For the best experience, open
https://m.samyuktakarnataka.in
on your mobile browser.

ಅನರ್ಹರ ಬಿಪಿಎಲ್ ಕಾರ್ಡ್‌ಗಳು ಮಾತ್ರ ರದ್ದು

01:48 PM Nov 18, 2024 IST | Samyukta Karnataka
ಅನರ್ಹರ ಬಿಪಿಎಲ್ ಕಾರ್ಡ್‌ಗಳು ಮಾತ್ರ ರದ್ದು

ಬೆಂಗಳೂರು: ಅನರ್ಹರ ಬಿಪಿಎಲ್ ಕಾರ್ಡ್‌ಗಳನ್ನು ಮಾತ್ರ ರದ್ದು ಮಾಡಲಾಗುವುದು. ಅರ್ಹ ಬಡವರಿಗೆ ಕಾರ್ಡ್‌ ತಪ್ಪಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಅವರು ಇಂದು ಕನಕ ಜಯಂತಿ ಪ್ರಯುಕ್ತ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾಧ್ಯಮದೊಂದಿಗೆ ಮಾತನಾಡಿದರು.
ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದ್ದು ನಾವೇ ಹೊರತು, ಬಿಜೆಪಿಯಾಗಲಿ ಜೆಡಿಎಸ್ ಆಗಲಿ ನೀಡಿಲ್ಲ. ಕಾರ್ಯಕ್ರಮ ಜಾರಿ ಮಾಡಿದ್ದು ಈ ಸಿದ್ದರಾಮಯ್ಯ. 2017ರಲ್ಲಿ ಒಂದು ರೂಪಾಯಿಗೆ ನೀಡುತ್ತಿದ್ದ ಅಕ್ಕಿಯನ್ನು ಉಚಿತವಾಗಿ ನೀಡಲಾಯಿತು. ಇದನ್ನು ಬಿಜೆಪಿ ಮಾಡಿಲ್ಲ. ಸುಮ್ಮನೆ ಮಾತನಾಡುತ್ತಾರೆ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿ ಇಂಥ ಯೋಜನೆಯನ್ನು ಜಾರಿ ಮಾಡಿದ್ದಾರೆ. ಗುಜರಾತ್, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ಹರಿಯಾಣ ಎಲ್ಲಿ ಮಾಡಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.
ಏಕಾಏಕಿ ಬಿಪಿಎಲ್ ಕಾರ್ಡ್‌ಗಳನ್ನು ಕಡಿತಗೊಳಿಸಲಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಅರ್ಹರಿಗೆ ತಪ್ಪಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗ್ಯಾರಂಟಿಗಳ ಬಗ್ಗೆ ಮಾತನಾಡಲು ಹೆಚ್.ಡಿ .ಕುಮಾರಸ್ವಾಮಿ ಯವರಿಗೆ ಯಾವ ನೈತಿಕ ಹಕ್ಕಿದೆ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರ ಕೇವಲ ಗ್ಯಾರಂಟಿ ಎನ್ನುತ್ತಿದೆ ತೆರಿಗೆ ಹಣ ಎಲ್ಲಿ ಹೋಗುತ್ತಿದೆ ಎಂದು ಜನರಿಗೆ ಉತ್ತರ ನೀಡಬೇಕು ಎಂದು ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ಕುಮಾರಸ್ವಾಮಿ ಇರುವಾಗ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದರೆ? ಅವರಿಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ ಎಂದರು.

ರಾಜ್ಯಕ್ಕೆ ತೆರಿಗೆ ಹಣ ಕೊಡಿಸಲಿ
ನಾವು ಕರ್ನಾಟಕ ರಾಜ್ಯದಿಂದ ಕೇಂದ್ರಕ್ಕೆ 4.50 ಲಕ್ಷ ಕೋಟಿ ತೆರಿಗೆಯನ್ನು ಕಟ್ಟುತ್ತೇವೆ. ನಮಗೆ ವಾಪಸ್ಸು ಬರುವುದು 59 ಸಾವಿರ ಕೋಟಿ ಮಾತ್ರ. ಉಳಿದ ದುಡ್ಡು ಕೇಂದ್ರದಲ್ಲಿಯೇ ಇರುತ್ತದೆ. ಅದನ್ನು ರಾಜ್ಯಕ್ಕೆ ಕೊಡಿಸಲಿ ಎಂದರು. ಬರೀ ಮಾತನಾಡಿದರೆ ಪ್ರಯೋಜನವೇನು? ಹೆಚ್.ಡಿ. ದೇವೇಗೌಡರಾಗಲಿ, ಕುಮಾರಸ್ವಾಮಿಯವರಾಗಲಿ ಕರ್ನಾಟಕಕ್ಕೆ ಅನ್ಯಾಯವಾದಾಗ ಮಾತನಾಡಿದ್ದರೆಯೇ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿಯವರುಗಳು ಕರ್ನಾಟಕದ ಮಂತ್ರಿಗಳಾಗಿ ಏನು ಮಾಡುತ್ತಿದ್ದಾರೆ?
ನಬಾರ್ಡ್ ವತಿಯಿಂದ ಕಳೆದ ವರ್ಷ 5,600 ಕೋಟಿ ಸಾಲ ರಾಜ್ಯಕ್ಕೆ ನೀಡಲಾಗಿತ್ತು. ಈ ವರ್ಷ 2,340 ಕೋಟಿ ನೀಡಿದ್ದಾರೆ ಇದು ಅನ್ಯಾಯವಲ್ಲವೇ? ಸಾಲದ ಪ್ರಮಾಣವನ್ನು 58%ರಷ್ಟು ಕಡಿಮೆ ಮಾಡಿದ್ದಾರೆ. ಕುಮಾರಸ್ವಾಮಿ, ಪ್ರಲ್ಹಾದ್‌ ಜೋಶಿಯವರುಗಳು ಕರ್ನಾಟಕದ ಮಂತ್ರಿಗಳಾಗಿ ಏನು ಮಾಡುತ್ತಿದ್ದಾರೆ ಎಂದರು. ರೈತರಿಗೆ ಅನ್ಯಾಯ ಮಾಡಬೇಡಿ ಇದು ದ್ರೋಹದ ಕೆಲಸ ಎಂದು ಪ್ರಧಾನ ಮಂತ್ರಿಗಳಿಗೆ, ಹಣಕಾಸು ಸಚಿವ ನಿರ್ಮಾಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದೇನೆ ಎಂದರು.
ನಾನು ಅಧಿಕಾರಕ್ಕೆ ಬಂದ ನಂತರ 5 ಲಕ್ಷದವರೆಗೆ ಬಡ್ಡಿರಹಿತ ಸಾಲ. 15 ಲಕ್ಷದವರೆಗೆ ಶೇಕಡಾ 3% ದರದಲ್ಲಿ ಸಾಲ ನೀಡಲಾಗಿದೆ. ನಬಾರ್ಡ್ ಬರುವುದು ಹಣಕಾಸಿನ ಮಂತ್ರಿಗಳ ಕೆಳಗೆ ಬರುತ್ತದೆ. ನಿರ್ಮಲಾ ಸೀತಾರಾಮನ್ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.‌
2023-24ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ. ಅನುದಾನ ನೀಡುವುದಾಗಿ ಹೇಳಿದ್ದರು. ಕುಮಾರಸ್ವಾಮಿ ಈ ಬಗ್ಗೆ ಏನು ಕೇಳಿದ್ದಾರೆ? 15ನೇ ಹಣಕಾಸು ಯೋಜನೆಯಡಿ 11,595 ಕೋಟಿ ಘೋಷಣೆ ಮಾಡಿದ್ದರು. ಎಲ್ಲಿ ಕೊಟ್ಟರು. ಇದನ್ನು ನೀವು ಕೇಳುವುದಿಲ್ಲ ಎಂದರು. 56,000 ಕೋಟಿ ರೂಪಾಯಿಗಳ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದೇವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಏಕೆ ಕೊಡುತ್ತಿಲ್ಲ ಎಂದರು.

Tags :