ಫುಡ್ಸ್ ಗೋದಾಮಿನಲ್ಲಿ ಅವಘಡ: ಮೆಕ್ಕೆಜೋಳದಡಿ ಸಿಲುಕಿದ ಕಾರ್ಮಿಕರು
ವಿಜಯಪುರ: ವಿಜಯಪುರ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಫುಡ್ಸ್ ಗೋದಾಮಿನಲ್ಲಿ ೧೨ಕ್ಕೂ ಹೆಚ್ಚು ಕಾರ್ಮಿಕರು ಮೆಕ್ಕೆಜೋಳದ ರಾಶಿಯ ಅಡಿ ಸಿಲುಕಿರುವ ಘಟನೆ ನಡೆದಿದೆ.
ಗೋದಾಮಿನಲ್ಲಿ ಮೆಕ್ಕೆಜೋಳ ಸಂಸ್ಕರಿಸುವ ೧೬ ಟ್ಯಾಂಕ್‌ಗಳನ್ನು ಕಬ್ಬಿಣದ ಕಂಬಗಳ ಮೇಲೆ ನಿರ್ಮಿಸಲಾಗಿದ್ದು, ಪ್ರತಿಯೊಂದು ಟ್ಯಾಂಕಿನಲ್ಲಿ ಸುಮಾರು ೧೬೦೦ ಚೀಲದಷ್ಟು ಗೋವಿನಜೋಳ ಹಾಕಲಾಗಿತ್ತೆಂದು ತಿಳಿದು ಬಂದಿದೆ. ಟ್ಯಾಂಕ್‌ಗಳಿಗೆ ಸಾರ್ಮಥ್ಯಕ್ಕಿಂತ ಹೆಚ್ಚು ಗೋವಿನಜೋಳ ಹಾಕಿದ್ದರಿಂದ ಎಲ್ಲ ೧೬ ಟ್ಯಾಂಕ್‌ಗಳು ಕುಸಿದಿವೆ. ಇದರಿಂದಾಗಿ ಅದರ ಕೆಳಗೆ ಕೆಲಸ ಮಾಡುತ್ತಿರುವ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಸುಮಾರು ೫೦೦ ಚೀಲದಷ್ಟು ಮೆಕ್ಕೆಜೋಳ ಕಾರ್ಮಿಕರ ಮೇಲೆ ಬಿದ್ದಿದೆ ಎಂದು ತಿಳಿದು ಬಂದಿದೆ.
ಕಾರ್ಮಿಕರು ಬಿಹಾರ ಮೂಲದವರಾಗಿದ್ದು, ಮೆಕ್ಕೆಜೋಳ ಪ್ರೊಸ್ಸೆಸ್ಸಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ನಾಲ್ಕು ಜೆಸಿಬಿ, ಎರಡು ಕ್ರೇನ್‌ಗಳ ಸಹಾಯದಿಂದ ಕಾರ್ಮಿಕರ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ. ಈಗಾಗಲೆ ಓರ್ವ ವ್ಯಕ್ತಿಯನ್ನು ಹೊರ ತೆಗೆದಿದ್ದು, ಆಯುಷ್ ಆಸ್ಪತ್ರೆಗೆ ರವಾನಿಸಲಾಗಿದೆ.