ಅನಾಥರ ತಾಯಿ ಇನ್ನಿಲ್ಲ
ಕೊಟ್ಟೂರು: ಇಲ್ಲಿನ ಅನಾಥ ಸೇವಾಶ್ರಮದ ಪಾಲಕಿ ಉತ್ತಂಗಿ ರುದ್ರಮ್ಮ ಇಹಲೋಕ ತ್ಯಜಿಸಿದರು. ಕಳೆದ ೧೫ ವರ್ಷದಿಂದ ತಮ್ಮ ಪತಿಯ ಪಿಂಚಣಿ ಹಣದಲ್ಲಿ ಅನಾಥ ಮಕ್ಕಳು ಹಾಗೂ ವೃದ್ಧರ ಬಾಳಿಗೆ ಬೆಳಕಾಗಿದ್ದರು. ಮಕ್ಕಳಿಲ್ಲದ ಇವರು ಅಂಗವಿಕಲ ಅನಾಥ ಬಾಲಕನನ್ನು ದತ್ತು ಸ್ವೀಕರಿಸಿದ್ದರು.
ಪತಿಯ ಅಗಲಿಕೆ ನಂತರ ಸ್ವಗೃಹದಲ್ಲಿಯೇ ಅನಾಥರನ್ನು ಕರೆತಂದು ಪೋಷಣೆ ಮಾಡುತ್ತಿದ್ದರು. ಉತ್ತಂಗಿ ರುದ್ರಮ್ಮ ಅನಾಥ ಸೇವಾ ಟ್ರಸ್ಟ್ ಸ್ಥಾಪಿಸಿ ಸರ್ಕಾರದಿಂದ ಬರುವ ಅಲ್ಪ ಹಣ ಹಾಗೂ ದಾನಿಗಳು ನೀಡುತ್ತಿದ್ದ ನೆರವಿನ ಹಣದಿಂದ ಅನಾಥರ ಜೊತೆ ಜೀವನ ಸಾಗಿಸುತ್ತಿದ್ದರು. ಇದನ್ನು ಮನಗಂಡ ಸ್ಥಳೀಯರು ಪಪಂ ಸಹಕಾರದಿಂದ ನಿರ್ವಹಣೆ ಇಲ್ಲದ ಮಂದಿರ ಕಟ್ಟಡವನ್ನು ೨೦೧೬ರಲ್ಲಿ ಅನಾಥ ಸೇವಾ ಶ್ರಮಕ್ಕೆ ಹಸ್ತಾಂತರಿಸಿದರು.
ಅಲ್ಲಿಂದಿಚೆಗೆ ಸುಮಾರು ೧೬ ಅನಾಥರಿಗೆ ಕೊರತೆಯಾಗದಂತೆ ಸ್ಥಳೀಯ ದಾನಿಗಳ ನೆರವು ಪಡೆದು ಆಹಾರ ಬಟ್ಟೆ ವಸತಿ ಕಲ್ಪಿಸಿ ಮಕ್ಕಳಂತೆ ಸಲಹುತ್ತಿದ್ದರು. ಈಗ ಅನಾಥಾಶ್ರಮದ ವೃದ್ಧರ ಹಾಗೂ ಅನಾಥ ಅಂಗವಿಕಲ ಮಕ್ಕಳ ಪೋಷಣೆಯನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಆತಂಕ ಮನೆ ಮಾಡಿದೆ.