ಒಂದಾಗಿ ಬದುಕಲು ಊರು ಬಿಟ್ಟ ವಿವಾಹಿತ ಪ್ರೇಮಿಗಳು
ಕೀರ್ತಿಶೇಖರ್, ಕಾಸರಗೋಡು
ಬೆಳಗಾವಿ: ಅವರಿಬ್ಬರದ್ದು ಒಂದೇ ಜಾತಿ. ಅವಳು ಇಬ್ಬರು ಮಕ್ಕಳ ತಾಯಿ… ಆತನಿಗೂ ಒಬ್ಬ ಮಗನಿದ್ದಾನೆ. ತಮ್ಮ ಪತಿ/ಪತ್ನಿ ಮಕ್ಕಳ ಜತೆ ಚೆಂದದ ಸಂಸಾರ ಕಟ್ಟಿಕೊಳ್ಳಬೇಕಾಗಿದ್ದ ಇಬ್ಬರೂ ಪರಸ್ಪರ ಪ್ರೀತಿಸಿ ಅನೈತಿಕ ಸಂಬಂಧ ಹೊಂದಿದ್ದೇ ಅನಾಹುತಕ್ಕೆ ಕಾರಣವಾಗಿದೆ. ಈ ಇಬ್ಬರೂ ಪ್ರೇಮಿಗಳು ತಮ್ಮ ಕುಟುಂಬದವರನ್ನು ನಡು ನೀರಲ್ಲಿ ಕೈ ಬಿಟ್ಟು ಮಂಗಳವಾರ ರಾತ್ರೋರಾತ್ರಿ ಊರು ಬಿಟ್ಟಿದ್ದಾರೆ.
ಹೌದು, ಬೆಳಗಾವಿಯ ಯಮಕನಮರಡಿ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೊಂದು ಘಟನೆ ನಿನ್ನೆ ತಡರಾತ್ರಿ ನಡೆದಿದ್ದು ಹುಕ್ಕೇರಿ ತಾಲ್ಲೂಕಿನ ಜಿನ್ರಾಳದ ಈ ವಿವಾಹಿತ ಪ್ರೇಮಿಗಳು ತಮ್ಮ ಸಂಸಾರ ತೊರೆದು ಒಂದಾಗಿ ಬದುಕಲು ಊರು ಬಿಟ್ಟಿದ್ದಾರೆ.
ಅವಳು ಮಂಜುಳಾ(ಹೆಸರು ಬದಲಾಯಿಸಲಾಗಿದೆ) ಮತ್ತು ಅವನು ಲಗಮಣ್ಣ ವಾಲಿಕಾರ. ತನ್ನ ಪತ್ನಿ ಪರಪುರುಷನೊಂದಿಗೆ ಪರಾರಿಯಾಗಿದ್ದನ್ನು ಸಹಿಸದ ಪತಿ ಹಾಗೂ ಆತನ ಕುಟುಂಬದವರು ಆತನ ಮನೆಯ ಮೇಲೆ ದಾಳಿ ನಡೆಸಿ, ಮನೆಯಲ್ಲಿದ್ದ ಸಾಮಗ್ರಿಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಮನೆ ಧ್ವಂಸ ಮಾಡಿದ್ದಾರೆ. ಬುಧವಾರ ಹಾಡಹಗಲೇ ಜಿನ್ರಾಳದಲ್ಲಿ ಹೈಡ್ರಾಮಾ ನಡೆದಿದೆ.
ದಾಳಿಕೋರರು ಬರುತ್ತಿರುವುದನ್ನು ಕಂಡು ಸಮಯ ಪ್ರಜ್ಷೆಯಿಂದ ಆತನ ಕುಟುಂಬ ಅಂದರೆ ವಯಸ್ಸಾದ ತಾಯಿ, ಅಜ್ಜಿ, ಪತ್ನಿ ಹಾಗೂ ಪುತ್ರ ನೆರೆಮನೆಯೊಂದರಲ್ಲಿ ಆಶ್ರಯ ಪಡೆದುಕೊಂಡಿದ್ದರಿಂದ ಆಕ್ರೋಶಕ್ಕೆ ತುತ್ತಾಗಲಿಲ್ಲ. ಆದರೆ ಕಣ್ಣಮುಂದೆಯೇ ಮನೆ ಧ್ವಂಸವಾಗುತ್ತಿರುವುದನ್ನು ಕಂಡರೂ ಅಸಹಾಯಕರಾಗಿ ನಿಲ್ಲುವ ಪರಿಸ್ಥಿತಿಗೆ ಬಂದಿದ್ದಾರೆ.
ಕೈಯಲ್ಲಿ ಕೊಡಲಿ, ಮಚ್ಚು, ಕಟ್ಟಿಗೆ ದೊಣ್ಣೆ ಹಿಡಿದು ಬಂದ ಸುಮಾರು ೩೦ ಮಂದಿ ತಂಡವನ್ನು ಎದುರಿಸಲಾಗದೆ ಕಣ್ಣೀರಿಡುತ್ತಾ ನಿಂತಿದ್ದ ಲಗಮಣ್ಣನ ಮನೆಯವರು ಇದೀಗ ಹುಕ್ಕೇರಿ ಠಾಣೆಗೆ ದೂರು ನೀಡಿದ್ದಾರೆಂದು ಗೊತ್ತಾಗಿದೆ.
ಕುಟುಂಬದವರಿಗೆ ಸಂಚಕಾರ…
ಎರಡು ತಿಂಗಳ ಹಿಂದೆಯಷ್ಟೇ ಕಾಕತಿ ಠಾಣಾ ವ್ಯಾಪ್ತಿಯ ಹೊಸ ವಂಟಮೂರಿಯಲ್ಲಿ ಪ್ರೇಮಿಗಳು ಪರಾರಿಯಾದಾಗ ಅವನ ಮೇಲಿನ ಸಿಟ್ಟಿನಲ್ಲಿ ಆತನ ಮನೆಗೆ ನುಗ್ಗಿ ಅವನ ತಾಯಿಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದನ್ನು ಯಾರೂ ಮರೆತಿಲ್ಲ. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಯಮಕನಮರಡಿಯಲ್ಲಿ ನಡೆದಿದೆ.
ಪ್ರೀತಿ-ಪ್ರೇಮ ಎಂದು ಊರು ಬಿಟ್ಟು ಪರಾರಿಯಾಗುವವರು ತಮ್ಮ ಬೆನ್ನ ಹಿಂದಿರುವ ಸಂಸಾರ ಕುಟುಂಬದ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದೆ ಇರುವುದು ಮಾತ್ರ ವಿಪರ್ಯಾಸ. ಜಿನ್ರಾಳದ ಪ್ರಕರಣದಲ್ಲಿ ಅವರೇನೂ ಹದಿಹರೆಯದವರಲ್ಲ; ಅವಿವಾಹಿತರಲ್ಲ, ಇಬ್ಬರೂ ವಿವಾಹಿತರಾಗಿದ್ದು ಜವಾಬ್ದಾರಿಯುಳ್ಳವರು.
ಈ ವಿವಾಹಿತ ಮಹಿಳೆಗೆ ಪತಿ ಇಬ್ಬರು ಮಕ್ಕಳಿದ್ದಾರೆ. ಇನ್ನು ಪ್ರಿಯಕರನಿಗೂ ಪತ್ನಿ ಒಬ್ಬ ಪುತ್ರನಿದ್ದಾನೆ. ಮನೆಯಲ್ಲಿ ವಯಸ್ಸಾದ ಅಜ್ಜಿ ಹಾಗೂ ತಾಯಿಯೂ ಇದ್ದಾಳೆ. ತಾವು ಈ ರೀತಿ ಮಾಡಿದರೆ ಕುಟುಂಬದ ಮೇಲೆ ಯಾವ ರೀತಿಯ ಪರಿಣಾಮ ಆಗಬಹುದೆಂಬುದನ್ನೂ ಯೋಚನೆ ಮಾಡದೆ ಈ ನಿರ್ಧಾರ ತೆಗೆದುಕೊಂಡು ಕುಟುಂಬಕ್ಕೆ ಸಂಚಕಾರ ತಂದಿಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಿಂದಲೇ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮನೋವೈದ್ಯರು ಅಭಿಪ್ರಾಯ ಪಡುತ್ತಾರೆ. ಸದ್ಯ ಠಾಣೆಗೆ ದೂರು ನೀಡಿದ್ದು, ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಾಗಿದೆ.