For the best experience, open
https://m.samyuktakarnataka.in
on your mobile browser.

ಚಿಪ್ಪು ಹೆಕ್ಕಲು ಹೋದ ಯುವಕ ನಾಪತ್ತೆ

07:54 PM May 12, 2024 IST | Samyukta Karnataka
ಚಿಪ್ಪು ಹೆಕ್ಕಲು ಹೋದ ಯುವಕ ನಾಪತ್ತೆ

ಮುಲ್ಕಿ: ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ ಬಜಪೆಯ ಅದ್ಯಪಾಡಿಯಿಂದ ಬಂದ ಯುವಕರ ತಂಡ ಚಿಪ್ಪು ಹೆಕ್ಕಲು ಹೋಗಿ, ಓರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು ಶೋಧ ಕಾರ್ಯ ನಡೆಯುತ್ತಿದೆ.
ನಾಪತ್ತೆಯಾದ ಯುವಕನನ್ನು ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಶ್(24) ಎಂದು ಗುರುತಿಸಲಾಗಿದೆ.
ಬಜಪೆ ಸಮೀಪದ ಆದ್ಯಪಾಡಿಯ ಸುಮಾರು ಹತ್ತು ಮಂದಿಯ ಯುವಕರ ತಂಡ ಚಿಪ್ಪು ಮತ್ತು ಏಡಿ ಹಿಡಿಯಲು ಮುಲ್ಕಿಯ ಕೊಳಚಿ ಕಂಬಳ ಬೀಚ್ ಬಳಿಗೆ ಬಂದಿದ್ದು, ಶಾಂಭವಿ ನದಿಯಲ್ಲಿ ನೀರಿನ ಇಳಿತ ವಿದ್ದ ಕಾರಣ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಈ ಸಂದರ್ಭ ಸಸಿಹಿತ್ಲು ಮುಂಡಾ ಬೀಚ್ ಅಳಿವೆ ಬಾಗಿಲು ಬಳಿ ನೀರಿನ ಆಳ ಗೊತ್ತಾಗದೆ ಈಜು ಬಾರದ ಧನುಷ್ ಮತ್ತು ಜೀವನ್ ಎಂಬವರು ನೀರಿನಲ್ಲಿ ಮುಳುಗಿದ್ದು ಅವರನ್ನು ರಕ್ಷಿಸಲು ಈಜಲು ಗೊತ್ತಿದ್ದ ಅಭಿಲಾಶ್ ಮುಂದಾಗಿದ್ದು ಅವರನ್ನು ರಕ್ಷಿಸುವ ಯತ್ನದಲ್ಲಿ ಉಳಿದವರ ಕಣ್ಣೆದುರೇ ನೀರಿನ ರಭಸಕ್ಕೆ ತಾನು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.
ಈ ಸಂದರ್ಭ ಉಳಿದವರ ಬೊಬ್ಬೆ ಕೇಳಿ ಸ್ಥಳಕ್ಕೆ ಹೆಜಮಾಡಿ ಮೀನುಗಾರರ ತಂಡದ ಸದಾಶಿವ ಕೋಟ್ಯಾನ್ ಧಾವಿಸಿ ಧನುಷ್ ಮತ್ತು ಜೀವನ್‌ರವರನ್ನು ರಕ್ಷಿಸಿದ್ದಾರೆ. ಆದರೆ ನೀರಿನಲ್ಲಿ ಮುಳುಗಿದ ಅಭಿಲಾಶ್ ಪತ್ತೆಯಾಗಿಲ್ಲ.
ಅಭಿಲಾಶ್ ಅವಿವಾಹಿತನಾಗಿದ್ದು ಮಂಗಳೂರು ರೈಲ್ವೇ ಯಲ್ಲಿ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಭಾನುವಾರ ರಜಾ ದಿನವಾದ ಕಾರಣ ಚಿಪ್ಪು ಹೆಕ್ಕಲು ಬಂದಿದ್ದ ಎಂದು ಮಿತ್ರರು ಹೇಳಿದ್ದಾರೆ. ಅಭಿಲಾಶ್ ಪತ್ತೆಗೆ ಎಸ್‌ಡಿಆರ್‌ಎಫ್ ತಂಡ, ಕರಾವಳಿ ಕಾವಲು ಪಡೆಯ ಹೆಜ್ಮಾಡಿ, ಮುಲ್ಕಿ ಹಾಗೂ ಸುರತ್ಕಲ್ ಪೊಲೀಸರ ತಂಡ ಶ್ರಮಿಸುತ್ತಿದ್ದಾರೆ.