ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ

02:10 AM Apr 18, 2024 IST | Samyukta Karnataka

ಸಾರ್ವಜನಿಕ ಬದುಕಿನಲ್ಲಿ ವಚನಸಂಹಿತೆಯ ಪರಿಪಾಲನೆ ಸಾಮಾಜಿಕ ಶಿಷ್ಟಚಾರ ಪರಿಪಾಲನೆಯ ಸಂಕೇತ. ವಚನಸಂಸ್ಕೃತಿ ಯಾವ ಮಟ್ಟದಲ್ಲಿರುತ್ತದೆಯೋ ಸಾಮಾಜಿಕ ಪರಿಸ್ಥಿತಿ ಅದೇ ಮಟ್ಟದಲ್ಲಿರುತ್ತದೆ ಎಂಬುದು ಒಂದು ತಿಳಿವಳಿಕೆ.
ರಾಜಕಾರಣ ಎಂಬುದು ಸಾಮಾಜಿಕ ಪರಿಸ್ಥಿತಿಯ ಮೂಲಕ ಜನ್ಮವೆತ್ತಿದ ಶಿಶು. ಇಂತಹ ಶಿಶುವಿನ ಬಾಯಲ್ಲಿ ವಚನಸಂಸ್ಕೃತಿ ವಿರೂಪಗೊಂಡು ಅಸಹ್ಯ ಹುಟ್ಟಿಸುವ ರೀತಿಯ ದುಸ್ಥಿತಿ ತಲೆದೋರಿದರೆ ಅದಕ್ಕೆ ತಲೆತಗ್ಗಿಸಬೇಕಾದವರು ಸಾರ್ವಜನಿಕರು. ಏಕೆಂದರೆ ರಾಜಕಾರಣದ ಪಾಲಕರು ಸಾರ್ವಜನಿಕರೇ.
ಲೋಕಸಭಾ ಚುನಾವಣೆ ಪ್ರಕ್ರಿಯೆ ದಿನದಿಂದ ದಿನಕ್ಕೆ ಗರಿಗಟ್ಟುತ್ತಿರುವ ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಜಕೀಯ ಮುಖಂಡರ ಬಾಯಿಂದ ಹೊರಬೀಳುತ್ತಿರುವ ಮಾತುಗಳು ಅಸಭ್ಯ ಹಾಗೂ ಅಸಂಸದೀಯ ನಡವಳಿಕೆಯ ದಿಕ್ಸೂಚಿ. ಇನ್ನು ಕರ್ನಾಟಕದ ಸ್ಥಿತಿಯಂತೂ ಹೇಳಿಕೊಳ್ಳಲು ಒಂದು ರೀತಿಯ ಜಿಗುಪ್ಸೆ ಹಾಗೂ ಸಂಕೋಚ. ೧೨ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವಕ್ಕೆ ಇಂಬು ನೀಡಿದ ಬಸವಾದಿ ಶರಣರ ವಚನಗಳ ಒಂದಷ್ಟು ಪರಿಜ್ಞಾನವಾದರೂ ಇದ್ದಿದ್ದರೆ ಈ ಮಹನೀಯರು ಇಂತಹ ಆಣಿಮುತ್ತುಗಳನ್ನು ಉದುರಿಸುತ್ತಿರಲಿಲ್ಲವೇನೋ. ಎದುರಿಗೆ ಯಾವುದೇ ವ್ಯಕ್ತಿ ಇರಲಿ ಅತನನ್ನು ಗೌರವದಿಂದ ಬಹುವಚನ ಬಳಸಿ ಸಂಬೋಧಿಸುವುದು ಸಜ್ಜನರ ಲಕ್ಷಣ. ಆದರೆ ಈಗಿನ ರಾಜಕೀಯ ಮುಖಂಡರ ನಿಘಂಟಿನಲ್ಲಿ ಬಹುವಚನದ ಪ್ರಸ್ತಾಪವೇ ಕೈಬಿಟ್ಟುಹೋಗಿದೆ ಎಂಬುದು ದುರಂತದ ಇನ್ನೊಂದು ಮುಖ.
ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂಬ ವಚನಾಮೃತದ ಮಹತ್ವವನ್ನು ಅರಿತಿದ್ದರೆ ಈ ಮುಖಂಡರು ರಾತ್ರಿ ಕಂಡ ಬಾವಿಗೆ ಹಗಲು ಬೀಳುವ ಪ್ರಯತ್ನ ಮಾಡುತ್ತಿರಲಿಲ್ಲವೆನೋ. ಕರ್ನಾಟಕದ ಮತದಾರರು ಇಂತಹ ಮುತ್ಸದ್ದಿತನವನ್ನು ಬ್ರಹ್ಮಾಸ್ತçವಾಗಿ ಬಳಸಿಕೊಂಡು ಎದುರಾಳಿಗಳನ್ನು ಇರಿಯಲು ಹೊರಟಿರುವವರಿಗೆ ತಕ್ಕಬುದ್ಧಿ ಕಲಿಸಬೇಕು. ಯಾಕೆಂದರೆ ಅವರು ತಾನಾಗಿಯೇ ಕಲಿಯುವ ಜನರಲ್ಲ ಎಂಬುದು ಸಾಬೀತಾಗಿರುವ ಸಂಗತಿ.
ಹೃದಯ ಶ್ರೀಮಂತಿಕೆ ಹಾಗೂ ಭಾಷಾ ಸಮೃದ್ಧಿಗೆ ಹೆಸರುವಾಸಿಯಾಗಿರುವ ಕನ್ನಡನಾಡಿನಲ್ಲಿ ಇಂಥ ಅಪ್ರಬುದ್ಧ ನಡವಳಿಕೆ ನಿಜಕ್ಕೂ ಒಂದು ಕಪ್ಪು ಅಧ್ಯಾಯ. ಇಡೀ ಭಾರತಕ್ಕೆ ಸಂವೇದನಾಶೀಲತೆಯ ವೈಶಿಷ್ಟ್ಯದ ಸೊಬಗನ್ನು ಪರಿಚಯಿಸಿರುವ ಕನ್ನಡದ ಸಂಸ್ಕೃತಿ ಈಗ ದೇಶದ ಮುಂದೆ ಗೇಲಿಗೊಳಗಾಗುವ ದುಸ್ಥಿತಿಗೆ ಕಾರಣರಾರು ಎಂಬುದು ಜನರ ನ್ಯಾಯದ ಗುಡಿಯಲ್ಲಿ ಇತ್ಯರ್ಥವಾಗಬೇಕು. ನಿಜ ಚುನಾವಣೆ ಗೆಲ್ಲುವುದು ಮುಖ್ಯವೇ ಆದರೆ ಎದುರಾಳಿಯನ್ನು ಸೋಲಿಸಲು ವೈಯಕ್ತಿಕ ನೆಲೆಗಟ್ಟಿನ ಬೈಗುಳಗಳನ್ನು ಬಳಸುವ ಮಾರ್ಗವೊಂದೇ ಗುರಿಮುಟ್ಟಿಸುತ್ತದೆ ಎಂಬುದಲ್ಲ.
ಇದು ಕೇವಲ ಹತಾಶೆಯ ಮನಸ್ಸುಗಳಿಗೆ ಉಚಿತ ಮನರಂಜನೆ ಕೊಡಬಹುದು ಅಷ್ಟೇ.
ಚುನಾವಣೆಯಲ್ಲಿ ಚರ್ಚೆಯಾಗಬೇಕಾದದ್ದು ದೇಶ ಕಟ್ಟುವ ಸ್ವಾತಂತ್ರ್ಯದಿಂದ ಇಲ್ಲಿವರೆಗೆ ದೇಶಕ್ಕೆ ಬಂದಿರುವ ಗತಿ ಹಾಗೂ ಪ್ರಗತಿಯ ಜತೆಗೆ ವರ್ತಮಾನದ ವರಾತಗಳನ್ನು ನಿಭಾಯಿಸಲು ಪ್ರಸ್ತುತದಲ್ಲಿ ಕೈಗೊಳ್ಳಬೇಕಾದ ಶಾಸನದ ಪ್ರಕ್ರಿಯೆ ಹಾಗೂ ಇದಕ್ಕೆ ಸಮಾಜದ ಬೆಂಬಲ ಇದರ ನಡುವೆ ರಾಜಕೀಯ ಪಕ್ಷವಾಗಿ ಕೊಟ್ಟ ವಚಗಳನ್ನ ಪರಿಪಾಲಿಸಿರುವ ಸಾಧನೆ. ಹಾಗೊಮ್ಮೆ ಅದು ಆಗದಿದ್ದರೆ ಅದಕ್ಕೆ ಇರಬಹುದಾದ ಸಮರ್ಥನೀಯ ಕಾರಣಗಳನ್ನು ನಿವೇದಿಸಿಕೊಳ್ಳುವುದು ಪ್ರಬುದ್ಧದ ಮಾರ್ಗ. ಏಕೆಂದರೆ ದೇಶವೆಂದರೆ ಕಲ್ಲು, ಮುಳ್ಳುಗಳಲ್ಲ ಅದೊಂದು ಬೃಹತ್ ಜನಸ್ತೋಮ. ಇಂತಹ ಸೂಕ್ಷö್ಮ ಸಂಗತಿಗಳನ್ನು ಕಣ್ಣೆತ್ತಿಯೂ ನೋಡದೆ ಏಕವಚನ ಪ್ರಯೋಗದಲ್ಲಿಯೇ ಹಂಡೆ ಹಾಲು ಕುಡಿದಷ್ಟು ಸಂತೋಷಪಟ್ಟವರಂತೆ ಬೀಗುತ್ತಿರುವುದು ನಾಚಿಗೆಗೇಡಿನ ಸಂಗತಿ. ರಾಜಕೀಯ ಮುಖಂಡರು ಹೀಗೆ ದುರ್ವರ್ತನೆ ತೋರುತ್ತಿದ್ದರೂ ಆಯಾ ಪಕ್ಷಗಳು ನೋಡಿಯೂ ನೋಡದವರಂತೆ ತೆಪ್ಪಗಿರುವುದು ಇನ್ನೊಂದು ಅಪಚಾರ.
ಚುನಾವಣೆ ಎಂಬುದು ಒಂದರ್ಥದಲ್ಲಿ ಉಪಚಾರದ ಮಾತು. ಈಗ ಆಗುತ್ತಿರುವುದು ಅಪಚಾರಗಳೇ ವಿನಃ ಉಪಚಾರದ ಬೆಳವಣಿಗೆಯಲ್ಲ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಸಮೀಪಿಸುತ್ತಿರುವ ಕಾಲಘಟ್ಟದಲ್ಲಿ ಬೇಷರತ್ತಾಗಿ ತಪ್ಪನ್ನು ಒಪ್ಪಿಕೊಂಡು ಸರಿದಾರಿಯಲ್ಲಿ ನಡೆಯುವುದು ಜನತಂತ್ರ ಪದ್ಧತಿ ಹಾಗೂ ಕನ್ನಡ ಕನ್ನಡ ಸಂಸ್ಕೃತಿಗೆ ಒದಗಿಸುವ ನ್ಯಾಯ ಹಾಗೂ ಧರ್ಮ.

Next Article