For the best experience, open
https://m.samyuktakarnataka.in
on your mobile browser.

ಅನಿವಾರ್ಯತೆ ಕಲಿಸುವ ಬದುಕು

03:42 AM Oct 02, 2024 IST | Samyukta Karnataka
ಅನಿವಾರ್ಯತೆ ಕಲಿಸುವ ಬದುಕು

ಕಳೆದ ತಿಂಗಳ ಸೆಮಿಸ್ಟರ್ ಕೊನೆಯ ಪರೀಕ್ಷೆಯ ಸಮಯದಲ್ಲಿ ನಾನು ಕುಳಿತಿರುವ ಕೊಠಡಿಯ ಎದುರು ನಡೆದ ಒಂದು ಸನ್ನಿವೇಶ. ಅಲ್ಲಿ ತಾಯಿ ಮಗ ಕುಳಿತಿದ್ದರು. ಆ ತಾಯಿ ಮಗನಿಗೆ ಊಟ ಮಾಡಿಸುತ್ತಿದ್ದರು. ಆ ಮಗ, ಊಟ ಮಾಡುತ್ತಲೇ ಏನೋ ಮೊಬೈಲ್‌ನಲ್ಲಿ ನೋಡುತ್ತಿದ್ದ. ಅಲ್ಲೇ ನಿಂತಿದ್ದ ಒಬ್ಬ ಸೆಕ್ಯೂರಿಟಿ ಗಾರ್ಡ್ನನ್ನು ಕೇಳಿದೆ: ಏನು ಸಮಸ್ಯೆ ಅಂತ.
`ಆ ತಾಯಿ ಪ್ರತಿ ಪರೀಕ್ಷೆಯ ಸಮಯದಲ್ಲೂ ಬರುತ್ತಾರೆ. ಅವನು ಓದಿಕೊಳ್ಳುವ ಸಮಯದಲ್ಲಿ ಇವರು ಅವನ ಜೊತೆ ಇರುತ್ತಾರೆ. ಅವನ ಎಲ್ಲ ಕೆಲಸಗಳನ್ನು ಇವರೇ ಮಾಡಿಕೊಡುತ್ತಾರೆ, ಊಟವನ್ನೂ ಅವರೇ ಮಾಡಿಸುತ್ತಾರೆ''. ನಾನು ಏನೂ ಹೇಳಲು ಹೋಗಲಿಲ್ಲ, ಆದರೆ ಆ ಕುಟುಂಬದವರ ಬಗ್ಗೆ ಅನುಕಂಪ ಮೂಡಿತು. ಬೇರೆಯವರ ನಿರ್ಧಾರಗಳನ್ನು ನಾವು ಪ್ರಶ್ನಿಸಲಾಗದಿದ್ದರೂ ನನಗದು ಸರಿ ಕಾಣಲಿಲ್ಲ. ಕಾಳಜಿ, ಆರೈಕೆ ಮಾಡುವುದು ಒಳ್ಳೆಯದಾದರೂ ಅತಿಯಾದ ಆರೈಕೆ, ಮಕ್ಕಳು ಸ್ವತಂತ್ರವಾಗಿ ಯೋಚಿಸುವ, ತಮ್ಮ ಕೆಲಸ ಮಾಡಿಕೊಳ್ಳುವ ಮನಃಸ್ಥಿತಿಯನ್ನು ಕಡಿಮೆ ಮಾಡುತ್ತದೆ. ವಾಸ್ತವವಾಗಿ ಎಲ್ಲ ಸಮಯದಲ್ಲೂ ಪೋಷಕರಿಗೆ ಮಕ್ಕಳಿಗೆ ಸಹಾಯ ಮಾಡಲಾಗದು, ಕ್ಲಿಷ್ಟ ಸಮಯದಲ್ಲಿ ಆ ಮಕ್ಕಳು ಅವರ ಕೆಲಸವನ್ನು ಅವರೇ ಮಾಡಿಕೊಳ್ಳುವ ಪರಿಸ್ಥಿತಿ ಬಂದಾಗ ಅವರು ಒತ್ತಡ ತಾಳಿಕೊಳ್ಳದೆ ಕುಸಿದು ಹೋಗುತ್ತಾರೆ. ನಾನು ನೋಡಿದ ಇನ್ನೊಂದು ಘಟನೆ, ಕೆಲವು ವರ್ಷಗಳ ಹಿಂದೆ. ಒಂದಿಷ್ಟು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಜೊತೆ ಸರ್ಕಾರಿ ಶಾಲೆಗೆ ಹೋಗಿದ್ದೆವು. ಸರ್ಕಾರಿ ಶಾಲೆಗೆ ಬಣ್ಣ ಬಳಿಯುವುದು ನಮ್ಮ ಕೆಲಸವಾಗಿದ್ದರೂ, ಮೂಲ ಉದ್ದೇಶ, ನಮ್ಮ ವಿದ್ಯಾರ್ಥಿಗಳಿಗೆ ಸಮಾಜದ ಕೆಳ ವರ್ಗದವರ ಕಷ್ಟಗಳಿಗೆ ಸ್ಪಂದಿಸಿ, ತಮ್ಮ ಬದುಕಿನ ಜೊತೆ ಬೇರೆಯವರಿಗೂ ನೆರವಾಗುವ ಮನಃಸ್ಥಿತಿಯನ್ನು ತರಿಸುವುದಾಗಿತ್ತು. ಅದು ಕಿರಿಯ ಪ್ರಾಥಮಿಕ ಶಾಲೆಯಾಗಿದ್ದರಿಂದ ಮಕ್ಕಳು ತುಂಬಾ ಚಿಕ್ಕವರಾಗಿದ್ದರು. ಎಲ್ಲ ಶಾಲಾ ವಿದ್ಯಾರ್ಥಿಗಳು ಮಧ್ಯಾಹ್ನ ಊಟವಾದ ಮೇಲೆ ಅವರವರ ತಟ್ಟೆಯನ್ನು ಅವರೇ ತೊಳೆದು ಇಟ್ಟುಕೊಳ್ಳುತ್ತಿದ್ದರು. ಒಂದು ಪುಟ್ಟ ಹುಡುಗಿ, ಬಹುಶಃ ನಾಲ್ಕು ವರ್ಷವೂ ತುಂಬಿರದ ಪುಟ್ಟ ಹುಡುಗಿ, ತಾನು ಊಟ ಮಾಡಿದ ತಟ್ಟೆಯನ್ನು ತಾನೇ ತೊಳೆಯಲು ಪ್ರಾರಂಭಿಸಿದ್ದಳು. ತಟ್ಟೆ ತೊಳೆಯುವ ಜಾಗವು ಸ್ವಲ್ಪ ಎತ್ತರವಾಗಿದ್ದರಿಂದ ಅವಳಿಗೆ ಕಾಲು ಸಿಗುತ್ತಿರಲಿಲ್ಲ, ತುದಿ ಕಾಲಿನಲ್ಲಿ ನಿಂತುಕೊಂಡು ತಾನೇ ತಟ್ಟೆ ತೊಳೆದುಕೊಂಡಳು. ನಂತರ ಊಟದ ತಟ್ಟೆಯನ್ನು ಅಲ್ಲೇ ಇರುವ ತನ್ನ ಕೈ ಚೀಲದಲ್ಲಿ ಹಾಕಿಟ್ಟು ಆಟಕ್ಕೆ ಖುಷಿಯಿಂದಲೇ ತೆರಳಿದಳು. ಅಲ್ಲೇ ಇದ್ದ ಕಿರಿಯ ಶಿಕ್ಷಕಿಯನ್ನು ಕೇಳಿದಾಗ ಅವರು ಹೇಳಿದ್ದು: ಆ ಬಾಲಕಿಯ ಅಮ್ಮ ಮನೆ ಕೆಲಸಕ್ಕೆ ಹೋಗುತ್ತಾಳಂತೆ. ಆಕೆಯ ಮನೆ ಮಾಲೀಕರು ಮನೆಗೆ ಮಗುವನ್ನು ಕರೆದುಕೊಂಡು ಬರಬಾರದು ಎಂದಿದ್ದರಂತೆ. ಅದಕ್ಕೋಸ್ಕರ ಆ ಮಹಿಳೆ ಹತ್ತಿರದ ಈ ಶಾಲೆಗೆ ಬಂದು ಮಗುವನ್ನು ಬಿಟ್ಟು ಹೋಗುತ್ತಾರಂತೆ. ಆ ಮಹಿಳೆಗಿರುವುದು ಬದುಕಿನ ಅಸಹಾಯಕ ಅನಿವಾರ್ಯತೆ. ಆ ಚಿಕ್ಕ ಬಾಲಕಿಗೆ ಇರುವುದೂ ಯಾವುದೇ ಆಯ್ಕೆಗಳಿಲ್ಲದ ಅನಿವಾರ್ಯತೆ. ಈ ಎರಡೂ ಘಟನೆಗಳನ್ನು ಹೋಲಿಸಿ ನೋಡಲಾಗದಿದ್ದರೂ ನಮ್ಮ ಗ್ರಹಿಕೆ ಸುಲಭವಾಗಲು ಹೋಲಿಕೆ ಮಾಡಲೇಬೇಕಾಗುತ್ತದೆ. ಮೊದಲ ಘಟನೆಯಲ್ಲಿ ಆ ತಾಯಿ ತೋರಿಸುತ್ತಿರುವುದು ಕಾಳಜಿಯಾದರೂ ಅದು ಅಗತ್ಯಕ್ಕಿಂತ ಹೆಚ್ಚಿನದು, ಅದು ಕಾಳಜಿ ಪಡೆದುಕೊಂಡ ವ್ಯಕ್ತಿಯಲ್ಲಿ ಸ್ವತಂತ್ರವಾಗಿ, ಸ್ವಾಭಿಮಾನಯುಕ್ತವಾಗಿ ಬದುಕುವ ಸಂಭವವನ್ನು ಕಡಿಮೆ ಮಾಡುವ ಸಾಧ್ಯತೆ ಹೆಚ್ಚು. ಎರಡನೇ ಘಟನೆಯಲ್ಲಿ ಮಗುವಿನ ಸ್ವತಂತ್ರವಾಗಿರುವ, ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವ ಮನೋಭಾವ ನಮಗೆ ಖುಷಿ ಕೊಟ್ಟು, ಆ ಮಗುವಿಗೆ ಬೆನ್ನು ತಟ್ಟಬೇಕೆನಿಸುತ್ತದೆಯೇ ಹೊರತು ಆ ಮಗುವಿಗೆ ಬೇರಾವುದನ್ನೂ ಮಾಡಲಾಗುವುದಿಲ್ಲ. ಆ ಮಗುವು ಎಷ್ಟೇ ಪ್ರಯತ್ನಪಟ್ಟರೂ, ಆಕೆಗಿರುವ ಬಡತನ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದಿಲ್ಲ. ಆ ಬಾಲಕಿ ಮಾಡುವ ಪ್ರತಿ ಸ್ವಾಭಿಮಾನದ, ಸ್ವತಂತ್ರ ಕೆಲಸಗಳಿಗೆ, ಆಕೆಯ ಉತ್ತಮ ಆಯ್ಕೆಗಳಿಗೆ ಸಮಾಜದಲ್ಲಿ ಪ್ರತಿಫಲಗಳಿಸಿಕೊಳ್ಳುವ ವ್ಯವಸ್ಥೆಯಿಲ್ಲ. ಒಂದು ಹಂತದಲ್ಲಿ ಮೀಸಲು ಕ್ರಮಗಳು ಸಹಾಯ ಮಾಡುವುದಾದರೂ ಅದು ಅವರ ಸ್ವಾಭಿಮಾನ ಹೆಚ್ಚಿಸಿ, ಅವರನ್ನು ಉನ್ನತ ಆಯ್ಕೆಗಳಿಗೆ ಪ್ರೇರೇಪಿಸುವುದಕ್ಕಿಂತ ಅವರನ್ನು ಅವಲಂಬಿಯಾಗುವಂತೆ ಮಾಡುವ ಸಾಧ್ಯತೆಯೇ ಹೆಚ್ಚು. ಆ ಇಂಜಿನಿಯರಿಂಗ್ ವಿದ್ಯಾರ್ಥಿಗೂ ಅಷ್ಟೇ. ಪ್ರೀತಿ-ಆರೈಕೆ-ಕಾಳಜಿ ಅವನಿಗೆ ಬೆನ್ನೆಲುಬಾಗುವುದಕ್ಕಿಂತ ಆಗದೆ ಇರುವ ಸಂಭವವೇ ಹೆಚ್ಚು. ಆದರೆ ಜೀವನದಲ್ಲಿ ಈ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಸಿಗುವ ಆಯ್ಕೆಗಳು ಅನೇಕ. ಆತನಿಗೆ ಬರುವ ಅವಕಾಶಗಳು, ಅವನಿಗೆ ಆಯ್ಕೆಯನ್ನು ತಾನಾಗಿಯೇ ಒದಗಿಸುತ್ತವೆ. ಅವನ ಆಯ್ಕೆ ಸರಿಯಾಗಿದ್ದಲ್ಲಿ ಅವನನ್ನು ಅದು ತಾನಾಗಿಯೇ ಉನ್ನತ ಜೀವನ ಮಟ್ಟಕ್ಕೆ ಕೊಂಡೊಯ್ಯುವ ಸಾಧ್ಯತೆಯೂ ಇರುತ್ತದೆ. ಅವನಿಗೆ ಬರುವ ಅರಿವು, ಆತನ ವ್ಯಕ್ತಿತ್ವವನ್ನು ಬದಲಾಯಿಸ ಬಲ್ಲುದು. ಅದಕ್ಕವನ ಮನಸ್ಸು, ಭಾವಗಳು ತೆರೆದುಕೊಳ್ಳಬೇಕಷ್ಟೆ. ಅನಿವಾರ್ಯತೆ ಬದುಕುವುದನ್ನು ಕಲಿಸುತ್ತಾದರೂ ಅಲ್ಲಿ ಬರುವ ನೋವು-ಹತಾಶೆಗಳಿಗೆ ಕೊನೆಯಿಲ್ಲ. ಅವರ ಸ್ವತಂತ್ರ ಮನೋಭಾವ, ಸ್ವಾಭಿಮಾನ ಅವರಿಗೆ ಬೆನ್ನೆಲುಬಾಗಿ ನಿಲ್ಲುವುದಿಲ್ಲ. ಅನಿವಾರ್ಯತೆ ಕಲಿಸುವ ಬದುಕಿನಲ್ಲಿ ಒಂದು ಅಂತರ್ ಶಕ್ತಿಯಿದೆ. ಅನಿವಾರ್ಯತೆಯನ್ನು ಅರ್ಥೈಸಿ, ಒಪ್ಪಿಕೊಂಡು, ವಾಸ್ತವಿಕ ಗುರಿಯನ್ನು ಇಟ್ಟು ಮುಂದುವರೆದರೆ ಅದು ಆ ವ್ಯಕ್ತಿಯನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯಬಲ್ಲುದು. ಅದೇ ಒಪ್ಪಿಕೊಳ್ಳದ ಅನಿವಾರ್ಯತೆ ಆತನ ಕೋಪವನ್ನು ಹೆಚ್ಚಿಸಿ,ನನ್ನಾದಿಯಾಗಿ ಜಗತ್ತೆಲ್ಲವೂ ಕೆಟ್ಟದು' ಎನ್ನುವ ನಂಬಿಕೆಯನ್ನು ಹುಟ್ಟುಹಾಕಿ, ಅವನ ಬದುಕನ್ನು, ಹಾಗೂ ಇತರರ ಬದುಕನ್ನು ಹಾಳು ಮಾಡಲೂಬಹುದು. ಈ ಎರಡರ ನಡುವಿನ ಆಯ್ಕೆಯನ್ನು ಸುಗಮಗೊಳಿಸಿ ಸಕಾರಾತ್ಮಕತೆಯತ್ತ ಒಲವು ತೋರುವಂತೆ ಮಾಡಲು ಉತ್ತಮ ಮಾರ್ಗದರ್ಶನ ಇರಬೇಕಷ್ಟೆ.