ರೇಪಿಸ್ಟ್ ಗ್ಯಾಂಗ್‌ನಿಂದ ಪೊಲೀಸರ ಮೇಲೆ ಹಲ್ಲೆ
ಉತ್ತರ ಕನ್ನಡ: ಕಾಮುಕನನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಪೊಲೀಸರಿಗೆ ಗಾಯಗಳಾಗಿದ್ದು, ರೇಪಿಸ್ಟ್ ಗ್ಯಾಂಗ್‌ನಲ್ಲಿದ್ದ ಒಬ್ಬ ಮಹಿಳೆ ಪರಾರಿಯಾದ್ದಾಳೆ.
ಸುಂದರ ಯುವತಿಯರೊಂದಿಗೆ ಸ್ನೇಹ ಮಾಡಿ ಅವರೊಂದಿಗೆ ಪ್ರೀತಿಯ ನಾಟಕವಾಡಿ ಫೋಟೋ ತೆಗೆಸಿಕೊಂಡು ಅವುಗಳನ್ನು ಅಶ್ಲೀಲವೆಂಬಂತೆ ಎಡಿಟ್ ಮಾಡಿ ಬೆದರಿಸಿ ಅತ್ಯಾಚಾರವೆಸಗುತ್ತಿದ್ದ ಅರ್ಜುನ್ ಅಲಿಯಾಸ್ ಅರುಣ ಲಕ್ಷ್ಮಣ ಗೌಡ (27) ಪ್ರಕರಣದ ಪ್ರಮುಖ ಆರೋಪಿ. ಇತನನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ ಗಾಯಗೊಳಿಸಲಾಗಿದೆ.
ಆರೋಪಿಯ ತಾಯಿ ನಾಗವೇಣಿ ಲಕ್ಷ್ಮಣಗೌಡ(50) ಹಾಗೂ ಸಂಬಂಧಿ ಬಾಲಚಂದ್ರ ಗೌಡ(42) ಕೂಡ ಪೊಲೀಸರ ಮೇಲೆ ಕಲ್ಲು ತೂರಿ ಗಾಯಗೊಳಿಸಿದ್ದಾರೆ. ಇವರು ಕಲ್ಲು ಹಾಗೂ ಮನೆಯ ಹೆಂಚುಗಳ ತುಂಡನ್ನು ಬಳಿಸಿ ದಾಳಿ ಮಾಡಿದ್ದಾರೆ. ಈ ವೇಳೆ ಬನವಾಸಿ ಪೊಲೀಸ್ ಠಾಣೆಯ ಕೆ.ಜಗದೀಶ, ಪಿ.ಮಂಜಪ್ಪ ಹಾಗೂ ಡಿ. ಮಂಜುನಾಥ ನಡುವಿನಮನೆ ಎಂಬ ಪೊಲೀಸರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸದ್ಯ ಆರೋಪಿ ಅರ್ಜುನ್‌ಗೌಡನನ್ನು ಬಂಧಿಸಿದ್ದು. ಈತನಿಗೆ ಸಹಾಯ ಮಾಡುತ್ತಿದ್ದ ಸಂಬಂಧಿ ಬಾಲಚಂದ್ರಗೌಡ ಇಲಿ ಪಾಷಾಣ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆದರೆ, ಆರೋಪಿಯ ತಾಯಿ ನಾಗವೇಣಿ ಪರಾರಿಯಾಗಿದ್ದಾಳೆ.