ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅದ್ಭುತ ಸಾಧಿಸಬಲ್ಲ ಆಹ್ಲಾದಕರ ಮನಃಸ್ಥಿತಿ

03:30 AM Oct 01, 2024 IST | Samyukta Karnataka

ಮನುಷ್ಯ ದೈಹಿಕಬಲದ ಯುಗದಿಂದ ಬೌದ್ಧಿಕಪ್ರಾಬಲ್ಯದ ಯುಗವನ್ನು ಹಾದುಬಂದಿದ್ದಾನೆ ಮತ್ತು ಈಗ ಬಹುತೇಕ ಅಜ್ಞಾತ ಹಾಗೂ ಹೊಸದಾದ ಅತೀಂದ್ರಿಯಶಕ್ತಿ'ಯ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಾನೆ. ಈ ಕ್ಞೇತ್ರವು ತನ್ನದೇ ಆದ ಸ್ಥಾಪಿತ ನಿಯಮಗಳನ್ನು ಹೊಂದಿದೆ ಮತ್ತು ನಮ್ಮ ಉತ್ತರೋತ್ತರ ಕಲ್ಯಾಣಕ್ಕಾಗಿ ನಾವು ನಮ್ಮನ್ನು ಅದರೊಂದಿಗೆ ಪರಿಚಯಿಸಿಕೊಳ್ಳಬೇಕಿದೆ ಮತ್ತು ಹೊಂದಿಸಿಕೊಳ್ಳಬೇಕಿದೆ. ಆಧುನಿಕ ಮಾನವ ಇಂದು ಅನುಭವಿಸುತ್ತಿರುವ ಬಹುಪಾಲು ಆರೋಗ್ಯ ಸಮಸ್ಯೆಗಳು ಮತ್ತು ಕಾಯಿಲೆಗಳಿಗೆ ಪ್ರಧಾನ ಅಂಗಗಳ ಪೋಷಣೆಯ ಕೊರತೆಯೇ ಆಗಿರುತ್ತದೆ. ಮುಖ್ಯವಾಗಿ ಜೀರ್ಣಾಂಗ ವ್ಯವಸ್ಥೆಯಲ್ಲಿ ಒಳಗೊಂಡಿರುವ ಅಂಗಗಳು ಮನಸ್ಸಿನ ಋಣಾತ್ಮಕ ಭಾವನೆಗಳ ಪ್ರಭಾವಗಳಿಗೆ ಬಹಳ ಬೇಗನೇ ಬಲಿಯಾಗುತ್ತವೆ. ಅಸಹ್ಯಕರ ಸನ್ನಿವೇಶವನ್ನು ನೋಡುವುದಾಗಲೀ ಅಥವಾ ಹಿಂದೆ ನೋಡಿದ್ದರ ಸ್ಮರಣೆ ಮಾಡುವುದಾಗಲೀ ಅಥವಾ ದುಃಖದ ಸುದ್ದಿ, ಚಿಂತೆ, ಭಯ, ಅಸೂಯೆ, ದ್ವೇಷದ ಭಾವನೆಗಳು ಹಸಿವಿನ ಮೇಲೆ ಪರಿಣಾಮ ಬೀರಿರುವುದನ್ನು ಬಹುತೇಕ ಮಂದಿ ಅನುಭವಿಸಿರಬಹುದು. ಆಹಾರದ ಜೀರ್ಣಕ್ರಿಯೆಯಲ್ಲಿ ಇಂತಹ ಮನಃಸ್ಥಿತಿ ಅಥವಾ ಭಾವನೆಗಳ ಮಧ್ಯಪ್ರವೇಶ ವ್ಯಕ್ತಿಯಲ್ಲಿ ಪೋಷಕಾಂಶಗಳ ತೀವ್ರ ಕೊರತೆಯನ್ನು ಉಂಟುಮಾಡುತ್ತದೆ ಜೊತೆಗೆ ಪ್ರಕೃತಿಯು ಆತನಿಗೆ ನೀಡಿದ್ದ ಸಹಜ ಚೇತರಿಸಿಕೊಳ್ಳುವಿಕೆಯ ಸಾಮರ್ಥ್ಯ ಮತ್ತು ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ದೀರ್ಘಕಾಲ ಭಯಭೀತ ಮಾನಸಿಕ ಸ್ಥಿತಿಯಿಂದಿರುವವರ ಜೀರ್ಣಕ್ರಿಯೆ ಮತ್ತು ಸಮರ್ಪಕ ರಕ್ತಪರಿಚಲನೆಯ ಮೇಲೆ ಪ್ರಭಾವವುಂಟಾಗಿ ವರ್ಷಗಳ ಕಾಲ ಆರೋಗ್ಯ ಕೈಕೊಟ್ಟಿರುವುದು ಕಂಡುಬರುತ್ತದೆ. ರಕ್ತದ ಸಾಮಾನ್ಯ ಪ್ರಮಾಣ ಮತ್ತು ಗುಣಮಟ್ಟವಿಲ್ಲದೆ ದೇಹದ ಯಾವುದೇ ಅಂಗವು ಸಾಕಷ್ಟು ಪೋಷಣೆಯನ್ನು ಪಡೆಯುವುದಿಲ್ಲ ಮತ್ತು ಪರಿಣಾಮವಾಗಿ ಯಾವುದೇ ಅಂಗವು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇಡೀ ವ್ಯವಸ್ಥೆ ನರಳುತ್ತದೆ. ಸೇವಿಸುವ ಆಹಾರದ ಪ್ರಮಾಣ ಮುಖ್ಯವಲ್ಲ; ಸೇವಿತ ಆಹಾರದ ಪೈಕಿ ಎಷ್ಟರಮಟ್ಟಿಗೆ ಜೀರ್ಣಗೊಳ್ಳುತ್ತದೆ ಮತ್ತು ಹೀರಿಕೊಳ್ಳಲ್ಪಡುತ್ತದೆ ಎಂಬುದು ಮುಖ್ಯವಾಗುತ್ತದೆ. ಈ ವಿಷಯವನ್ನು ಪರಿಗಣಿಸಿದರೆ ಅಂಗಗಳ ಕಾರ್ಯಚಟುವಟಿಕೆಗಳ ಮೇಲೆ ವ್ಯಕ್ತಿಯ ಮಾನಸಿಕಸ್ಥಿತಿಗಳು ಹೇಗೆ ಪ್ರಭುತ್ವ ಸಾಧಿಸುತ್ತವೆ ಎಂಬುದು ತಿಳಿದುಬರುತ್ತದೆ. ಸದಾ ಚಿಂತಿತನಾಗಿರುವವನಿಗೆ ಉತ್ತಮ ಆರೋಗ್ಯದ ಕನಸು ಪ್ರಾಯೋಗಿಕವಾಗಿ ಗಗನಕುಸುಮವೇ. ಭಯಮಿಶ್ರಿತ ಯೋಚನೆಗಳು ಪ್ರಥಮವಾಗಿ ಗದಾಪ್ರಹಾರ ನಡೆಸುವುದೇ ಹೊಟ್ಟೆಯ ಮೇಲೆ ಮತ್ತು ಅದರ ಮೂಲಕ ದೇಹದ ಪ್ರತಿಯೊಂದು ಭಾಗವನ್ನೂ ತಲುಪುತ್ತದೆ. ಆ ಮೂಲಕ ರಕ್ತದ ಗುಣಮಟ್ಟ ಮತ್ತು ಪ್ರಮಾಣವನ್ನೂ ದುರ್ಬಲಗೊಳಿಸುತ್ತದೆ. ಹೀಗೆ ಪ್ರತಿಯೊಂದು ಅಂಗ, ಕೋಶ, ಭಾಗದ ಪೋಷಣೆಯನ್ನು ಪ್ರಭಾವಿಸಿ ಕಾರ್ಯಕ್ಷಮತೆಯನ್ನು ಸ್ಥಗಿತಗೊಳಿಸುತ್ತದೆ. ಈ ರೀತಿಯ ಸ್ಥಗಿತಗೊಳ್ಳುವಿಕೆಯೇ ಕಾಯಿಲೆ. ಈ ತೊಂದರೆಯನ್ನು ನಿವಾರಿಸಲು ಇರುವ ಏಕೈಕ ಮಾರ್ಗವೆಂದರೆ; ಮನಸ್ಸನ್ನು ಸದಾ ಆಹ್ಲಾದಕರವಾಗಿ ಇರಿಸಿಕೊಳ್ಳುವುದು. ಆಹ್ಲಾದಕರ ಮನಃಸ್ಥಿತಿಯು ವಿಫಲಗೊಂಡ ಅಂಗಗಳ ಕಾರ್ಯಕ್ಷಮತೆಯನ್ನು ತ್ವರಿತವಾಗಿ ಮರುಸ್ಥಾಪಿಸುವ ಹಾಗೂ ರೋಗಿಯ ಚೇತರಿಕೆಯ ವೇಗವನ್ನು ವೃದ್ಧಿಸುವ ಸಾಮರ್ಥ್ಯ ಹೊಂದಿದೆ. ಸುಪ್ತಪ್ರಜ್ಞೆಯು ಭೌತಿಕ ದೇಹದ ಎಲ್ಲಾ ಕಾರ್ಯಗಳು ಮತ್ತು ಚಟುವಟಿಕೆಗಳ ಮೇಲೆ ನಿಯಂತ್ರಣ ಹೊಂದಿದೆ. ಗಡಿಯಾರದ ಮುಳ್ಳುಗಳಂತೆ ನಮ್ಮ ದೇಹದ ಭೌತಿಕ ಅಂಗಗಳು ತಮ್ಮಷ್ಟಕ್ಕೆ ತಾವೇ ಕಾರ್ಯನಿರತವಾಗಿರುತ್ತವೆ ಮತ್ತು ಚಲಿಸುತ್ತಿರುತ್ತವೆ ಎಂಬುದು ಬಹುತೇಕ ಮಂದಿಯ ತಪ್ಪು ತಿಳಿವಳಿಕೆ. ಆದರೆ ಜೀವಕೋಶಗಳ ಚಲನೆಗೆ ಮತ್ತು ಚಟುವಟಿಕೆಗಳಿಗೆ; ದೇಹದ ಪೋಷಣೆ ಮತ್ತು ನಿರ್ವಹಣೆ ಒಳಗೊಂಡಂತೆ ದೇಹದ ಎಲ್ಲಾ ಕಾರ್ಯಭಾರಗಳಲ್ಲಿ ಸುಪ್ತಪ್ರಜ್ಞೆಯ ಪಾಲ್ಗೊಳ್ಳುವಿಕೆ ಅನಿವಾರ್ಯ. ನಿರ್ದಿಷ್ಟ ಮಾನಸಿಕ ಭಾವನೆಗಳು ದೇಹದ ನಿರ್ದಿಷ್ಟ ಭಾಗಗಳೊಂದಿಗೆ ಸಂಪರ್ಕ ಮತ್ತು ಸಂಬಂಧ ಹೊಂದಿವೆ. ಉದಾಹರಣೆಗೆ; ಪ್ರೀತಿಯ ಭಾವನೆಗಳು ಹೃದಯದೊಂದಿಗೆ; ವಿಷಣ್ಣತಾಭಾವ ಯಕೃತ್ತಿನೊಂದಿಗೆ; ಸಹಾನುಭೂತಿ ಸೇರಿದಂತೆ ಇತರ ಅನೇಕ ಭಾವನೆಗಳು ಹೊಕ್ಕಳು ಅಥವಾ ನಾಭಿಕೇಂದ್ರದೊಂದಿಗೆ ಸಂಪರ್ಕ ಹೊಂದಿವೆ. ಚರ್ಮ ಮತ್ತು ಕೂದಲಿನ ಬೆಳವಣಿಗೆ ನಕಾರಾತ್ಮಕ ಭಾವನೆಗಳಿಂದ ಪ್ರಭಾವಿತವಾಗುತ್ತವೆ. ಅಲ್ಪಾವಧಿಯ ತೀವ್ರವೇದನೆ ಮನುಷ್ಯನ ಕಣ್ಣುಗಳ ಕಾಂತಿಯನ್ನು ಮಸುಕಾಗಿಸಿ, ಮುಖವನ್ನು ಒಣಗಿಸಿ, ಹುಬ್ಬುಗಳನ್ನು ಸುಕ್ಕಾಗಿಸಿ, ಕೂದಲನ್ನು ಬಿಳುಪಾಗಿಸಿ ಬಾಹ್ಯನೋಟದಲ್ಲಿ ಅದಾಗಲೇ ಹೆಚ್ಚು ವಯಸ್ಸಾದವನಂತೆ ಬಿಂಬಿಸುತ್ತದೆ. ಭಯಮಿಶ್ರಿತ ಭಾವನೆಗಳು ಬೆವರನ್ನು ಹೆಚ್ಚು ಸ್ರವಿಸುವಂತೆ ಮಾಡಿ ಚರ್ಮರೋಗಗಳಿಗೆ ಕಾರಣವಾಗುತ್ತದೆ. ಸಂಭವಿಸಲಿರುವ ಘಟನೆಯ ಮೇಲಿನ ಒಂದು ನಂಬಿಕೆಯ ನಿರೀಕ್ಷೆಯು ದೇಹದ ಕಾರ್ಯಚಟುವಟಿಕೆಗಳ ಮೇಲೆ ಗಮನಾರ್ಹ ಮತ್ತು ಸಕಾರಾತ್ಮಕ ಬದಲಾವಣೆ ತರಲು ಸಮರ್ಥವಾಗಿರುತ್ತದೆ. ಆಹ್ಲಾದಕರ ಭಾವನೆಯು ಹೃದಯದ ಕ್ರಿಯೆಗೆ ದೃಢತೆ ಮತ್ತು ಕ್ರಮಬದ್ಧತೆಯನ್ನು ನೀಡಿ ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ. ಜೀರ್ಣಕಾರಿ ಅನಿಲ ಮತ್ತು ಉಷ್ಣತೆಯ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಹೊಟ್ಟೆಯ ಸ್ನಾಯುಗಳ ಸಂಕೋಚನೆಗೆ ದೃಢತೆ ಮತ್ತು ಕ್ರಮಬದ್ಧತೆಯನ್ನು ಒದಗಿಸುತ್ತದೆ. ಇಚ್ಛೆಯು ಕೆಮ್ಮನ್ನುಂಟುಮಾಡಬಹುದು; ಆದರೆ ಶೀನುವಿಕೆಯನ್ನಲ್ಲ. ತೀವ್ರವಾದ ದುಃಖ ಅಥವಾ ಭಯದ ಭಾವನೆ ಉಸಿರುಗಟ್ಟಿಸಬಹುದು ಮತ್ತು ಗಂಟಲನ್ನು ಬಿಗಿಗೊಳಿಸಬಹುದು. ಅದೇ ಸಂತೋಷದ ಭಾವನೆ ಉಸಿರಾಟವನ್ನು ಸರಾಗವಾಗಿಸುತ್ತದೆ. ತೀವ್ರ ದುಃಖ ಅಥವಾ ಸಿಟ್ಟು ಜ್ವರದಲ್ಲಿ ಪರ್ಯವಸಾನವಾಗುತ್ತದೆ. ಹಠಾತ್ ಮಾನಸಿಕ ಆಘಾತ ಮಧುಮೇಹಕ್ಕೆ ಮೂಲ. ದೀರ್ಘಕಾಲೀನ ಆತಂಕ ಕ್ಯಾನ್ಸರನ್ನು ಆಮಂತ್ರಿಸುತ್ತದೆ. ಯಕೃತ್ತಿನ ಪ್ರಾಥಮಿಕ ಹಂತದ ಕ್ಯಾನ್ಸರ್ ಹೊಂದಿರುವವರು ತಮ್ಮ ಅನಾರೋಗ್ಯದ ಕಾರಣವನ್ನು ದೀರ್ಘಕಾಲದ ದುಃಖ ಅಥವಾ ಆತಂಕದ ಅನುಭವದಲ್ಲಿ ಗುರುತಿಸಬಹುದು. ಸಿಡುಕಿನ, ಖಿನ್ನತೆಯ ಅಥವಾ ದುರುದ್ದೇಶಪೂರಿತ ಭಾವನೆಗಳು ಜೈವಿಕವ್ಯವಸ್ಥೆಯಲ್ಲಿ ಹಾನಿಕಾರಕ ರಾಸಾಯನಿಕ ಸಂಯುಕ್ತಗಳನ್ನು ಸೃಷ್ಟಿಸುತ್ತವೆ ಮತ್ತು ಅವುಗಳಲ್ಲಿ ಕೆಲವಂತೂ ಅತ್ಯಂತ ವಿಷಯುಕ್ತವಾಗಿರುತ್ತವೆ! ಸಂತೋಷದ ಭಾವನೆಗಳು ಪೌಷ್ಠಿಕಾಂಶದ ಮೌಲ್ಯವುಳ್ಳ ರಾಸಾಯನಿಕ ಸಂಯುಕ್ತಗಳನ್ನು ಉತ್ಪಾದಿಸುತ್ತವೆ ಮತ್ತು ಶಕ್ತಿಯನ್ನು ಉತ್ಪಾದಿಸಲು ಜೀವಕೋಶಗಳನ್ನು ಉತ್ತೇಜಿಸುತ್ತವೆ. ಈ ಉದಾಹರಣೆಗಳು ಭೌತಿಕ ದೇಹ ಮತ್ತು ಅಂಗಗಳ ಮೇಲಿನ ಸುಪ್ತಪ್ರಜ್ಞೆಯ ಅಸ್ತಿತ್ವ ಹಾಗೂ ಶಕ್ತಿಯ ಪುರಾವೆಗಳಾಗಿವೆ. ಆಲೋಚನೆ ಕೂಡಾ ಒಂದು ಶಕ್ತಿ. ಹೇಗೆ ನಾವು ಬೆಳಕು, ಶಾಖ, ಗುರುತ್ವಾಕರ್ಷಣೆ ಮುಂತಾದ ನೈಜಶಕ್ತಿಗಳನ್ನು ಅರಿತಿದ್ದೇವೆಯೋ ಹಾಗೆಯೇ ಆಲೋಚನೆಯೆಂಬ ಶಕ್ತಿಯೂ ಒಂದು ನೈಜಶಕ್ತಿಯಾಗಿದೆ. ಅತ್ಯುತ್ತಮವಾದ ಆಲೋಚನೆಗಳು ಅಲೌಕಿಕವಾದ ಕಂಪನಗಳನ್ನು ಪ್ರಸರಿಸುವಂತೆಯೇ ಕೆಟ್ಟ ಆಲೋಚನೆಗಳು ಹಾನಿಕಾರಕ ಕಂಪನಗಳನ್ನು ಬಿಡುಗಡೆಗೊಳಿಸುತ್ತವೆ. ದುರುದ್ದೇಶಪೂರಿತ ಯೋಚನಾ ತರಂಗಗಳು ತನ್ನನ್ನು ಮಾತ್ರವೇ ಅಲ್ಲದೆ ತನ್ನ ಸುತ್ತಲಿನ ಪರಿಸರವನ್ನೂ ಕೆಡಿಸುವುದನ್ನು ನಾವಿಂದು ಹೆಚ್ಚು ಹೆಚ್ಚು ಸಂದರ್ಭಗಳಲ್ಲಿ ಕಾಣುತ್ತಿದ್ದೇವೆ. ನಮ್ಮ ಯೋಚನಾ ತರಂಗಗಳು ಅದರ ಸ್ವರೂಪ ಮತ್ತು ಗುಣಮಟ್ಟಕ್ಕೆ ತಕ್ಕಂತೆಯೇ ಇತರರ ಆಲೋಚನೆಗಳು, ವಸ್ತುಗಳು, ಸಂದರ್ಭಗಳು, ಅವಕಾಶಗಳು, ಅದೃಷ್ಟ ಅಥವಾ ದುರದೃಷ್ಟಗಳು, ಅಪಘಾತಗಳು, ಸಾಮೂಹಿಕ ದುರಂತಗಳು-ಹೀಗೆ ಪ್ರತಿಯೊಂದು ಮಟ್ಟದಲ್ಲಿಯೂ ಸಮಾನವಾದ ಸನ್ನಿವೇಶವನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಸಮಾನಚಿಂತನೆಯ ಗುಂಪುಗಳು ಸೃಷ್ಟಿಯಾಗುವುದರ ಹಿಂದಿನ ರಹಸ್ಯ ಇದೇ ನಿಯಮವಾಗಿದೆ.ಬಿತ್ತಿದಂತೆ ಬೆಳೆಯುವುದು' ಎಂದರೆ ಇದೇನೇ! ವೇದಕಾಲಗಳು ಪ್ರಸನ್ನವಾಗಿ, ಪಂಚಭೂತಗಳು ಆಗಬಹುದೆಂದು ಒಪ್ಪಿ ದೇವ-ಋಷಿ-ಪಿತೃಗಳು ಜಗತ್ತನ್ನು ಅನುಗ್ರಹಿಸಬೇಕೆಂದಾಗ ಮಹಾತ್ಮನೊಬ್ಬನ ಉದಯವಾಗುವ ಪ್ರಕ್ರಿಯೆ ಇದೇ ನಿಯಮವನ್ನು ಆಧರಿಸಿದೆ.

Next Article