ಅನ್ನಪೂರ್ಣೇಶ್ವರಿ ದೇವಿಯ ದರ್ಶನಕ್ಕೆ ಡ್ರೆಸ್‌ಕೋಡ್
ಚಿಕ್ಕಮಗಳೂರು: ಹೊರನಾಡಿನ ಅನ್ನಪೂರ್ಣೇಶ್ವರಿ ದೇವಿಯ ದರ್ಶನಕ್ಕೆ ಬೇಕಾಬಿಟ್ಟಿ ಬಟ್ಟೆ ಧರಿಸಿ ಹೋಗುವಂತಿಲ್ಲ. ದೇವಸ್ಥಾನದ ಆಡಳಿತ ಮಂಡಳಿ ದೇಗುಲ ಪ್ರವೇಶಕ್ಕೆ ಡ್ರೆಸ್‌ಕೋಡ್ ಜಾರಿಗೆ ತಂದಿದೆ. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದವರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡುವುದಾಗಿ ಹೇಳಿದೆ.
ಆಧುನಿಕತೆ ಹೆಚ್ಚುತ್ತಿದ್ದಂತೆ ಜನರ ಉಡುಗೆ-ತೊಡುಗೆಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಇಂದು ಸಾಂಪ್ರದಾಯಿಕ ಡ್ರೆಸ್ ಧರಿಸುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಯಾರನ್ನು ನೋಡಿದರು ಶಾರ್ಟ್ಸ್, ಸ್ಕರ್ಟ್ಸ್, ಟೀಶರ್ಟ್ ಈ ರೀತಿಯ ಮಾರ್ಡನ್ ಬಟ್ಟೆಗಳನ್ನು ಧರಿಸಲು ಬಯಸುತ್ತಾರೆ. ಕೆಲವರು ಇದೇ ರೀತಿಯ ಬಟ್ಟೆಗಳನ್ನು ಧರಿಸಿ ದೇವಸ್ಥಾನಗಳಿಗೂ ಹೋಗುತ್ತಾರೆ. ಇದು ಕೆಲವೊಮ್ಮೆ ದೇವಸ್ಥಾನಗಳಿಗೆ ಬರುವ ಇತರ ಭಕ್ತರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ ಎನ್ನಲಾಗಿದೆ.
ದೇವಸ್ಥಾನಗಳಲ್ಲಿ ಮಾರ್ಡನ್ ಉಡುಗೆಗಳಿಗೆ ಬ್ರೇಕ್ ಹಾಕಲು ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳು ಸಮವಸ್ತ್ರವನ್ನು ಕಡ್ಡಾಯ ಮಾಡಿವೆ. ಭಕ್ತರು ದೇವಸ್ಥಾನದ ನಿಯಮಕ್ಕೆ ಅನುಸಾರವಾದ ಉಡುಗೆ ತೊಟ್ಟಿದ್ದರಷ್ಟೇ ಅವರನ್ನು ದೇವರ ದರ್ಶನಕ್ಕೆ ಒಳಗೆ ಬಿಡಲಾಗುತ್ತದೆ. ಇಲ್ಲದಿದ್ದರೆ ಅವರು ದೇವಾಲಯದ ಒಳಗೆ ಹೋಗುವುದು ಸಾಧ್ಯವಾಗುವುದಿಲ್ಲ.
ಹೊರನಾಡು ದೇವಾಲಯದಲ್ಲಿ ಈಗ ಡ್ರೆಸ್ ಕೋಡ್ ಕಡ್ಡಾಯ ಮಾಡಲಾಗಿದೆ. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಬರುವವರಿಗೆ ಮಾತ್ರ ದೇವಸ್ಥಾನದ ಒಳಗೆ ಹೋಗಿ ದೇವರ ದರ್ಶನ ಮಾಡಲು ಅವಕಾಶ ನೀಡುವುದಾಗಿ ದೇವಸ್ಥಾನ ಸಮಿತಿ ಪ್ರಕಟಿಸಿದೆ.
ಗಂಡು ಮಕ್ಕಳು ಶಲ್ಯ, ಪ್ಯಾಂಟ್, ಪಂಚೆ ಹಾಗೂ ಹೆಣ್ಣುಮಕ್ಕಳು ಸೀರೆ ಹಾಗೂ ಚೂಡಿದಾರ್‌ಗಳಂತಹ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಬಂದರೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶಿಸಲು ಅವಕಾಶವಿರುತ್ತದೆ. ಈ ಬಗ್ಗೆ ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಜಿ. ಭೀಮೇಶ್ವರ ಜೋಷಿಯವರು ಪ್ರಕಟಣೆ ಹೊರಡಿಸಿದ್ದಾರೆ.