ಅನುದಾನ ಕದನ: ದೆಹಲಿಯಲ್ಲಿ ಸಂಚಲನ
ನವದೆಹಲಿ: ರಾಜ್ಯಕ್ಕೆ ಆಗಿರುವ ಅನ್ಯಾಯ, ಅನುದಾನ ತಾರತಮ್ಯದ ವಿರುದ್ಧ ಸಿಡಿದೆದ್ದಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿ ಬುಧವಾರ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರಬಲ ಹೋರಾಟದ ಕಹಳೆ ಮೊಳಗಿಸಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಎಲ್ಲ ಸಚಿವರು, ಶಾಸಕರ, ಮೇಲ್ಮನೆ ಸದಸ್ಯರು ಹಾಗೂ ಮುಖಂಡರು ಪ್ರತಿಭಟನಾ ಹೋರಾಟ ನಡೆಸುವ ಮೂಲಕ ಪ್ರಧಾನಿ ಮೋದಿ ಸಕಾರದ ವಿರುದ್ಧ ನೇರ ಸಂಘರ್ಷಕ್ಕೆ ಇಳಿದಿದ್ದು ಅನುದಾನ ತಾರತಮ್ಯದ ಬಗ್ಗೆ ಕೇಂದಕ್ಕೆ ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾದರು.
ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಾಜ್ಯ ಸರ್ಕಾರವೊಂದು ರಾಷ್ಟçದ ರಾಜಧಾನಿ ದೆಹಲಿಯಲ್ಲೇ ಧ್ವನಿ ಎತ್ತಿದ್ದಕ್ಕೆ ಕರ್ನಾಟಕ ಸರ್ಕಾರ ಸಾಕ್ಷಿಯಾಯಿತು. ಬೆಳಗ್ಗೆ ೧೧ ಗಂಟೆಗೆ ಸಿಎಂ ಸಿದ್ದರಾಮಯ್ಯ ಸಾರಥ್ಯದಲ್ಲಿ ಜಂತರ್‌ಮಂತರ್‌ನಲ್ಲಿ ಸೇರಿದ ಸರ್ಕಾರದ ಎಲ್ಲ ಸಚಿವರು, ಶಾಸಕರು ಒಟ್ಟಾಗಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.
ಪ್ರತಿಭಟನೆ ಪೂರ್ಣ ಕನ್ನಡಮಯ: ಪ್ರತಿ ಭಟನೆಯ ವೇಳೆ ಕನ್ನಡ ಧ್ವಜ ಹಿಡಿದು ಪ್ರತಿಭಟಿಸಿ ಕನ್ನಡ ಅಸ್ಮಿತೆಗೆ ಧಕ್ಕೆಯಾಗಿದೆ ಎಂಬ ಸಂದೇಶವನ್ನು ದೆಹಲಿಯಲ್ಲಿ ಬಿಂಬಿಸುವಲ್ಲಿ ಯಶಸ್ವಿಯಾಯಿತು. 'ನನ್ನ ತೆರಿಗೆ ನನ್ನ ಹಕ್ಕು' ಘೋಷವಾಕ್ಯದ ಅಭಿಯಾನ ಚಲೋ ದಿಲ್ಲಿ ಪ್ರತಿಭಟನೆಯೊಂದಿಗೆ ಬೇಡಿಕೆ ಹಾಗೂ ಅನ್ಯಾಯವನ್ನು ಸಾಕ್ಷೀಕರಿಸಿತು.
ಕೇಂದ್ರದ ವಿರುದ್ಧ ಡಿಸಿಎಂ ವಾಗ್ದಾಳಿ: ಬಿಜೆಪಿಯ ೨೬ ಸಂಸದರು ಒಂದು ದಿನ ಕೂಡ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯದ ಹಿತ ಕಾಪಾಡಲಿಲ್ಲ. ಬರಪೀಡಿತ ಪ್ರದೇಶಗಳಲ್ಲಿ ನರೇಗಾ ಯೋಜನೆಯ ೧೦೦ ಮಾನವ ದಿನದ ಕೂಲಿಯನ್ನು ೧೫೦ಕ್ಕೆ ಹೆಚ್ಚಳ ಮಾಡಲಾಗಲಿಲ್ಲ. ಕಳಸಾ ಬಂಡೂರಿ ವಿಚಾರದಲ್ಲಿಟೆಂಡರ್ ಕರೆದರೂ ಯೋಜನೆಗೆ ಅನುಮತಿ ನೀಡಿಲ್ಲ ಯಾಕೆ? ನಮ್ಮ ಧ್ವನಿ ಕೇಂದ್ರದ ಕಿವಿಗೆ ಬೀಳಲಿ ಎಂದು ದೆಹಲಿಗೆ ಬಂದು ಹೋರಾಟ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.