ಅನುಭವ ಮಂಟಪ ನಕಲು: ಕಲಾಕೃತಿ ತೆರವುಗೊಳಿಸಲು ಆಗ್ರಹ
ಕಲಬುರಗಿ : ನಾಡಿನ ಖ್ಯಾತ ಚಿತ್ರಕಲಾವಿದ ಡಾ.ಜೆ.ಎಸ್.ಖಂಡೇರಾವ್ ಅವರು ರಚಿಸಿದ್ದ ಅನುಭವ ಮಂಟಪ ಕಲಾಕೃತಿಯನ್ನು ಕೆಲವು ಕಲಾವಿದರ ನಕಲು ಮಾಡಿ ಅದನ್ನು ಬೆಳಗಾವಿ ಸುವರ್ಣ ಸೌಧದಲ್ಲಿ ಅನಾವರಣಗೊಂಡಿಸಿದ್ದು, ಕೂಡಲೇ ಸರ್ಕಾರ ಅದನ್ನು ತೆರವುಗೊಳಿಸಬೇಕೆಂದು ಖಂಡೇರಾವ್ ಅಭಿಮಾನಿಗಳು ಮತ್ತು ಅವರ ಪುತ್ರ ಒತ್ತಾಯಿಸಿದ್ದಾರೆ.
ಕಲಾವಿದ ಬಿ.ಎಲ್.ಶಂಕರ ಅವರ ಮಾರ್ಗದರ್ಶನದಲ್ಲಿ ಸತೀಶರಾವ್, ಶ್ರೀಕಾಂತ ಹೆಗಡೆ, ಅಶೋಕ ವೈ, ರೂಪ ಎಂ.ಆರ್, ವೀರಣ್ಣ ಬಬಲಿ, ಮಹೇಶ ಎಂಬುವರು ಸೇರಿ ಖಂಡೇರಾವ್ ಅವರು ರಚಿಸಿದ ಅನುಭವ ಮಂಟಪವನ್ನು ನಕಲು (ಕಳ್ಳತನ) ಮಾಡಿ ಸುವರ್ಣ ಸೌಧದಲ್ಲಿ ಅಳವಡಿಸುವ ಮೂಲಕ ನಾಡಿನ ಹಿರಿಯ ಕಲಾವಿದರಿಗೆ ಅವಮಾನಗೊಳಿಸಿದ್ದಾರೆ ಎಂದು ಖಂಡೇರಾವ್ ಅವರ ಸುಪುತ್ರ ಬಸವರಾಜ ಖಂಡೇರಾವ್ ಮತ್ತು ಕಲಾವಿದ ಮೋಹನ ಹೆಚ್.ಸೀತನೂರ ಇತರರು ಬುಧವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಲವಾಗಿ ಆರೋಪಿಸಿದರು.
ಈ ಕಲಾವಿದರು ಖಂಡೇರಾವ್ ಅವರು ಜೀವಂತವಿದ್ದರೂ ಅವರ ಅನುಮತಿ ಪಡೆಯದೆ ಕಲಾಕೃತಿ ಕಳ್ಳತನ ಮಾಡಿದ್ದು ಘೋರ ಅಪರಾಧವಾಗಿದ್ದು, ಕೂಡಲೇ ಸರ್ಕಾರ ಅಳವಡಿಸಿರುವ ಕಲಾಕೃತಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಅವರು, ಕೃತಿ ಚೌರ್ಯ ಮಾಡಿದ ಕಲಾವಿದರ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ಧವಾಗಿರುವುದಾಗಿ ಎಚ್ಚರಿಸಿದರು.
ಅನುಭವ ಮಂಟಪವನ್ನು ನಾಡೋಜ ಖಂಡೇರಾವ್ ಅವರ ಜೀವಮಾನದ ಸಾಧನೆಯ ಕಲಾಕೃತಿಯಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ಶ್ರಮಿಸಿ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿ ಅದನ್ನು ರಚಿಸಿದ್ದರು. ಈ ಕಲಾಕೃತಿಯನ್ನು ಸಂಸತ್ ಅವರಣದಲ್ಲಿ ಅಳವಡಿಸಲು ೨೦೧೯ರಲ್ಲೇ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅನುಮತಿ ನೀಡಿದ್ದರು. ಆದರೆ, ಹೊಸ ಸಂಸತ್ ಕಟ್ಟಡ ನಿರ್ಮಾಣ ಬಳಿಕ ಈ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಹೀಗಾಗಿ ಇದನ್ನು ಸುವರ್ಣ ವಿಧಾನಸೌಧದಲ್ಲಾದರೂ ಅಳವಡಿಸಬೇಕು ಎಂದು ಈ ಹಿಂದೆಯೇ ಸರ್ಕಾರಕ್ಕೂ ಮನವಿ ಮಾಡಲಾಗಿತ್ತು. ಆದರೆ, ಈಗ ಕೆಲವು ಕಲಾವಿದರು ಕೃತಿ ಚೌರ್ಯ ಮಾಡಿ ಸುವರ್ಣ ಸೌಧದಲ್ಲಿ ಅಳವಡಿಸುವ ಮೂಲಕ ನಾಡಿನ ಹಿರಿಯ ಕಲಾವಿದನ ಖ್ಯಾತಿಗೆ ಚ್ಯುತಿ ತಂದಿದ್ದಾರೆ ಎಂದು ಆರೋಪಿಸಿದರು.
ಕಳೆದ ವರ್ಷ ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸ್ಮರಣಿಕೆಯಾಗಿ ನೀಡಲಾಗಿತ್ತು. ಇನ್ನು ೧೯೭೭ರಲ್ಲಿ ಅವರು ರಚಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಕೃಲಾಕೃತಿ ಯುನೆಸ್ಕೋ ಪ್ರಶಂಸೆಗೂ ಪಾತ್ರವಾಗಿತ್ತು ಎಂದು ಹೇಳಿದರು.
ಖಂಡೇರಾವ್ ಅವರು ರಚಿಸಿದ ಅನುಭವ ಮಂಟಪ ಕಲಾಕೃತಿಯನ್ನು ಹಲವಾರು ಕಡೆ ಕಾಣಿಕೆಯಾಗಿ ನೀಡಲಾಗಿದ್ದು, ನೀಡಿರುವ ಕಾಣಿಕೆಯೊಂದರ ಕಲಾಕೃತಿಯೇ ಸುವರ್ಣ ಸೌಧದಲ್ಲಿ ಅನಾವರಣಗೊಳಿಸಬಹುದೆಂಬ ಸಂಶಯವಿದ್ದು, ಕೂಡಲೇ ಅಲ್ಲಿರುವ ಕಲಾಕೃತಿ ತೆರವುಗೊಳಿಸಬೇಕು.
- ಬಸವರಾಜ ಖಂಡೇರಾವ್,
ಜೆ.ಎಸ್.ಖಂಡೇರಾವ್‌ರ ಪುತ್ರ, ಕಲಬುರಗಿ