ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅಭಿಮಾನದ ಅಮಲಿಗೆ ತಲೆದಂಡ

11:02 AM Jan 10, 2024 IST | Samyukta Karnataka

ಸೋಮವಾರ ಕಟೌಟ್ ಸ್ಥಾಪನೆ ಮಾಡುವಾಗ ವಿದ್ಯುತ್ ತಂತಿಗೆ ತಗುಲಿ ಮೂವರು ಸಾವಿಗೀಡಾಗಿದ್ದು ಮಾತ್ರ ಅತಿರೇಕವೆಂಬ ಮಾಯಾ ಜಾಲದ ಕೈವಾಡ.

ಸ್ವಾಭಿಮಾನವೆಂಬುದು ಆಸ್ಮಿತೆಯ ಗುರುತು. ವ್ಯಕ್ತಿಯೊಬ್ಬನ ಕೌಟುಂಬಿಕ ಪರಿಸರ, ಪ್ರಾದೇಶಿಕ ಹಿನ್ನೆಲೆ ಭಾಷೆ ಹಾಗೂ ಸಂಸ್ಕೃತಿಯ ಭಾವಗಳು ಸಹಜವಾಗಿಯೇ ಸ್ವಾಭಿಮಾನವನ್ನು ತಂದುಕೊಡುವ ಆಸ್ಮಿತೆಗಳು. ಅಭಿಮಾನವೆಂಬುದು ಕೊಂಚ ಬೇರೆ. ವ್ಯಕ್ತಿಯೊಬ್ಬ ಬಯಸುವ ವಿಚಾರ ಹಾಗೂ ವ್ಯಕ್ತಿಯ ಆರಾಧನೆಯ ಮೂಲಕ ಮೂಡುವ ಅಭಿಮಾನ ವಿವೇಚನೆಯ ಗಡಿಯನ್ನು ದಾಟಿದಾಗ ಸೃಷ್ಟಿಯಾಗುವುದೇ ದುರಭಿಮಾನ. ಇದು ಒಂದು ರೀತಿಯ ಮೂಲಭೂತವಾದಕ್ಕೆ ಸಮಾನ. ಅತಿರೇಕಗಳಲ್ಲಿ ಮುಳುಗಿಸುವ ಈ ದುರಭಿಮಾನ ಯಾವ ಹಂತ ತಲುಪುತ್ತದೆ ಎಂಬುದನ್ನು ಊಹಿಸುವುದು ಕಷ್ಟ ಎಂಬುದಕ್ಕೆ ಗದಗ ಜಿಲ್ಲೆಯ ಸೂರಣಿಗಿಯಲ್ಲಿ ಚಲನ ಚಿತ್ರ ನಟ ಯಶ್ ಜನ್ಮದಿನೋತ್ಸವದ ಆಚರಣೆಯ ಸಂದರ್ಭದಲ್ಲಿ ಒಟ್ಟು ನಾಲ್ವರು ಅಭಿಮಾನಿಗಳು ಅಸು ನೀಗಿಕೊಂಡಿರುವ ಘಟನೆಯೇ ತಾಜಾ ನಿದರ್ಶನ. ಹಾಗೆ ನೋಡಿದರೆ, ಈ ಭೀಕರ ಸಾವಿನ ವೃತ್ತಾಂತದಲ್ಲಿ ವೈಯಕ್ತಿಕವಾಗಿ ಯಾರೊಬ್ಬರೂ ತಪ್ಪಿತಸ್ಥರಲ್ಲ. ಆದರೆ, ನೈತಿಕವಾಗಿ ಎಲ್ಲರೂ ಒಂದಲ್ಲ ಒಂದು ರೀತಿ ತಪ್ಪಿತಸ್ಥರೇ. ಅತಿರೇಕ ವಾದಗಳಲ್ಲಿ ತೇಲಾಡುವ ಯುವಕರ ಕಣ್ಣುತೆರೆಸುವ ಈ ಬೆಳವಣಿಗೆಯಲ್ಲಿ ನಾಲ್ವರು ಅಮಾಯಕರು ಪ್ರಾಣ ಕಳೆದುಕೊಂಡು ಅವರ ಕುಟುಂಬ ವರ್ಗದವರಿಗೆ ಶೋಕ ಉಂಟು ಮಾಡಿರುವ ಘಟನೆ ಇಡೀ ಭಾರತಕ್ಕೆ ಒಂದು ಎಚ್ಚರಿಕೆಯ ಗಂಟೆ.
ಇತ್ತೀಚಿನ ವರ್ಷಗಳಲ್ಲಿ ಚಲನಚಿತ್ರ ನಟರ ಅಭಿಮಾನಿ ಸಂಘಗಳ ಕಾರ್ಯ ಚಟುವಟಿಕೆ ಸಕ್ರಿಯವಾಗಿ ನಾನಾ ರೀತಿಯ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಈ ಅಭಿಮಾನಿ ಸಂಘಗಳು ಸ್ವಯಂ ಸ್ಫೂರ್ತಿಯಿಂದ ಸ್ಥಾಪನೆಯಾಗಿವೆ. ಹೀಗಾಗಿ ಈ ಸಂಘಗಳ ಮೇಲೆ ಬೇರೆಯವರ ನಿಯಂತ್ರಣ ಇರುವುದಿಲ್ಲ. ತಾವು ಇಷ್ಟಪಡುವ ಚಲನಚಿತ್ರ ನಟರ ಜನ್ಮದಿನಗಳು ಹಾಗೂ ಹೊಸ ಚಿತ್ರಗಳ ಬಿಡುಗಡೆಯ ಸಂದರ್ಭದಲ್ಲಿ ಜಾತ್ರೆಯ ವಾತಾವರಣವನ್ನು ಸೃಷ್ಟಿಸುವ ಈ ಅಭಿಮಾನಿಗಳು ಅಭಿಮಾನದ ಅಮಲಿನಲ್ಲಿ ಕಟೌಟ್‌ಗಳ ಸ್ಥಾಪನೆ ಮಾಡುವಾಗ ಎಚ್ಚರ ವಹಿಸದೆ ಇರುವ ಪ್ರಸಂಗಗಳು ಅದೆಷ್ಟೋ ಏನೋ. ಹಲವಾರು ಸಂದರ್ಭಗಳಲ್ಲಿ ಕೂದಲಿನ ಅಂತರದಲ್ಲಿ ದುರಂತಗಳು ತಪ್ಪಿರುವ ಘಟನೆಗಳೂ ಉಂಟು. ಆದರೆ, ಸೋಮವಾರ ಕಟೌಟ್ ಸ್ಥಾಪನೆ ಮಾಡುವಾಗ ವಿದ್ಯುತ್ ತಂತಿಗೆ ತಗುಲಿ ಮೂವರು ಸಾವಿಗೀಡಾಗಿದ್ದು ಮಾತ್ರ ಅತಿರೇಕವೆಂಬ ಮಾಯಾ ಜಾಲದ ಕೈವಾಡ. ಇದು ಸಾಲದು ಎಂಬಂತೆ ಸತ್ತವರ ಕುಟುಂಬಗಳಿಗೆ ಸಾಂತ್ವನ ಹೇಳಲು ಆಗಮಿಸಿದ್ದ ನಟ ಯಶ್ ಕಾರಿನ ಜೊತೆ ದ್ವಿಚಕ್ರ ವಾಹನದಲ್ಲಿ ರಭಸದಿಂದ ಹೋಗುವಾಗ ಡಿಕ್ಕಿ ಹೊಡೆದು ಇನ್ನೊಬ್ಬ ಯುವಕ ಪ್ರಾಣ ನೀಗಿಕೊಂಡಿರುವುದಂತೂ ಅಭಿಮಾನದ ಅಮಲು ಯಾವ ಹಂತಕ್ಕೆ ತಿರುಗೀತು ಎಂಬುದರ ದಿಕ್ಸೂಚಿ. ಈ ದುರಂತ ಘಟನಾವಳಿಯನ್ನು ಗಮನಿಸಿರುವ ನಟ ಯಶ್ `ದಯಮಾಡಿ ಯಾರೊಬ್ಬರೂ ಈ ರೀತಿಯ ಉತ್ಸವಗಳನ್ನು ಮಾಡಲು ಹೋಗಬೇಡಿ. ನಿಮ್ಮ ಪ್ರಾಣ ಮುಖ್ಯ. ಕುಟುಂಬದವರ ಕಣ್ಣೀರು ಹಾಕಿಸುವುದು ಅಭಿಮಾನವಾಗಲಾರದು' ಎಂದು ಹೇಳಿಕೆಯ ಹಿಂದಿರುವ ಸಂದೇಶ ಯುವಕರ ಕಣ್ತೆರೆಸುವಂಥದ್ದು.
ಈ ಅಭಿಮಾನ ಹಾಗೂ ಅಭಿಮಾನಿ ಸಂಘಗಳು ತಮಿಳುನಾಡಿನ ಸಂಸ್ಕೃತಿಯ ಪ್ರತೀಕವಾಗಿ ಕರ್ನಾಟಕದಲ್ಲೂ ಸ್ಥಾಪನೆಗೊಂಡಿವೆ. ತಮಿಳುನಾಡಿನಲ್ಲಂತೂ ಇದರ ಪ್ರಖರತೆ ಇನ್ನೂ ಹೆಚ್ಚು. ಡಿಎಂಕೆ ನಾಯಕ ಅಣ್ಣಾ ದೊರೈ ತೀರಿಕೊಂಡ ಸಂದರ್ಭದಲ್ಲಿ ಸಂತಾಪ ಸಲ್ಲಿಸಲು ರೈಲಿನಲ್ಲಿ ಹೋಗುತ್ತಿದ್ದವರು ಸೇತುವೆಗೆ ಬಡಿದು ಪ್ರಾಣ ಕಳೆದುಕೊಂಡ ಘಟನೆಯನ್ನು ಮರೆಯುವಂತಿಲ್ಲ. ಮುಖ್ಯಮಂತ್ರಿಯಾಗಿದ್ದ ಎಂಜಿಆರ್ ಹಾಗೂ ಜಯಲಲಿತಾ ಅವರ ಸಾವಿನ ನಂತರವೂ ಕೂಡಾ ಇಂತಹುದೇ ಪ್ರಸಂಗಗಳು ಜರುಗಿದ್ದವು. ಚಲನಚಿತ್ರ ನಟರಾಗಿ ಎಂಜಿಆರ್ ವ್ಯಕ್ತಿತ್ವಕ್ಕೆ ಮಾರುಹೋಗಿ ಅಭಿಮಾನಿಗಳು ಸ್ಥಾಪಿಸಿದ್ದ ಅಭಿಮಾನಿ ಸಂಘಗಳನ್ನು ಸ್ಥಾಪಿಸಿ ಇಡೀ ತಮಿಳುನಾಡಿನಲ್ಲಿ ಅಬ್ಬರದ ವಾತಾವರಣವನ್ನು ಸೃಷ್ಟಿಸಿದ್ದನ್ನು ಮರೆಯುವಂತಿಲ್ಲ. ಇದೇ ಸಂಸ್ಕೃತಿಯನ್ನು ಅನುಸರಿಸಿ ಕರ್ನಾಟಕದಲ್ಲಿಯೂ ಕೂಡಾ ಅಭಿಮಾನಿ ಸಂಘಗಳು ತಲೆ ಎತ್ತಿದವು. ಅಭಿಮಾನವೆಂಬುದು ಶಿಸ್ತಿಗೆ ಒಳಪಟ್ಟಿದ್ದರೆ ಯಾರ ಆಕ್ಷೇಪವೂ ಇರುವುದಿಲ್ಲ. ಆದರೆ, ಲಂಗುಲಗಾಮಿಲ್ಲದೆ ಈ ಅಭಿಮಾನಿಗಳು ವರ್ತಿಸಿದಾಗ ವಿವಾದಗಳು ಸೃಷ್ಟಿಯಾಗುವುದು ಖಂಡಿತ.
ಕಲಾವಿದನ ಕಲೆಯನ್ನು ಮೆಚ್ಚುವುದು ಕಲೆಗಾರಿಕೆ. ಆದರೆ, ಬೇರೊಬ್ಬರ ಜೊತೆ ತಮ್ಮ ಇಷ್ಟದ ಕಲಾವಿದನನ್ನು ಹೋಲಿಕೆ ಮಾಡಿ ಅತಿರೇಕಗಳನ್ನು ಸೃಷ್ಟಿಸುವುದು ಕೊಲೆಗಾರಿಕೆಯ ಮೊದಲ ಹೆಜ್ಜೆ. ಯುವಕರಲ್ಲಿ ಇಂತಹ ಜಾಗೃತ ಪ್ರಜ್ಞೆಯನ್ನು ಮೂಡಿಸಲು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಾಗೂ ಕೌಟುಂಬಿಕ ಪರಿಸರದಲ್ಲಿ ಅವಕಾಶವಾಗಬೇಕು. ಇದು ವ್ಯಕ್ತಿಗತವಾಗಿ ರೂಪುಗೊಳ್ಳಬೇಕೆ ವಿನಃ ಶಾಸನದ ರೂಪದಲ್ಲಿ ಅಲ್ಲ.

Next Article