಿ ದಾಖಲಾಗಿವೆ. ಕರ್ನಾಟಕಕ್ಕೆ ಮಂಜೂರಾದ ನಿರ್ಭಯಾ ಅನುದಾನ ಕೂಡ ಪೂರ್ಣ ಬಳಕೆಯಾಗಿಲ್ಲ.
ದೀದಿ ತಂದಿರುವ `ಅಪರಾಜಿತ ಮಹಿಳಾ ಮತ್ತು ಮಕ್ಕಳ ವಿಧೇಯಕ-೨೦೨೪'ನ್ನು ದೇಶಾದ್ಯಂತ ಪೂರ್ಣವಾಗಿ ತಂದು ಅನುಷ್ಠಾನಗೊಳಿಸಬಾರದೇಕೆ?
ಅತ್ಯಾಚಾರ ಪ್ರಕರಣಗಳು ವರದಿಯಾದಾಗಲೆಲ್ಲ ನೈತಿಕತೆ, ಸಂಸ್ಕೃತಿ ಚರ್ಚೆಯಾಗುತ್ತದೆ. ನೈತಿಕ ಅಧಃಪತನ ಹಾಗೂ ಮೌಲ್ಯಗಳು ನಿರಂತರವಾಗಿ ಕುಸಿಯುತ್ತಿರುವ ಮಾತುಗಳು ಕೇಳಿ ಬಂದು ಕೆಲವೇ ಕ್ಷಣಗಳಲ್ಲಿ ಮರೆತು ಹೋಗುತ್ತವೆ. ಸಮಾಜದ ಮರೆವು ಇಂತಹ ದುರಂತಗಳಿಗೆ ದೊಡ್ಡ ಮಟ್ಟದಲ್ಲಿ ಕಾರಣ!
ಮತ್ತೊಂದು ಚಾಳಿ ಎದ್ದಿದೆ. ಮಹಿಳೆಯರ ಉಡುಗೆ, ತೊಡುಗೆ, ಹವ್ಯಾಸಗಳೆಲ್ಲ ಅತ್ಯಾಚಾರಕ್ಕೆ ಕಾರಣ ಎನ್ನುವುದು. ಮಹಿಳೆಯರ ಮೇಲೇ ಗೂಬೆ ಕೂರಿಸುವುದು. ರಕ್ಷಣೆ ಒದಗಿಸಲಾಗದ, ನೋಡುವ ದೃಷ್ಟಿ, ಚಿಂತನೆ ಬದಲಾಗದ ಜನರಿಗೆ ಮಹಿಳೆ ಎಂದರೆ ಭೋಗದ ವಸ್ತು ಅಲ್ಲ ಎಂಬ ಅರಿವಿನ ಪಾಠ ಕಲಿಸುವ ಗಂಭೀರ ಯತ್ನಗಳನ್ನು ಸಾಮಾಜಿಕ ಹೊಣೆಗಾರಿಕೆಯ ಸ್ಥಾನದಲ್ಲಿರುವವರು ಮತ್ತು ಸರ್ಕಾರಗಳು ಮಾಡಬೇಕಿದೆ. ಮನಸ್ಥಿತಿ ಬದಲಾಗುವಂತೆ ನೋಡಿಕೊಳ್ಳುವ ಬದ್ಧತೆ ತೋರಬೇಕಿದೆ. ಹಾಗೆ ನೋಡಿದರೆ ಇಡೀ ಸಮಾಜದ ಮೇಲೆಯೇ ಇಂತಹ ಮೌಲಿಕ ಹೊಣೆಗಾರಿಕೆ ಇದೆ.
ಅತ್ಯಾಚಾರ ಸಂತ್ರಸ್ತೆಯ ವಿಷಯದಲ್ಲೂ, ಜಾತಿ, ಸಮುದಾಯ, ಸಮಾಜ, ರಾಜಕೀಯ ಬೆಂಬಲ ಇತ್ಯಾದಿಗಳೇ ಮಾನದಂಡವಾಗಿಸಿಕೊಂಡ ದೇಶದಲ್ಲಿ ಎಲ್ಲವೂ ರಾಜಕೀಯಗೊಂಡರೆ ಏನಾದೀತು ಎಂಬುದಕ್ಕೆ ಆರ್.ಜಿ.ಕರ್ ಕಾಲೇಜು ಘಟನೆಯೇ ಉದಾಹರಣೆ.
ಬುಲ್ಡೋಜರ್ ನ್ಯಾಯ…..
ಇದೇ ವಾರ ಮತ್ತೊಂದು ಪ್ರಕರಣ ದೇಶದ ಜನರ ಗಮನ ಸೆಳೆದಿದೆ. ಅದು ಬುಲ್ಡೋಜರ್ ನ್ಯಾಯ…..
ಉತ್ತರ ಪ್ರದೇಶದಲ್ಲಿ ಆರಂಭವಾದ ಆರೋಪಿಗಳ ಮನೆ, ಆಸ್ತಿ-ಪಾಸ್ತಿಗಳಿಗೆ ಏಕಾಏಕಿ ಬುಲ್ಡೋಜರ್ ಹಚ್ಚಿ ಉಡಾಯಿಸುವ ಘಟನೆ ಈಗಂತೂ ಬಿಜೆಪಿ ಆಡಳಿತದ ಎಲ್ಲ ರಾಜ್ಯಗಳಲ್ಲೂ ಆರಂಭವಾಗಿದೆ. ಬಹುತೇಕ ಒಂದು ಕೋಮಿನವರನ್ನು ಗುರಿಯಾಗಿಸಿ ಬಳಸಲಾಗುತ್ತಿರುವ ಬುಲ್ಡೋಜರ್ ಸಾವಿರಾರು ಮಂದಿ ಅಮಾಯಕರನ್ನು ಅತಂತ್ರಗೊಳಿಸಿದೆ. ದೇಶದ ಕಾನೂನು-ನ್ಯಾಯಾಂಗ ವ್ಯವಸ್ಥೆಗೆ ಇದು ಒಂದು ಸವಾಲು ಕೂಡ.
ಯಾರೋ ಮಾಡಿದ ತಪ್ಪಿಗೆ, ಇನ್ಯಾರದ್ದೋ ಆಸ್ತಿಪಾಸ್ತಿ ಧ್ವಂಸ. ವಿಚಾರಣೆಯಿಲ್ಲ. ಪರಿಶೀಲನೆ ಇಲ್ಲದ ಈ ಬುಲ್ಡೋಜರ್ ಕ್ರಮಕ್ಕೆ ಸರ್ವೋಚ್ಚ ನ್ಯಾಯಾಲಯ ಅಂತೂ ಕಣ್ತೆರೆದಿದೆ. ಕರ್ನಾಟಕದಲ್ಲೂ ಬುಲ್ಡೋಜರ್ ಬಳಕೆಗೆ ಹಿಂದಿನ ಸರ್ಕಾರದಲ್ಲಿ ವ್ಯಾಪಕ ಒತ್ತಾಯವಿತ್ತು. ಅಂದಿನ ಗೃಹ ಸಚಿವರೇನೋ ಈ ವಿಷಯದಿಂದ ಹೆಜ್ಜೆ ಹಿಂದಿಟ್ಟರು. ಅಂತೂ ಬುಲ್ಡೋಜರ್ ರಾಜ್ಯದಲ್ಲಿ ಬಳಕೆಯಾಗಲಿಲ್ಲ. ಪುಣ್ಯ.
ನ್ಯಾಯಾಲಯ ಈ ಬುಲ್ಡೋಜರ್ ನ್ಯಾಯದ ವಿಷಯದಲ್ಲಿ ಸಾಕಷ್ಟು ಮೂಲಭೂತ ಪ್ರಶ್ನೆಗಳನ್ನೆತ್ತಿದೆ. ಈ ಅಧಿಕಾರ ಕೊಟ್ಟರ‍್ಯಾರು? ಯಾವ ಕಾನೂನನ್ನು ಬಳಸಲಾಗಿದೆ? ನಿರ್ಧಾರ ಯಾರದ್ದು ಎಂಬೆಲ್ಲ. ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯವೇ ಒಂದು ನೀತಿ-ನಿಬಂಧನೆ ರೂಪಿಸಲು ಮುಂದಾಗಿದೆ. ಇದು ತುರ್ತು ಅಗತ್ಯವೂ ಕೂಡ.
ಇಷ್ಟಕ್ಕೂ ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಪ್ರಯೋಗ ನಡೆಸಿದಾಗ ದೇಶಾದ್ಯಂತ ಪ್ರಚಾರದ ಅಬ್ಬರವೋ ಅಬ್ಬರ. ಎಂತಹ ಧೈರ್ಯವಂತ ಎಂದು ಪ್ರಶಂಸೆ ಬೇರೆ. ಆದರೆ ಸಂವಿಧಾನದ ಸಾಮಾಜಿಕ ನ್ಯಾಯ, ಸರ್ವ ಜನರ ಸಮಾನತೆ, ಸಂವಿಧಾನದ ತತ್ವ, ಕಲ್ಯಾಣ ರಾಜ್ಯದ ಕಲ್ಪನೆ ಎಲ್ಲವೂ ಮೂಲೋತ್ಪಾಟನೆಯಾದಾಗ ಜನರೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಿದರು. ಪ್ರಜಾಪ್ರಭುತ್ವ ಎಷ್ಟು ಗಟ್ಟಿಯಲ್ಲವೇ?
ಪಶ್ಚಿಮ ಬಂಗಾಳದ ದೀದಿ ಸರ್ಕಾರ ಅಂಗೀಕರಿಸಿರುವ ಅತ್ಯಾಚಾರಿಗಳಿಗೆ ಮರಣ ದಂಡನೆಯ ಕಠಿಣ ಕಾಯ್ದೆಯ ವಿಧೇಯಕ ಎಷ್ಟು ಅಗತ್ಯವೋ, ಕಾಡು ನ್ಯಾಯದ ಪ್ರತೀಕವಾಗಿರುವ ಬುಲ್ಡೋಜರ್ ನ್ಯಾಯ ನಿಯಂತ್ರಣಕ್ಕೆ ಸರ್ವೋಚ್ಚ ನ್ಯಾಯಾಲಯ ಮುಂದಾಗಿರುವುದು ಅಷ್ಟೇ ಸಮರ್ಥನೀಯ ಮತ್ತು ಸ್ವಾಗತಾರ್ಹ. ಜನ, ದೇಶ ಸುಭೀಕ್ಷವಾಗಿ, ಸುರಕ್ಷಿತವಾಗಿ ಇರಬೇಕಲ್ಲವೇ? ಇದಕ್ಕಾಗಿ ಚಿಂತನೆಗಳು ರೂಪುಗೊಳ್ಳಲಿ.