For the best experience, open
https://m.samyuktakarnataka.in
on your mobile browser.

ರೇವ್‌ಪಾರ್ಟಿ ೮೬ ಜನ ಡ್ರಗ್ಸ್ ಸೇವನೆ ದೃಢ

10:22 PM May 23, 2024 IST | Samyukta Karnataka
ರೇವ್‌ಪಾರ್ಟಿ ೮೬ ಜನ ಡ್ರಗ್ಸ್ ಸೇವನೆ ದೃಢ

ಬೆಂಗಳೂರು: ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್.ಫಾರ್ಮ್ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಸಿಸಿಬಿ ವಶಕ್ಕೆ ಪಡೆದ ೧೦೧ ಜನರ ಪೈಕಿ ೮೬ ಮಂದಿ ಡ್ರಗ್ಸ್ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಮೇ ೧೯ ರಂದು ಬೆಳಗಿನಜಾವ ಸಿಸಿಬಿ (ಮಾದಕ ದ್ರವ್ಯ ನಿಗ್ರಹ ದಳ) ಅಧಿಕಾರಿಗಳು ರೇವ್‌ಪಾರ್ಟಿ ಅಡ್ಡೆ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ನಟ, ನಟಿಯರು ಸೇರಿದಂತೆ ೭೧ ಯುವಕರು, ೩೦ ಯುವತಿಯರನ್ನು ವಶಕ್ಕೆ ಪಡೆದಿದ್ದರು. ರಾತ್ರಿಯಿಡೀ ಡ್ರಗ್ಸ್ ನಶೆಯಲ್ಲಿ ತೇಲಿದವರ ರಕ್ತದ ಮಾದರಿಯನ್ನು ಪಡೆದುಕೊಂಡು, ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಗುರುವಾರ ವೈದ್ಯಕೀಯ ವರದಿ ಸಿಸಿಬಿ ಪೊಲೀಸರ ಕೈ ಸೇರಿದ್ದು ಬಹುತೇಕರು ಮಾದಕವಸ್ತು ಸೇವಿಸಿರುವುದು ಬಹಿರಂಗವಾಗಿದೆ. ದಾಳಿ ವೇಳೆ ೧೫.೬ ಗ್ರಾಂ ಎಂಡಿಎಂ ಡ್ರಗ್ಸ್, ೬.೨ ಗ್ರಾಂ ಹೈಡ್ರೋ ಗಾಂಜಾ, ೫ ಮೊಬೈಲ್, ಐಷಾರಾಮಿ ಕಾರನ್ನು ವಶಕ್ಕೆ ಪಡೆಯಲಾಗಿತ್ತು. ಅಲ್ಲದೇ ಫಾರ್ಮ್ಹೌಸ್ ಕಿಟಕಿಯಿಂದ ಹೊರಗೆ ಎಸೆದಿದ್ದ ಡ್ರಗ್ಸ್ನ್ನು ಶ್ವಾನದ ಪತ್ತೆ ಮಾಡಿತ್ತು. ಅಪಾರ ಪ್ರಮಾಣದ ಡ್ರಗ್ಸ್ ಪಾರ್ಟಿಯಲ್ಲಿ ಸರಬರಾಜಾಗಿರುವುದು ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದ ಶಂಕೆ ವ್ಯಕ್ತವಾಗಿದೆ.
ಮತ್ತೊಂದು ಎಫ್‌ಐಆರ್:
ರೇವ್ ಪಾರ್ಟಿಯಲ್ಲಿ ಅಕ್ರಮ ಮಾದಕ ವಸ್ತುಗಳ ಸೇವನೆ ವರದಿ ಪೊಲೀಸರ ಕೈ ಸೇರುತ್ತಿದ್ದಂತೆ ಜಿ.ಆರ್.ಫಾರ್ಮ್ಹೌಸ್ ಮಾಲೀಕ `ಎ'೬ ಆರೋಪಿ ಗೋಪಾಲ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ. ಇಲ್ಲಿಯವರೆಗೆ ಒಟ್ಟು ೬ ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪಾರ್ಟಿಯಲ್ಲಿ ೨೦೦ಕ್ಕೂ ಹೆಚ್ಚು ಜನರು ಪಾಲ್ಗೊಂಡಿದರು. ದಾಳಿ ಸಂದರ್ಭದಲ್ಲಿ ಕೆಲವರು ಪರಾರಿಯಾಗಿದ್ದರು. ಪರಾರಿಯಾಗಿರುವವರ ಹುಡುಕಾಟ ಸಿಸಿಬಿ ನಡೆಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಬ್ಬಗೋಡಿ ಪೊಲೀಸ್ ಠಾಣೆಯಿಂದ ಸಿಸಿಬಿಗೆ ಪ್ರಕರಣ ವರ್ಗಾವಣೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಣಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ನಾನವಳಲ್ಲ ಎಂದವಳಲ್ಲೂ ಡ್ರಗ್ಸ್
ರೇವ್ ಪಾರ್ಟಿಯಲ್ಲಿ ತೆಲುಗಿ ನಟಿ ಹೇಮಾ ಪಾಲ್ಗೊಂಡಿದ್ದರು. ಇವರ ರಕ್ತದ ಮಾದರಿಯಲ್ಲಿ ಕೂಡ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಆದರೆ, ಈ ನಟಿ ಆಗಿನ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಗೂ ನನಗೂ ಸಂಬಂಧವಿಲ್ಲ. ಆಂಧ್ರಪ್ರದೇಶದ ನಮ್ಮ ಫಾರ್ಮ್ಹೌಸ್‌ನಲ್ಲೇ ಇದ್ದೇನೆ. ಆ ಪಾರ್ಟಿಗೂ ನನಗೂ ಸಂಬಂಧವಿಲ್ಲ ಎಂದು ವಿಡಿಯೊ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಕಳುಹಿಸಿದ್ದರು. ಸಿಸಿಬಿ ವಶದಲ್ಲಿದ್ದುಕೊಂಡು ವಿಡಿಯೊ ಕಳುಹಿಸಿರುವುದು ಭಾರಿ ಚೆರ್ಚೆಗೆ ಕಾರಣವಾಗಿತ್ತು. ಅಲ್ಲದೇ ಇನ್ನೋರ್ವ ನಟಿ ಆಶಿ ರಾಯ್ ಕೂಡ ಪಾರ್ಟಿಯಲ್ಲಿ ಪಾಲ್ಗೊಂಡಿದ್ದೇನೆ. ಆದರೆ, ಡ್ರಗ್ಸ್ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿರುವುದು ಈಗ ಬಯಲಾಗಿದೆ.
ಎನ್‌ಡಿಪಿಎಸ್ ಕಾಯ್ದೆ ಅನ್ವಯ
ನಿಷೇಧಿತ ಮಾದಕ ವಸ್ತು ಸೇವನೆ ಆರೋಪದಡಿ ಪೊಲೀಸರು ಸಾಮಾನ್ಯವಾಗಿ ಎನ್‌ಡಿಪಿಎಸ್( ಮಾದಕ ವಸ್ತು ಮತ್ತು ನಶೆ ಪದಾರ್ಥಗಳ ನಿಯಂತ್ರಣ ಕಾಯ್ದೆ)ಅಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು. ತೆಲಗು ನಟಿಯರು ಡ್ರಗ್ಸ್ ಪ್ರಕರಣದಲ್ಲಿ ಪಾಲ್ಗೊಂಡಿದ್ದು ಆ ಇಬ್ಬರು ನಟಿಯರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಬೇಕಾಗಿದೆ. ಕಳೆದ ೨೦೨೦ ಸೆಪ್ಟಂಬರ್‌ನಲ್ಲಿ ನಡೆದ ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ದ್ವೀವೇದಿ, ಸಂಜನಾ ಗಲ್ರಾನಿ ದೆಹಲಿಯ ವಿರೇನ್ ಖನ್ನಾ, ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವ, ಬಿ.ಕೆ.ರವಿಶಂಕರ್, ವಿನಯ್‌ಕುಮಾರ್, ಶ್ರೀನಿವಾಸ್ ಸುಬ್ರಮಣಿಯನ್, ರೂಪದರ್ಶಿ ನಿಯಾಜ್, ರಾಹುಲ್ ತೋನ್ಸೆ ಸೇರಿದಂತೆ ೧೬ ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇವರೆಲ್ಲರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಡ್ರಗ್ಸ್ ಸೇವನೆ ಪತ್ತೆ ಮಾಡುವಲ್ಲಿ ಕೂದಲಿನ ಮಾದರಿ ಮಹತ್ವದ ಪಾತ್ರ ವಹಿಸುತ್ತದೆ. ಎನ್‌ಡಿಪಿಎಸ್ ಪ್ರಕರಣದಲ್ಲಿ ಆರೋಪಿಗಳ ಮೂತ್ರ ಹಾಗೂ ರಕ್ತಮಾದರಿ ಪರೀಕ್ಷೆ ನಡೆಸಲಾಗುತ್ತಿತ್ತು. ಒಂದೆರಡು ದಿನದ ಡ್ರಗ್ಸ್ ಫಲಿತಾಂಶ ಮಾತ್ರ ಸಿಗುತ್ತಿತ್ತು. ಹೊಸ ಪದ್ಧತಿಯಲ್ಲಿ ಕೂದಲು ಮಾದರಿ ಪರೀಕ್ಷೆ ನಡೆಸಲಾಗುತ್ತಿದ್ದು, ಇದರಲ್ಲಿ ವರ್ಷದ ಡ್ರಗ್ಸ್ ಸೇವನೆ ಫಲಿತಾಂಶ ದೊರೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ರೇವ್ ಪಾರ್ಟಿ ಪ್ರಕರಣದಲ್ಲಿ ಕೇವಲ ರಕ್ತದ ಸ್ಯಾಂಪಲ್ ಪಡೆದು ವರದಿ ಪಡೆದುಕೊಳ್ಳಲಾಗಿದೆ.