ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅನಾವರಣಗೊಳ್ಳಲಿದೆ ಸಾಂಸ್ಕೃತಿಕ ಸೊಬಗು…

02:55 AM Nov 26, 2024 IST | Samyukta Karnataka

ಪ್ರಾಚ್ಯ ವಸ್ತುಗಳ ವಿಶೇಷ ಸಂಪತ್ತನ್ನು ಲಕ್ಕುಂಡಿ ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿದ್ದು ಇದನ್ನೆಲ್ಲ ಅನ್ವೇಷಣೆ ಮಾಡಿ, ವಿಶ್ವದಲ್ಲೇ ಮೊದಲು ಎನ್ನಬಹುದಾದ ವಿಶಿಷ್ಟ, ವಿಭಿನ್ನ ರೀತಿಯ ಪ್ರಾಚ್ಯಾವಶೇಷ ವಸ್ತುಗಳ ಅನ್ವೇಷಣೆಗೆ ಸರ್ಕಾರ ಮುಂದಾಗಿದ್ದು, ವರ್ಷಾಂತ್ಯಕ್ಕೆ ಉತ್ಖನನವೂ ಆರಂಭವಾಗಲಿದೆ.

ಹರ್ಷ ಕುಲಕರ್ಣಿ
ಹುಬ್ಬಳ್ಳಿ: ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾಗಿ, ಕಲ್ಯಾಣ ಚಾಲುಕ್ಯರ ಸಮಯದಲ್ಲಿ ಅಭಿವೃದ್ಧಿಹೊಂದಿ, ವಿಜಯನಗರ ಅರಸರ ಆಳ್ವಿಕೆಯಲ್ಲಿದ್ದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇಲ್ಲಿನ ಹೊಲ-ಗದ್ದೆ ಅಷ್ಟೇ ಅಲ್ಲ ತಿಪ್ಪೆ ಗುಂಡಿಗಳಿಂದಲೂ ಬೆಲೆ ಕಟ್ಟಲಾಗದ ಅನರ್ಘ್ಯ ರತ್ನಗಳನ್ನು ಪುರಾತತ್ವ ಮತ್ತು ಪಾರಂಪರಿಕ ಇಲಾಖೆ ಪಡೆದುಕೊಂಡಿದೆ.
ಲೊಕ್ಕಿಗುಂಡಿ ಎಂದು ಶಾಸನದಲ್ಲಿ ಉಲ್ಲೇಖಗೊಂಡಿರುವ ಲಕ್ಕುಂಡಿಯು ಧರ್ಮ ಸಮಯನ್ವಯದ ನೆಲೆಯಾಗಿತ್ತು ಎಂಬುದಕ್ಕೆ ಅನೇಕ ಕುರುಹುಗಳಿವೆ. ಅಲ್ಲದೆ, ಕನ್ನಡ ಸಾಹಿತ್ಯ ಪೋಷಕಿಯಾಗಿದ್ದ ಅತಿಮಬ್ಬೆಯವರ ಹುಟ್ಟೂರು ಕೂಡ. ಚಾಲುಕ್ಯರು, ರಾಷ್ಟ್ರಕೂಟರು, ಕಲಚೂರಿಗಳು, ಸೆವುಣರು, ಹೊಯ್ಸಳರು ಹಾಗೂ ವಿಜಯನಗರ ಸಾಮ್ರಾಜ್ಯದ ಅನಭಿಶಕ್ತ ದೊರೆಗಳು ತಮ್ಮ ಆಡಳಿತ ಅವಧಿಯಲ್ಲಿ ಲಕ್ಕುಂಡಿಯ ಸಾಂಸ್ಕೃತಿಕ ಪರಂಪರೆಗೆ ಕೊಡುಗೆ ನೀಡಿದ್ದರು. ಆದರೆ ಇಲ್ಲಿನ ಶಿಲ್ಪಕಲೆ, ವಾಸ್ತುಶಿಲ್ಪ, ಚಾರಿತ್ರಿಕ ಸ್ಮಾರಕ, ಪ್ರಾಚೀನ ದೇವಸ್ಥಾನ, ಕೋಟೆ ಬಾಗಿಲು, ಚೌಕಿಬಾವಿ ಕೋಟೆ, ದೇವಾಲಯ, ಜೈನ ಬಸದಿ ಸೇರಿದಂತೆ ೪೦ಕ್ಕೂ ಹೆಚ್ಚು ಪಾರಂಪರಿಕ ಸ್ಮಾರಕಗಳ ಸಮುಚ್ಛಯಗಳಿಗೆ ಚೋಳರು ಧಕ್ಕೆ ಮಾಡಿದ್ದರು.
ಮನೆಗಳಿಂದ ಪ್ರಾಚ್ಯಾವಶೇಷ ಸಂಗ್ರಹ
ಈಗಾಗಲೇ ಲಕ್ಕುಂಡಿಯ ಪ್ರತೀ ಮನೆಗಳಿಗೂ ತೆರಳಿ ಪ್ರಾಚ್ಯಾವಶೇಷಗಳನ್ನು ಸಚಿವ ಎಚ್.ಕೆ. ಪಾಟೀಲರು ಸಂಗ್ರಹಿಸಿದ್ದಾರೆ. ಆದರೆ, ಈಗ ಸಿಕ್ಕಿರುವ ಕುರುಹುಗಳು ಶೇ.೫ ರಷ್ಟು ಮಾತ್ರ. ಲಕ್ಕುಂಡಿಯ ಭೂಮಿಯಲ್ಲಿ ಇನ್ನೂ ಶೇ.೯೫ ರಷ್ಟು ಪ್ರಾಚೀನ ಕುರುಹುಗಳಿದ್ದು, ಉತ್ಖನನದಿಂದ ಬೆಳಕಿಗೆ ಬರಬೇಕಿದೆ. ಲಕ್ಕುಂಡಿಯಲ್ಲಿ ಪಾರಂಪರಿಕ ಸಂಪತ್ತು ಪುನರುತ್ಥಾನಗೊಂಡು ದೇಶ-ವಿದೇಶದ ಪ್ರವಾಸಿಗರನ್ನು ಕೈ ಬೀಸಿ ಕರೆಯಲಿದೆ.
ಲಕ್ಕುಂಡಿ ಗ್ರಾಮದ ಕೆಲ ಹೊಲಗಳಲ್ಲಿ ಈಗಲೂ ಮುತ್ತು, ರತ್ನ, ಹವಳ ಹಾಗೂ ಚಿನ್ನದ ವಸ್ತುಗಳು ಸಿಗುತ್ತಿವೆ. ಈ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಾಗಲೆಲ್ಲ ಹೊಲ-ಗದ್ದೆಗಳಲ್ಲಿ ಹಾಲುಮಣಿ, ಹಸಿರು ಮಣಿ, ನೀಲ ಮಣಿ, ಹವಳ ಹಾಗೂ ಆನೆ ದುಡ್ಡು ಸಿಕ್ಕಿವೆಯಂತೆ. ಹೀಗೆ ಸಿಕ್ಕ ಪ್ರಾಚೀನ ಕುರುಹುಗಳನ್ನು ಕಳೆದ ೪೦ ವರ್ಷಗಳಿಂದ ಬಸಪ್ಪ ಬಡಿಗೇರ ಸಂಗ್ರಹಿಸಿದ್ದಾರೆ. ಸುಮಾರು ೩೫೦೦ ವರ್ಷಗಳ ಹಿಂದೆ ಶಿಲಾಯುಗದಲ್ಲಿ ಬಳಸಲಾಗುತ್ತಿದ್ದ ಕೈಕೊಡಲಿಯೂ ಪತ್ತೆಯಾಗಿದೆ. ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ಹಾಗೂ ವಿಜಯ ನಗರದ ಅರಸರ ಆಳ್ವಿಕೆಗೆ ಲಕ್ಕುಂಡಿ ಒಳಪಟ್ಟಿತ್ತು ಎಂಬುದಕ್ಕೆ ಶಾಸನಗಳೂ ದೊರಕಿವೆ. ಅಲ್ಲದೇ, ಲಕ್ಕುಂಡಿ ಗ್ರಾಮ ಕಲ್ಯಾಣ ಚಾಲುಕ್ಯರು ಹಾಗೂ ಹೊಯ್ಸಳರ ರಾಜಧಾನಿ ಹಾಗೂ ಟಂಕಸಾಲೆಯೂ ಆಗಿತ್ತು ಎಂಬ ಶಾಸನಗಳು ಇವೆ.

ಪಾಟೀಲರಿಂದ ಬಹುಮಾನ ಘೋಷಣೆ
ಲಕ್ಕುಂಡಿ ಗ್ರಾಮದ ಪ್ರತೀ ಮನೆಯಲ್ಲೂ ಪ್ರಾಚ್ಯ ಕುರುಹುಗಳಿವೆ ಎಂಬುದು ಸತ್ಯ. ಅವುಗಳನ್ನು ವಶಕ್ಕೆ ಪಡೆಯಲು ಸರ್ಕಾರ ಹೊಸ ಯೋಜನೆಯೊಂದನ್ನು ಹಾಕಿಕೊಂಡಿದೆ. ಸುಂದರವಾದ ಕೆತ್ತನೆಯ ಅವಶೇಷ, ಬೆಲೆಬಾಳುವ ವಸ್ತುಗಳು ಹಾಗೂ ದೇವರ ವಿಗ್ರಹಗಳನ್ನು ಸ್ವಯಂಪ್ರೇರಣೆಯಿಂದ ನೀಡಿದವರಿಗೆ ಸಚಿವ ಎಚ್.ಕೆ. ಪಾಟೀಲ ಬಹುಮಾನ ಘೋಷಿಸಿದ್ದಾರೆ. ಪ್ರಥಮ ಬಹುಮಾನವಾಗಿ ೨೫ ಸಾವಿರ, ದ್ವಿತೀಯ ೧೫ ಹಾಗೂ ತೃತೀಯ ಬಹುಮಾನವಾಗಿ ೧೦ ಸಾವಿರ ರೂ. ನೀಡುವುದಾಗಿ ಷೋಷಿಸಲಾಗಿದೆ.

ಲಕ್ಕುಂಡಿಗೆ ಬೇಕಿದೆ ಕಾಯಕಲ್ಪ…
ಬೆಲೆ ಕಟ್ಟಲಾಗದ ಸಾಂಸ್ಕೃತಿಕ ಸಂಪತ್ತನ್ನು ತನ್ನೊಳಗೆ ಇರಿಸಿಕೊಂಡಿರುವ ಲಕ್ಕುಂಡಿಯನ್ನು ವಿಶ್ವಕ್ಕೆ ಪರಿಚಯಿಸುವ, ವಿಶ್ವ ಪಾರಂಪರಿಕ ಕಟ್ಟಿಗೆ ಸೇರಿಸಲು ಎಲ್ಲ ಸಿದ್ಧತೆಗಳೂ ನಡೆದಿವೆ. ಇಲ್ಲಿನ ವೈಭವ, ಶಾಸನ, ಪ್ರಾಚ್ಯಾವಶೇಷಗಳನ್ನು ನೋಡಿದರೆ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಲಕ್ಕುಂಡಿ ಸೇರುವುದರಲ್ಲಿ ಸಂಶಯವೇ ಇಲ್ಲ. ಆದರೆ, ಲಕ್ಕುಂಡಿ ಗ್ರಾಮ ಆಧುನಿಕ ಸೌಕರ್ಯಗಳಿಂದ ಬಹಳ ದೂರ ಉಳಿದಿದೆ. ಗ್ರಾಮದಲ್ಲಿ ಬಯಲು ಶೌಚ ಪದ್ಧತಿ ಇನ್ನೂ ಜೀವಂತವಾಗಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಸರಾಗವಾಗಿ ನೀರು ಹರಿಯದೇ ಅವೈಜ್ಞಾನಿಕವಾಗಿ ರಸ್ತೆಯ ಮಧ್ಯದಲ್ಲೇ ಗಟಾರುಗಳನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಹರಡಿಕೊಂಡಿರುವ ತಿಪ್ಪೆ ಗುಂಡಿಗಳನ್ನು ಮೊದಲು ಸ್ವಚ್ಛಗೊಳಿಸಬೇಕು. ಇದರೊಟ್ಟಿಗೆ ಮೊದಲ ಆದ್ಯತೆಯಲ್ಲಿ ಮೂಲ ಸೌಕರ್ಯ ಒದಗಿಸಿದಲ್ಲಿ ಪ್ರವಾಸಿಗರೂ ಬರುತ್ತಾರೆ. ಲಕ್ಕುಂಡಿ ಜಾಗತಿಕ ಮಟ್ಟದಲ್ಲೂ ಮಾನ್ಯತೆ ಪಡೆಯಲಿದೆ.

ಹೊಲ-ಗದ್ದೆಗಳಲ್ಲಿ ದೊರೆತ ಮುತ್ತು, ರತ್ನ, ದಮ್ಮಡಿ ಹಾಗೂ ಆಯುಧ.
Tags :
Gadaglakkundi
Next Article