For the best experience, open
https://m.samyuktakarnataka.in
on your mobile browser.

ಅನಬಾರದ್ದು ಅಂದರೆ….

03:00 AM Dec 21, 2024 IST | Samyukta Karnataka
ಅನಬಾರದ್ದು ಅಂದರೆ…

ಆಡಬಾರದ್ದು ಆಡಿದರೆ ಆಗಬಾರದ್ದು ಆಗುತ್ತದೆ…ಮಾಡಬಾರದ್ದು ಮಾಡಿದರೆ ಏನೇನೋ ಆಗುತ್ತದೆ ಎಂಬುದು ಲೊಂಡೆನುಮನ ಫಿಲಾಸಫಿ. ಎಲ್ಲರೂ ಕುಳಿತಾಗ ಅವನು ಅದೇ ಮಾತನ್ನು ಹೇಳುತ್ತಿದ್ದ. ಕೆಲವರು ಆತನ ಮಾತು ಕೇಳಿ ಮಾತು ಆಡಿದರೆ ಹೋಯಿತು… ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಮಾತಾಡುವಾಗ ಎಚ್ಚರದಿಂದಲೇ ಇರುತ್ತಿದ್ದರು. ಆದರೆ ಎಡವಟ್ಟು ಪಾಮಣ್ಣ ಮಾತ್ರ ಬರೀ ಎದುರು ಮಾತನಾಡುವುದನ್ನು ರೂಢಿ ಮಾಡಿಕೊಂಡಿದ್ದ. ಎದುರಿಗೆ ಭೇಟಿಯಾದವರು ಊಟ ಆಯಿತಾ? ಎಂದು ಕೇಳಿದರೆ…. ಯಾಕೆ? ನೀನು ಮಾಡಿಸಬೇಕು ಅಂತ ಮಾಡಿದಿಯ? ಎಂದು ಕೇಳುತ್ತಿದ್ದ. ಇನ್ನು ಅನೇಕರು ಅರಾಮಿದಿರಾ? ಎಂದರೆ ಯಾಕ್ರೀ… ನನಗೆ ಅರಾಮಿಲ್ಲ ಅಂತ ಯಾರಾದರೂ ಎಸ್‌ಎಂಎಸ್ ಹಾಕಿದ್ದರಾ? ಎಂದು ಎದುರಾಡುತ್ತಿದ್ದ. ಒಂದೊಂದು ಸಲ ಸಿಟ್ಯೂರಪ್ಪನವರು… ಯಾಕಪ್ಪ ಹೀಗೆ ಮಾಡುತ್ತಿ? ಎಂದು ಕೇಳಿದರೆ ನೀವು ಚಿಕ್ಕವರಿದ್ದಾಗ ಇವೆಲ್ಲ ಮಾಡೇ ಇಲ್ವ? ಎಂದು ಅರವತ್ತಕ್ಕೆ ಹತ್ತತ್ತಿರ ಬಂದಿದ್ದ ಪಾಮಣ್ಣ ವಾಪಸ್ ಕೇಳುತ್ತಿದ್ದ. ಇನ್ನೂ ಹಲವರು ಇವನ ಸಹವಾಸವೇ ಅಲ್ಲ ಎಂದು ಸುಮ್ಮನೇ ಬಿಡುತ್ತಿದ್ದರು. ಎಂಥಾ ಗುತ್ನಾಳ್ ಸುಬ್ಬಣ್ಣ ಅಂಥವರು… ಹೋಗ್ಲಿ ಬುಡ್ರೀ ಮಾರಾಯಾ ಅವಂಜೊತೆ ಏನು ಎಂದು ಮುಖ ಸಿಂಡರಿಸಿಕೊಳ್ಳುತ್ತಿದ್ದರು. ಇವನಿಗೆ ಸರಿಯಾಗಿ ಆಗುತ್ತೆ.. ಇವತ್ತಿಲ್ಲ ನಾಳೆ ಅಶ್ವಿನಿ ದೇವತೆಗಳು ತಥಾಸ್ತು ಅಂತಾರೆ ನೋಡುತಿರಿ ಎಂದು ಸಂಭಾವಿತ ಬಂಡೇಸಿ ಅನ್ನುತ್ತಿದ್ದ. ಅದ್ಯಾವ ಮೂಡಿನಲ್ಲಿ ಆ ದೇವತೆಗಳು ತಥಾಸ್ತು ಅಂದರೋ ಗೊತ್ತಿಲ್ಲ…. ಆ ಯಮ್ಮನಿಗೆ ಅನಬಾರದು ಅಂದ…. ನಂತರ ನಾ ಅಂದಿಲ್ಲ… ಅಂದ… ಆ ಯಮ್ಮನೂ ಸಹ ನನಗೆ ಅನಬಾರದು ಅಂದ ಎಂದು ರಂಪಾಟ ಮಾಡಿದಳು… ಈಗ ಅನಬಾರದು ಅಂದಿದ್ದಕ್ಕೆ ಆಗಬಾರದು ಆಗಿದೆ ಎಂದು ಲೊಂಡೆನುಮ ನಿಟ್ಟುಸಿರು ಬಿಡುತ್ತಿದ್ದಾನೆ.