ಅಭಿವೃದ್ಧಿ-ಅಭಿವೃದ್ಧಿ ಶೂನ್ಯದ ನಡುವಿನ ಚುನಾವಣೆ
ಹುಬ್ಬಳ್ಳಿ: ಶಿಗ್ಗಾವಿ ವಿಧಾನಸಭಾ ಉಪ ಚುನಾವಣೆ ಅಭಿವೃದ್ಧಿ ಮತ್ತು ಅಭಿವೃದ್ಧಿ ಶೂನ್ಯದ ನಡುವೆ ನಡೆಯುತ್ತಿದೆ. ಬಿಜೆಪಿ ಸೋಲಿಸಬೇಕು ಮತ್ತು ಕಾಂಗ್ರೆಸ್ ಗೆದ್ದೇ ಗೆಲ್ಲಬೇಕು ಎಂಬ ಸಂಕಲ್ಪದೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು, ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ, ಸಚಿವರು ಸೇರಿದಂತೆ ಪಕ್ಷದ ಮುಖಂಡರ ಸಭೆ ನಡೆಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಶಿಗ್ಗಾವಿ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು, ಉಸ್ತುವಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರು ಜಿಲ್ಲಾ ಪಂಚಾಯಿತಿಗಳಿಗೆ ಹಾಗೂ ಮೂರು ಪುರಸಭೆಗಳಿಗೆ ಸಚಿವರನ್ನು ನೇಮಿಸಲಾಗಿದೆ. ಸಚಿವರು, ಶಾಸಕರು, ಮುಖಂಡರು ಸ್ವಯಂ ಪ್ರೇರಣೆಯಿಂದ, ಹುಮ್ಮಸ್ಸಿನಿಂದ ಬಂದು ಕೆಲಸ ಮಾಡುತ್ತಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ. ಹೀಗಾಗಿ ಜನರ ಮುಂದೆ ನಮ್ಮ ಸಾಧನೆಗಳನ್ನು ಹೇಳಿ ಮತ ಕೇಳುತ್ತೇವೆ ಎಂದರು.
ಬಿಜೆಪಿಯವರು ವಚನ ಭ್ರಷ್ಟರಾಗಿದ್ದು, ಶಿಗ್ಗಾವಿ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಬಸವರಾಜ ಬೊಮ್ಮಾಯಿಯವರೇ ಮುಖ್ಯಮಂತ್ರಿಯಾಗಿದ್ದರು. ಆದರೂ ಏನು ಕೆಲಸಗಳು ಆಗಿಲ್ಲ. ಕೊಟ್ಟ ಮಾತಿನಂತೆ ಬಿಜೆಪಿ ನಡೆದುಕೊಂಡಿಲ್ಲ ಎಂಬುದು ಗೊತ್ತಾಗಿದೆ ಎಂದು ಹೇಳಿದರು.
ಬಿಜೆಪಿ ಭ್ರಷ್ಟಾಚಾರದಿಂದಲೇ ಪ್ರಾಣ ಕಳೆದುಕೊಂಡ ಜನ ಹೆಚ್ಚು
ಬಿಜೆಪಿ ತನ್ನ ಕಾಲದಲ್ಲಿ ಮಾಡಿದ ಕೋವಿಡ್ ಹಗರಣದಿಂದಲೇ ರಾಜ್ಯದಲ್ಲಿ ಸಾವಿನ ಸಂಖ್ಯೆ ಜಾಸ್ತಿ ಆಗಿದೆ. ಕೊರೋನಾ ಸಾಂಕ್ರಾಮಿಕಗಿಂತ ಬಿಜೆಪಿ ಮಾಡಿದ ಭ್ರಷ್ಟಾಚಾರದಿಂದಲೇ ತುಂಬಾ ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ಗಂಭೀರ ಆರೋಪ ಮಾಡಿದರು.
ಬಿಜೆಪಿಯವರು ತಮ್ಮ ಕಾಲದಲ್ಲಿ ಅಭಿವೃದ್ಧಿ ಮಾಡಿಲ್ಲ. ಆದರೆ ಕೊರೋನಾ ನೆಪದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ. ಈ ವೇಳೆ ಕಾಳಸಂತೆಯಲ್ಲಿ ಲಸಿಕೆ ಮಾಡಿದ್ದರು. ಇಲ್ಲಿನ ಲಸಿಕೆಯನ್ನು ಛತ್ತೀಸಗಡ ಸೇರಿದಂತೆ ಬೇರೆ ರಾಜ್ಯಗಳಿಗೆ ಮಾರಾಟ ಮಾಡಿದರು ಎಂದು ಕುಟುಕಿದರು.
ಬಿಜೆಪಿ ಸರ್ಕಾರವು ಕೋವಿಡ್ ಸಂದರ್ಭದಲ್ಲಿ ನಡೆಸಿದ ಅಕ್ರಮಗಳ ಕುರಿತು ತಿನಿಖೆಗೆ ನಮ್ಮ ಸರ್ಕಾರ ಆಯೋಗ ರಚನೆ ಮಾಡಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಆಗಿಯೇ ಆಗುತ್ತದೆ ಎಂದು ಸಚಿವ ಖಂಡ್ರೆ ಹೇಳಿದರು.