ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆಗೆ ಬೆಳಗಾವಿಯಿಂದಲೇ ಮುಹೂರ್ತ
ಬೆಳಗಾವಿ: ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನೆಗೆ ಬೆಳಗಾವಿಯಿಂದಲೇ ಮುಹೂರ್ತ ನಿಗದಿಯಾಗಿದ್ದು ಸಂತಸದ ಸಂಗತಿ. ಇಡೀ ರಾಜ್ಯದ ಜನ ಹೆಮ್ಮೆಪಡುವ ವಿಚಾರ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣದ ಮತ್ತು ಉದ್ಘಾಟನೆ ಮುಹೂರ್ತ ನೀಡಿದವರು ಬೆಳಗಾವಿಯವರೇ. ಬೆಳಗಾವಿಯ ನವ ಬೃಂದಾವನ ನಿವಾಸಿ ವಿದ್ಯಾ ವಿಹಾರ ವಿದ್ಯಾಲಯದ ಕುಲಪತಿ ವಿಜಯೇಂದ್ರ ಶರ್ಮಾ.
ಏಪ್ರಿಲ್ ೧೫, ೨೦೨೩ರಂದು ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆಗೆ ಶರ್ಮಾ ಮುಹೂರ್ತ ನೀಡಿದ್ದರು. ಅಭಿಜಿತ್ ಮುಹೂರ್ತ, ಮೇಷ ಲಗ್ನದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ನೀಡಿದ್ದ ಮುಹೂರ್ತದ ಬಗ್ಗೆ ರಾಮ ಮಂದಿರ ಟ್ರಸ್ಟ್ ಕಮಿಟಿಯಲ್ಲಿ ಚರ್ಚೆಯಾಗಿತ್ತು. ನಂತರ ರಾಮ ಮಂದಿರದ ಟ್ರಸ್ಟಿಗಳು, ವಿದ್ವಾಂಸರು ಸೇರಿಕೊಂಡು ಮುಹೂರ್ತ ಫೈನಲ್ ಮಾಡಿದ್ದರು.
ಅಯೋಧ್ಯ ರಾಮ ಜನ್ಮ ಭೂಮಿ ಟ್ರಸ್ಟ್ ಕೋಶ್ಯಾಧ್ಯಕ್ಷ ಸ್ವಾಮಿ ಗೋವಿಂದ್ ದೇವ ಗಿರಿ ಅವರ ಮೂಲಕ ಸಂಪರ್ಕ ಆಗಿತ್ತು. ವಿಜಯೇಂದ್ರ ಶರ್ಮಾ ಅವರಿಗೆ ದಿನಾಂಕ ಮತ್ತು ಮುಹೂರ್ತ ನೀಡುವಂತೆ ಏಪ್ರಿಲ್ ೧೩ರಂದು ಗೋವಿಂದ್ ದೇವ ಗಿರಿ ಕೇಳಿದ್ದ. ಇದಾದ ಬಳಿಕ ಎರಡು ದಿನ ಮುಹೂರ್ತ ಗುರುತಿಸಿ ಗೋವಿಂದ್ ದೇವ ಗಿರಿಯವರಿಗೆ ಪತ್ರದ ಮುಖಾಂತರ ರವಾನಿಸಿದ್ದರು.
ರಾಮ ಮಂದಿರ ಭೂಮಿ ಪೂಜೆ ಮುಹೂರ್ತ ಕೂಡ ನೀಡಿದ್ದು ವಿಜಯೇಂದ್ರ ಶರ್ಮಾ ಅವರೇ. ಅಂದು ಪ್ರಧಾನಿ ಮೋದಿಯವರಿಂದ ಭೂಮಿ ಪೂಜೆ ನೆರವೇರಿತ್ತು. ಆಗಸ್ಟ್ ೫, ೨೦೨೦ರಂದು ರಾಮ ಮಂದಿರದ ಶಂಕು ಸ್ಥಾಪನೆಗೂ ವಿಜಯೇಂದ್ರ ಶರ್ಮಾ ದಿನಾಂಕ ಕೊಟ್ಟಿದ್ದರು. ಭದ್ರಯೋಗದಲ್ಲಿ ಭೂಮಿ ಪೂಜೆ ನೆರವೇರಿತ್ತು. ಆದರೆ ಕೊರೊನಾ ಹಿನ್ನೆಲೆ ಬೆಳಗಾವಿಯಲ್ಲೇ ಶರ್ಮಾ ಉಳಿದುಕೊಂಡಿದ್ದ.