ಅಮ್ಮಾ ಕೇಳಮ್ಮಾ ನಾನೊಂದ ಕನಸ ಕಂಡೇ….
ವಿಜಯಪುರ ಇಂಡಿ ಬಳಿಯ ಲಚ್ಯಾಣದಲ್ಲಿ ಬತ್ತಿಹೋಗಿದ್ದ ತೆರೆದ ಕೊಳವೆ ಬಾವಿಯಲ್ಲಿ ಜಾರಿ ಬಿದ್ದು ಪ್ರಾಣಾಪಾಯದಿಂದ ಪಾರಾಗಿರುವ ಬಾಲಕ ಸಾತ್ವಿಕ್ ಈಗ ಜಗದ್ವಿಖ್ಯಾತ. ಕೇವಲ ೧೫ ತಿಂಗಳ ಈ ಬಾಲಕ ಸುಮಾರು ೨೦ ಗಂಟೆಗಳ ಕಾಲ ಕೊಳವೆ ಬಾವಿಯ ಪಾತಾಳದಲ್ಲಿ ಪಾಪಚ್ಚಿ ಎನ್ನುವಂತೆ ಸಿಕ್ಕಿಬಿದ್ದು ನಂತರ ಏನೂ ಆಗಿಯೇ ಇಲ್ಲ ಎಂಬಂತೆ ಹೊರಬಂದ ಘಟನಾವಳಿ ಬದುಕು ಸಾವಿನ ನಡುವಿನ ಅಂತರ ಮತ್ತು ಗಂಡಾಂತರದ ವ್ಯತ್ಯಾಸವನ್ನು ಎತ್ತಿ ತೋರಿಸುವಂಥದ್ದು.
ನಿಜ. ಸಾತ್ವಿಕ್ ಸಿಕ್ಕಿಬಿದ್ದಿದ್ದ ಪಾತಾಳದ ಅನುಭವವನ್ನು ಬೇರೆಯವರು ಅನುಭವಿಸಲು ಸಾಧ್ಯವಿಲ್ಲ. ಪುಟಾಣಿ ಸಾತ್ವಿಕ್‌ಗೆ ಇದನ್ನು ಮಾತುಗಳಲ್ಲಿ ಬೇರೊಬ್ಬರಿಗೆ ಕಟ್ಟಿಕೊಡುವ ಅರಿವು ಇಲ್ಲ ಹೆಚ್ಚೆಂದರೆ ಅಮ್ಮನಿಗೆ ಅಥವಾ ಅಪ್ಪನಿಗೆ ಪಾತಾಳದ ಕಥೆಯನ್ನು ಕಂಡದ್ದು ಕಂಡಂತೆ ಹೇಳಿಕೊಳ್ಳಬಹುದು ಅಷ್ಟೆ. ಇದನ್ನೆಲ್ಲ ಗಮನಿಸಿದಾಗ ಶರಣೆ ಅಕ್ಕಮಹಾದೇವಿಯ ವಚನ `ಅಕ್ಕಾ ಕೇಳವ್ವಾ ನಾನೊಂದ ಕನಸ ಕಂಡೇ' ಎಂಬ ಸಾಲುಗಳು ನೆನಪಾಗುವುದು ಸಹಜ. ವಚನಗಳಲ್ಲಿ ಲೌಕಿಕವನ್ನು ಮೀರಿ ಅಲೌಕಿಕ ಅನುಭವವನ್ನು ಧ್ವನಿಸುವ ಸಂದೇಶವಿದ್ದರೆ ಈ ಸಾತ್ವಿಕ್ ಮಾತಿನಲ್ಲಿಯೂ ಕೂಡಾ ಅಲೌಕಿಕ ಜಗತ್ತೇ ಪ್ರಧಾನವಾಗಿರಬಹುದೇನೋ. ಏಕೆಂದರೆ, ಏನೂ ಅರಿಯದ ಪುಟಾಣಿ ಸಾತ್ವಿಕ್ ದೇವರ ಸಮಾನ. ಲೌಕಿಕದ ಗಡಿಯನ್ನು ದಾಟಿ ಅಲೌಕಿಕ ಸೀಮೆಯ ಅನುಭವವನ್ನು ಪಾತಾಳದಲ್ಲಿ ಪಾಪಚ್ಚಿ ಎಂಬ ರೂಪಕದ ಮೂಲಕ ಕೊಳವೆ ಬಾವಿ ಮುಚ್ಚುವ ಅಗತ್ಯ. ಹಾಗೆ ಮಾಡದಿದ್ದರೆ ಒದಗುವ ಗಂಡಾಂತರವನ್ನು ಎಚ್ಚರಿಕೆಯ ಗಂಟೆಯಂತೆ ತೋರಿರುವುದು ನಿಜಕ್ಕೂ ದೊಡ್ಡ ಲೋಕಜ್ಞಾನ.
ಅಂದ ಹಾಗೆ, ಬತ್ತಿದ ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳುತ್ತಿರುವ ಪ್ರಕರಣಗಳು ಸುಲಭ ಕಂತುಗಳಂತೆ ನಡೆಯುತ್ತಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ಇದಕ್ಕೆ ಸಾಮಾಜಿಕವಾಗಿ ಸಾಮೂಹಿಕ ಬೇಜವಾಬ್ದಾರಿಯೇ ಕಾರಣ. ಕೊಳವೆ ಬಾವಿಯನ್ನು ತೋಡಿದವರು ಬತ್ತಿ ಹೋದ ನಂತರ ಮುಚ್ಚುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಹಾಗೆ ಮುಚ್ಚದೇ ಹೋದರೆ ಊರಿನ ಜನ ಇದರ ಬಗ್ಗೆ ಎಚ್ಚರಿಸಬೇಕು. ಇದಾವುದೂ ಜರುಗದೇ ಹೋದಾಗ ಸರ್ಕಾರ ರೂಪಿಸಿರುವ ಕಾರ್ಯಸೂಚಿಯ ಅನ್ವಯ ಶಿಸ್ತು ಕ್ರಮ ಜಾರಿಯಾಗಬೇಕು. ಇದಾವ್ಯ ಪ್ರಕ್ರಿಯೆಯೂ ಜರುಗದೇ ಹೋದಾಗ ಯಥಾಸ್ಥಿತಿಯಲ್ಲಿರುವ ಬತ್ತಿದ ಬಾವಿಗೆ ಮಕ್ಕಳು ಜಾರಿ ಬೀಳುವುದು ಸ್ವಾಭಾವಿಕವೋ ಏನೋ. ಲಚ್ಯಾಣ ಗ್ರಾಮದಲ್ಲಿ ಪುಟ್ಟ ಕೋಳಿ ಮರಿಯ ಹಿಂದೆ ಓಡಿದ ಬಾಲಕ ಕೊಳವೆ ಬಾವಿಗೆ ಬಿದ್ದ ಎಂಬ ಸತ್ಯಘಟನೆ ಇನ್ನಾದರೂ ಸರ್ಕಾರಗಳಿಗಷ್ಟೆ ಅಲ್ಲ ಇಡೀ ಸಮಾಜದ ಕಣ್ತೆರೆಸಬೇಕು.
ಕೊಳವೆ ಬಾವಿಗಳು ಬೇಡವೇ ಬೇಡ ಎಂದು ಹೇಳುವ ಸ್ಥಿತಿಯಲ್ಲಿ ಯಾವ ರಾಜ್ಯವಾಗಲೀ ಅಥವಾ ದೇಶವಾಗಲೀ ಇಲ್ಲ. ಏಕೆಂದರೆ, ನೀರಿನ ಕೊರತೆ. ಅಂತರ್ಜಲದ ಪ್ರಮಾಣ ಕುಸಿತದ ಜೊತೆಗೆ ಮಳೆಯ ಅನಿಶ್ಚಿತತೆಯ ಪರಿಣಾಮವಾಗಿ ನೀರಿಗೆ ಹಾಹಾಕಾರದ ವಾತಾವರಣ ಸೃಷ್ಟಿಯಾಗಿರುವುದು ಜಗತ್ತಿನೆಲ್ಲೆಡೆ ಕಂಡುಬರುವ ಸಂಗತಿ. ಭಾರತದಲ್ಲಿ ಈ ಬತ್ತಿದ ಕೊಳವೆ ಬಾವಿಗೆ ಮಕ್ಕಳು ಬಿದ್ದ ಪ್ರಕರಣ ಮೊದಲ ಬಾರಿಗೆ ಜರುಗಿದ್ದು ಹರಿಯಾಣಾದ ಕುರುಕ್ಷೇತ್ರದಲ್ಲಿ. ಪ್ರಿನ್ಸ್ ಎಂಬ ಹೆಸರಿನ ಬಾಲಕ ಜಾರಿ ಬಿದ್ದು ಸಾತ್ವಿಕನಂತೆ ಪಾತಾಳ ಸೇರಿ ಸುದೀರ್ಘ ಕಾರ್ಯಾಚರಣೆಯ ನಂತರ ಮೃತ್ಯುಂಜಯನಂತೆ ಬದುಕಿ ಬಂದು ಇಡೀ ದೇಶಕ್ಕೆ ದೇಶವೇ ನಿಟ್ಟುಸಿರು ಬಿಡುವಂತೆ ಮಾಡಿ ಆತನ ಯೋಗಕ್ಷೇಮ ಬಯಸಿ ಜನ ಅಪಾರ ಪ್ರಮಾಣದ ಹಣವನ್ನು ದೇಣಿಗೆಯಾಗಿ ನೀಡಿದ್ದನ್ನು ಮರೆಯುವಂತಿಲ್ಲ. ಜನರಲ್ಲಿರುವ ಮಮಕಾರಕ್ಕೆ ಕೊನೆ ಮೊದಲಿಲ್ಲ. ಆದರೆ, ಈ ಮಮಕಾರದ ಗುರಿ ಗಂಡಾಂತರ ಸಂಭವಿಸದಂತೆ ನೋಡಿಕೊಳ್ಳುವ ಕಡೆ ತಿರುಗಿದರೆ ಇನ್ನೂ ಹೆಚ್ಚು ಸಾರ್ಥಕ ರೀತಿಯಲ್ಲಿ ಪ್ರಯೋಜವಾದೀತೇನೋ.
ಕರ್ನಾಟಕದಲ್ಲಿ ಇದುವರೆಗೆ ಬತ್ತಿದ ಕೊಳವೆ ಬಾವಿಗಳಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಮಕ್ಕಳ ಪ್ರಕರಣಗಳು ಆರು. ೨೦೦೦ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕರಿಯಾ, ೨೦೦೭ರಲ್ಲಿ ರಾಯಚೂರು ಜಿಲ್ಲೆಯಲ್ಲಿ ಸಂದೀಪ, ೨೦೦೮ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ಕಾಂಚನಾ, ೨೦೧೪ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ಅಕ್ಷತಾ, ೨೦೧೪ರಲ್ಲಿ ತಿಮ್ಮಣ್ಣ, ೨೦೧೭ರಲ್ಲಿ ಕಾವೇರಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದರು ಈ ಪ್ರಕರಣಗಳ ನಡುವೆ ಜಾಗೃತಿಗೊಂಡ ಕರ್ನಾಟಕ ಸರ್ಕಾರ ಸಂಪುಟ ಸಭೆಯ ಮೂಲಕ ಇಂತಹ ಗಂಡಾಂತರಕ್ಕೆ ತಡೆ ಹಾಕಲು ಮುನ್ನೆಚ್ಚರಿಕಾ ಕ್ರಮಗಳನ್ನು ರೂಪಿಸಿ ಅದನ್ನು ಪಾಲನೆ ಮಾಡದವರ ವಿರುದ್ಧ ಶಿಸ್ತು ಹಾಗೂ ದಂಡ ವಿಧಿಸುವ ಕ್ರಮವನ್ನು ಕೂಡಾ ಜಾರಿಗೆ ತಂದಿದೆ. ಆದರೆ, ಸಾರ್ವಜನಿಕರಂತೆ ಸರ್ಕಾರಿ ಅಧಿಕಾರಿಗಳಿಗೂ ಮರೆವಿನ ಕಾಯಿಲೆ. ಯಾವುದಾದರೂ ಪ್ರಕರಣ ಜರುಗಿದ ನಂತರ ಕಾರ್ಯಾಚರಣೆಗೆ ತಲೆಕೆರೆದುಕೊಂಡು ಮುಂದಾಗುವ ಉದಾಸೀನ ನೀತಿಯ ಪರಿಣಾಮವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ರೂಪಿಸಿದ್ದ ಶಾಸನಗಳಿಗೆ ದೇವರೇ ಗತಿ ಎನ್ನುವ ಸ್ಥಿತಿ. ಅಂತೂ ಪಾತಾಳದ ಅದ್ಭುತ ಕಂಡು ಸಾತ್ವಿಕ್ ಕ್ಷೇಮವಾಗಿ ಹಿಂತಿರುಗಿದ್ದಾನೆ ಎಂಬ ನೆಮ್ಮದಿಯ ಜೊತೆ ಜೊತೆಗೆ ಸಾರ್ವಜನಿಕರು ಹಾಗೂ ಅಧಿಕಾರಿಗಳು ಆಯಾ ಪ್ರದೇಶಗಳಲ್ಲಿ ಇನ್ನೂ ಹಾಗೆಯೇ ಇರುವ ಬತ್ತಿದ ಕೊಳವೆ ಬಾವಿಗಳನ್ನು ಮುಚ್ಚಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ಮಾಡುವುದು ನಿಜವಾದ ಅರ್ಥದಲ್ಲಿ ದೇಶ ಸೇವೆ. ಹಾಗೆಯೇ ಕೊಳವೆ ಬಾವಿ ಕೊರೆಸಿದಾಗ ಅದು ವಿಫಲವಾದಲ್ಲಿ ಕೊರೆಸಲು ಅನುಮತಿ ಪಡೆದವರು ಅದನ್ನು ಮುಚ್ಚಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಿದಲ್ಲಿ ಇಂತಹ ದುರಂತಗಳು ಪೂರ್ಣವಾಗಿ ನಿಲ್ಲಲು ಸಾಧ್ಯ.