ಅನಾಗರಿಕ ಸಂಕೋಲೆ
ಬೆಳಗಾವಿಯ ಹಳ್ಳಿಯಲ್ಲಿ ನಡೆದ ಅನಾಗರಿಕ ವರ್ತನೆಗೆ ಎಲ್ಲರೂ ತಲೆ ತಗ್ಗಿಸಬೇಕು. ಇದು ಮರುಕಳಿಸಬಾರದು ಎಂದರೆ ಸ್ಥಳೀಯ ಪೊಲೀಸರು ಎಚ್ಚರವಹಿಸಿ ಸಣ್ಣಪುಟ್ಟ ಘರ್ಷಣೆಯಲ್ಲೇ ಅಂತ್ಯಗೊಳ್ಳುವಂತೆ ಮಾಡಬೇಕು.
ಪ್ರೀತಿಯ ಬಳ್ಳಿಗೆ ಮಗ ಪ್ರೀತಿಸಿ ಪ್ರೇಯಸಿಯೊಂದಿಗೆ ಓಡಿ ಹೋದ ಎಂದು ತಾಯಿಯನ್ನು ಅರೆಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಾಕಿ ಹೊಡೆಯುವುದು ಎಲ್ಲೋ ದೂರದ ದೇಶದಲ್ಲಿ ನಡೆದ ಘಟನೆಯಲ್ಲ. ನಮ್ಮ ಬೆಳಗಾವಿ ಸಮೀಪ ಹಳ್ಳಿಯಲ್ಲಿ ಎಲ್ಲರ ಸಮ್ಮುಖದಲ್ಲಿ ನಡೆದಿರುವುದು ನಿಜಕ್ಕೂ ನಾಚಿಕೆಗೇಡಿನ ಅನಾಗರಿಕ ವರ್ತನೆ. ಯಾರೋ ಕೆಲವರು ಮಾಡುವ ಈ ಕೆಟ್ಟ ಕೆಲಸಕ್ಕೆ ಇಡೀ ಜಿಲ್ಲೆಯ ಜನ ತಲೆತಗ್ಗಿಸಬೇಕಾಗಿ ಬಂದಿದೆ. ದುರ್ದೈವದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಅದೇ ಜಿಲ್ಲೆಯವರು. ಈ ಘಟನೆ ಇದ್ದಕ್ಕಿದ್ದಂತೆ ನಡೆದದ್ದಲ್ಲ. ಯುವಕ-ಯುವತಿ ಪ್ರೀತಿಸುತ್ತಿರುವುದು ಎಲ್ಲರಿಗೂ ತಿಳಿದಿತ್ತು. ಈ ಮೊದಲು ಎರಡೂ ಕುಟುಂಬಗಳ ನಡುವೆ ಸಂಘರ್ಷ ನಡೆದಿತ್ತು. ಸ್ಥಳೀಯರು ಎಚ್ಚೆತ್ತು ನಡೆದುಕೊಂಡಿದ್ದರೆ ಈ ಘಟನೆ ನಡೆಯದಂತೆ ಮಾಡಬಹುದಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಇರುವುದು ಹಲವು ಬಾರಿ ಬಹಿರಂಗಗೊಂಡಿದೆ. ಕೆಲವು ತಿಂಗಳ ಹಿಂದೆ ಘಟಪ್ರಭಾದಲ್ಲಿ ಇದೇ ರೀತಿ ಮಹಿಳೆಯನ್ನು ಅಪಮಾನಿಸುವ ಘಟನೆ ನಡೆದಿತ್ತು. ಪೊಲೀಸರು ಸಕಾಲದಲ್ಲಿ ಕ್ರಮ ಕೈಗೊಂಡಿದ್ದರೆ ಆ ಘಟನೆಯನ್ನೂ ತಡೆಗಟ್ಟಬಹುದಿತ್ತು. ಜನರಲ್ಲಿ ಪೊಲೀಸರ ಬಗ್ಗೆ ಹೆದರಿಕೆ ಎಂಬುದೇ ಇಲ್ಲ. ಹಣ ಕೊಟ್ಟರೆ ಆಯಿತು ಎಂಬ ಭಾವನೆ ಬೆಳೆದಿದೆ. ಪೊಲೀಸರೇ ಮಧ್ಯಸ್ತಿಕೆವಹಿಸಿ ರಾಜಿ ಮಾಡಿಸುವ ಕೆಲಸ ಮಾಡುತ್ತಾರೆ. ಇಲ್ಲವೆ ಕೌಂಟರ್ ದೂರು ನೀಡುವಂತೆ ಮಾಡಿ ಹೆದರಿಸುತ್ತಾರೆ. ಇದರಿಂದ ಬಡವರು ಪೊಲೀಸ್ ಠಾಣೆಗೆ ಹೋಗಲು ಹಿಂಜರಿಯುತ್ತಾರೆ. ಪ್ರೇಮಿಸಿದ ಯುವಕ-ಯುವತಿಯರು ಇದೇ ಕಾರಣದಿಂದ ಪೊಲೀಸ್ ಠಾಣೆಗೆ ಹೋಗದೆ ಬೇರೆ ಸ್ಥಳಕ್ಕೆ ಓಡಿ ಹೋಗಿದ್ದಾರೆ. ನೊಂದ ಬಡವರಿಗೆ ನ್ಯಾಯ ಸಿಗುವ ವಿಶ್ವಾಸ ಇಲ್ಲ.
ಬೆಳಗಾವಿಯಲ್ಲಿ ವಿಧಾನಮಂಡಳದ ಅಧಿವೇಶನ ನಡೆಯುತ್ತಿದೆ. ಎಲ್ಲ ಹಿರಿಯ ಅಧಿಕಾರಿಗಳು ಅಲ್ಲೇ ಮೊಕ್ಕಾಂ ಹೂಡಿದ್ದಾರೆ. ಹೀಗಿರುವಾಗ ಮಹಿಳೆಯ ಮೇಲೆ ಹಲ್ಲೆ, ಅರೆಬೆತ್ತಲೆ ಮೆರವಣಿಗೆ, ಕಂಬಕ್ಕೆ ಕಟ್ಟಿಹಾಕಿ ಹೊಡೆಯುವ ಕೆಲಸ ಎಲ್ಲವೂ ನಡೆಯುತ್ತದೆ ಎಂದರೆ ಗೂಂಡಾಗಿರಿ ಯಾವ ಮಟ್ಟಕ್ಕೆ ಬೆಳೆದಿದೆ ಎಂಬುದು ತಿಳಿಯುತ್ತದೆ. ಪೊಲೀಸ್ ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಇದ್ದಲ್ಲಿ ಇಂಥ ಘಟನೆಗಳಿಗೆ ಕಡಿವಾಣ ಹಾಕಬಹುದು. ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ವ್ಯಾಜ್ಯಗಳು ಸಣ್ಣಪುಟ್ಟ ಇರುತ್ತವೆ. ಅವುಗಳು ಹಲವು ವರ್ಷ ಹಾಗೇ ಮುಂದುವರಿದಲ್ಲಿ ಅದು ಕ್ರಿಮಿನಲ್ ಸ್ವರೂಪ ಪಡೆಯುತ್ತವೆ. ಬೆಳಗಾವಿ ನಗರಕ್ಕೆ ಕಮೀಷನರ್ ನೇಮಕಗೊಂಡಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಕೆಲವು ಹೆಚ್ಚುವರಿ ಅಧಿಕಾರವನ್ನೂ ನೀಡಲಾಗಿದೆ. ಅದರ ಸದುಪಯೋಗ ಆಗುತ್ತಿಲ್ಲ. ಪೊಲೀಸ್ ಇಲಾಖೆ ಸಿಬ್ಬಂದಿ ಸಂಖ್ಯೆ ಹೆಚ್ಚಾಗಿದ್ದರೂ ಅದರ ಸದುಪಯೋಗ ಕಂಡು ಬರುತ್ತಿಲ್ಲ. ಬೆಳಗಾವಿ ಸಾಕಷ್ಟು ಬೆಳವಣಿಗೆ ಕಂಡಿದ್ದರೂ ಇನ್ನೂ ಕೆಲವು ಕಡೆ ದಬ್ಬಾಳಿಕೆ ಮುಂದುವರಿದಿದೆ. ಅದರಲ್ಲೂ ಬಡವರು ಹೆಚ್ಚಿನ ಶೋಷಣೆಗೆ ಒಳಗಾಗುತ್ತಿದ್ದಾರೆ. ಘಟನೆ ನಡೆದ ಮೇಲೆ ಸಂತಾಪದ ಹೊಳೆ ಹರಿಸುವ ಬದಲು ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಸಮಾಜದ ನೆಮ್ಮದಿಯನ್ನು ಕಾಪಾಡಬಹುದು. ಗ್ರಾಮೀಣ ಪ್ರದೇಶದಲ್ಲಿ ಎಷ್ಟೋ ಪ್ರಕರಣಗಳು ಜನ ಸಾಮಾನ್ಯರ ಗಮನಕ್ಕೆ ಬಾರದೇ ಮುಚ್ಚಿಹೋಗುತ್ತವೆ. ಇವುಗಳಲ್ಲಿ ಸ್ಥಳೀಯ ಪೋಲಿಸರ ಕೈವಾಡ ಇರುವ ಶಂಕೆ ಇದೆ. ಜಿಲ್ಲೆಯಲ್ಲಿ ಹಲವು ಹಗರಣಗಳು ಇದ್ದಕ್ಕಿದ್ದಂತೆ ಬೆಳಕಿಗೆ ಬರುತ್ತಿರುವುದರಿಂದ ಪೊಲೀಸ್ ಇಲಾಖೆ ನೀಡುತ್ತಿರುವ ಅಂಕಿಅಂಶಗಳ ಬಗ್ಗೆ ಅನುಮಾನ ಮೂಡುತ್ತಿದೆ. ಕಾನೂನು ರೀತ್ಯ ವಯಸ್ಕರು ಪ್ರೀತಿಸಿ ಮದುವೆಯಾಗಬಹುದು. ಇದಕ್ಕೆ ತಂದೆತಾಯಿ ಯಾರೂ ಅಡ್ಡಿ ಬರುವಂತಿಲ್ಲ. ಆದರೆ ಸಮಾಜದಲ್ಲಿ ಇನ್ನೂ ಕಟ್ಟುಪಾಡು ಹೋಗಿಲ್ಲ. ಇದು ಹಲವು ಬಾರಿ ಕುಟುಂಬಗಳ ನಡುವೆ ಘರ್ಷಣೆಗಳಿಗೆ ಕಾರಣವಾಗುತ್ತಿವೆ. ಈ ಘರ್ಷಣೆಗಳು ವಿಕೋಪಕ್ಕೆ ತಿರುಗದಂತೆ ಎಚ್ಚರವಹಿಸುವುದು ಸ್ಥಳೀಯ ಪೊಲೀಸರ ಕರ್ತವ್ಯ.
ಬೆಳಗಾವಿ ಜಿಲ್ಲೆಯಲ್ಲಿ ಇಂಥ ಪ್ರಕರಣಗಳು ಮರುಕಳಿಸಬಾರದು ಎಂದರೆ ಜನಪ್ರತಿನಿಧಿಗಳು ಮತ್ತು ಸ್ಥಳೀಯ ಪೊಲೀಸರು ಜನ ಸಂಪರ್ಕ ಹೆಚ್ಚಿಸಿಕೊಳ್ಳಬೇಕು. ಎಲ್ಲ ಪ್ರಕರಣಗಳು ಕ್ರಿಮಿನಲ್ ಸ್ವರೂಪ ಪಡೆಯುವುದನ್ನು ತಡೆಗಟ್ಟಬಹುದು. ಪೊಲೀಸರ ಸಮಾಜಮುಖಿ ದೃಷ್ಟಿಕೋನ ಇಂಥ ಪ್ರಕರಣಗಳಲ್ಲಿ ಸಹಾಯಕ್ಕೆ ಬರುತ್ತದೆ.