For the best experience, open
https://m.samyuktakarnataka.in
on your mobile browser.

ವರ್ಕ್ ಫ್ರಮ್ ಹೋಮ್ ಹೆಸರಲ್ಲಿ ೧೫೮ ಕೋಟಿ ವಂಚನೆ

03:45 AM Jan 31, 2024 IST | Samyukta Karnataka
ವರ್ಕ್ ಫ್ರಮ್ ಹೋಮ್ ಹೆಸರಲ್ಲಿ ೧೫೮ ಕೋಟಿ ವಂಚನೆ

ಬೆಂಗಳೂರು: ವಾಟ್ಸಪ್, ಟೆಲಿಗ್ರಾಮ್ ಆ್ಯಪ್ ಮೂಲಕ `ವರ್ಕ್ ಫ್ರಮ್ ಹೋಮ್' ಕೆಲಸ ಕೊಡಿಸುವುದಾಗಿ ಸಾರ್ವಜನಿಕರಿಂದ ೧೫೮.೦೯ ಕೋಟಿ ರೂ. ವಂಚನೆ ಮಾಡಿರುವ ಜಾಲವನ್ನು ಸೈಬರ್ ಕ್ರೈಂ ವಿಭಾಗದ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮುಂಬೈನ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಬೆಂಗಳೂರು ಮೂಲದ ೯ ಜನರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಅಮಿರ್, ಇನಾಯತ್‌ಖಾನ್, ನಯಾಜ್, ಆದಿಲ್, ಸೈಯದ್ ಅಬ್ಬಾಸ್, ಮಿಥುನ್ ಮನಿಷಾ, ಮಿರ್‌ಶಶಿಕಾಂತ್, ಅಬ್ಬಾಸ್ ಅಲಿ ಸೇರಿ ನೈನಾರಾಜ್ ಎಂಬ ಯುವತಿಯನ್ನು ಬಂಧಿಸಿದ್ದಾರೆ. ಈ ಜಾಲದಲ್ಲಿ ತೊಡಗಿದ್ದ ೧೧ ಜನರ ಬೈಕಿ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಬಂಧಿತರಿಂದ ೬೮ ಲಕ್ಷ ರೂ. ಜಪ್ತಿ ಮಾಡಲಾಗಿದೆ. ಕರ್ನಾಟಕ ಸೆರಿದಂತೆ ದೇಶದ ವಿವಿಧ ರಾಜ್ಯಗಳಿಂದ ೩೦ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳು ಹೊಂದಿರುವುದು ಬೆಳಕಿಗೆ ಬಂದಿದೆ.
ದೇಶದಲ್ಲಿ ೨,೧೪೩ ಪ್ರಕರಣ
ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ದೇಶದ ೨೮ ರಾಜ್ಯಗಳಲ್ಲಿ ೨,೧೪೩ ಪ್ರಕರಣಗಳು ಎನ್.ಸಿ.ಆರ್.ಪಿ. ಪೋರ್ಟ್ಲ್‌ಗಳಲ್ಲಿ ದಾಖಲಾಗಿವೆ. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ೨೬೫ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ೧೩೫ ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರಿಂದ ವಂಚಿಸಿ ಬಂದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ಹಣದ ವ್ಯವಹಾರ ಮಾಡಿರುವ ಆರೋಪಿಗಳ ೩೦ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಒಂದೇ ವರ್ಷದಲ್ಲಿ ೧೫೮,೦೯೪,೧೫೯ ಕೋಟಿ ರೂ. ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಈ ಕುರಿತು ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ್ ಸುದ್ದಿಗೋಷ್ಠಿ ನಡೆಸಿ ಬೆಂಗಳೂರಿನ ಬಿಇಎಲ್ ಲೇಔಟ್ ವಿದ್ಯಾರಣ್ಯಪುರ ನಿವಾಸಿಯೊಬ್ಬರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಕಳೆದ ಆ.೧೮ರಂದು ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದಾರೆಂದರು.
ಸಾಮಾಜಿಕ ಜಾಲತಾಣ ವಾಟ್ಸಪ್, ಟೆಲಿಗ್ರಾಮ್‌ಗಳ ಮೂಲಕ ಸಾರ್ವಜನಿಕರನ್ನು ಸಂಪರ್ಕಿಸಿ ದಿನಕ್ಕೆ ೫೦೦ ರಿಂದ ೧೦ ಸಾವಿರದವರೆಗೆ ಹಣವನ್ನು ಮನೆಯಲ್ಲೇ ಕುಳಿತು ಗಳಿಸಬಹುದು ಎಂದು ನಂಬಿಸಿ ವಂಚನೆ ಮಾಡುತ್ತಿದ್ದರು. ಮೂವತ್ತು ಬ್ಯಾಂಕ್ ಖಾತೆಗಳಿಂದ ನೂರಾರು ಕೋಟಿ ರೂ.ವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಈಗಾಗಲೇ ಬೆಂಗಳೂರಿನ ೧೪ ಬ್ಯಾಂಕ್ ಖಾತೆಗಳಲ್ಲಿ ೬೨,೮೩,೦೮೦ ಲಕ್ಷ ರೂ.ಗಳನ್ನು ಪ್ರೀಜ್ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ್ದ ವಿವಿಧ ಕಂಪನಿಯ ೧೧ ಮೊಬೈಲ್, ೨ ಲ್ಯಾಪ್‌ಟಾಪ್,
೧೫ ಸಿಮ್‌ಕಾರ್ಡ್, ೩ ಬ್ಯಾಂಕ್ ಚೆಕ್‌ಬುಕ್ ಸೇರಿ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಸಾಮಾಜಿಕ ಜಾಲತಾಣಗಳ ಮೂಲಕ ಜನಸಾಮಾನ್ಯರಿಗೆ ವಂಚನೆ ಮಾಡಿರುವ ಕೋಟ್ಯಂತರ ಹಣ ತನಿಖೆ ನಡೆಸಲು ಅಪರಾಧ ವಿಭಾಗ-೧ ಉಪ ಪೊಲೀಸ್ ಆಯುಕ್ತ ಅಬ್ದುಲ್ ಅಹದ್ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಸತ್ಯನಾರಾಯಣ ಸಿಂಗ್, ಪೊಲೀಸ್ ಇನ್ಸ್ಪೆಕ್ಟರ್ ಹಜರೇಶ್ ಎ ಕಿಲೆದಾರ್ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಈ ಕುರಿತು ದೆಹಲಿ ಸೈಬರ್ ಪೊಲೀಸ್ ಠಾಣೆ ಮತ್ತು ಬೇರೆ ಬೇರೆ ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ ಎಂದರು.