ಕೊಲೆ ನಂತರ ಕ್ರಿಮಿನಲ್ ಐಡಿಯಾ ಕೊಟ್ಟಿದ್ದೇ ಪೊಲೀಸ್ ಅಧಿಕಾರಿ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ನಂತರ ದರ್ಶನ್ ಹಾಗೂ ಪವಿತ್ರಗೌಡರನ್ನು ಪಾರು ಮಾಡಲು ದರ್ಶನ್ ಪೋಷಿತ ತಂಡ ಇನ್ಸ್ಪೆಕ್ಟರ್ ದರ್ಜೆಯ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದ್ದರು ಹಾಗೂ ಆ ಅಧಿಕಾರಿಯೇ ದರ್ಶನ್ ಗ್ಯಾಂಗಿಗೆ ಕ್ರಿಮಿನಲ್ ಐಡಿಯಾ ಕೊಟ್ಟಿದ್ದಾನೆ ಎಂಬ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.
ದರ್ಶನ್ ಹಾಗೂ ಪವಿತ್ರಗೌಡ ಅವರಿಗೆ ಪ್ರಕರಣದ ಸಂಬಂಧವೇ ಇಲ್ಲ. ಹಾಗೂ ಕೇವಲ ಹಣಕಾಸಿನ ವಿಚಾರವಾಗಿ ರೇಣುಕಾಸ್ವಾಮಿಯ ಕೊಲೆ ಮಾಡಲಾಗಿದೆ ಎಂಬ ಕಥೆಯನ್ನು ಹೆಣೆದು ಅದರಂತೆ ನಕಲಿ ಆರೋಪಿಗಳನ್ನು ಪೊಲೀಸರ ಮುಂದೆ ಹಾಜರುಪಡಿಸುವಂತೆ ಪೊಲೀಸ್ ಅಧಿಕಾರಿ ದರ್ಶನ್ ಗ್ಯಾಂಗಿಗೆ ಸಲಹೆ ನೀಡಿದ್ದರು ಎನ್ನಲಾಗಿದೆ. ಈ ಸಲಹೆ ಆಧರಿಸಿಯೇ ಆರೋಪಿಗಳು ಪೊಲೀಸರ ಎದುರು ಶರಣಾಗಿದ್ದರು. ಆದರೆ ವಿಚಾರಣೆ ವೇಳೆ ತನಿಖಾಧಿಕಾರಿಗಳು ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಬೇರೆ ಬೇರೆ ಉತ್ತರಗಳು ಬಂದಿದ್ದವು. ಇದನ್ನು ಬೆನ್ನಟ್ಟಿದ ಪೊಲೀಸರು ದೊಡ್ಡ ಕುಳಗಳು ಇದರಲ್ಲಿ ಭಾಗಿಯಾದ ವಾಸನೆ ಪತ್ತೆ ಮಾಡಿದರು. ಆಗ ಇಡೀ ಹಗರಣ ಹೊರಬಿದ್ದಿತ್ತು. ಆದರೆ ಕ್ರಿಮಿನಲ್ ಐಡಿಯಾ ಕೊಟ್ಟ ಅಧಿಕಾರಿ ಯಾರು ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ. ಈ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ ಇಲಾಖೆಯಲ್ಲಿ ಆಂತರಿಕ ತನಿಖೆ ಆರಂಭಿಸಿದ್ದು ಸಲಹೆ ಕೊಟ್ಟ ಅಧಿಕಾರಿ ಯಾರೆಂಬುದನ್ನು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ. ಈ ಅಧಿಕಾರಿ ಪ್ರಕರಣದಲ್ಲಿ ಎಷ್ಟರಮಟ್ಟಿಗೆ ಶಾಮೀಲಾಗಿದ್ದಾರೆ? ಈ ಅಧಿಕಾರಿಯನ್ನು ಬಂಧಿಸಬೇಕೇ? ಅಥವಾ ಕೇವಲ ಅಮಾನತುಪಡಿಸಬೇಕೇ ಎಂಬುದರ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಧಿಕಾರಿಯ ಪಾತ್ರ ಎಷ್ಟಿದೆ ಎಂಬುದರ ಮೇಲೆ ಗುರುವಾರ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.