For the best experience, open
https://m.samyuktakarnataka.in
on your mobile browser.

ಅಧಿಕಾರದಲ್ಲಿ ಇರುವುದೋ ಬಿಡುವುದೋ ನೀವೇ ಹೇಳಿ

02:00 AM Apr 12, 2024 IST | Samyukta Karnataka
ಅಧಿಕಾರದಲ್ಲಿ ಇರುವುದೋ ಬಿಡುವುದೋ ನೀವೇ ಹೇಳಿ

ಕಾನೂನಿನ ದೃಷ್ಟಿಯಲ್ಲಿ ಮಂತ್ರಿಗಳು ಒಂದೇ ಜನಸಾಮಾನ್ಯರೂ ಒಂದೇ; ಸ್ಥಾನಬಲದಿಂದಾಗಿ ಯಾರಿಗೂ ಕಾನೂನಿನ ಅನ್ವಯದಲ್ಲಿ ರಿಯಾಯ್ತಿ-ವಿನಾಯ್ತಿ ಎಂಬುದು ಸುತರಾಂ ಇಲ್ಲ. ಜನತಂತ್ರ ಪದ್ಧತಿಯಲ್ಲಿ ಅನುಸರಿಸಿಕೊಂಡು ಬರುತ್ತಿರುವ ನೀತಿ ನಿಯಮಗಳಿಗೆ ಸಂವಿಧಾನದ ರಕ್ಷಣೆಯೂ ಇದೆ. ಹಲವಾರು ಸಂದರ್ಭಗಳಲ್ಲಿ ಕಾನೂನಿನ ದೃಷ್ಟಿಯಲ್ಲಿ ದೋಷ ಎನಿಸದಿದ್ದರೂ ನೈತಿಕವಾಗಿ ಅಧಿಕಾರಸ್ಥರು ಸ್ವಯಂಪ್ರೇರಣೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ನಿದರ್ಶನಗಳು ಅನೇಕ. ಇಂತಹ ಸಂಪ್ರದಾಯ ಕೊರಳು ಕೊಯ್ಯುವ ಪೈಪೋಟಿಯ ರಾಜಕಾರಣದಲ್ಲಿ ಮರೆತೇ ಹೋಗಿದೆ ಎಂದರೂ ಅಚ್ಚರಿಯಲ್ಲ. ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅಭ್ಯಂತರವಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಸ್ಪಷ್ಟಪಡಿಸಿರಬಹುದು. ಅಬಕಾರಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಕೇಜ್ರಿವಾಲ್ ಅವರಿಗೆ ನ್ಯಾಯಾಲಯದ ಮೂಲಕ ಒಂದು ರೀತಿಯಲ್ಲಿ ಅಧಿಕಾರದ ಮುಂದುವರಿಕೆಗೆ ರಕ್ಷಣೆ ಇರಬಹುದು. ಆದರೆ, ನೈತಿಕ ದೃಷ್ಟಿಯಿಂದ ಯಾವ ರೀತಿಯ ರಕ್ಷಣೆ ಇದೆ ಎಂಬುದು ಮಾತ್ರ ಅರ್ಥವಾಗದ ಒಂದು ಒಗಟು.
ಕೇಜ್ರಿವಾಲ್ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಎಂಬ ಮಾತುಗಳನ್ನು ನಿರಾಕರಿಸಲು ಆಗುವುದಿಲ್ಲ. ಆದರೆ, ಈ ಪ್ರಕರಣ ಉನ್ನತ ನ್ಯಾಯಾಲಯದ ಪರಾಮರ್ಶೆಯಲ್ಲಿರುವಾಗ ಆರೋಪಗಳು ರಾಜಕೀಯ ಪ್ರೇರಿತವೋ ಅಥವಾ ಅಲ್ಲವೋ ಎಂಬುದು ನ್ಯಾಯಾಲಯದ ಮೂಲಕವೇ ಸ್ಪಷ್ಟವಾಗಬೇಕು. ಬಹುವಾಗಿ ನಂಬಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತಂದ ದೆಹಲಿಯ ಮತದಾರರ ಮನಸ್ಥಿತಿ ಹಾಗೂ ಪರಿಸ್ಥಿತಿಯನ್ನು ಗಮನಿಸಿ ಈ ಸಂಬಂಧದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಅಪೇಕ್ಷಿತ ಕ್ರಮ. ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿರುವ ಕೇಜ್ರಿವಾಲ್ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಇದಕ್ಕೆ ಪೂರಕವಾಗಿ ಇಡಿ ಸಂಸ್ಥೆ ಕೇಜ್ರಿವಾಲ್ ಅಬಕಾರಿ ಭ್ರಷ್ಟಾಚಾರದ ಕೇಂದ್ರಬಿಂದು ಎಂಬರ್ಥದಲ್ಲಿ ನ್ಯಾಯಾಲಯದಲ್ಲಿ ಆರೋಪಗಳನ್ನು ಮತ್ತೆ ಮಾಡಿದೆ. ಈ ಹಂತದಲ್ಲಿ ಯಾರ ನಿಲುವನ್ನು ಮತದಾರರು ಸ್ವೀಕರಿಸಬೇಕು ಎಂಬುದು ದೊಡ್ಡ ಜಿಜ್ಞಾಸೆ. ಕೇಜ್ರಿವಾಲ್ ಭ್ರಷ್ಟಾಚಾರದ ವಿರುದ್ಧ ಸಮರವನ್ನೇ ಸಾರಿ ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದ ಸಾಹಸಿ. ಸಹಜವಾಗಿಯೇ ಇವರ ವ್ಯಕ್ತಿತ್ವದ ಬಗ್ಗೆ ಜನರಿಗೆ ವಿಶ್ವಾಸಾರ್ಹತೆ ಇರುವುದು ಸಹಜ. ಸಂವಿಧಾನಬದ್ಧ ನ್ಯಾಯಾಲಯ ಹಾಗೂ ಕಾನೂನು ಬದ್ಧ ಇಡಿ ಸಂಸ್ಥೆಗಳ ಅಭಿಪ್ರಾಯವೂ ಕೂಡಾ ಅಷ್ಟೇ ಗಮನಾರ್ಹ. ಹೀಗಿರುವಾಗ ಅಧಿಕಾರದಲ್ಲಿ ಮುಂದುವರಿಯಬೇಕೋ ಅಥವಾ ಬಿಡಬೇಕೋ ಎಂಬುದನ್ನು ಸಾರ್ವಜನಿಕರ ವಿವೇಚನೆಗೆ ಬಿಡುವ ಬದಲು ಸ್ವತಃ ಕೇಜ್ರಿವಾಲ್ ಅವರೇ ಈ ನಿರ್ಧಾರವನ್ನು ಕೈಗೊಳ್ಳುವುದು ಸೂಕ್ತವೇನೋ.
ಸಾರ್ವಜನಿಕ ಬದುಕು ಈಗಂತೂ ಸಮತಟ್ಟಾಗಿಲ್ಲ. ಅಂಕು ಡೊಂಕಿನ ಮೈದಾನದಲ್ಲಿ ಹೋರಾಡುವುದು ಕಷ್ಟವೇ. ಆದರೆ, ಇದೇ ವಸ್ತುಸ್ಥಿತಿ. ಎಲ್ಲಾ ಪಕ್ಷಗಳ ಸ್ಥಿತಿಯೂ ಕೂಡಾ ಬಹುತೇಕ ಇದೇ. ಹೀಗಾಗಿ ಕಲ್ಲು ಮುಳ್ಳಿನ ದಾರಿಯಲ್ಲಿ ಸಾಗಿದ ಮೇಲೆ ಸಮತಟ್ಟಾದ ನೆಲ ಸಿಕ್ಕುವುದೆಂಬ ವಿಶ್ವಾಸದೊಂದಿಗೆ ಹೋರಾಟಕ್ಕೆ ಮುಂದಾಗುವುದು ಸೂಕ್ತವಾದ ಮಾರ್ಗವಾಗಬಹುದು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಅಗ್ರನಾಯಕರೂ ಆಗಿರುವ ಕೇಜ್ರಿವಾಲ್ ಜೈಲಿನಲ್ಲಿರುವುದು ಪ್ರಚಾರಕ್ಕೆ ಪ್ರಮುಖ ಅಡ್ಡಿಯಾಗಿದೆ ಎಂಬುದು ಅತಿಶಯೋಕ್ತಿಯ ಮಾತಲ್ಲ. ಎಲ್ಲಾ ಪಕ್ಷಗಳು ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಪ್ರಚಾರದ ಮೂಲಕ ಮತ ಗಳಿಸಲು ಹೊರಟಿರುವ ಸಂದರ್ಭದಲ್ಲಿ ಕೇಜ್ರಿವಾಲ್ ಅನುಪಸ್ಥಿತಿ ಸಹಜವಾಗಿಯೇ ದೊಡ್ಡ ಗಂಡಾಂತರ. ಇದರ ಜೊತೆಗೆ ಆಮ್ ಆದ್ಮಿ ಪಕ್ಷದಲ್ಲಿಯೂ ಗಲಿಬಿಲಿಯ ವಾತಾವರಣ ತಲೆದೋರಿರುವ ಬೆಳವಣಿಗೆ ಜರುಗಿದೆ. ಸಮಾಜ ಕಲ್ಯಾಣ ಖಾತೆ ಸಚಿವ ರಾಜಕುಮಾರ್ ಆನಂದ್ ರಾಜೀನಾಮೆ ನೀಡಿರುವುದು ಆಮ್ ಆದ್ಮಿ ಪಕ್ಷದ ಒಳಗೆ ಎಲ್ಲವೂ ಸರಿ ಇಲ್ಲ ಎನ್ನುವಂತಾಗಿದೆ. ಈಗಾಗಲೇ ಹಿರಿಯ ನಾಯಕರಾದ ಮನಿಶ್ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್ ಅಬಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದಾರೆ. `ರಾಜಕಾರಣವನ್ನು ಸುಧಾರಿಸುವ ಭರವಸೆಯೊಂದಿಗೆ ಆಮ್ ಆದ್ಮಿ ಪಕ್ಷ ಅಸ್ತಿತ್ವಕ್ಕೆ ಬಂತು. ಆದರೆ, ಸುಧಾರಿಸಿದ್ದು ಆಮ್ ಆದ್ಮಿ ಪಕ್ಷದ ನಾಯಕರು ಮಾತ್ರ. ಭ್ರಷ್ಟಾಚಾರ ವಿರೋಧಿ ನಿಲುವಿನ ಪಕ್ಷವೇ ಈಗ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಂತಹ ಸ್ಥಿತಿಯಲ್ಲಿ ನಾನು ಈ ಪಕ್ಷದಲ್ಲಿರುವುದು ಬೇಡವಾಗಿದೆ' ಎಂದು ರಾಜೀನಾಮೆ ನೀಡುವ ಸಂದರ್ಭದಲ್ಲಿ ರಾಜಕುಮಾರ್ ಆನಂದ್ ಹೇಳಿರುವುದು ಆಮ್ ಆದ್ಮಿ ಪಕ್ಷದ ಮೇಲೆ ಮುಂಬರುವ ದಿನಗಳಲ್ಲಿ ಆಳಿಗೊಂದು ಕಲ್ಲು ಎಸೆಯುವಂತಹ ವಿಪರ್ಯಾಸದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಈ ಬಿಕ್ಕಟ್ಟಿನ ನಡುವೆ ಅಧಿಕಾರದಲ್ಲಿ ಮುಂದುವರಿಯಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಕೇಜ್ರಿವಾಲ್ ಕೈಗೊಳ್ಳುವ ನಿರ್ಧಾರ ಆಮ್ ಆದ್ಮಿ ಪಕ್ಷದ ವಿಶ್ವಾಸಾರ್ಹತೆ ನಿರ್ಧರಿಸುವ ನಿರ್ಣಾಯಕ ಅಂಶವಾಗಿದೆ.