ಅತ್ಯಾಚಾರ ಪ್ರಕರಣ: ಇತರ ಆರೋಪಿಗಳಿಗಾಗಿ ತೀವ್ರ ಶೋಧ
ಕಾರ್ಕಳ: ಅಯ್ಯಪ್ಪನ ನಗರದಲ್ಲಿ ನಡೆದಿರುವ ಹಿಂದೂ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಲ್ತಾಫ್ ಹಾಗೂ ಶ್ರಾವೆದ್ ರಿಚರ್ಡ್ ಕ್ವಾಡ್ರಸ್ ಬಂಧಿತರು. ಸಂತ್ರಸ್ತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ಮೇಲಿನ ಹೇಯ ಕೃತ್ಯವನ್ನು ಹಿಂದೂ, ಮುಸ್ಲಿಂ ಸಹಿತ ಎಲ್ಲ ಸಮುದಾಯದ ಸಂಘಟನೆಗಳು ಖಂಡಿಸಿವೆ.
ಅಯ್ಯಪ್ಪ ನಗರದ ಜೇನು ಕೃಷಿ ಘಟಕದಲ್ಲಿ ಸಂತ್ತಸ್ತೆ ಕೆಲಸ ಮಾಡುತ್ತಿದ್ದಳು. ಸಂತ್ತಸ್ತೆಗೆ ಮೂರು ತಿಂಗಳ ಹಿಂದೆ ಇನ್‌ಸ್ಟ್ರಾಗ್ರಾಂ ಮೂಲಕ ಟಿಪ್ಪರ್ ಚಾಲಕ ಆರೋಪಿ ಅಲ್ತಾಫ್ ಪರಿಚಯವಾಗಿದ್ದ. ಇಬ್ಬರೂ ಹತ್ತಿರದ ಪ್ರದೇಶದವರಾಗಿದ್ದು, ಅಲ್ತಾಫ್ ಕುಕ್ಕಂದೂರು ಗ್ರಾಮದವನಾಗಿದ್ದ. ಇದೇ ಪರಿಚಯದಲ್ಲಿ ಯುವತಿಯನ್ನು ಆ. ೨೩ರಂದು ನಿರ್ಜನ ಜಾಗಕ್ಕೆ ಬರಲು ಹೇಳಿದ್ದ ಅಲ್ತಾಫ್, ಅಲ್ಲಿಂದ ಆಕೆಯನ್ನು ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿದ್ದಾನೆ. ಆಕೆಗೆ ಮದ್ಯದಲ್ಲಿ ಅಮಲು ಪದಾರ್ಥ ನೀಡಿ ಕುಡಿಸಿದ್ದ. ಆ ಬಳಿಕ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಅತ್ಯಾಚಾ ರದ ಆರೋಪದಲ್ಲಿ ಅಲ್ತಾಫ್ ಹಾಗೂ ಮದ್ಯ ಪೂರೈಸಿದ ಶ್ರಾವೆದ್ ರಿಚರ್ಡ್ ಕ್ವಾಡ್ರಸ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರು, ಸ್ಥಳದಲ್ಲಿದ್ದ ಮದ್ಯದ ಬಾಟಲಿ ಮತ್ತಿತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃತ್ಯದಲ್ಲಿ ಒಟ್ಟು ನಾಲ್ಕು ಮಂದಿ ಇದ್ದರೆಂಬ ಮಾಹಿತಿಯನ್ವಯ ಇನ್ನಿಬ್ಬರ ಬಗ್ಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಅಲ್ತಾಫ್ ಯುವತಿಯನ್ನು ಶುಕ್ರವಾರ ಮಧ್ಯಾಹ್ನ ಆಕೆ ಕೆಲಸ ಮಾಡುತ್ತಿದ್ದ ಸ್ಥಳದಿಂದ ೧೫-೧೮ ಕಿ.ಮೀ. ದೂರದ ಪಳ್ಳಿ ಕಡೆಗೆ ಕರೆದೊಯ್ದಿದ್ದ. ಅಲ್ಲಿ ತನ್ನದೊಂದು ಸೈಟ್ ಇದೆ ಎಂದು ನಂಬಿಸಿ ಕಾಡಿನೊಳಗೆ ಕರೆದೊಯ್ದ ಎನ್ನಲಾಗಿದೆ. ಆ ಹೊತ್ತಿಗೆ ಅಲ್ಲಿ ಮತ್ತಿಬ್ಬರು ಕಾದು ನಿಂತಿದ್ದರು. ಬಳಿಕ ಆಕೆಗೆ ಮದ್ಯದಲ್ಲಿ ಅಮಲು ಪದಾರ್ಥ ಬೆರೆಸಿ ನೀಡಲಾಯಿತು. ಆಕೆ ಮತ್ತಿನಲ್ಲಿರುವಾಗ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಸ್ವಲ್ಪ ಹೊತ್ತಿನ ಬಳಿಕ ಆಕೆ ಬೊಬ್ಬೆ ಹೊಡೆಯಲಾರಂಭಿಸಿದ್ದು, ಭಯಗೊಂಡ ಅಲ್ತಾಫ್ ಆಕೆಯನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಮನೆ ಕಡೆಗೆ ಹೊರಟ. ದಾರಿ ಮಧ್ಯೆ ಆಕೆ ವಾಂತಿ ಮಾಡಿದ್ದು, ಮನೆಯ ಬಳಿ ತಲುಪುವಾಗ ಆಕೆ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದಳು. ಬಳಿಕ ಮನೆಯವರು ಹಾಗೂ ಸ್ಥಳೀಯರು ಸೇರಿ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು.
ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆಯೇ ಎನ್ನು ವುದು ಆಕೆ ಚೇತರಿಸಿಕೊಂಡ ಬಳಿಕ ಕೈಗೊಳ್ಳುವ ಸಮಗ್ರ ವೈದ್ಯಕೀಯ ವರದಿ ಹಾಗೂ ಜುಡಿಶಿಯಲ್ ಆಧಿಕಾರಿ ಮುಂದೆ ಆಕೆ ನೀಡುವ ಹೇಳಿಕೆಯಿಂದ ಸ್ಪಷ್ಟವಾಗಬೇಕಿದೆ. ಆದರೆ ಆಕೆಯ ಮೇಲೆ ಅತ್ಯಾಚಾರ ಆಗಿರುವುದು ವೈದ್ಯರ ಪರೀಕ್ಷೆಯಿಂದ ದೃಢಪಟ್ಟಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಸಂತ್ರಸ್ತೆಯ ತಾಯಿ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಅಲ್ತಾಫ್ ವಿವಾಹಿತನಾಗಿದ್ದು, ಮೂಲತಃ ಉತ್ತರ ಭಾರತದವನು. ಸ್ಥಳೀಯವಾಗಿ ಟಿಪ್ಪರ್ ಚಾಲಕನಾಗಿದ್ದ ಆತ ಪತ್ತೂಂಜಿಕಟ್ಟೆ, ಕಾಬೆಟ್ಟು, ಜೋಡುರಸ್ತೆ, ಕುಕ್ಕುಂದೂರು ಮುಂತಾದೆಡೆ ಬಾಡಿಗೆ ಮನೆಯಲ್ಲಿ ವಾಸವಿದ್ದ. ಇನ್ನೋರ್ವ ಆರೋಪಿ ಶ್ರಾವೆದ್ ರಿಚರ್ಡ್ ಕ್ವಾಡ್ರಸ್ ರಂಗನ ಪಲ್ಕೆ ನಿವಾಸಿಯಾಗಿದ್ದು, ಹಿಂದೆ ಖಾಸಗಿ ಬಸ್ ಚಾಲಕನಾಗಿದ್ದ. ಈಗ ಟಿಪ್ಪರ್ ಓಡಿಸುತ್ತಿದ್ದಾನೆ. ಆರೋಪಿಗಳು ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಮದ್ಯ, ಡ್ರಗ್ಸ್ ಸೇವನೆ, ಮಾದಕ ವಸ್ತು ಸರಬರಾಜು ಮುಂತಾದ ಕೃತ್ಯಗಳಲ್ಲಿ ಭಾಗಿಯಾಗಿ ವಿಲಾಸಿ ಜೀವನ ನಡೆಸುತ್ತಿದ್ದರು.
ಐದು ವರ್ಷಗಳ ಹಿಂದೆ ಬಂಗ್ಲೆಗುಡ್ಡೆ ಯಲ್ಲಿ ಯುವತಿ ಯೋರ್ವಳಿಗೆ ಕಿರುಕುಳ ನೀಡಿದ್ದೂ ಸಹಿತ ಅಲ್ತಾಫ್ ವಿರುದ್ಧ ಹಲವು ದೂರುಗಳಿವೆ. ಆಗ ಆತನ ಮೊಬೈಲಲ್ಲಿ ಹಲವು ಯುವತಿಯರ ವೀಡಿಯೋ, ಫೋಟೋಗಳು ಸಿಕ್ಕಿದ್ದು, ಸ್ಥಳೀಯರು ನಾಲ್ಕೇಟು ಬಿಗಿದು ಬುದ್ಧಿವಾದ ಹೇಳಿದ್ದರಂತೆ.
ಸಂತ್ತಸ್ರೆಯ ತಂದೆ ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದು, ಆರೋಪಿ ಅಲ್ತಾಫ್ ಮರಳು ವ್ಯಾಪಾರದೊಂದಿಗೆ ಟಿಪ್ಪರ್ ಓಡಿಸುತ್ತಿದ್ದ. ಈ ವೃತ್ತಿ ಕ್ಷೇತ್ರದ ಸಂಪರ್ಕ ಸಂತ್ತಸ್ತೆಯ ತಂದೆ ಹಾಗೂ ಅಲ್ತಾಫ್ನನ್ನು ಪರಿಚಯವಾಗಿಸಿತ್ತು ಎನ್ನಲಾಗಿದೆ. ಆರೋಪಿ ಮತ್ತು ಯುವತಿ ತಂದೆ ಜೊತೆಯಾಗಿ ಕೆಲವು ಬಾರಿ ಓಡಾಡಿದ್ದರು ಎನ್ನಲಾಗಿದೆ.