ಅಬಲೆಯಾಗಿಸುವ ಸಾಮಾಜಿಕ ಜಾಲತಾಣಗಳು
ಸಂಹಿತಾಳ (ಹೆಸರು ಬದಲಾಯಿಸಲಾಗಿದೆ) ತಾಯಿಗೆ ಫೋನ್ ಮಾಡಿ, ನಿಮ್ಮ ಮಗಳು ಹೇಗೆ ಓದುತ್ತಿದ್ದಾಳೆ ಎಂದು ಕೇಳಿದೆ. ಅವರು, ಅವಳು ಚೆನ್ನಾಗಿ ಓದುತ್ತಿದ್ದಾಳ್ರಿ. ಸ್ವಲ್ಪ ಕಷ್ಟ ಅಂತ ಹೇಳಿದ್ಲುರೀ. ಆದರೂ ಚೆನ್ನಾಗಿ ಮಾಡೀನಿ, ಈ ಸೆಮಿಸ್ಟರ್ ನಾಗಿ ಇನ್ನೂ ಚೆನ್ನಾಗಿ ಆಗುತ್ತಂತ್ರಿ'' ಅಂತ ಅಂದರು.
ಹೌದು, ಅಷ್ಟೊಂದು ಚೆನ್ನಾಗಿ ಮಾಡಿಲ್ಲ ಅವಳು, ಅದಕ್ಕೋಸ್ಕರವಾಗಿ ಫೋನ್ ಮಾಡಿರುವುದು. ಹೇಗೆ ಚೆನ್ನಾಗಿ ಓದಬೇಕೆಂದು ಹೇಳಿಕೊಡುತ್ತೇವೆ, ಆಕೆಗೆ ನನ್ನನ್ನು ಭೇಟಿ ಮಾಡಲು ಹೇಳಿ'' ಅಂದೆ. ಆಯಿತು ಎಂದು ಇಟ್ಟರು.
ಮಾರನೆಯ ದಿನ ಬೆಳಗ್ಗೆ ಸಂಹಿತಾ ನನ್ನ ಕಚೇರಿಗೆ ಬಂದಳು. ಆರಂಭಿಕ ಮಾತುಕತೆಯ ಬಳಿಕ ನಾನೇ ಕೇಳಿದೆ. ಹೇಗೆ ಓದುತ್ತಿದ್ದೀಯ ಎಂದು. ಚೆನ್ನಾಗಿ ಮಾಡಿದ್ದೀನಿ ಸರ್ ಮೊನ್ನೆಯ ಆಂತರಿಕ ಪರೀಕ್ಷೆಯಲ್ಲಿ, ಎಲ್ಲವೂ ತರಗತಿಯ ಸರಾಸರಿಗಿಂತಲೂ ಚೆನ್ನಾಗಿ ಬರುತ್ತೆ'' ಎಂದಳು. ಕಳೆದ ಸೆಮಿಸ್ಟರ್‌ನಲ್ಲಿ ಏನು ಸಮಸ್ಯೆಯಾಗಿತ್ತು ಅಂತ ಕೇಳಿದೆ. ಗೊತ್ತಿಲ್ಲ ಸರ್, ಪ್ರಾಯಶಃ ಹೊಸ ಕಾಲೇಜಿನ ವಾತಾವರಣವಿರಬೇಕು ಎಂದಳು. ನನಗದು ನಿಜವಾದ ಕಾರಣ ಅಂತ ಅನಿಸಲಿಲ್ಲ. ನೀನು ಉಪಯೋಗಿಸುವ ಜಾಲತಾಣಗಳ ಬಗ್ಗೆ ಹೇಳು ಎಂದೆ. ಅವಳು ತನ್ನ ಮೊಬೈಲ್‌ನ ಸಂಯೋಜನಗಳನ್ನು ತೋರಿಸಿದಳು. ಸಮಸ್ಯೆ ಅಲ್ಲಿತ್ತು, ಅವಳ ಮೊಬೈಲ್‌ನ ಹೆಚ್ಚು ಬಳಕೆಯಾಗಿದ್ದಿದು ಸಾಮಾಜಿಕ ಜಾಲತಾಣಗಳ ವೀಕ್ಷಣೆಯಲ್ಲಿ! ಸುಮಾರು ಆರರಿಂದ ಏಳು ಗಂಟೆಗಳ ಕಾಲ ಅವಳು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದಳು.
ನೋಡಮ್ಮ, ನಿನಗೆ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬರಲು ಕಾರಣ ನಿನ್ನ ಸಮಯವನ್ನು ಈ ಜಾಲತಾಣಗಳಲ್ಲಿ ಕಳೆಯುತ್ತಿದ್ದುದು. ಜಾಲತಾಣಗಳು ನಮಗೆ ಕೇವಲ ಕ್ಷಣಿಕ ಆನಂದವನ್ನು ಕೊಡುತ್ತವೆಯೇ ವಿನಃ ಬೇರೇನನ್ನೂ ಅಲ್ಲ. ಈ ಜಾಲತಾಣಗಳು ನಿನಗೆ ತಕ್ಷಣಕ್ಕೆ ತೃಪ್ತಿ ಕೊಡುತ್ತವೆ, ಆದರೆ ನೀನು ಓದುವ ಓದಿನಿಂದ ನಿನಗೆ ಯಾವತ್ತೂ ಆ ಕ್ಷಣಕ್ಕೆ ಯಾವ ತೃಪ್ತಿಯೂ ಸಿಗುವುದಿಲ್ಲ, ಅದು ದೀರ್ಘಕಾಲದ ತೃಪ್ತಿಗೆ ಸಂಬಂಧಿಸಿದ್ದು. ಹದಿಹರೆಯದ ಮನಸ್ಸು ಇನ್ನೂ ಪ್ರಬುದ್ಧತೆಯನ್ನು ಹೊಂದಿರುವುದಿಲ್ಲ, ಈ ಸಮಯದಲ್ಲಿ ಅದು ಹೆಚ್ಚು ಚಂಚಲತೆಯಿಂದ ಕೂಡಿರುತ್ತದೆ. ಯಾವುದು ಆ ಕ್ಷಣಕ್ಕೆ ತೃಪ್ತಿ ಕೊಡುತ್ತದೆಯೋ ಅದನ್ನು ಬಯಸುತ್ತದೆ. ಅದಕ್ಕಾಗಿ ನಾವು ನಮ್ಮೊಳಗೆ, ದೊಡ್ಡವರು ಹೇಳಿದ ವಿವೇಕವಿರುತ್ತದಲ್ಲ, ಆ ವಿವೇಕಕ್ಕೆ ನಮ್ಮ ಮನಸ್ಸನ್ನು ಓರೆ ಹಚ್ಚಿ ನೋಡುತ್ತಿರಬೇಕು. ಹಾಗೆ ಓರೆ ಹಚ್ಚಿದಾಗ ನಮಗೆ ನಮ್ಮ ಮನಸ್ಸಿನ ನಿಜವಾದ ಬಣ್ಣ, ಗುಣ ಗೊತ್ತಾಗುತ್ತದೆ. ಆಗ ನಿನ್ನ ಆಯ್ಕೆ ಸುಗಮವಾಗುತ್ತದೆ'' ಎಂದೆ.
ಈಗ ನನಗೆ ಅರ್ಥ ಆಗ್ತಾ ಇದೆ ಸರ್, ಆಯಿತು, ಈ ಜಾಲತಾಣಗಳನ್ನೆಲ್ಲ ಅಳಿಸಿ ಬಿಡುತ್ತೇನೆ ಅಂದಳು. ಬೇಡ, ಅಳಿಸುವುದು ಸಮಸ್ಯೆಯನ್ನು ಬಗೆಹರಿಸುತ್ತದೆ ಎಂದು ಹೇಳಲಾಗುವುದಿಲ್ಲ, ಬದಲಾಗಿ ಅದನ್ನು ಕಡಿಮೆ ಮಾಡು, ನಿನಗೆ ನಿನ್ನ ಮೇಲೆ ಹಿಡಿತವಿರಬೇಕು. ಆರು ಗಂಟೆಯಿಂದ ಅರ್ಧ ಗಂಟೆಗೆ ಇಳಿಸು. ಏಕೆಂದರೆ ನಾವ್ಯಾರೂ ಕಾಡಿನಲ್ಲಿರುವ ಸನ್ಯಾಸಿಗಳಲ್ಲ, ಎಲ್ಲವನ್ನೂ ಬಿಟ್ಟು ಜಿತೇಂದ್ರಿಯರಾಗುವ ಅಗತ್ಯವಿಲ್ಲ. ಹಾಗೆ ಮಾಡಿದರೆ ಮನಸ್ಸು ಬೇರೊಂದು ಕಡೆ, ಕ್ಷಣಿಕ ತೃಪ್ತಿಯನ್ನು ಹುಡುಕಿ ಹೊರಡುತ್ತದೆ, ಅದು ಇನ್ನೂ ಕ್ಲಿಷ್ಟವಾದ ಗೀಳಿಗೆ ಬದಲಾಗುವಂತೆ ಮಾಡಬಹುದು. ಬದಲಾಗಿ, ನಿನಗೆ ನಿನ್ನ ಮೇಲೆ ನಂಬಿಕೆಯಿರಲಿ, ಯಾವ ಕಾರಣಕ್ಕೂ ಹೆಚ್ಚಿನ ಸಮಯ ಜಾಲತಾಣಕ್ಕೆ ಕೊಡಬೇಡ. ನಿನ್ನನ್ನು ನೀನು ಸಬಲಳಾಗುವಂತೆ ಮಾಡಿಕೋ, ನೀನು ಸಬಲಳಾಗುತ್ತಾ ಹೋದ ಹಾಗೆ ನಿನ್ನೊಳಗಿರುವ ಅಬಲೆಯು ಸಣ್ಣವಳಾಗುತ್ತಾ ಹೋಗುತ್ತಾಳೆ''.
ಸರ್, ಈಗ ಅರಿವಾಗ್ತಾ ಇದೆ, ಆದರೆ ನನಗೆ ಅರ್ಥವಾಗದ ವಿಷಯ ಎಂದರೆ ನೀವು ಹೇಳಿದ ಹಾಗೆ, ವಿವೇಕದ ಒರೆಗೆ ಹಚ್ಚಲು ನಮಗೆ, ನಮ್ಮಷ್ಟಕ್ಕೆ ಯಾಕಾಗುವುದಿಲ್ಲ, ಅದು ಸಮಾಲೋಚನೆಯಲ್ಲಿ, ಸಂವಾದದಲ್ಲಿ ಮಾತ್ರ ಯಾಕೆ ಅರ್ಥವಾಗುತ್ತದೆ?''
ಅದಕ್ಕೆ ನಾನು, ವಿವೇಕದ ಒರೆಗೆ ಹಚ್ಚಲು ನಮ್ಮ ಮನಸ್ಸನ್ನು ತೆರೆದುಕೊಂಡಿದ್ದರೆ ಮಾತ್ರ ಸಾಧ್ಯ. ಸಾಮಾನ್ಯವಾಗಿ ದೊಡ್ಡವರು ಹೇಳುವ ಬುದ್ಧಿಮಾತುಗಳಲ್ಲಿ ನಮ್ಮ ಭಾವನಾತ್ಮಕ ವಹಿವಾಟುಗಳು ಪರಸ್ಪರ ನೇರವಾಗಿ ಸಮನಾಗಿರದೆ ವಿಷಮವಾಗಿರುತ್ತದೆ. ನಮ್ಮ ವಹಿವಾಟುಗಳು ವಿಷಮವಾಗಿದ್ದಾಗ, ನಮ್ಮ ಭಾವನಾತ್ಮಕ ಮನಸ್ಸು ಸಂದಿಗ್ಧಕ್ಕೆ ಸಿಲುಕಿ, ಹೊಂದಿಕೊಳ್ಳಲು ಇಷ್ಟಪಡದೆ ತನ್ನನ್ನು ರಕ್ಷಿಸಿಕೊಳ್ಳಲು, ಏನಾದರು ಒಂದು ಉಪಾಯವನ್ನು ಹುಡುಕುತ್ತದೆ. ಈ ರೀತಿಯ ಉಪಾಯವು ಪ್ರತಿಯೊಬ್ಬರಿಗೂ ವಿಭಿನ್ನವಾಗಿರುತ್ತದೆ. ಎದುರು ಇರುವ ವ್ಯಕ್ತಿಯ ಹಿತವಾದ ನುಡಿಗಳನ್ನು ವಿರೋಧಿಸುವುದು, ಅವರು ಹೇಳಿದ ಹಾಗೆ ಮಾಡದೇ, ಅದಕ್ಕೆ ವಿರುದ್ಧವಾಗಿ ಇರುವ, ಮನಸ್ಸಿಗೆ, ಆ ಕ್ಷಣಕ್ಕೆ ಸಿಗುವ ತೃಪ್ತಿಯತ್ತ ಗಮನಹರಿಸಿ, ತಾನೂ ಚೆನ್ನಾಗಿದ್ದೇನೆ ಎಂದು ತೋರಿಸಿಕೊಳ್ಳುವುದು ಇರುತ್ತವೆ. ಆದರೆ, ವೃತ್ತಿಪರ ಆಪ್ತ -ಸಮಾಲೋಚನೆಯಲ್ಲಿ ನುರಿತ ಸಮಾಲೋಚಕರು, ಇದನ್ನು ಅರಿತುಕೊಂಡು, ತಮ್ಮನ್ನು, ತಮ್ಮ ಸಂವಾದವನ್ನು ಹೊಂದಿಸಿಕೊಳ್ಳುತ್ತಾರೆ. ಆಗ ನಮ್ಮ ವಹಿವಾಟುಗಳು ವಿಷಮ ಸ್ಥಿತಿಯಿಂದ ಹೊರಬರುತ್ತವೆ ಮತ್ತು ಸಂಕಷ್ಟದಲ್ಲಿ ಇರುವ ವ್ಯಕ್ತಿಯ ಮನಸ್ಸು ಸಂವಾದಕ್ಕೆ ತೆರೆದುಕೊಳ್ಳುವಂತೆ ಮಾಡುತ್ತಾರೆ''.
ಆಯಿತು, ನೀವು ಹೇಳಿದ ಹಾಗೇ ಅರ್ಧ ಗಂಟೆಗೆ ಸಾಮಾಜಿಕ ಜಾಲತಾಣದ ವೀಕ್ಷಣೆಯನ್ನು ಇಳಿಸುತ್ತೇನೆ, ಜೊತೆಗೆ ಓದಿನ ಸಮಯವನ್ನು ನೀವು ಹೇಳಿದ ಹಾಗೆ ಒಂದು ಚೌಕಟ್ಟಿನೊಳಗಿರಿಸಿ ಶಿಸ್ತು ಬದ್ಧವಾಗಿ ಓದುತ್ತೇನೆ'' ಎಂದಳು. ``ಆಯಿತು, ಆದರೆ ಇನ್ನೂ ಒಂದು ವಿಚಾರವಿದೆ. ಎಲ್ಲವನ್ನು ನೀನೊಬ್ಬಳೇ ಮಾಡಬೇಡ, ನೀನು ಸಬಲಳಾಗುವವರೆಗೆ ನಿನ್ನ ಅಮ್ಮನ ಸಹಾಯ ಪಡೆದುಕೋ. ಎಲ್ಲವ್ವನ್ನು ನಾನೇ ನಿಭಾಯಿಸುತ್ತೇನೆ ಎಂದು ಹೊರಟಾಗ ಕೆಲವೊಮ್ಮೆ ಕಷ್ಟವಾಗಬಹುದು, ಅದು ನಿನ್ನನ್ನು ಪುನಃ ಹತಾಶೆಗೆ ತಳ್ಳುತ್ತದೆ. ಬದಲಾಗಿ ನಿನ್ನ ಅಮ್ಮನ ಸಹಾಯ ನಿನಗೆ ಭೀಮ ಬಲವನ್ನು ತುಂಬುತ್ತದೆ, ನಿನ್ನ ಸಬಲತೆಯು ಸುಲಭವಾಗಿ ಅಬಲೆಯು ಬಹುಬೇಗ ಸಣ್ಣವಳಾಗುತ್ತಾಳೆ''.
ಕೊನೆಯ ಮಾತು: ಲೇಖನದ ಶೀರ್ಷಿಕೆಯಲ್ಲಿ ಅಬಲೆಯೆಂದಾಕ್ಷಣ ಇದು ಕೇವಲ ಮಹಿಳೆಯರಿಗೆ ಮಾತ್ರ ಸಂಬಂಧ ಪಟ್ಟ ಸಮಸ್ಯೆ ಎಂದುಕೊಳ್ಳುವಂತಿಲ್ಲ, ಹುಡುಗರಲ್ಲೂ ಈ ಸಮಸ್ಯೆ, ಸ್ವಲ್ಪ ಹೆಚ್ಚೇ ಇರುತ್ತದೆ ಎಂದರೆ ಅತಿಶಯೋಕ್ತಿಯಲ್ಲ.