ಅನುಗಾಲವೂ ಹಿಂಸೆ ಜೀವಕೆ
ವಿಶ್ವನಿಗೆ ತಲೆ ಕೆಟ್ಟಿತ್ತು. ಮೊದಲು ಸರಿ ಇತ್ತು ಎಂದೇನಲ್ಲ. ಅರ್ಥವಿಲ್ಲದ ನವ್ಯ ಶೈಲಿಯಲ್ಲಿ ಮಾತಾಡಲು ಶುರು ಮಾಡಿದ್ದ. ಹೋಯ್ತು ಪದಕ, ಹೋಯ್ತು ಪದಕ’ ಎಂದು ಕಿರುಚುತ್ತಿದ್ದ. ಮಡದಿ ವಿಶಾಲೂ ಗಾಬರಿಯಿಂದ ನನ್ನತ್ತ ನೋಡಿದಳು. “ಏನಾಗಿದೆ ನಿಮ್ಮ ಫ್ರೆಂಡ್‌ಗೆ?” ಎಂದಳು. “ಕಾಶ್ಮೀರಿ ಪಲಾವ್ ಯಾರಿಗೆ ಸಿಗುತ್ತೋ?” ಎಂದು ಹೇಳಿಕೊಂಡ ವಿಶ್ವ. “ಕಾಶ್ಮೀರಿ ಪಲಾವ್‌ಗೂ ನಮ್ಮ ಕುಟುಂಬಕ್ಕೂ ಏನೇನೂ ಸಂಬಂಧ ಇಲ್ಲ. ಬೇಗ ಡಾಕ್ಟರ್ ಬಂದ್ರೆ ಸಾಕು” ಎಂದಳು. ಹತ್ತು ನಿಮಿಷದಲ್ಲಿ ಡಾ. ಡಾಗೇಶ್ ಕಿವಿ ಬಳಿ ಫೋನ್ ಹಿಡಿದು ಮಾತಾಡುತ್ತಾ ಬಂದರು. ಆ ಕಡೆ ಇದ್ದ ಪೇಶೇಂಟ್ ಮೇಲೆ
ಬೌಬೌ’ ಎಂದು ರೇಗುತ್ತಿದ್ದರು.
“ರೀ, ನಾನು ಹೇಳಿದಷ್ಟು ಮಾಡ್ರೀ. ನಾಳೆ ಬೆಳಿಗ್ಗೆ ಬಂದು ನೋಡ್ತೀನಿ. ಅಷ್ಟರಲ್ಲಿ ಹೋಗೇ ಬಿಟ್ರೆ ತಿಳಿಸಿ, ವೈಕುಂಠಕ್ಕೆ ರ‍್ತೀನಿ” ಎಂದು ಫೋನ್ ಕಟ್ ಮಾಡಿ ವಿಶ್ವನ ಬಳಿಗೆ ಬಂದರು. ಅವರ ನೆಗೆಟಿವ್ ಮಾತುಗಳನ್ನು ಕೇಳಿ ವಿಶಾಲೂಗೆ ಭಯವಾಗಿತ್ತು.
“ತಲೆ ಕೆಟ್ಟ ಡಾಕ್ಟರ್ ಕೈಯಲ್ಲೇ ತಲೆ ಸರಿ ಮಾಡೋಕೆ ಸಾಧ್ಯ ವಿಶಾಲೂ” ಎಂದು ನಾನು ಸಮಾಧಾನ ಮಾಡಿದೆ. ಬಂದ ಡಾಕ್ಟರ್ ವಿಶ್ವನನ್ನು ಪರೀಕ್ಷೆ ಮಾಡಿದರು. ಕಣ್ಣೆಳೆದು ಅಳೆದರು. ನಾಲಿಗೆಯ ಉದ್ದ ಚೆಕ್ ಮಾಡಿದರು. ಕಿವಿಯಲ್ಲಿ ಬಗ್ಗಿ ನೋಡಿದರು. ಸ್ಟೇಥಾಸ್ಕೋಪ್ ಎದೆಯ ಮೇಲೆ ಓಡಾಡಿಸಿ ಆಶ್ಚರ್ಯಪಟ್ಟು,
“ಉಸಿರಾಡ್ತಾ ಇದ್ದಾನೆ” ಎಂದರು.
“ಹೌದು, ನೀವು ಬಂದ ಮೇಲೂ ಉಸಿರಾಡ್ತಿದ್ದಾರೆ” ಎಂದಳು ವಿಶಾಲೂ.
“ನಾರ್ಮಲ್ ಆಗಿದೆ ಉಸಿರಾಟ. ಇದು ಶರೀರಕ್ಕೆ ಸಂಬಂಧಪಟ್ಟ ಸಮಸ್ಯೆ ಅಲ್ಲ, ತಲೆಗೆ ಸಂಬಂಧಪಟ್ಟಿದ್ದು” ಎಂದರು. ಶರೀರ ಎಂದ ಮೇಲೆ ತಲೆಯೂ ಸೇರಿರುತ್ತಲ್ಲ ಎಂಬ ಮಾತು ವಿಶಾಲೂ ಗಂಟಲಲ್ಲೇ ಉಳಿಯಿತು.
“ಕಾಶ್ಮೀರಿ ಪಲಾವ್ ಏಳುತ್ತಾ? ಡೊನಾಲ್ಡ್ ಡಕ್ಕು ನೀರಲ್ಲಿ ಬೀಳುತ್ತಾ?” ಎಂದ ವಿಶ್ವ ದೂರ ದಿಗಂತದಲ್ಲಿ ನೋಟ ನೆಟ್ಟಿದ್ದ.
“ಇವರ ಮಾತು ನಿಮಗೆ ಅರ್ಥ ಆಯ್ತಾ?” ಎಂದಾಗ ನಾನು ಅಂದಾಜಿನ ಮೇಲೆ ಅರ್ಥ ಹೇಳಿದೆ.
“ಕಾಶ್ಮೀರಿ ಪಲಾವ್ ಅಂದ್ರೆ ಕಾಶ್ಮೀರಿ ಚುನಾವಣೆ ಹತ್ರ ರ‍್ತಾ ಇದೆ. ಅದ್ರಲ್ಲಿ ಯಾರು ಗೆಲ್ತಾರೋ ಏನೋ ಅನ್ನೋ ಆತಂಕ ವಿಶ್ವನಿಗೆ ಶುರುವಾಗಿದೆ” ಎಂದಾಗ ವಿಶ್ವ ಹೌದೆಂದು ತಲೆ ಆಡಿಸಿದ.
“ಡೊನಾಲ್ಡ್ ಡಕ್ ಅಂದ್ರೆ ಏನು?” ಎಂದಳು ವಿಶಾಲು.
“ಡೊನಾಲ್ಡ್ ಡಕ್ ಅಲ್ಲ, ಡೊನಾಲ್ಡ್ ಟ್ರಂಪು” ಎನ್ನುವ ವೇಳೆಗೆ, ವಿಶ್ವ “ಕಿವಿ ಇದ್ರೆ ತಲೆ ಉಳಿಯುತ್ತೆ” ಎಂದ.
“ಇವರ ಮಾತಲ್ಲಿ ಗೂಢಾರ್ಥ ಇದೆ” ಎಂದ ವೈದ್ಯರು ವಿಶ್ವನ ತಲೆಯನ್ನು ಕುಟ್ಟಿ ಪರೀಕ್ಷಿಸಿದರು. ಮರದ ಸುತ್ತಿಗೆಯಿಂದ `ಟಕ್ ಟಕ್’ ಎಂದು ಬುರುಡೆಯ ಮೇಲೆ ಘಟಂ ಬಾರಿಸಿದರು.
“ಶೃತಿ ಸರಿಯಾಗಿದೆಯಾ ಡಾಕ್ಟರ್?” ವಿಶಾಲೂ ಕೇಳಿದಳು.
“ತಲೆ ನೀರು ತುಂಬಿದ ಬಲೂನ್ ಆಗಿದೆ. ಕೆಟ್ಟ ಯೋಚ್ನೆಗಳ ಮೇಕೆ ದಾಟು”
“ತಲೆ ಉಳೀಬೇಕಾದ್ರೆ ಕಿವಿ ರ‍್ಬೇಕು ಅಂದ್ರೇನು ?”
“ಅದರರ್ಥ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ಧಾಳಿ ಆಯ್ತು. ಕಿವಿಗೆ ಗುಂಡು ಬಿತ್ತು, ತಲೆ ಸೈಡಲ್ಲೇ ಉಳೀತು” ಎಂದಾಗ ವಿಶ್ವ ಹೌದೆಂದ.
“ಕಳೆದ ಸಲ ಏಳು, ಈ ಸಲ ಆರು. ಮರ್ಯಾದೆ ಆಗ್ಲಿ, ವಯಸ್ಸಾಗ್ಲಿ, ಸಂಪತ್ತಾಗ್ಲಿ ಜಾಸ್ತಿ ಆಗ್ತಾ ರ‍್ಬೇಕು” ಎಂದ ವಿಶ್ವ.
“ಪೇಷೆಂಟ್ ಕಂಡೀಷನ್ ಸೀರಿಯಸ್ಸಾಗಿದೆ. ನನ್ಗೆ ಕೊಡೋ ಫೀಸ್ ಕೊಟ್ಬಿಡಿ, ನಾನು ಹೊರಟೆ” ಎಂದರು ಡಾಕ್ಟರ್.
“ಸ್ವಲ್ಪ ಇರೀ ಡಾಕ್ಟ್ರೇ, ಇನ್ನೂ ಮಾತ್ರೆ ಬರೆದಿಲ್ಲ, ಕಾಯಿಲೆ ಹೇಳ್ಲಿಲ್ಲ. ಬಂದಾ ಪುಟ್ಟಾ ಹೋದಾ ಪುಟ್ಟಾ ಥರ ಆಗಬಾರದು?” ಎಂದಳು ವಿಶಾಲೂ.
“ವಿಶ್ವ ಮಾತಾಡ್ತಿರೋದು ಒಲಂಪಿಕ್ಸ್ ಬಗ್ಗೆ. ಕಳೆದ ಸಲ ೨೦೨೦ರಲ್ಲಿ ಭಾರತಕ್ಕೆ ಏಳು ಮೆಡಲ್ ಬಂದಿತ್ತು. ಈ ಸಲ ಒಂದು ಕಮ್ಮಿ ಬಂದಿದೆ” ಎಂದು ವಿಶ್ವನ ಮಾತಿಗೆ ಅರ್ಥ ಹೇಳಿದೆ.
“ವಿನೀಶ್ ಪೋಗಟ್‌ಗೆ ಅನ್ಯಾಯ ಆಗಿದೆ. ಸ್ಟ್ರೇಕ್ ಮಾಡ್ಬೇಕು. ದೆಹಲಿ ಚಲೋ ! ಟೈರ್‌ಗೆ ಬೆಂಕಿ! ಕರ್ನಾಟಕ ಬಂದ್ !” ವಿಶ್ವ ಕಿರುಚಿದ.
“ಅಬ್ಬಾ ! ಇದಂತೂ ಒಳ್ಳೇ ಮಾತು, ರಾಷ್ಟçಮಟ್ಟದಲ್ಲಿ ನಮ್ಮ ಅಥೆಲೆಟ್‌ಗೆ ಮೋಸ ಆದ್ರೂ ಯಾರೂ ಕಿವಿಗೆ ಹಾಕ್ಕೊಳ್ಳಿಲ್ಲ. ಯಾರೂ ಪ್ರೊಟೆಸ್ಟ್ ಮಾಡ್ಲಿಲ್ಲ. ಆದ್ರೆ ರಾಜಕಾರಣಿ ಎಸಗಿದ ತಪ್ಪಿನ ಬಗ್ಗೆ ಪ್ರಶ್ನಿಸಿದಾಗ ಜಿಲ್ಲೆ ಜಿಲ್ಲೆಗಳಲ್ಲಿ ಬಂದ್ ! ಮಂತ್ರಿ ಮೇಲೆ ಅಪವಾದ ಬಂದ್ರೆ ಭಯಂಕರ ಸ್ಟ್ರೇಕ್. ಬಸ್ಸುಗಳಿಗೆ ಕಲ್ಲು ! ಹಿರಿಯರ ಫೋಟೋಗಳಿಗೆ ಬೆಂಕಿ. ಆದರೆ ಒಲಿಂಪಿಕ್ಸ್ ಕುಸ್ತಿ ಪಟು ವಿನೀಶ್ ಪೋಗಟ್‌ಗೆ ತೂಕ ಜಾಸ್ತಿ ಆಗಿ ಡಿಸ್‌ಕ್ವಾಲಿಫೈ ಆದಾಗ ಅದೇ ಜನ ಯಾಕೆ ಸ್ಟ್ರೇಕ್ ಮಾಡ್ಲಿಲ್ಲ ?” ಎಂದ ವಿಶ್ವ.
“ತುಂಬಾ ಸೆನ್ಸಿಬಲ್ ಆದ ಪ್ರಶ್ನೆ. ತುಂಬಾ ಚುರುಕಾಗಿದ್ದಾನೆ ನಿಮ್ಮ ಗಂಡ” ಎಂದು ಡಾಕ್ಟರ್ ಡಾಗೇಶ್ ತಾರೀಫ್ ಮಾಡಿದರು.
“ಕೇವಲ ೧೫೦ ಗ್ರಾಂ ತೂಕ ಜಾಸ್ತಿ ಅಂತ ಆಕೇನ ಸ್ಪರ್ಧೆಯಿಂದ ಆಚೆ ತಳ್ಳಿದ್ದು ನ್ಯಾಯಾನಾ?” ಎಂದು ವಿಶಾಲೂ ಕೇಳಿದಳು.
“ತೊಡೆ ತಟ್ಟೋ ಮೊದಲು ತಟ್ಟೆ ಇಡ್ಲಿ ತಿನ್ನಬರ‍್ದಿತ್ತು” ಎಂದ ವಿಶ್ವ.
“ವಿನೀಶ್ ಪೋಗಟ್ಟು ಬೆಳಿಗ್ಗೆ ತಟ್ಟೆ ಇಡ್ಲಿ ತಿಂದರ‍್ತಾರೆ. ಅದರ ತೂಕ ೧೫೦ ಗ್ರಾಂ ಹೆಚ್ಚುವರಿ ಇತ್ತು. ಇಡ್ಲಿ ಜೊತೆ ಇಡೀ ರಾತ್ರಿ ಕುಸ್ತಿ ಆಡಿದ್ದಾಳೆ ಆ ಛಲಗಾರ್ತಿ” ಎಂದೆ ನಾನು.
“ಹಾಗಿದ್ರೆ ತಟ್ಟೆಇಡ್ಲಿ ಅಂಗಡಿಗೆ ಕಲ್ಲು ಯಾಕೆ ಹೊಡೆದಿಲ್ಲ? ಹಿಟ್ಟು ರುಬ್ಬೋ ಮಿಷಿನ್‌ಗಳಿಗೆ ಯಾಕೆ ಧಿಕ್ಕಾರ ಹೇಳಿಲ್ಲ ? ರಾಜಕಾರಣಿಗಳನ್ನು ಪ್ರಶ್ನೆ ಮಾಡಿದಾಗ ಅವರು ಪ್ರಶ್ನಾತೀತರು ಅಂತ ಇಡೀ ರಾಜ್ಯ ಒಗ್ಗಟ್ಟಾಗಿ ತಿರುಗಿ ಬೀಳುತ್ತೆ. ರಾಷ್ಟ್ರಮಟ್ಟದ ಅಥ್ಲೆಟ್‌ಗೆ ತೊಂದ್ರೆ ಆದಾಗ ಸದ್ದೇ ಇಲ್ಲ !” ಎಂದ ವಿಶ್ವ.
“ಯಾರಾದ್ರೂ ಹಣೆ ಚೆಚ್ಕೊಂಡ್ರಾ ?” ಡಾಕ್ಟರ್ ಕೇಳಿದರು. ಇಲ್ಲ ಎಂದಾಗ ಡಾಕ್ಟರ್ ತಾವೇ ಹಣೆ ಚೆಚ್ಚಿಕೊಂಡು ಹೇಳಿದರು.
“ವಿಶ್ವ ಹೇಳ್ತಿರೋದೆಲ್ಲ ಸರಿ ಇದೆ. ಆದ್ರೆ ಯರ‍್ಹತ್ರ ನಾವು ಸತ್ಯದ ಅನಾವರಣ ಮಾಡೋದು ?”
“ಡಾಕ್ಟರ್, ಇವರಿಗೇನಾದ್ರೂ ಔಷಧಿ ?”
“ಏನೂ ಬೇಡಮ್ಮ. ವಿಶ್ವ ಒಂದು ವಾರ ಟೀವೀಲಿ ನ್ಯೂಸ್ ನೋಡಬರ‍್ದು. ಪೇಪರಲ್ಲಿ ಬರೋ ರಾಜಕೀಯ ನ್ಯೂಸ್ ಮನಸ್ಸಿಗೆ ಹಾಕ್ಕೋಬಾರದು ಅಷ್ಟೇ” ಎಂದ.
“ನಿಮ್ಮ ಫೀಸು” ಎಂದಳು.
“ಬೇಡಮ್ಮ, ಭಾರತದ ಬಗ್ಗೆ ಉತ್ತಮ ಆಲೋಚನೆಗಳು ಇರೋ ಇಂಥ ದೇಶಾಭಿಮಾನಿ ಹತ್ರ ನಾವು ಫೀಸ್ ತಗೋಬರ‍್ದು. ಆತ ಹೇಳ್ತಿರೋದೆಲ್ಲ
ಸತ್ಯ. ಇದು ಒಂದು ನರಪಿಳ್ಳೆಗೂ ಅರ್ಥವಾಗ್ತಿಲ್ಲ ಅನ್ನೋದೇ ನನ್ನ ದುಃಖ” ಎಂದು ಡಾಕ್ಟರ್ ಹಣೆ ಚೆಚ್ಚಿಕೊಳ್ಳುತ್ತಾ ಆಚೆಗೆ ನಡೆದರು.