ಅನಾರೋಗ್ಯದಿಂದ ಬಳಲಿದ ವೃದ್ಧೆ: 3 ಕಿ.ಮೀ. ಹೊತ್ತು ಆಸ್ಪತ್ರೆಗೆ ಸೇರಿಸಿದ ಜನತೆ
ಚಿಕ್ಕಮಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನು ರಸ್ತೆ ಇಲ್ಲದೆ ೩ ಕಿಲೋಮೀಟರ್ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ.
ನೆಲ್ಲಿಬೀಡು ಗ್ರಾಮದ ೭೦ ವರ್ಷದ ವೃದ್ಧೆ ಲಕ್ಷ್ಮಿ ಎಂಬುವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲು ರಸ್ತೆಇಲ್ಲದ್ದರಿಂದ ಗ್ರಾಮದವರು ಮಹಿಳೆಯನ್ನು ೩ ಕಿ.ಮೀ ಹೊತ್ತು ಕೊಂಡು ಮುಖ್ಯ ರಸ್ತೆಗೆ ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಳಸ ತಾಲೂಕಿನ ನೆಲ್ಲಿಬೀಡು, ಅಜ್ಜಿಗದ್ದೆ, ಆರೋಳ್ಳಿ ಕಟ್ಟೆಮನೆ, ಕೋಣೆಮನೆ, ಚಿಕ್ಕನಾಡಮನೆ, ಚೌಡಿ ಬೀಳಲು, ದೀಟೆ, ಕಬ್ಬಂಚಿ, ಕರ್ಕೆತೋಟ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆ ಇಲ್ಲದೆ ಭದ್ರಾ ನದಿಗೆ ನಿರ್ಮಿಸಿರುವ ತೂಗು ಸೇತುವೆ ಮೇಲೆ ಬದುಕು ಕಟ್ಟಿಕೊಂಡಿದ್ದಾರೆ.
ಬೇಸಿಗೆಯಲ್ಲಿ ಭದ್ರಾ ನದಿಯ ನೀರು ಕಡಿಮೆಯಾದರೆ ನದಿ ಒಳಗಡೆಯೇ ವಾಹನಗಳು ಓಡಾಡುತ್ತವೆ. ಆದರೆ, ಮಳೆಗಾಲದಲ್ಲಿ ಭದ್ರೆಯ ನೀರಿನ ಹರಿವು ಹೆಚ್ಚಾಗಿರುವುದರಿಂದ ತೂಗು ಸೇತುವೆ ಮೇಲೆಯೇ ಸಾಗಬೇಕು. ಮುಖ್ಯ ರಸ್ತೆಯಿಂದ ಆರು ಕಿ.ಮೀ. ದೂರದ ಹಳ್ಳಿಗಳ ಜನ ಕೂಡ ನಡೆದೇ ಸಾಗಬೇಕಾಗಿದೆ. ಪ್ರತಿಯೊಂದಕ್ಕೂ ಆರು ಕಿ.ಮೀ. ನಡೆಯದ ಹೊರತು ಬದುಕಿಲ್ಲ. ಭದ್ರಾ ನದಿಗೆ ಸೇತುವೆ ನಿರ್ಮಿಸಿ ಕೊಡಿ ಎಂದು ಐದಾರು ದಶಕಗಳಿಂದ ಆ ಭಾಗದ ಜನರು ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಸ್ಥಳಕ್ಕೆ ಹೋಗಿ ಬರುವ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತೆ ಅತ್ತ ತಲೆ ಹಾಕುವು ದಿಲ್ಲ ಎಂದು ಆ ಭಾಗದ ಗ್ರಾಮಸ್ಥರು ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.