For the best experience, open
https://m.samyuktakarnataka.in
on your mobile browser.

ಅಧಿವೇಶನ ಕೊನೆ - ಪ್ರಲಾಪಕ್ಕೆ ಮೊನೆ

11:32 AM Dec 23, 2023 IST | Samyukta Karnataka
ಅಧಿವೇಶನ ಕೊನೆ   ಪ್ರಲಾಪಕ್ಕೆ ಮೊನೆ

ಮುಂಬರುವ ಲೋಕಸಭಾ ಚುನಾವಣೆಯ ನೆರಳು ಕವಿಯುತ್ತಿರುವ ಸಂದರ್ಭದಲ್ಲಿ ರಾಜಕೀಯ ಶಕ್ತಿಗಳ ಧ್ರುವೀಕರಣ ನೇರವಾಗಿ ಆರಂಭವಾಗದೇ ಹೋದರೂ ಸದ್ಯೋಭವಿಷ್ಯದಲ್ಲಿ ಆರಂಭವಾಗುವ ಲಕ್ಷಣಗಳು ದಟ್ಟವಾಗಿ ಕಂಡುಬಂದಿವೆ.

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದ್ದ ಚಳಿಗಾಲದ ಸಂಸತ್ ಅಧಿವೇಶನ ಒಂದು ದಿನದ ಮೊದಲೇ ಮುಕ್ತಾಯಗೊಂಡಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಏಕೆಂದರೆ, ಇತ್ತೀಚಿನ ದಿನಮಾನಗಳಲ್ಲಿ ಹೊರಗೆ ಸಿಡಿದೇಳುತ್ತಿದ್ದ ರಾಜಕೀಯ ಬಿಕ್ಕಟ್ಟಿನ ಬಿಸಿ ಸಂಸತ್ತಿಗೂ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಾಗುತ್ತಿರುವುದು ಇದಕ್ಕೆ ಕಾರಣ. ಸಲ್ಲದ ವರ್ತನೆ ಆರೋಪದ ಮೇಲೆ ಒಟ್ಟು ೧೪೬ ಸಂಸದರು ಅಮಾನತುಗೊಂಡ ಚರಿತ್ರಾರ್ಹ ಘಟನೆ ಈ ಬಾರಿಯ ಅಧಿವೇಶನದಲ್ಲಿ ಜರುಗಿದ್ದು ವಿಶೇಷ. ಇನ್ನೊಂದು ಇಂತಹುದೇ ಘಟನೆ ಎಂದರೆ ಸಂಸತ್ತಿನಲ್ಲಿ ಯುವಕರ ತಂಡ ಎಬ್ಬಿಸಿದ ದಾಂಧಲೆ ನಂತರದ ಹೊಸ ರಾಜಕೀಯ ಬಿಕ್ಕಟ್ಟು. ಇಂತಹ ಇಳಿಜಾರು ವಾತಾವರಣದ ನಡುವೆ ಬ್ರಿಟಿಷರ ಕಾಲದಲ್ಲಿ ರೂಪುಗೊಂಡು ಜಾರಿಗೆ ಬಂದಿದ್ದ ಹಲವಾರು ಪ್ರಮುಖ ಶಾಸನಗಳು ಸ್ವದೇಶಿ ರೂಪದಲ್ಲಿ ಮತ್ತೆ ಜಾರಿಗೆ ಬರುತ್ತಿರುವುದು ಕೂಡಾ ವಿಶಿಷ್ಟ ಬೆಳವಣಿಗೆಯೇ. ಇಷ್ಟೆಲ್ಲ ಜರುಗಿದರೂ ಕೂಡಾ ಸಂಸತ್ತಿನಲ್ಲಿ ಜನಕಲ್ಯಾಣಕ್ಕಾಗಿ ನಿರೀಕ್ಷಿಸಿದ ಚರ್ಚೆ ನಡೆಯದೇ ಹೋದ ಪರಿಣಾಮವಾಗಿ ಅಧಿವೇಶನ ಆರಂಭವಾಗಿದ್ದು ಹಾಗೂ ನಂತರ ಮುಕ್ತಾಯವಾಗಿದ್ದೂ ಕೂಡಾ ಸಾರ್ವಜನಿಕರ ಮಟ್ಟಿಗೆ ಗಮನಿಸುವ ವಿದ್ಯಾಮಾನವಾಗದೇ ಹೋದದ್ದು ಒಂದು ದೊಡ್ಡ ಕೊರತೆ.
ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ರಾಜಕೀಯ ಶಕ್ತಿಗಳ ಧ್ರುವೀಕರಣಕ್ಕೆ ಪ್ರೇರಣೆಯಾಗುವ ಹಲವು ಬೆಳವಣಿಗೆಗಳಿಗೆ ಈ ಅಧಿವೇಶನ ನಾಂದಿಯಾಗಬಹುದು ಎಂಬ ಲೆಕ್ಕಾಚಾರಗಳು ಚಲಾವಣೆಯಲ್ಲಿದ್ದವು. ಇದಕ್ಕೆ ಪೂರಕವಾಗಿ ಮುಂಬರುವ ಲೋಕಸಭಾ ಚುನಾವಣೆಯ ನೆರಳು ಕವಿಯುತ್ತಿರುವ ಸಂದರ್ಭದಲ್ಲಿ ರಾಜಕೀಯ ಶಕ್ತಿಗಳ ಧ್ರುವೀಕರಣ ನೇರವಾಗಿ ಆರಂಭವಾಗದೇ ಹೋದರೂ ಸದ್ಯೋಭವಿಷ್ಯದಲ್ಲಿ ಆರಂಭವಾಗುವ ಲಕ್ಷಣಗಳು ದಟ್ಟವಾಗಿ ಕಂಡುಬಂದಿವೆ. ಕರ್ನಾಟಕದ ಮಟ್ಟಿಗಂತೂ ಪರಸ್ಪರ ಪ್ರತಿಸ್ಪರ್ಧಿಗಳೆನಿಸಿದ್ದ ಜಾತ್ಯತೀತ ಜನತಾದಳ ಹಾಗೂ ಭಾರತೀಯ ಜನತಾ ಪಕ್ಷಗಳು ಮೈತ್ರಿ ಏರ್ಪಡಿಸಿಕೊಳ್ಳುವ ಹಾದಿಗೆ ಬಂದಿರುವುದು ಒಂದು ರೀತಿಯ ನಾಂದಿ. ಇನ್ನು ಮುಂದೆ ಈ ಬೆಳವಣಿಗೆಗಳು ಯಾವ ರೂಪ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.
ಸಂಸತ್ ದಾಂಧಲೆಗೆ ಸಂಬಂಧಿಸಿದಂತೆ ಸದನದಲ್ಲಿ ಸರ್ಕಾರದ ಖಚಿತ ವಿವರಣೆ ಹಾಗೂ ಮುಂದಿನ ಕ್ರಮಾವಳಿಗಳ ಬಗ್ಗೆ ನಿರೀಕ್ಷಿತ ನಿರ್ಧಾರಗಳು ಹೊರಹೊಮ್ಮದೇ ಹೋದವು. ಸಂಸತ್ತಿನ ಹೊರಗಡೆ ಪ್ರಧಾನಿ ನರೇಂದ್ರ ಮೋದಿಯವರು ಈ ಘಟನೆಯನ್ನು ಖಂಡಿಸುತ್ತಲೇ ಇದರ ಹಿಂದಿರುವ ಶಕ್ತಿಗಳನ್ನು ಗುರುತಿಸಿ ಮಟ್ಟ ಹಾಕುವ ಮಾತನಾಡಿದ್ದನ್ನು ಬಿಟ್ಟರೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಕಠಿಣ ಸ್ವರದಲ್ಲಿ ವಿದ್ರೋಹಿ ಶಕ್ತಿಗಳಿಗೆ ಶಾಸ್ತಿ ಮಾಡುವ ಸರ್ಕಾರದ ಸಂಕಲ್ಪವನ್ನು ಘೋಷಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ ದಾಟಿಯಲ್ಲಿ ಮಾತನಾಡಿದರೂ ಸರ್ಕಾರದ ಮುಂದಿನ ಖಚಿತ ಕ್ರಮಗಳ ವಿವರಣೆಯನ್ನು ಬಯಲು ಮಾಡಲು ಬಯಸಲಿಲ್ಲ. ಇದರ ಪರಿಣಾಮವೆಂದರೆ ರಾಜಕೀಯ ಬಯಲಿನಲ್ಲಿ ಸಂಸತ್ ದಾಂಧಲೆಗೆ ಸಂಬಂಧಿಸಿದಂತೆ ಆತ್ಮಶ್ಲಾಘನೆ ಹಾಗೂ ಪರನಿಂದನೆ ದಾಟಿಯ ಮಾತುಕತೆ. ಬಂಧಿತ ತರುಣರ ವಿಚಾರಣೆ ಈಗ ಪ್ರಗತಿಯಲ್ಲಿದೆ. ಘಟನೆಗೆ ಕಾರಣ ಏನೆಂಬುದು ಕೂಡಾ ಇನ್ನೂ ನಿಗೂಢವೇ. ಏನೇ ಆದರೂ ಇದು ಮುಂಬರುವ ಚುನಾವಣಾ ಪ್ರಚಾರಕ್ಕೆ ಗ್ರಾಸವಾಗಬಹುದೇ ವಿನಃ ದೇಶದ ಜನ ನಿರೀಕ್ಷಿಸಿರುವಂತೆ ಸಂಸತ್ ದಾಂಧಲೆಯನ್ನು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮ ರೂಪಿಸುವ ಕಡೆ ಚರ್ಚೆಯಾಗಲೀ ಅಥವಾ ವಿವರಣೆಯಾಗಲೀ ಜರುಗದೇ ಹೋದದ್ದು ಬೇಸರದ ಸಂಗತಿ.
ಸಂಸತ್ ದಾಂಧಲೆಯ ನಂತರ ಅಧಿವೇಶನ ಸುಸೂತ್ರವಾಗಿ ನಡೆಯುವುದು ಅಸಾಧ್ಯವಾಯಿತು. ಇದರ ಪರಿಣಾಮವೆಂದರೆ ಪ್ರತಿಪಕ್ಷಗಳು ಒಟ್ಟು ೧೪೬ ಮಂದಿ ಸದಸ್ಯರು ಅಮಾನತುಗೊಂಡ ನಂತರ ಸರ್ಕಾರ ಮಹತ್ವದ ಆರು ಶಾಸನಗಳ ಮಾರ್ಪಾಡು ಮಾಡುವ ವಿಧೇಯಕಗಳಿಗೆ ಅಂಗೀಕಾರದ ಮುದ್ರೆ ಪಡೆದುಕೊಂಡದ್ದು ಈಗ ವಿವಾದದ ವಸ್ತು. ಈ ಆರು ಶಾಸನಗಳೂ ಕೂಡಾ ಬ್ರಿಟಿಷರ ಕಾಲದ ಕುರುಹುಗಳು. ವರ್ತಮಾನಕ್ಕೆ ಅನುಗುಣವಾಗಿ ಈ ಶಾಸನಗಳನ್ನು ಮಾರ್ಪಾಡು ಅಗತ್ಯ. ಆದರೆ, ಅವಸರದಲ್ಲಿ ಇಂತಹ ಕ್ರಮ ಕೈಗೊಳ್ಳುವ ಅನಿವಾರ್ಯತೆ ಏನಿತ್ತು ಎಂಬ ದೇಶವಾಸಿಗಳ ಪ್ರಶ್ನೆಗೆ ಸರ್ಕಾರದ ಉತ್ತರವನ್ನು ನಿರೀಕ್ಷಿಸಬೇಕಷ್ಟೆ.