'ಅಯೋಗ್ಯ' ತಂಡದ ಹೊಸ 'ಅಧ್ಯಾಯ' ಶುರು
ಡಿಸೆಂಬರ್ ೧೧ರಂದು ‘ಅಯೋಗ್ಯ-೨’ ಚಿತ್ರ ಅದ್ಧೂರಿಯಾಗಿ ಮುಹೂರ್ತ ಆಚರಿಸಿಕೊಳ್ಳಲಿದ್ದು, ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಿದೆ.
ಐದಾರು ವರ್ಷಗಳ ಹಿಂದೆ ತೆರೆಕಂಡಿದ್ದ ಅಯೋಗ್ಯ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿ ಮೋಡಿ ಮಾಡಿತ್ತು. ಎಸ್.ಮಹೇಶ್ ಕುಮಾರ್ ನಿರ್ದೇಶನದ ಚೊಚ್ಚಲ ಸಿನಿಮಾ, ಅರ್ಜುನ್ ಜನ್ಯ ಮ್ಯಾಜಿಕಲ್ ಹಾಡುಗಳು ದಾಖಲೆ ಸೃಷ್ಟಿಸಿದ್ದವು. ಈ ಚಿತ್ರದ ‘ಏನಮ್ಮಿ ಏನಮ್ಮಿ’ ಹಾಡು ೧೦೦ ಮಿಲಿಯನ್ ಹಿಟ್ಸ್ ದಾಖಲಿಸಿತ್ತು. ಹಾಗೆಯೇ ಸುಮಾರು ೪೦ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಶತದಿನ ಪೂರೈಸಿದ್ದು ‘ಅಯೋಗ್ಯ’ ತಂಡದ ಹೆಚ್ಚುಗಾರಿಕೆ.
ಇದೀಗ ಅಯೋಗ್ಯ ಸಿನಿಮಾದ ಮುಂದುವರಿದ ಭಾಗಕ್ಕೆ ಯೋಗ ಕೂಡಿಬಂದಿದೆ. ಬಹುತೇಕ ಅದೇ ತಂಡವೇ ಇಲ್ಲಿಯೂ ಮುಂದುವರಿದಿದ್ದು, ನಿರ್ಮಾಣ ಸಂಸ್ಥೆ ಮಾತ್ರ ಬದಲಾಗಿದೆ. ಡಿಸೆಂಬರ್ ೧೧ರಂದು ‘ಅಯೋಗ್ಯ-೨’ ಚಿತ್ರ ಅದ್ಧೂರಿಯಾಗಿ ಮುಹೂರ್ತ ಆಚರಿಸಿಕೊಳ್ಳಲಿದ್ದು, ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಿದೆ.
ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಸಾಧುಕೋಕಿಲ, ತಬಲನಾಣಿ, ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ಅನೇಕ ಹಾಸ್ಯನಟರ ದಂಡೇ ಈ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ವಿಶ್ವಜಿತ್ ರಾವ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಈ ಚಿತ್ರಕ್ಕಿದೆ. ಮಾಸ್ತಿ ಸಂಭಾಷಣೆಗೆ ಪೆನ್ನು ಹಿಡಿದಿದ್ದಾರೆ. ಎಸ್.ವಿ.ಸಿ ಬ್ಯಾನರ್ ಅಡಿಯಲ್ಲಿ ಮುನೇಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಬಹುತೇಕ ಮಂಡ್ಯ, ಬೆಂಗಳೂರು ಹಾಗೂ ಕೇರಳ ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ಈ ಬಾರಿ ದೊಡ್ಡ ಮಟ್ಟದಲ್ಲಿ ಸಿನಿಮಾ ಮೂಡಿಬರಲಿದೆ ಎಂಬ ವಿಶ್ವಾಸ ನಿರ್ದೇಶಕ ಮಹೇಶ್ ಕುಮಾರ್ ಅವರಿಗಿದೆ. “ಅಯೋಗ್ಯ ೨’ ನನ್ನ ಹಿಂದಿನ ಸಿನಿಮಾಗಳಾದ ಅಯೋಗ್ಯ ಹಾಗೂ ಮದಗಜ ಚಿತ್ರಗಳಿಗಿಂತ ದೊಡ್ಡ ಮಟ್ಟದಲ್ಲಿ, ಭಿನ್ನ ರೀತಿಯಲ್ಲಿ ತಯಾರಾಗಲಿದೆ’ ಎನ್ನುತ್ತಾರೆ ನಿರ್ದೇಶಕ ಮಹೇಶ್. ಮತ್ತಷ್ಟು ವಿಷಯಗಳನ್ನು ಅವರು ಮುಹೂರ್ತದ ವೇಳೆ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.