For the best experience, open
https://m.samyuktakarnataka.in
on your mobile browser.

ಅನ್ನದಾತ ರೈತನ ನೆರವಿಗೆ ಈಗಲಾದರೂ ಧಾವಿಸಿ

10:42 AM May 28, 2024 IST | Samyukta Karnataka
ಅನ್ನದಾತ ರೈತನ ನೆರವಿಗೆ ಈಗಲಾದರೂ ಧಾವಿಸಿ

ಉತ್ತಮ ಮಳೆಯಾಗುತ್ತಿರುವ ಈ ಸಂದರ್ಭದಲ್ಲಾದರೂ ರೈತರ ನೆರವಿಗೆ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಬಾರದಿದ್ದಲ್ಲಿ ಈ ಸರ್ಕಾರಕ್ಕೆ "ಕಣ್ಣು, ಕಿವಿ, ಹೃದಯ ಮೂರೂ ಇಲ್ಲವೆಂದು ಜನತೆ ತೀರ್ಮಾನಿಸುತ್ತಾರೆ

ಬೆಂಗಳೂರು: ಅನ್ನದಾತ ರೈತನ ನೆರವಿಗೆ ಈಗಲಾದರೂ ಧಾವಿಸಿ ಬಂದು ತಾಂತ್ರಿಕ ತೊಡಕಿನ ಹೆಸರಿನಲ್ಲಿ ಹಣ ಕೈ ಸೇರದೇ ಹತಾಶೆಯ ಸ್ಥಿತಿಯಲ್ಲಿರುವ ರೈತನಿಗೆ ನೆರವಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಕಷ್ಟಿತ ರೈತರ ಗೋಳನ್ನು ಹೇಳುವವರು, ಕೇಳುವವರು ಯಾರೂ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಕಳೆದ ಬಾರಿಯ ಮುಂಗಾರು ಹಾಗೂ ಹಿಂಗಾರು ವಿಫಲತೆಯಿಂದ ನೊಂದಿರುವ ರೈತರು ಸದ್ಯ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೈಯಲ್ಲಿ ಕಾಸಿಲ್ಲದೇ ಬಿತ್ತನೆ ಕಾರ್ಯ ಕೈಗೊಳ್ಳಲು ಆಗದ ಪರಿಸ್ಥಿತಿ ಉದ್ಭವಿಸಿದೆ.

ಇಂತಹ ಕಷ್ಟದ ಸಮಯದಲ್ಲಾದರೂ ಸರ್ಕಾರ ನಿಗಧಿಪಡಿಸಿರುವ ಬರ ಪರಿಹಾರವೂ ರೈತನ ಖಾತೆಗೆ ಜಮೆಯಾಗುತ್ತಿಲ್ಲ, ಬೆಳೆ ವಿಮೆ ನಗದೀಕರಣದ ಪರಿಸ್ಥಿತಿಯೂ ಇದೇ ಆಗಿದೆ.

ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷದ ಅವಧಿಯಿಂದಲೂ ರೈತರು ಒಂದಲ್ಲ ಒಂದು ಸಂಕಷ್ಟಕ್ಕೆ ಸಿಲುಕುತ್ತಿದ್ದರೂ, ಕೇವಲ ಮತ ಬ್ಯಾಂಕ್ ರಾಜಕಾರಣವನ್ನು ಹೊರತುಪಡಿಸಿ ಈ ಸರ್ಕಾರ ಯಾವುದೇ ಜನಪರ ಕಾರ್ಯಗಳಿಗೂ ಕಿಂಚಿತ್ತು ಗಮನ ಹರಿಸಲಿಲ್ಲ. ಅನ್ನದಾತ ರೈತನ ನೆರವಿಗೆ ಈಗಲಾದರೂ ಧಾವಿಸಿ ಬಂದು ತಾಂತ್ರಿಕ ತೊಡಕಿನ ಹೆಸರಿನಲ್ಲಿ ಹಣ ಕೈ ಸೇರದೇ ಹತಾಶೆಯ ಸ್ಥಿತಿಯಲ್ಲಿರುವ ರೈತನಿಗೆ ನೆರವಾಗಲಿ.

ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ನೀಡಿರುವ ನಿರ್ದೇಶನಕ್ಕೂ ಕಿಮ್ಮತ್ತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ನೋಡಿದರೆ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲಾಗದ ಅಸಮರ್ಥ ಆಡಳಿತದ ಅವ್ಯವಸ್ಥೆಯನ್ನು ಎತ್ತಿ ತೋರಿಸುತ್ತಿದೆ.

ಉತ್ತಮ ಮಳೆಯಾಗುತ್ತಿರುವ ಈ ಸಂದರ್ಭದಲ್ಲಾದರೂ ರೈತರ ನೆರವಿಗೆ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಬಾರದಿದ್ದಲ್ಲಿ ಈ ಸರ್ಕಾರಕ್ಕೆ "ಕಣ್ಣು, ಕಿವಿ, ಹೃದಯ ಮೂರೂ ಇಲ್ಲವೆಂದು ಜನತೆ ತೀರ್ಮಾನಿಸುತ್ತಾರೆ ಎಂದಿದ್ದಾರೆ.