For the best experience, open
https://m.samyuktakarnataka.in
on your mobile browser.

ಅಧಿಕಾರ ಕಳೆದುಕೊಳ್ಳುವ ಭಯದಿಂದ ಜಾತಿಗಣತಿ ವರದಿ ಪ್ರಸ್ತಾಪ

01:56 PM Oct 20, 2024 IST | Samyukta Karnataka
ಅಧಿಕಾರ ಕಳೆದುಕೊಳ್ಳುವ ಭಯದಿಂದ ಜಾತಿಗಣತಿ ವರದಿ ಪ್ರಸ್ತಾಪ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಳ್ಳುವ ಭಯದಿಂದ ಜಾತಿ ಗಣತಿ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ಮೊದಲು ಅದನ್ನು ಬಹಿರಂಗ ಪಡೆಸಲಿ, ಸಾರ್ವಜನಿಕ ಚರ್ಚೆಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ಕುರಿತು ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಮ್ಮನ್ನು ಭೇಟಿ ಮಾಡಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಇದು ಜಾತಿ ಗಣತಿಯಲ್ಲ. ಸಾಮಾಜಿಕ ಆರ್ಥಿಕ ಸಮೀಕ್ಷೆ, ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರ ಇಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಜಾತಿ ಗಣತಿ ಮಾಡುವ ಅಧಿಕಾರವಿದೆ. ಬಿಹಾರ ಸರ್ಕಾರದ ಜಾತಿ ಗಣತಿಗೂ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಇವರು ಯಾವುದೋ ಸಮೀಕ್ಷೆ ಮಾಡಿ ಅದಕ್ಕೆ ಜಾತಿ ಗಣತಿಯ ಲೇಪನ ಮಾಡುತ್ತಿದ್ದಾರೆ ಎಂದು ಹೇಳಿದರು.
ಇನ್ನು ಈ ವರದಿ ವೈಜ್ಞಾನಿಕವಾಗಿಯೂ ಇಲ್ಲ, ಅಂಕಿ‌ ಅಂಶ ಸಮರ್ಪಕವಾಗಿಲ್ಲ. ಹಲವು ಸಮುದಾಯಗಳಿಂದ ಆಕ್ಷೇಪಣೆ ಬಂದಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಅವರು ಸಿದ್ದಪಡಿಸಿದ್ದ ವರದಿ ಸಮರ್ಪಕವಾಗಿಲ್ಲ ಎಂದು ಅಂದಿನ ಆಯೋಗದ ಕಾರ್ಯದರ್ಶಿ ಹಾಗೂ ಸದಸ್ಯರು ಸಹಿ ಹಾಕಿರಲಿಲ್ಲ. ನಂತರ ಬಂದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆ ಅವರು, ಯಾವುದೇ ಸಮೀಕ್ಷೆ ನಡೆಸದೇ ಹಿಂದಿನ ಆಯೋಗದ ಅಧ್ಯಕ್ಷರು ಸಿದ್ದಪಡಿಸಿದ್ದ ವರದಿಯನ್ನೇ ಪರಿಷ್ಕರಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಈ ವರದಿಯನ್ನು ಒಕ್ಕಲಿಗ ಸಮುದಾಯದವರು ವಿರೋಧಿಸಿದ್ದಾರೆ. ಸ್ವತ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಇದನ್ನು ವಿರೋಧಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆ ಕೂಡ ವಿರೋಧಿಸಿದೆ. ಎಲ್ಲ ಸಮುದಾಯಗಳ ಅನುಮಾನ ದೂರ‌ ಮಾಡುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡುತ್ತಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಲಿ. ಇಷ್ಟೆಲ್ಲ ವಿರೋಧ ಇದ್ದರೂ ಜಾರಿ ಮಾಡುತ್ತೇವೆ ಅಂತಿದ್ದಾರೆ. ಮೊದಲು ವರದಿ ಬಹಿರಂಗಪಡಿಸಲಿ, ಸಾರ್ವಜನಿಕವಾಗಿ ಚರ್ಚೆ ಆಗಲಿ. ಸಿದ್ದರಾಮಯ್ಯನವರು ವರದಿಯಲ್ಲಿ ಏನಿದೆ ಅಂತ ನೋಡಿಲ್ಲ ಅಂತಿದ್ದಾರೆ, ಆದರೆ ವರದಿ ರೆಡಿ ಮಾಡಿಸಿದವರೇ ಸಿದ್ದರಾಮಯ್ಯ. ದಿವಂಗತ ವಿ.ಪಿ. ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅಧಿಕಾರ ಹೋಗುವ ಸಂದರ್ಭದಲ್ಲಿ ಮಂಡಲ್ ವರದಿ ಜಾರಿ ಮಾಡಿದ್ದರು. ಅದೇ ರೀತಿ ಇವರು ಈಗ ಜಾತಿ ಗಣತಿ ಜಾರಿ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಹೇಳಿದರು.

ಸಂವಿಧಾನಬದ್ಧ ತೀರ್ಮಾನ
ಪರಿಶಿಷ್ಟ ಜಾತಿ, ಪಂಗಡಗಳ ಮೀಸಲು ಪ್ರಮಾಣ ಹೆಚ್ಚಳ, ಎಸ್‌ಸಿ ಮೀಸಲು ವರ್ಗೀಕರಣ, ಪಂಚಮಸಾಲಿ ಸಮುದಾಯದವರಿಗೆ ಪ್ರವರ್ಗ 2ಡಿಗೆ ಸೇರ್ಪಡೆ, ಮುಸ್ಲಿಮರಿಗೆ ಪ್ರತ್ಯೇಕ ಮೀಸಲು ರದ್ದು ಸೇರಿ ಎಲ್ಲವನ್ನು ನನ್ನ ಅವಧಿಯಲ್ಲಿ ಸಂವಿಧಾನಬದ್ಧವಾಗಿ ತೀರ್ಮಾನ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಕೈಗೊಂಡ ಈ ನಿರ್ಧಾರಗಳನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಕೆಲವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋದರು.
ವಿಧಾನಸಭೆ ಚುನಾವಣೆ ಹತ್ತಿರವಾಗಿದ್ದರಿಂದ ಮುಂದಿನ ವಿಚಾರಣೆವರೆಗೆ ಜಾರಿಗೊಳಿಸುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದ್ದನ್ನು ಸುಪ್ರೀಂ ಕೋರ್ಟ್ ಒಪ್ಪಿದೆಯೇ ಹೊರತು ತಡೆಯಾಜ್ಞೆ ನೀಡಿಲ್ಲವೆಂದು ಬೊಮ್ಮಾಯಿ ಹೇಳಿದರು.
ಎಸ್‌ಸಿ, ಎಸ್‌ಟಿ ಮೀಸಲು ಹೆಚ್ಚಳ, ಎಸ್‌ಸಿ ಒಳಮೀಸಲು, ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಮೀಸಲು ಕೊಡುವ ಬಗ್ಗೆ ಕಾಂಗ್ರೆಸ್‌ ಸರ್ಕಾರಕ್ಕೆ ನೈಜ ಕಾಳಜಿಯಿದ್ದರೆ ಈ ನಿಟ್ಟಿನಲ್ಲಿ ಮುಂದುವರಿಯಬೇಕು. ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂಬ ತಪ್ಪು ಮಾಹಿತಿ ನೀಡಿ ವಿವಿಧ ಸಮುದಾಯಗಳಿಗೆ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ವಾಗ್ದಾಳಿ ಮಾಡಿದರು.

ಸೇಡಿಗಾಗಿ ರಾಜೀನಾಮೆ ಕೇಳುತ್ತಿದ್ದಾರೆ
ಇನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ಬಂಧನವಾಗಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷದವರು ಪ್ರಲ್ಹಾದ್ ಜೋಶಿಯವರ ರಾಜೀನಾಮೆ ಕೇಳುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಲ್ಹಾದ್ ಜೋಶಿಯವರು ಅವರ ಸೋದರ‌ನ ಜತೆ ಯಾವುದೇ ವ್ಯವಹಾರಿಕ ಹಾಗೂ ಕೌಟಿಂಬಿಕ ಸಂಬಂಧ ಇಟ್ಟುಕೊಂಡಿಲ್ಲ ನನಗೆ ಅವರ ಕುಟುಂಬದ ಬಗ್ಗೆ ಚೆನ್ನಾಗಿ ಗೊತ್ತಿದೆ. ಕಾಂಗ್ರೆಸ್‌ನವರು ಸೇಡಿನ‌ ರಾಜಕೀಯ ಮಾಡುತ್ತಿದ್ದಾರೆ. ಅವರ ವಿರುದ್ಧ ಯಾರು ಮಾತನಾಡುತ್ತಾರೆ ಅವರ ವಿರುದ್ಧ ಸೇಡಿಗಾಗಿ ಕಾಂಗ್ರೆಸ್‌ನವರು ಎಫ್ಐಆರ್ ಹಾಕಿಸುತ್ತಿದ್ದಾರೆ ಎಂದು ಹೇಳಿದರು.

Tags :