ಅಯೋಧ್ಯೆಯಲ್ಲಿ ಕರ್ನಾಟಕದ ಮಠಾಧೀಶರಿಗೆ ಸಕಲ ಸೌಲಭ್ಯ
ವಿಜಯಪುರ: ಶ್ರೀರಾಮನೂರು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಸಾಕ್ಷೀಕರಿಸಲಿರುವ ಕರ್ನಾಟಕದ ಮಠಾಧೀಶರಿಗೆ ವಸತಿ, ಪ್ರಸಾದ ಸೇರಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ರಾಮಮಂದಿರ ಟ್ರಸ್ಟ್ ಆಮಂತ್ರಣದ ಮೇರೆಗೆ ಅಯೋಧ್ಯೆಯಲ್ಲಿರುವ ಸ್ವಾಮೀಜಿಗಳು ಸಂಯುಕ್ತ ಕರ್ನಾಟಕದೊಂದಿಗೆ ಮಾತನಾಡಿ ಅಯೋಧ್ಯೆಯಲ್ಲಿನ ಸೌಲಭ್ಯಗಳ ಕುರಿತು ವಿವರಿಸಿದ್ದು, ರಾಮಲಲ್ಲಾ ಮೂರ್ತಿಯ ಪ್ರಥಮ ದರ್ಶನಕ್ಕೆ ಕಾತುರರಾಗಿದ್ದಾರೆ.
ಅಯೋಧ್ಯೆಯಲ್ಲಿ ಅತ್ಯಂತ ವ್ಯವಸ್ಥಿತವಾದ ಟೆಂಟ್ಗಳಲ್ಲಿ ಕರ್ನಾಟಕದ ಮಠಾಧೀಶರಿಗೆ ಉಳಿದುಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿನ ಟೆಂಟ್ಗಳಲ್ಲಿ ಅಟ್ಯಾಚ್ಡ್ ಬಾತ್ರೂಂ, ಮಲಗುವ ಕೋಣೆ, ಅನುಷ್ಠಾನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜ್ಞಾನಯೋಗಾಶ್ರಮದ ಶ್ರೀಹರ್ಷಾನಂದ ಸ್ವಾಮಿಗಳು ತಿಳಿಸಿದರು.
ಇಲ್ಲಿಯೇ ಹೈಟೆಕ್ ಆಸ್ಪತ್ರೆ ನಿರ್ಮಿಸಲಾಗಿದ್ದು ಹೆಲಿ ಆ್ಯಂಬುಲೆನ್ಸ್ ಸೌಲಭ್ಯವೂ ಇದೆ. ಇಲ್ಲಿನ ವ್ಯವಸ್ಥೆ ಅತ್ಯಂತ ಅಚ್ಚುಕಟ್ಟಾಗಿದೆ. ಬೆಳಿಗ್ಗೆ ಟಿಫನ್ಗೆ ಇಡ್ಲಿ-ವಡೆ, ಉಪ್ಪಿಟ್ಟು, ಶಿರಾ, ಫಲಹಾರ, ಹಾಲು ನೀಡಲಾಗಿತ್ತು. ಮಧ್ಯಾಹ್ನದ ಊಟಕ್ಕೆ ಗೋಧಿ ರೊಟ್ಟಿ, ಮೂರು ರೀತಿಯ ಭಾಜಿ, ಅನ್ನ ಸಾಂಬಾರ್, ಮೊಸರನ್ನ ನೀಡಲಾಯಿತು. ತಮಿಳುನಾಡು, ಕರ್ನಾಟಕ ಹಾಗೂ ಆಂಧ್ರದ ಮಠಾಧೀಶರಿಗೆ ಒಂದೇ ಕಡೆ ಭೋಜನ ವ್ಯವಸ್ಥೆ ಇತ್ತು. ಆಂಧ್ರದವರು ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.
`ಕರ್ನಾಟಕದ ಮಠಾಧೀಶರನ್ನೆಲ್ಲ ಒಂದು ಕೆಡೆ ಸೇರಿಸಿರುವುದು ಇಲ್ಲಿನ ವಿಶೇಷ. ಇಲ್ಲಿ ಯಾವುದೇ ಮಠ ಬೇಧವಿಲ್ಲ. ಎಲ್ಲ ಸಂತರು ಶ್ರೀರಾಮನ ಭಕ್ತಿಯಲ್ಲಿ ಮಿಂದು ಪುಳಕಿತರಾಗಿದ್ದಾರೆ. ನಾವೆಲ್ಲ ಇಲ್ಲಿ ತುಂಬ ಸಂತೋಷದಿಂದ ಕ್ಷಣಗಳನ್ನು ಕಳೆಯುತ್ತಿದ್ದೇವೆ' ಎಂದು ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮಿಗಳು ಹೇಳಿದು.
೨೦ ವರ್ಷಗಳ ಹಿಂದೆ ನಾನು ಇಲ್ಲಿಗೆ ಬಂದಿದ್ದೆ. ಆಗಿನ ಅಯೋಧ್ಯೆಯನ್ನು ನೋಡಿದವರಿಗೆ ಈಗ ಇಲ್ಲಿರುವ ವ್ಯವಸ್ಥೆ ದಂಗು ಬಡಿಸುತ್ತದೆ. ಆಗ ಸಂದಿ ಸಂದಿ ಗಲ್ಲಿಗಳು, ಗಲೀಜು, ಗಟಾರುಗಳಿದ್ದವು. ಈಗ ಎಲ್ಲೆಲ್ಲೂ ಸ್ವಚ್ಛವಾದ ವಿಶಾಲ ರಸ್ತೆಗಳು. ಮೋದಿ ಇಲ್ಲಿ ಸ್ವರ್ಗವನ್ನೇ ಧರೆಗಿಳಿಸಿದ್ದಾರೆ ಎಂದು ಹೇಳಿದರು.
ಸುತ್ತೂರು ಜಗದ್ಗುರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಜ್ಞಾನಯೋಗಾಶ್ರಮದ ಶ್ರೀಬಸವಲಿಂಗ ಸ್ವಾಮಿಗಳು, ಕೆಸರಟ್ಟಿ ಸ್ವಾಮಿಗಳು, ಆಲಮಟ್ಟಿ ಸ್ವಾಮಿಗಳು ಸೇರಿದಂತೆ ರಾಜ್ಯದ ಹಲವಾರು ಸ್ವಾಮೀಜಿಗಳು ಅಯೋಧ್ಯೆಯಲ್ಲಿದ್ದಾರೆ.