ಅಧಿಕಾರ ಮದದಿಂದ ರಾಜಕಾರಣ ಮಾಡುವವರಿಗೆ ಸತ್ಯ ಅರ್ಥವಾಗದು
ಚಿಕ್ಕಮಗಳೂರು: ಉಪಮುಖ್ಯಮಂತ್ರಿಯಾಗಿ ನ್ಯಾಯದ ಸ್ಥಾನದಲ್ಲಿದ್ದೀರಿ, ಆದರೆ ಯಾರದೋ ವಕೀಲರಾಗಿ ಬಿಟ್ಟಿದ್ದೀರಿ, ಯಾರು ಮೋಹ, ಮದ, ಮತ್ಸರಗಳಿಂದ ಹೊರಗಿದ್ದು ನೋಡುತ್ತಾರೋ ಅವರಿಗೆ ಸತ್ಯಾಸತ್ಯಾತೆ ಗೊತ್ತಾಗುತ್ತದೆ. ಮೋಹಪರವಶರಾದವರಿಗೆ, ಅಧಿಕಾರದ ಮದದಿಂದ ಮಾತ್ಸ ರ್ಯದ ರಾಜಕಾರಣ ಮಾಡುವವರಿಗೆ ಸತ್ಯ ಅರ್ಥವಾಗುವುದಿಲ್ಲವೆಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ತಿರುಗೇಟು ನೀಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ 'ಡ್ರಾಮಾ ಮಾಸ್ಟರ್' ಹೇಳಿಕೆಗೆ ಸಿ.ಟಿ.ರವಿ ಕಿಡಿಕಾರುವ ಮೂಲಕ ತಿರುಗೇಟು ನೀಡಿ, ಸಭಾಪತಿಗಳು ರೂಲಿಂಗ್ ನಡೆದ ಮೇಲೂ ಘಟನೆ ಬಗ್ಗೆ ಗಾಂದಿ ಗಿರಿ ಎನ್ನಬೇಕೇ ಅಥವಾ ಗೂಂಡಾಗಿರಿ ಎನ್ನಬೇಕೇ ಎಂದು ಪ್ರಶ್ನಿಸಿದರು.
ನಿಮ್ಮ ಸರ್ಕಾರದ ಪೊಲೀಸರು ಮಾಡಿದ ದೌರ್ಜನ್ಯದ ಹಿಂದೆ ಯಾರ ಕುಮ್ಮಕ್ಕಿದೆ, ಯಾರ ಕಾಣದ ಕೈಗಳ ಪಾತ್ರವಿದೆ. ಇದನ್ನು ಮೋಹ, ಮದ, ಮಾತ್ಸರ್ಯಗಳಿಂದ ಹೊರಗಿದ್ದು ನೋಡಿದರೆ ಸತ್ಯದ ಅರಿವು ಆಗುತ್ತದೆ ಎಂದು ಹೇಳಿದರು.
ಯಾರು ಹೇಗಿದ್ದಾರೋ ಇತರರೂ ಹಾಗೆ ಎಂದು ಭಾವಿಸುತ್ತಾರೆ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದ ರವಿ, ಡಿಕೆಶಿ ಡ್ರಾಮಾ ಮಾಡುತ್ತಿರುವುದು ಮುಖ್ಯಮಂತ್ರಿ ಹುದ್ದೆಗಾಗಿ ಎಂದು ಕೆಲವು ಕಾಂಗ್ರೆಸ್ ನಾಯಕರು ಮಾತನಾಡುತ್ತಾರೆಂದರು.
ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕೊಯ್ದಿರುವುದು ಕ್ರೌರ್ಯ ಪ್ರಕರಣವಾಗಿದ್ದು, ಇದನ್ನು ಸಹಿಸಿ ಕೊಳ್ಳಬಾರದು, ಮತಾಂಧರ ಕೃತ್ಯ. ಈ ನೆಲದಲ್ಲಿ ಅಂತವರಿಗೆ ಜಾಗವಿಲ್ಲ. ಇದು ಅಮಾನವೀಯ ವಿಕೃತಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು.
ನನಗೆ ಬೆದರಿಕೆ ಪತ್ರ ಬಂದಿದೆ, ತನಿಖೆ ನಡೆಯುತ್ತಿದೆ. ಕಚೇರಿಯಿಂದಲೇ ದೂರು ಕೊಟ್ಟಿದ್ದಾರೆ. ಇಂತಹದಕ್ಕೆಲ್ಲ ಹೆದರುವುದಿಲ್ಲ, ಹೆದರಿ ಕೂರುವ ಜಾಯಮಾನ ನನ್ನದಲ್ಲವೆಂದು ತಿಳಿಸಿದರು.