For the best experience, open
https://m.samyuktakarnataka.in
on your mobile browser.

ಅದೃಷ್ಟದ ಸುತ್ತ ಒಂದು ಸುತ್ತು

03:30 AM May 15, 2024 IST | Samyukta Karnataka
ಅದೃಷ್ಟದ ಸುತ್ತ ಒಂದು ಸುತ್ತು

ಮತ್ತೊಬ್ಬ ಹುಡುಗನಿಗೆ ಹೊಡೆದುದಕ್ಕಾಗಿ ವಿಭಾಗದ ಮುಖ್ಯಸ್ಥರು ಸಾತ್ವಿಕ್ (ಹೆಸರು ಬದಲಾಯಿಸಲಾಗಿದೆ) ನನ್ನು ನನ್ನ ಬಳಿಗೆ ಕಳುಹಿಸಿದ್ದರು. ಮುಂಚೆಯೂ ಒಮ್ಮೆ ನನ್ನನ್ನು ಭೇಟಿ ಮಾಡಿದ್ದ, ಯಾರಿಗೋ ಹೆದರಿಸಿದ್ದರ ಬಗ್ಗೆ. ಸಾತ್ವಿಕ್‌ಗೆ ನನ್ನ ಬಗ್ಗೆ ಗೌರವವಿತ್ತು, ಹಾಗಾಗಿ ನನ್ನ ಮಾತು ಕೇಳುತ್ತಿದ್ದ. ಏನಾಯ್ತಪ್ಪ, ಯಾರಿಗೋ ಹೊಡೆದು ಬಂದ್ಯಂತಲ್ಲ ಎಂದು ಕೇಳಿದೆ.
ಸಾತ್ವಿಕ್: ನಾನು ಹೊಡೆಯಬೇಕು ಅಂದ್ಕೊಂಡಿರಲಿಲ್ಲ, ಅವನೇ ಹೊಡೆಯುವ ಹಾಗೆ ಮಾಡ್ಕೊಂಡ ಸರ್, ಯಾವಾಗ್ಲೂ, ಏನಾದ್ರೂ ಸಹಾಯ ಮಾಡು ಅಂತ ಕೇಳಿದ್ರೆ ಮಾಡ್ತಿರಲಿಲ್ಲ, ಮೊನ್ನೆ ಕಿರು ಪರೀಕ್ಷೆಯಲ್ಲಿ ಒಂದು ಪ್ರಶ್ನೆಯಲ್ಲಿ ಸಮೀಕರಣ ಬರೀಬೇಕಾಗಿತ್ತು, ಸ್ವಲ್ಪ ತೋರಿಸು ಅಂತ ಕೇಳ್ದೆ, ಅವುನ ಸುಮ್ನೆ ಇದ್ದ, ಅದಕ್ಕೆ ತುಂಬಾ ಕೋಪ ಬಂದಿತ್ತು, ಹೊರಗಡೆ ಬಂದಾಗ ಯಾಕೋ ತೋರಿಸ್ಲಿಲ್ಲ ಅಂತ ಕೇಳ್ದೆ, ಅವುನ ನಾನ್ಯಾಕೋ ನಿನಗೆ ಉತ್ತರ ತೋರಿಸ್ಬೇಕು, ನಿನಗೆ ಗೊತ್ತಿದ್ರೆ ಬರಿ, ಇಲ್ಲಾಂದ್ರೆ ಬಿಡು ಅಂತ ಹೇಳ್ದ. ಅಷ್ಟೊತ್ತಿಗೆ ಕೋಪ ಜಾಸ್ತಿ ಆಗ್ಬಿಡ್ತು, ಅವ್ನ ಮುಖದ ಮೇಲೆ ಎರಡು ಪಂಚ್ ಮಾಡಿದೆ….
ಒಂದು ಹತ್ತು ಸೆಕೆಂಡ್ ಸುಮ್ಮನೆ ಇದ್ದು ಆಮೇಲೆ ಅವನೇ ಅಂದ, ನನಗೆ ಕೋಪ ಬಂದಾಗ ನಾನು ಏನು ಮಾಡ್ತೀನಿ ಅಂತ ಗೊತ್ತಾಗಲ್ಲ, ಚೆನ್ನಾಗಿ ಹೊಡೆದುಬಿಡ್ತೀನಿ, ಆಮೇಲೆ ಕೋಪ ಕಡಿಮೆ ಆದ್ಮೇಲೆ ಹೋಗಿ ಕ್ಷಮೆ ಕೇಳ್ತೀನಿ. ಆದ್ರೆ ಮೊನ್ನೆ ಕ್ಷಮೆ ಕೇಳಿದ್ರೂ ಮೇಡಂ ತುಂಬಾ ಗರಂ ಆಗಿದ್ರು, ನಿಮ್ ಹತ್ರ ಬಂದು ಮಾತಾಡಕ್ಕೆ ಹೇಳಿದ್ರು. ಯಾಕೋ ನನ್ ಅದೃಷ್ಟಾನೇ ಚೆನ್ನಾಗಿಲ್ಲ ಸರ್, ನಾನು ಮಾಡಿದ್ ಎಲ್ಲ ಹಾಳಾಗ್ತಿದೆ. ಅಮ್ಮ ಜಾತಕ ತೋರಿಸ್ಬೇಕು ಅಂತ ಇದ್ರು ಎಂದ.
ನೀನು ಕೋಪ ಮಾಡಿಕೊಂಡು ಮತ್ತೊಬ್ಬನಿಗೆ ಹೊಡೆದ್ರೆ ಅದು ನಿನ್ನ ದುರದೃಷ್ಟ ಹೇಗಾಗುತ್ತೆ? ಇಲ್ಲಿ ಯಾವ ಅದೃಷ್ಟ-ದುರದೃಷ್ಟ ಇಲ್ಲ, ನೀನು ಆಯ್ದುಕೊಂಡಿರುವ ಮಾರ್ಗ ಅನುಚಿತವಾದದ್ದು, ಆ ಮಾರ್ಗವನ್ನು ನೀನಲ್ಲದೆ ಎಂತಹ ಅದೃಷ್ಟವಂತನು ಆಯ್ಕೆ ಮಾಡಿಕೊಂಡಿದ್ರೂ ಪರಿಣಾಮ ಕೆಟ್ಟದಾಗಿಯೇ ಇರುತ್ತೆ, ಅದಕ್ಕೆ ಅವನೇ ಜವಾಬ್ದಾರನಾಗಿರ್ತಾನೆ''. ಅದಕ್ಕೆ ಸಾತ್ವಿಕ್, ಇಲ್ಲ ಸರ್, ನನಗೆ ಅದೃಷ್ಟವಿದ್ದರೆ ಏನೂ ಆಗುವುದಿಲ್ಲ, ಯಾವ ತಪ್ಪು ಮಾಡಿದ್ರೂ ಅದು ಮುಚ್ಚಿ ಹೋಗುತ್ತೆ, ಅದೃಷ್ಟ ಇಲ್ಲ ಅಂದ್ರೆ ನಾನು ಮಾಡದಿದ್ರೂ ನನಗೆ ಕೆಟ್ಟದ್ದು ಆಗುತ್ತಾನೆ ಇರುತ್ತೆ, ಎಷ್ಟೋ ಜನ ಕೊಲೆ ಮಾಡಿದವುರ ಸಮಾಜದಲ್ಲಿ ರಾಜಾರೋಷವಾಗಿ ತಿರುಗಾಡ್ತಾ ಇದಾರಲ್ಲ ಸರ್, ಅದು ಅವರಿಗಿರುವ ಅದೃಷ್ಟದಿಂದ, ಅದೃಷ್ಟ ಇದ್ದವ್ರಿಗೆ ಒಳ್ಳೆ ಅಂಕ ಬರುತ್ತೆ, ಪ್ಲೇಸ್ಮೆಂಟ್‌ನಲ್ಲಿ ಒಳ್ಳೆ ಕೆಲಸ ಸಿಗುತ್ತೆ, ಆದ್ರೆ ನಮ್ಮಂಥವರಿಗೆ ಒಳ್ಳೇ ಅಂಕನೂ ಬರಲ್ಲ, ಕೆಲ್ಸನೂ ಸಿಗಲ್ಲ ಎಂದ. ಸಾತ್ವಿಕ್‌ನ ಆಲೋಚನೆಯಲ್ಲಿಯೇ ಸಮಸ್ಯೆ ಇದೆ ಅಂತ ಅನ್ನಿಸ್ತು, ಜೊತೆಗೆ ಮುಂಗೋಪ ಬೇರೆ. ಅವನಿಗೆ ಹಿಡಿದಿರುವ ಅದೃಷ್ಟದ ಭೂತವನ್ನು ಮೊದಲು ಬಿಡಿಸಿ ಆಮೇಲೆ ಕೋಪ, ಹೊಡಿ-ಬಡಿ ಮನಸ್ಥಿತಿಯನ್ನು ಬದಲಾಯಿಸಬಹುದು ಅಂತ ಅಂದುಕೊಂಡೆ. ನೀನು ಹೇಳುವ ಅದೃಷ್ಟವಂತರು ನಿನಗೆ ಯಾರಾದರೂ ಪರಿಚಯ ಇದೆಯಾ ಅಂತ ಕೇಳಿದೆ. ಅದಕ್ಕೆ ಅವನು, ಸರ್ ನಮ್ಮ ಕ್ಲಾಸ್‌ನಲ್ಲಿ ಲಕ್ಷ್ಮೀಕುಮಾರಿ ಎಂಬ ಹುಡುಗಿಯಿದ್ದಾಳೆ. ಅವಳು ತುಂಬಾ ಅದೃಷ್ಟವಂತೆ. ಅವಳಿಗೆ ರೂಪವಿದೆ, ಅಪ್ಪ ಕ್ಲಾಸ್ ೧ ಕಂಟ್ರಾಕ್ಟರ್, ಮನೆ ತುಂಬಾ ದುಡ್ಡು ಓಡಾಡುತ್ತೆ, ಜೊತೆಗೆ ಕ್ಲಾಸ್‌ನಲ್ಲಿ ಅವಳೇ ಮೊದಲು. ಎಲ್ಲರೂ ಅವಳನ್ನು ಅದೃಷ್ಟವಂತೆ ಎಂದು ಕರೆಯುತ್ತಾರೆ. ಅವಳಿಗೂ ತಾನು ಲಕ್ಕಿ ಎನ್ನುವ ಜಂಭ ಬೇರೆ ಎಂದ. ಆಯಿತು ನಾಳೆ ಅವಳನ್ನು ಕರೆದುಕೊಂಡು ಬರ್ತಿಯಾ? ಸರ್ ನಾನು ಕರೆದರೆ ಬರಲ್ಲ, ನೀವೇ ಹೇಳಿ ಕಳಿಸಿ ಅಂದ.ಹಾಗಲ್ಲಪ, ಅವಳಿಗೆ ನೀನೇ ಹೇಳು, ನಾನು ಬರಲಿಕ್ಕೆ ಹೇಳಿದ್ದೇನೆ ಎಂದು. ಸುಮ್ಮನೆ ಮಾತಾಡಬೇಕಂತೆ ಎಂದು ಹೇಳು''.
ಮರುದಿನ ತರಗತಿ ಮುಗಿದ ಮೇಲೆ ಲಕ್ಷ್ಮೀಕುಮಾರಿಯನ್ನು ಕರೆದುಕೊಂಡು ಬಂದಿದ್ದ.
ಲಕ್ಷ್ಮೀಕುಮಾರಿಗೆ ಆಪ್ತ-ಸಮಾಲೋಚನೆಯ ಉದ್ದೇಶಗಳನ್ನು ಹೇಳಿ, ಅವಳ ಒಪ್ಪಿಗೆ ಪಡೆದು, ಕೈಯಲ್ಲಿದ್ದ ದಾಳವನ್ನು ಅವರಿಬ್ಬರಿಗೆ ತೋರಿಸಿ ಈ ದಾಳದಲ್ಲಿ ಆರು ಬರುವ ಸಾಧ್ಯತೆಗಳು ಎಷ್ಟು ಮತ್ತು ಇದನ್ನು ಕಂಡುಹಿಡಿಯುವ ಕ್ರಮದ ಬಗ್ಗೆ ಗೊತ್ತಾ ಅಂತ ಕೇಳಿದೆ. ಅದಕ್ಕೆ ಅವರಿಬ್ಬರೂ, ಗೊತ್ತು ಸರ್, ಇದು ಸಂಭವನೀಯತೆಯಲ್ಲಿ ಬರುತ್ತೆ''. ಇದರಲ್ಲಿ ಆರು ಸಲ ದಾಳವನ್ನು ಹಾಕಿದಾಗ ಕೊನೆಪಕ್ಷ ಒಂದು ಸಲವಾದರೂ ೬ ಬರುವ ಸಾಧ್ಯತೆಗಳು ಸುಮಾರು ೬೬.೫ ಆಗಿರುತ್ತೆ ಎಂದಳು. ಅವಳ ಚುರುಕುತನವನ್ನು ಶ್ಲಾಘಿಸುತ್ತಾ, ಎರಡು ಸಲ ಆರು ಬರುವ ಸಾಧ್ಯತೆಗಳನ್ನು ಕೇಳಿದೆ. ಅದಕ್ಕೆ ಅವಳು ಅದು ೬೬.೫ ಕ್ಕಿಂತ ಕಡಿಮೆ ಆಗಿರುತ್ತೆ ಎಂದಳು. ಸರಿ, ಈಗ ನೀನು ವಿಚಾರ ಮಾಡು, ನಿನಗೆ ಅದೃಷ್ಟವಿದೆ, ನೀನು ಆರನ್ನು ೪ ಸಲ ಬರಬೇಕು ಅಂದುಕೊಳ್ಳುತ್ತೀಯ, ಆಗ ಏನಾಗುತ್ತೆ? ಅದಕ್ಕೆ ಲಕ್ಷ್ಮೀಕುಮಾರಿ ಅದು ಇನ್ನೂ ಕಡಿಮೆಯಾಗಿರುತ್ತೆ.ಹೌದು, ಆರು ನಾಲ್ಕು ಸಲ ಬೀಳುವ ಸಂಭವನೀಯತೆ ಇನ್ನೂ ಕಡಿಮೆ, ಇದರಲ್ಲಿ ಯಾವ ವಿಶೇಷವೂ, ಪವಾಡವೂ ಇಲ್ಲ, ಸರಿಯಾ?'' ಸರಿ ಎಂದರು, ಇಬ್ಬರು.
ಈಗ ನಾನು ಹೇಳುತ್ತೇನೆ, ಈ ದಾಳವನ್ನು ನೂರು ಸಲ ಎಸೆಯಬೇಕು, ನೀನು ಅದೃಷ್ಟವಂತೆಯಾದ್ದರಿಂದ ಅದರಲ್ಲಿ ೯೯ ಸಲ ೬ ಬೀಳಬೇಕು'' ಎಂದೆ. ಅದು ಇನ್ನೂ ತುಂಬಾ ಅಪರೂಪ ಎಂದಳು. ಹೌದು, ಅದು ತುಂಬಾ ಅಪರೂಪ. ಆದರೆ ನಿನ್ನ ಅದೃಷ್ಟದಿಂದ ೬ನ್ನು ೯೯ ಸಲ ಬೀಳಿಸಿದರೆ ಅದನ್ನು ಅದೃಷ್ಟ ಎಂದು ಹೇಳುತ್ತೇನೆ. ಹಾಗೆ ಮಾಡಲಾಗುವುದಿಲ್ಲವಾದರೆ ಅದರಲ್ಲಿ ಅದೃಷ್ಟ ಏನೂ ಇಲ್ಲ, ಕೇವಲ ಸಂಭವನೀಯತೆಯ ಸಾಧ್ಯತೆ ಮಾತ್ರ ಎಂದೆ.ಹಾಗಾದರೆ ಅದೃಷ್ಟದಲ್ಲಿ ಆಗುವುದೆಲ್ಲ ಕೇವಲ ಸಂಭವನೀಯತೆಯ ಮಿತಿಯಲ್ಲಿಯೇ ಆಗುವುದಾ? ಸಾತ್ವಿಕ್‌ನ ಪ್ರಶ್ನೆ.
``ಹೌದು, ಎಲ್ಲವೂ ಆ ನಿಟ್ಟಿನಲ್ಲಿಯೇ ಇರುತ್ತವೆ ಅಥವಾ ತಾರ್ಕಿಕವಾಗಿಯೇ ಆಗುತ್ತವೆ. ಕೆಲವೊಮ್ಮೆ ಆ ತರ್ಕ ಅಥವಾ ಸಾಧ್ಯತೆಗಳು ನಮಗೆ ಅರ್ಥವಾಗುವುದಿಲ್ಲ, ಹಾಗಂತ ಅದಕ್ಕೆ ಅದೃಷ್ಟ ಕಾರಣವಲ್ಲ. ಹಾಗೆಂದಾಕ್ಷಣ ನೀವು ಎಲ್ಲವನ್ನೂ ಯಾಂತ್ರಿಕವಾಗಿ ಪರಿಭಾವಿಸಬೇಕಾಗಿಲ್ಲ. ಭರವಸೆ, ಸಕಾರಾತ್ಮಕ ನಂಬಿಕೆಗಳು ನಮ್ಮನ್ನು ಉನ್ನತವಾದ ಮಾನವ ಪ್ರಯತ್ನಗಳತ್ತ ಸೆಳೆಯುತ್ತವೆ, ಆ ಮಾನವ ಪ್ರಯತ್ನಗಳು ನಮಗೆ ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತವೆ ಅಷ್ಟೇ'' ಎಂದೆ. ಇಬ್ಬರೂ ಅರ್ಥವಾಯಿತೆಂದು ತಲೆಯಲ್ಲಾಡಿಸಿದರು.