For the best experience, open
https://m.samyuktakarnataka.in
on your mobile browser.

ನಂದಿಗ್ರಾಮದಲ್ಲಿ ಚುನಾವಣಾಪೂರ್ವ ಹಿಂಸಾಚಾರ

10:18 PM May 23, 2024 IST | Samyukta Karnataka
ನಂದಿಗ್ರಾಮದಲ್ಲಿ ಚುನಾವಣಾಪೂರ್ವ ಹಿಂಸಾಚಾರ

ಕೋಲ್ಕತಾ: ಆರನೇ ಹಂತದ ಮತದಾನಕ್ಕೆ ಮುಂಚಿತವಾಗಿಯೇ ಪಶ್ಚಿಮ ಬಂಗಾಳದ ತಮಲುಕ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನಂದಿಗ್ರಾಮದಲ್ಲಿ ಹಿಂಸಾಚಾರ ನಡೆದಿದ್ದು, ಬಿಜೆಪಿಯ ಒಬ್ಬ ಕಾರ್ಯಕರ್ತೆ ಬಲಿಯಾಗಿದ್ದಾರೆ. ಬುಧವಾರ ರಾತ್ರಿ ಬೈಕ್‌ನಲ್ಲಿ ಬಿಜೆಪಿ ಸ್ಥಳೀಯ ನಾಯಕಿ ಮನೆ ಬಳಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ. ಏಳು ಮಂದಿ ಗಾಯಗೊಂಡಿದ್ದಾರೆ. ಗುಂಡೇಟು ತಗುಲಿದ್ದ ಮಹಿಳೆಯನ್ನು ಕೊಲ್ಕತಾದ ಆಸ್ಪತ್ರೆಗೆ ವರ್ಗಾಯಿಸಲಾಯಿತಾದರೂ ಅವರ ಪ್ರಾಣ ಉಳಿಯಲಿಲ್ಲ. ಗುಂಡೇಟು ತಿಂದು ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಲು ಹೋದ, ಆಕೆಯ ಪುತ್ರನ ಮೇಲೂ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ.
ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮರಗಳನ್ನು ರಸ್ತೆಗಳಲ್ಲಿ ಕೆಡವಿ, ಟೈರುಗಳಿಗೆ ಬೆಂಕಿ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದಾರೆ. ಅಂಗಡಿಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಗ್ನಿಶಾಮಕ ದಳ, ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ. ಕೇಂದ್ರ ಪಡೆಗಳು ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಕೂಡ ಇವರನ್ನು ಸೇರಿಕೊಂಡಿದೆ. ಪ್ರಕರಣದಲ್ಲಿ ಇದುವರೆಗೆ ಯಾವುದೇ ಬಂಧನ ನಡೆಸದಿರುವುದು ಉದ್ವಿಗ್ನ ಪರಿಸ್ಥಿತಿ ಮುಂದುವರಿಯಲು ಕಾರಣವಾಗಿದೆ.
ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಮತದಾನದ ದಿನ ವ್ಯಾಪಕ ಹಿಂಸಾಚಾರ ಕಂಡು ಬಂದಿತ್ತು. ಆದರೆ ಆರನೇ ಹಂತದಲ್ಲಿ ಅದಕ್ಕೆ ಮೊದಲೇ ಹಿಂಸಾಚಾರ ನಡೆದಿದೆ.
ಇದು ಅತ್ಯಂತ ಹೇಯಕೃತ್ಯ ಎಂದಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಆರೋಪಿಗಳು ಜಿಹಾದಿಗಳು ಎಂದಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಟಿಎಂಸಿ ನಾಯಕರು, ನಂದಿಗ್ರಾಮದಲ್ಲಿ ಬಿಜೆಪಿಯ ಎರಡು ಬಣಗಳಿದ್ದು, ಘರ್ಷಣೆ ಅವರ ನಡುವೆಯೇ ನಡೆದಿದೆ. ಟಿಎಂಸಿ ಹೆಸರನ್ನು ಹಾಳು ಮಾಡಲು ಈ ಘಟನೆಯನ್ನು ಅವರು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಂದಿಗ್ರಾಮದ ಹೋರಾಟ ನಡೆಸುವ ಮೂಲಕ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದಿದ್ದರು. ಆಗ ಈ ಹೋರಾಟದಲ್ಲಿ ಮಮತಾ ಅವರ ಜೊತೆ ಕೈಜೋಡಿಸಿದ್ದ ಸ್ಥಳೀಯ ನಾಯಕ ಸುವೇಂದು ಅಧಿಕಾರಿ ಈಗ ಬಿಜೆಪಿ ರಾಜ್ಯಾಧ್ಯಕ್ಷ. ಹೀಗಾಗಿ ನಂದಿಗ್ರಾಮ ಪ್ರತಿಷ್ಠಿತ ಕ್ಷೇತ್ರವಾಗಿ ಪರಿಣಮಿಸಿದೆ. ವಿಧಾನಸಭಾ ಚುನಾವಣೆ ವೇಳೆ ಇಲ್ಲಿ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದರು. ಅದಾದ ನಂತರ ಅದೇ ವಿಷಯವನ್ನು ದೊಡ್ಡದಾಗಿ ಮಾಡಿ ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಹೈಕೋರ್ಟ್ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಸ್ಪರ್ಧಿಸಿದ್ದಾರೆ.