ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅನ್ನಕ್ಕಾಗಿ ಬಂದವರು ಮೆಕ್ಕೆಜೋಳದಲ್ಲೇ ಸಮಾಧಿ

11:51 AM Dec 06, 2023 IST | Samyukta Karnataka

ವಿಜಯಪುರ ಜಿಲ್ಲೆ ಮೆಕ್ಕಜೋಳದ ಕಣಜ. ಇದರ ಸಂಸ್ಕರಣ ಘಟಕಗಳು ಹಗಲು ಇರುಳು ಕೆಲಸ ಮಾಡುತ್ತವೆ. ಇಲ್ಲಿ ಕೆಲಸ ಮಾಡುವವರ ರಕ್ಷಣೆಯ ಬಗ್ಗೆ ಕಾರ್ಮಿಕ ಇಲಾಖೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕಾರ್ಮಿಕರ ಕಲ್ಯಾಣ ಯೋಜನೆ ಪುಸ್ತಕದಲ್ಲೇ ಉಳಿದಿದೆ.

ವಿಜಯಪುರ ಎಲ್ಲಿ ಬಿಹಾರದ ಸಮಷ್ಟಿಪುರ ಎಲ್ಲಿ? ಅನ್ನಕ್ಕಾಗಿ ದುಡಿಯಲು ಬಂದವರ ಮೇಲೆ ಮೆಕ್ಕೆಜೋಳದ ರಾಶಿ ಕುಸಿದು ೭ ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೆಸಿಬಿಯಿಂದ ಶವಗಳನ್ನು ಹೊರತೆಗೆಯಬೇಕಾಗಿ ಬಂದಿದೆ. ಇಲ್ಲಿ ೧೬ ಘಟಕಗಳು ಕೆಲಸ ಮಾಡುತ್ತಿವೆ. ಒಟ್ಟು ೧೬೦ ಜನ ಕಾರ್ಮಿಕರಿದ್ದಾರೆ. ಬಹುತೇಕ ಬಿಹಾರಿಗಳು. ಹಗಲು ರಾತ್ರಿ ದುಡಿಯುತ್ತಾರೆ. ಸ್ಥಳೀಯ ಕೂಲಿಕಾರರಿಗೆ ಹೆಚ್ಚಿನ ಕೂಲಿ ನೀಡಬೇಕು. ಅಲ್ಲದೆ ಸಂಜೆ ೫ ಗಂಟೆಯಾಗುತ್ತಿದ್ದಂತೆ ಮನೆಗೆ ಧಾವಿಸುತ್ತಾರೆ. ಬಿಹಾರಿಗಳು ವಲಸೆ ಬಂದಿರುವುದರಿಂದ ಎಲ್ಲೂ ಹೋಗೋಲ್ಲ. ಸುತ್ತಮುತ್ತ ಜಿಲ್ಲೆಗಳಲ್ಲಿ ಬರುವ ಮೆಕ್ಕೆಜೋಳವನ್ನು ಇಲ್ಲಿಯ ವರ್ತಕರು ಖರೀದಿಸಿ ಸಂಸ್ಕರಣ ಮಾಡಿ ರೈಲು ಮೂಲಕ ಉತ್ತರ ಭಾರತಕ್ಕೆ ಸಾಗಿಸುತ್ತಾರೆ.
ಉಗಾದಿಯವರೆಗೆ ಈ ಸಂಸ್ಕರಣ ಘಟಕ ನಿರಂತರ ಕೆಲಸ ಮಾಡುತ್ತದೆ. ಕುಸಿದು ಬಿದ್ದ ಘಟಕ ದುರಸ್ತಿಯಲ್ಲಿತ್ತು. ಕಾರ್ಮಿಕರು ದೂರು ನೀಡಿದ್ದರೂ ಮಾಲೀಕರು ಕಿವಿಗೊಟ್ಟಿರಲಿಲ್ಲ. ಒಮ್ಮೆ ಕೈಗಾರಿಕೆ ಆರಂಭವಾಯಿತು ಎಂದರೆ ಕಾರ್ಮಿಕ ಇಲಾಖೆಯಾಗಲಿ, ಕೈಗಾರಿಕೆ ಇಲಾಖೆಯಾಗಲಿ ಸ್ಥಳ ಪರಿಶೀಲನೆ ನಡೆಸಿ ಕಾರ್ಮಿಕರ ಕಷ್ಟ ಸುಖಗಳನ್ನು ವಿಚಾರಿಸುವುದಿಲ್ಲ. ಅದರಲ್ಲೂ ಬೇರೆ ರಾಜ್ಯಗಳಿಂದ ಬರುವ ಕಾರ್ಮಿಕರಾದರೆ ಮಾಲೀಕರಿಗೆ ಸಮಸ್ಯೆ ಇರುವುದಿಲ್ಲ. ಅವರು ಕಡಿಮೆ ಕೂಲಿಗೆ ಬಂದು ಹೆಚ್ಚು ಕಾಲ ದುಡಿಯುತ್ತಾರೆ.
ಇದು ಎಲ್ಲ ಕಡೆ ನಡೆಯುತ್ತಿರುವ ದಂಧೆ. ವಲಸೆ ಕಾರ್ಮಿಕರಿಗೆ ಯಾವ ರೀತಿಯಲ್ಲೂ ರಕ್ಷಣೆ ಇರುವುದಿಲ್ಲ. ಇಂಥ ಕಾರ್ಮಿಕರನ್ನು ಹೊರ ರಾಜ್ಯಗಳಿಂದ ಕರೆದುಕೊಂಡು ಬರುವುದೇ ತಪ್ಪು.
ವಲಸೆ ಬಂದ ಕಾರ್ಮಿಕರಿಗೆ ಸೂಕ್ತ ಸವಲತ್ತು ಕಲ್ಪಿಸಿಕೊಡುವುದು ಮಾಲೀಕರ ಕರ್ತವ್ಯ. ಅದನ್ನು ಪರಿಶೀಲಿಸುವುದು ಕಾರ್ಮಿಕ ಇಲಾಖೆ ಕೆಲಸ. ಈಗ ಯಾವುದೂ ನಡೆಯುತ್ತಿಲ್ಲ. ಮಾಲೀಕರಿಗೆ ಕಡಿಮೆ ವೆಚ್ಚದಲ್ಲಿ ಕೆಲಸವಾದರೆ ಸಾಕು. ಉತ್ತರ ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ಮೆಕ್ಕೆಜೋಳ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ. ಅದನ್ನು ಕಡಿಮೆ ದರದಲ್ಲಿ ಖರೀದಿ ಮಾಡಿ ಅವುಗಳನ್ನು ವರ್ಗೀಕರಿಸಿ ಚೀಲಗಳಿಗೆ ತುಂಬಿಸಿ ರೈಲು ಮಾರ್ಗದಲ್ಲಿ ಸಾಗಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.
ಹಿಂದುಳಿದ ಪ್ರದೇಶದಲ್ಲಿ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿದರೆ ಅಲ್ಲಿಯ ಆರ್ಥಿಕ ಅಭಿವೃದ್ಧಿಯಾಗುತ್ತದೆ ಎಂದು ಸರ್ಕಾರ ಹಲವು ರಿಯಾಯಿತಿಗಳನ್ನು ನೀಡುತ್ತದೆ. ಯಾರು ಎಲ್ಲಿ ಬೇಕಾದರೂ ಉದ್ಯಮ ಆರಂಭಿಸಬಹುದು ಹಾಗೂ ದುಡಿಯಬಹುದು ಎಂದು ಮೂಲಭೂತ ಹಕ್ಕು ಹೇಳುತ್ತದೆ ಎಂಬುದು ನಿಜವಾದರೂ ಸ್ಥಳೀಯರ ಪಾಲ್ಗೊಳ್ಳುವಿಕೆ ಇದ್ದರೆ ಒಳಿತು. ವಿಜಯಪುರದಲ್ಲಿ ಈಗ ರಸ್ತೆ ಮತ್ತು ರೈಲು ಸಂಪರ್ಕ ಉತ್ತಮಗೊಂಡಿದೆ.
ಕಡಿಮೆ ಬೆಲೆಗೆ ಖರೀದಿ ಮಾಡುವ ಮಧ್ಯವರ್ತಿಗಳು ಸಂಸ್ಕರಣ ಘಟಕ ಸ್ಥಾಪಿಸಿ ಅದರ ಮೂಲಕ ಸಿದ್ಧಪಡಿಸಿದ ಆಹಾರ ಧಾನ್ಯಗಳನ್ನು ಸಾಗಿಸುತ್ತಿದ್ದಾರೆ. ಇದರಿಂದ ರೈತರಿಗೆ ಹಾಗೂ ಕಾರ್ಮಿಕರಿಗೆ ಯಾವ ಲಾಭವೂ ಇಲ್ಲ. ಮಧ್ಯವರ್ತಿಗಳಿಗೆ ಒಳ್ಳೆಯ ಆದಾಯ. ಇದಕ್ಕೆ ಕೊನೆಹಾಡಬೇಕು. ರೈತರು ಮತ್ತು ಕಾರ್ಮಿಕರ ಶೋಷಣೆ ನಿಲ್ಲಬೇಕು. ರೈತರಿಗೆ ಉತ್ತಮ ಬೆಲೆ ಸಿಗಬೇಕು. ಕಾರ್ಮಿಕರಿಗೆ ಉತ್ತಮ ಕೂಲಿಸಿಗಬೇಕು.ಈಗ ಎರಡೂಇಲ್ಲ. ಆಹಾರ ಧಾನ್ಯಗಳ ಸಂಸ್ಕರಣ ರೈತರ ಕೈಯಲ್ಲೇ ಉಳಿದರೆ ಅವರ ಆದಾಯದ ಮೂಲ ಅಧಿಕಗೊಳ್ಳುತ್ತದೆ. ಹಿಂದೆ ಸಹಕಾರಿ ರಂಗದಲ್ಲಿ ಹೆಚ್ಚು ಪ್ರಯೋಗಗಳು ನಡೆದಿದ್ದವು.
ಹೊಸ ಆರ್ಥಿಕನೀತಿ ಬಂದ ಮೇಲೆ ಸಹಕಾರಿ ಕ್ಷೇತ್ರ ಹಿಂದಕ್ಕೆ ಸರಿಯಿತು. ಸರ್ಕಾರಿ- ಖಾಸಗಿ ರಂಗದ ನಡುವೆ ಸಹಕಾರಿ ರಂಗ ಇತ್ತು. ಈಗ ಇದು ಕಡಿಮೆಯಾಗಿದೆ. ಜನ ಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಬೆಲೆ ಮಾತ್ರ ಏರಿಕೆಕಂಡಿದೆ. ವಿಜಯಪುರದ ಕಾರ್ಮಿಕರ ದಾರುಣ ಸಾವು ಇತಿಹಾಸದ ಗರ್ಭದಲ್ಲಿ ಸಮಾಧಿಯಾಗಿ ಹೋಗುತ್ತದೆ.

Next Article