For the best experience, open
https://m.samyuktakarnataka.in
on your mobile browser.

ಅರಣ್ಯವಾಸಿಗಳಿಗೆ ಬೇಕು ʼಬದುಕು-ಭದ್ರತೆʼ ಭಾಗ್ಯ

12:08 AM Nov 28, 2024 IST | Samyukta Karnataka
ಅರಣ್ಯವಾಸಿಗಳಿಗೆ ಬೇಕು ʼಬದುಕು ಭದ್ರತೆʼ ಭಾಗ್ಯ

ಅಂಕೋಲಾ ತಾಲೂಕಿನ ತಳಗದ್ದೆ ಎಂಬ ಹಳ್ಳಿ ಅರಣ್ಯದಂಚಿಗೆ ಇದೆ. ಅಲ್ಲಿ ಹತ್ತಾರು ಕುಟುಂಬಗಳು ಗುಡಿಸಲು ಕಟ್ಟಿಕೊಂಡು, ತೋಟ ಪಟ್ಟಿ, ಹೋಲ ಗದ್ದೆಗಳಲ್ಲಿ ಕೂಲಿ ಮಾಡುತ್ತ ಶತಮಾನಗಳಿಂದ ವಾಸಿಸುತ್ತಿವೆ. ಅಲ್ಲಿನ ಪಂಚಾಯ್ತಿ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಮಂಗಳಗೌಡ ಎಂಬುವರಿಗೆ ಮನೆ ಮಂಜೂರು ಮಾಡಿ ಮೊದಲ ಕಂತಿನ ಹಣ ಸುಮಾರು ೨೯ ಸಾವಿರ ರೂಪಾಯಿಯನ್ನು ಬಿಡುಗಡೆ ಮಾಡಿತು.
ಸ್ವತಃ ಮಣ್ಣು ಕಲ್ಲಿನ ಕೆಲಸ ಗೊತ್ತಿರುವ ಮಂಗಳಗೌಡ ಕುಟುಂಬ ತಾವೇ ನೆಲ ಅಗೆದು, ಆಯ ತೋಡಿ ಗೋಡೆ ಕಟ್ಟಲು ಆರಂಭಿಸಿದರು. ಯಾರೋ ಮೂಗರ್ಜಿ ಬರೆದರಂತೆ… ಅದು ಅರಣ್ಯ ಜಾಗ ಎಂದು! ಸ್ಥಳೀಯ ಅರಣ್ಯಾಧಿಕಾರಿ ಏಕಾಏಕಿ ಬಂದು ಮಂಗಳಗೌಡರನ್ನು ವಶಕ್ಕೆ ಪಡೆದು ಕಟ್ಟಿದ ಗೋಡೆ ಕೆಡವಿ ಪ್ರಕರಣ ದಾಖಲಿಸಿಕೊಂಡರು!
ಅರೆ, ಶತಮಾನಗಳಿಂದ ಅಜ್ಜ-ಅಪ್ಪ ಎಲ್ಲರೂ ಇದೇ ಜಾಗದಲ್ಲಿದ್ದೇವೆ. ನಮ್ಮದೇ ಗುಡಿಸಲು ಇದ್ದ ಜಾಗದಲ್ಲಿ ಮನೆ ಕಟ್ಟಲು ಪಂಚಾಯ್ತಿಯೇ ಹಣ ಮಂಜೂರು ಮಾಡಿದೆ. ಈಗ ಹೇಗೆ ಅರಣ್ಯ ಜಾಗವಾಗುತ್ತದೆ. ತನ್ನ ಹಕ್ಕು ಪಾರಂಪರಿಕವಾಗಿ ಬಳಕೆ ಮಾಡಿಕೊಂಡಿದ್ದ ಜಾಗದಿಂದ ಒಕ್ಕಲೆಬ್ಬಿಸಿ ನಿರ್ಗತಿಕನನ್ನಾಗಿ ಮಾಡಿದ್ದು ಏಕೆ. ಇದೇನು ಹೀಗೆ…? ಬಡ ಮಂಗಳಗೌಡನ ಪ್ರಶ್ನೆ ಇದು.
ಇನ್ನೊಂದು ಘಟನೆ. ಅದೇ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಹಳ್ಳಿಯೊಂದರ ಅರಣ್ಯ ಭೂಮಿ ಅತಿಕ್ರಮಣದಾರರದ್ದು. ೧೯೭೮ರ ಪೂರ್ವ ತೋಟ ಮಾಡಲು ಅರಣ್ಯದಂಚಿನಲ್ಲಿ ಕೃಷಿ ಮಾಡುತ್ತಿದ್ದರು. ಭೂ ದಾಖಲೆಯೂ ಆಗಿರುವ, ಪಟ್ಟಾ ನೀಡಿರುವ ಪ್ರಕರಣವಿದು. ತಂದೆಯ ಹೆಸರಿಗೆ ಮಂಜೂರಾತಿ ಪತ್ರವಿದೆ. ಇದಾಗಿ ಸುಮಾರು ಹನ್ನೆರಡು ವರ್ಷವೇ ಆಯಿತು. ತಂದೆ ಮೃತಪಟ್ಟರು. ಆದರೆ ಮಕ್ಕಳ ಭೂ ದಾಖಲೆಯಲ್ಲಿ ಹೆಸರು ನೋಂದಾಯಿಸುತ್ತಿಲ್ಲ.
ಇಂಥವು ಒಂದೆರಡು ಪ್ರಕರಣಗಳಲ್ಲ. ಸಾವಿರಾರು ಪ್ರಕರಣಗಳಿವೆ. ವಾರಸಾ ನೋಂದಣಿಯಾಗದೆ ಅಮಾಯಕರು ಅಲೆಯುತ್ತಿದ್ದಾರೆ. ಇವರೆಲ್ಲರ ಬದುಕು ದುರ್ಭರವಾಗುತ್ತಿವೆ.
ಈಗ ವಿಷಯ ಏಕೆ ಈ ಪ್ರಸ್ತಾಪವಾಯಿತೆಂದರೆ, ಮುಖ್ಯಮಂತ್ರಿ ದಿನಾಂಕ ೨೬ರಂದು ತಮ್ಮ ಕಚೇರಿಯಲ್ಲಿ, ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸವಾಗಿರುವ ಜನರಿಗೆ ಸೂಕ್ತ ಸವಲತ್ತುಗಳನ್ನು ಕಲ್ಪಿಸುವ ಹಾಗೂ ಇವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದರು. ಬಹುಶಃ ಹದಿನೈದು ಇಪ್ಪತ್ತು ವರ್ಷಗಳ ಈಚೆಗೆ ಈ ವಿಷಯಕ್ಕೆ ಸಂಬಂಧಿಸಿ ಇಂತಹ ಸಭೆ ನಡೆದಿರಲಿಲ್ಲ.
ಅರಣ್ಯದಂಚಿನ ಜನರ ಗೋಳು, ಅಲ್ಲಿ ದೊರೆಯದ ಸೌಲಭ್ಯಗಳ ಕುರಿತು ಇತ್ತೀಚೆಗೆ ವ್ಯಾಪಕ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿಯಲ್ಲಿಯೋ ಏನೋ, ಮುಖ್ಯಮಂತ್ರಿ ಜನಸಾಮಾನ್ಯರಿಗೆ ಹತ್ತಿರವಾದರು. ಅವರ ರೋದನ ಆಲಿಸುವ ಕುರಿತ ಸಭೆಯನ್ನು ನಡೆಸಿದ್ದಾರೆ. ಆ ಮಟ್ಟಿಗೆ ಕೆಲವು ಖಡಕ್ ಸಂದೇಶ, ಕಾಲಮಿತಿ ಹಾಗೂ ಸೂಚನೆಗಳನ್ನು ನೀಡುವ ಮೂಲಕ ಸಿದ್ದರಾಮಯ್ಯ ಅರಣ್ಯದಂಚಿನ ಜನರ ಸಮಸ್ಯೆಗಳಿಗೆ ಆ ಮಟ್ಟಿಗೆ ಕಿವಿಯಾಗಿದ್ದಾರೆ.
ಅಂಕೋಲಾ ತಾಲ್ಲೂಕಿನ ತಳಗದ್ದೆಯ ಘಟನೆಯ ಇಡೀ ಅರಣ್ಯದಂಚಿನ ಜನರ ಭಯದ ಬದುಕನ್ನು ಮತ್ತು ಅತಂತ್ರ ಸ್ಥಿತಿಯನ್ನು ತೋರಿಸಿದೆ. ಎರಡು ದಿನಗಳ ಹಿಂದಷ್ಟೇ ಈ ಘಟನೆ ನಡೆದದ್ದು. ಶತಮಾನಗಳಿಂದ ಅಲ್ಲಿಯೇ ನೆಲೆಸಿ ಅತ್ಯಂತ ದಯನೀಯ ಬದುಕು ಸಾಗಿಸಿದ ಹಾಲಕ್ಕಿ ಒಕ್ಕಲಿಗ ಜನ ಇನ್ನೆಷ್ಟು ವರ್ಷಗಳ ಕಾಲ ಈ ಆಕ್ರಂದನಗಳೊಂದಿಗೆ ಏನೊಂದೂ ಸೌಲಭ್ಯಗಳಿಲ್ಲದೆ ಬದುಕಬೇಕೇನೋ?
ಅದಕ್ಕೂ ಹೆಚ್ಚಾಗಿ ಮಾನವೀಯತೆ, ಸರ್ಕಾರದ ನಿರ್ದೇಶನ, ಸರ್ವೋಚ್ಚ ನ್ಯಾಯಾಲಯದ ಹತ್ತು ಹಲವು ತೀರ್ಪು-ತೀರ್ಮಾನಗಳ ಯಾವೊಂದು ಪರಿವೇ ಇಲ್ಲದೇ ಬಡಪಾಯಿಗಳ ಮೇಲೆ ಕರಾವಳಿ, ಮಲೆನಾಡು, ಅಭಯಾರಣ್ಯದಂಚಿನ ಹಳ್ಳಿಗಳಲ್ಲಿ ನಿತ್ಯವೂ ಪ್ರಹಾರ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯನವರ ಮೈಸೂರು ಜಿಲ್ಲೆಯಲ್ಲೊಂದರಲ್ಲೇ ಅರಣ್ಯದಂಚಿನ ೨೯೬೩ ಕುಟುಂಬಗಳಿಗೆ ನಿವೇಶನ ಇಲ್ಲ. ನಿವೇಶನದ ಪಟ್ಟಾ ಇದ್ದರೂ ಮನೆ ಕಟ್ಟಿಕೊಳ್ಳಲು ಅಸಾಧ್ಯ. ಹಾಗೇ ಅರಣ್ಯದಂಚಿನ ೨೧ ಹಾಡಿಗಳಿಗೆ, ೧೯೪ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ರಸ್ತೆಯಿಲ್ಲ. ಸ್ಮಶಾನವಿಲ್ಲ. ಆಸ್ಪತ್ರೆಯಿಲ್ಲ.
ಒಂದು ಕಾಲದಲ್ಲಿ ಉತ್ಪಾದನೆ ಹೆಚ್ಚಿಸಬೇಕೆಂಬ ಒಂದೇ ಘನ ಉದ್ದೇಶಕ್ಕೆ ಸಾಗುವಳಿಗೆ ಯೋಗ್ಯವಾದ ಭೂಮಿಯನ್ನೆಲ್ಲ ರೈತಾಪಿ ವರ್ಗಕ್ಕೆ ಕೃಷಿಗಾಗಿ ನೀಡಲಾಗಿತ್ತು. ಈಗ ಈ ಬಡಪಾಯಿ ರೈತರೆಲ್ಲ ಶಾಪಗ್ರಸ್ತ. ಮಕ್ಕಳು ಮೊಮ್ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ಕೂಡ ಕೊಡಿಸಲಾಗದೆ ಅಲ್ಲಿಯೇ ಉಳಿದು ಕೂಲಿನಾಲಿ ಮಾಡಿ ಬದುಕುತ್ತಿರುವ ಜನತೆ ನೆಮ್ಮದಿಯ ಬದುಕು ಅಥವಾ ಹೊಸ ಜೀವನ ಕಾಣುವ ಸ್ಥಿತಿಯಲ್ಲಿ ಇಲ್ಲ. ಹೀಗೆ ಬದುಕುವುದಕ್ಕೆ ಅಧಿಕಾರಿಗಳಿಂದ ನೂರಾರು ಕಾಯ್ದೆ ಕಟ್ಟಳೆಗಳು!
ಕೇಂದ್ರ ಸರ್ಕಾರ ೧೯೭೮ರ ಪೂರ್ವ ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ ನೀಡುವಂತೆ, ಆ ಭೂಮಿ ಜಮೀನು ಮಂಜೂರು ಮಾಡುವಂತೆ ನಿದೇರ್ಶನ ನೀಡಿತ್ತು. ಹಲವು ರಾಜ್ಯಗಳು ಅದನ್ನು ಯಶಸ್ವಿಯಾಗಿ ಜಾರಿ ಮಾಡಿದವು. ಆದರೆ ಕರ್ನಾಟಕದಲ್ಲಿ ಮಾತ್ರ ಜನ ವಿಭಿನ್ನ ಸಮಸ್ಯೆಗಳನ್ನು ಎದುರಿಸಿ ಅನುಭವಿಸುತ್ತಿದ್ದಾರೆ.
ಆ ನಂತರ ಸರ್ಕಾರವೇ ಪರಂಪರಾಗತವಾಗಿ ನೆಲೆಸಿರುವ ಭೂಮಿಯನ್ನು ಅವರಿಗೆ ನೀಡುವಂತೆ ನಿರ್ದೇಶನ ನೀಡಿತು. ಅದಕ್ಕೊಂದು ಅರಣ್ಯ ಸಮಿತಿ, ಕಾನೂನು ಕಟ್ಟಳೆಗಳನ್ನು ರೂಪಿಸಿತು. ಅದೂ ಅನುಷ್ಠಾನಗೊಂಡಿಲ್ಲ. ಆ ಜನರಿಗೆ ಯಾವ ಸೌಲಭ್ಯವೂ ಇಲ್ಲ. ಹೊಸ ಬದುಕಂತೂ ದೂರವೇ ಉಳಿಯಿತು.
ಒಂದು ಷರತ್ತು ನೋಡಿ. ೧೯೭೮ರ ಪೂರ್ವ ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ ಕೊಟ್ಟ ಸರ್ಕಾರ ಅದರಲ್ಲಿ ಅರಣ್ಯ ಇಲಾಖೆಯ ಹೆಸರನ್ನೂ ನಮೂದಿಸಿಕೊಂಡಿತು. ಪರಿಣಾಮ ಜನರಿಗೆ ಪಟ್ಟಾ ಏನೋ ಬಂತು. ಸಮಾಧಾನಪಟ್ಟುಕೊಳ್ಳುವಂತಿಲ್ಲ. ಜಮೀನು ಅಭಿವೃದ್ಧಿ, ಮನೆ ಕಟ್ಟಿಸಿಕೊಳ್ಳಲು ಸಾಲ ಸೌಲಭ್ಯ ಪಡೆಯುವಂತಿಲ್ಲ. ದೊರೆಯುವುದೂ ಇಲ್ಲ. ಏಕೆಂದರೆ ಯಾವ ಬ್ಯಾಂಕು ಅಥವಾ ಹಣಕಾಸು ಸಂಸ್ಥೆ ಸಾಲ ನೀಡುವುದಿಲ್ಲ! ಅಲ್ಲಿ ಬದುಕಲಿಕ್ಕೂ ನೂರೆಂಟು ಕಟ್ಟಳೆಗಳು. ಮಂಜೂರಾದ ಹಿರಿಯ ವ್ಯಕ್ತಿ ಮೃತಪಟ್ಟರೆ ಅವನ ಮಕ್ಕಳಿಗೆ ವಾರಸಾ ದಾಖಲೆಯಲ್ಲಿ ನಮೂದಾಗಲ್ಲ!.
ತಂದೆಯ ಜಮೀನು ಮರಣಾನಂತರ ವಾರಸುದಾರರಿಗೆ ಬರಬೇಕಲ್ಲವೇ? ನೋಂದಣಿ ಮಾಡಿಕೊಳ್ಳಲು ಏನಡ್ಡಿ? ಎಂದರೆ ಕಂದಾಯ ಇಲಾಖೆಯ ಅಧಿಕಾರಿಗಳು ಹೇಳುವುದೇ ಬೇರೆ. ಅದು ಮೃತನ ಅನುಭೋಗಕ್ಕೆ ಇದ್ದದ್ದು. ಅನುಭವಿಸಲು ನಿಮಗೆ ಮುಂದುವರಿಯುತ್ತದೆ. ಆದರೆ ನೋಂದಣಿ ಮಾಡಿಸಲು ಅವಕಾಶ ಇಲ್ಲ ಎಂದು.
ರಾಜ್ಯದ ಸುಮಾರು ೭೫ ಸಾವಿರಕ್ಕೂ ಅಧಿಕ ಕುಟುಂಬಗಳು ಇಂತಹ ಅತಾರ್ಕಿಕ ಸಮಸ್ಯೆಗೆ ಸಿಲುಕಿದ್ದಾರೆ. ತನ್ನ ಹೆಸರು ನೋಂದಾಯಿಸಿ ಎಂದು ವಾರಸುದಾರರ ಕೋರ್ಟಿಗೆ ಅಲೆಯಬೇಕು. ಸಾವಿರಾರು ರೂಪಾಯಿ ಖರ್ಚು ಮಾಡಬೇಕು. ನೂರಾರು ಕಿಲೋ ಮೀಟರು ಓಡಾಡಬೇಕು. ಅದು ಬೇಗ ಹರಿಯುವ ವಿವಾದವೋ, ಅದೂ ಇಲ್ಲ.
ಇಂತಹ ಅನಗತ್ಯ ಕೊಕ್ಕೆಯನ್ನು ಸಾವಿರಾರು ಬಡಪಾಯಿಗಳು ಅನುಭವಿಸುತ್ತಿದ್ದಾರೆ. ಬುಡಕಟ್ಟು ಜನರ ಹಕ್ಕುಪತ್ರ ವಿತರಣೆಗೆ ಮತ್ತು ಹಕ್ಕು ಹೊಂದಿದವರು ಸರ್ಕಾರದ ಸವಲತ್ತು ಪಡೆಯುವ ಗೊಂದಲಗಳಿಗೆ ಮಂಗಳವಾರದ ಸಿಎಂ ಸಭೆ ಸಾಕಷ್ಟು ಗಮನ ಹರಿಸಿದೆ. ತಾಂತ್ರಿಕ ದೋಷವನ್ನು ನಿವಾರಿಸಿ ಅವರಿಗೂ ವ್ಯವಸ್ಥಿತ ಬದುಕು ಕಲ್ಪಿಸಿ ಭದ್ರತೆ ಒದಗಿಸುವ ಕುರಿತು ಸರ್ಕಾರ ನಿರ್ದೇಶನ ನೀಡಿರುವುದು, ಎಲ್ಲಕ್ಕೂ ಹೆಚ್ಚಾಗಿ ನೊಂದವರ ಸಮಸ್ಯೆಯನ್ನು ಕೃಷ್ಣಾದವರೆಗೆ ತಂದು ಸಭೆ ನಡೆಸಿರುವುದು ಶ್ಲಾಘನೀಯ.
ಆದರೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಶಾಸಕರು ಜನರ ಅಹವಾಲು ಕೇಳಿದ್ದರೆ ಈ ಸ್ಥಿತಿ ಇರುತ್ತಿರಲಿಲ್ಲವೇನೋ? ಹಾಗೆಯೇ ಕಂದಾಯ, ಅರಣ್ಯ, ಸಮಾಜ ಕಲ್ಯಾಣ ಇಲಾಖೆಯ ಸಮನ್ವಯದ ಕಾರ್ಯ ನಿರ್ವಹಣೆ, ಜೊತೆಗೆ ಅರಣ್ಯ ಮತ್ತು ಕಂದಾಯ ಮಂತ್ರಿಗಳಿಗೆ ಆ ಜನರ ಗೋಳು ಕೇಳುವ ಹಾಗೂ ವಾಸ್ತವ ಅರ್ಥ ಮಾಡಿಕೊಳ್ಳುವ ಗಂಭೀರತೆ ಇದ್ದಿದ್ದರೆ ಸಮಸ್ಯೆ ಬಗೆಹರಿಯುವಲ್ಲಿ ಒಂದಿಷ್ಟು ಪೂರಕವಾಗಿ ಕೆಲಸ ಮಾಡುತ್ತಿತ್ತೇನೋ?
ಏನೇ ಇರಲಿ. ಆದಿವಾಸಿ, ಬುಡಕಟ್ಟು ಹಾಗೂ ಅರಣ್ಯ ಅತಿಕ್ರಮಣದಾರರ ಅಂತೂ ಒಂದು ಮಹತ್ವದ ಸಭೆ ನಡೆಯಿತಲ್ಲ. ಅದನ್ನು ಮೆಚ್ಚಬೇಕು. ಹಾಗೆಂದು ಇದಕ್ಕೇ ನಿಲ್ಲಬಾರದು. ಮುಖ್ಯಮಂತ್ರಿ ನೀಡಿದ ಕಾಲಮಿತಿ ಹಾಗೂ ಸೂಚನೆಗಳು ಪಾಲನೆಯಾಗಬೇಕು. ರಾಜ್ಯದಲ್ಲಿ ಲಕ್ಷಾಂತರ ಪೋತಿ ಪ್ರಕರಣಗಳಿವೆಯಲ್ಲ, ಅವುಗಳಲ್ಲಿ ಬಹುತೇಕರು ಈ ಅರಣ್ಯದಂಚಿನ ಜನಕ್ಕೆ ಸೇರಿದವುಗಳೇ ಆಗಿರುವುದನ್ನು ಸಿಎಂ ಸಭೆಯ ನಂತರವಾದರೂ ಗಂಭೀರವಾಗಿ ಪರಿಗಣಿಸಬೇಕು.
ರಾಜ್ಯ ಹಾಗೂ ರಾಷ್ಟ್ರದ ಹಲವು ಯೋಜನೆಗಳಿಗೆ ಭೂಮಿ-ಮನೆ ತ್ಯಾಗ ಮಾಡಿದ ಸಂತ್ರಸ್ತರದ್ದೂ ಇದೇ ಸ್ಥಿತಿ. ಎಪ್ಪತ್ತು ವರ್ಷವಾದರೂ ಶರಾವತಿಗಾಗಿ ಭೂಮಿ ಕಳೆದುಕೊಂಡ ಜನರ ಬದುಕು ಇನ್ನೂ ಭದ್ರವಾಗಿಲ್ಲ. ಶರಾವತಿ, ಕೊಡಸಳ್ಳಿ, ಕದ್ರಾ, ಆಲಮಟ್ಟಿ, ಕಾರಂಜಾದಂತಹ ಹಲವು ರಾಷ್ಟ್ರೀಯ ಯೋಜನೆಗಳಲ್ಲಿ ಯಾವುದರಲ್ಲೂ ಸಂತ್ರಸ್ತರಿಗೆ ನ್ಯಾಯ ದೊರಕಿಲ್ಲ.
ಎಲ್ಲರದ್ದೂ ಇದೇ ಸಮಸ್ಯೆ. ವಾರಸಾ ನೋಂದಣಿಯಾಗುತ್ತಿಲ್ಲ. ಅರಣ್ಯ ಇಲಾಖೆಯ ಹೆಸರನ್ನು ದಾಖಲೆಯಿಂದ ತೆಗೆಯುತ್ತಿಲ್ಲ. ಯಾವ ಸೌಲಭ್ಯವೂ ದೊರೆಯುವುದಿಲ್ಲ. ಹೀಗಾದರೆ ಜನ ಭೂಸ್ವಾಧೀನ ಯೋಜನೆಗಳೆಂದರೆ ಸಹಜವಾಗಿ ವಿರೋಧಿಸುತ್ತಾರೆ. ಕಂದಾಯ ಸಚಿವರು `ಪೋಡಿ ಅಭಿಯಾನ' ಆರಂಭಿಸಿದರು. ಆದರೆ ಅದೇ ರೀತಿ ಅರಣ್ಯ ಸಚಿವರೊಂದಿಗೆ ಅರಣ್ಯದಂಚಿನ ಜನರ, ಹಾಡಿಗಳ, ಪರಂಪರಾಗತ ನಿವಾಸಿಗಳ, ಅಲ್ಲದೆ ಸಂತ್ರಸ್ತರ ಅಹವಾಲನ್ನು ಈಡೇರಿಸುವ ಜಿಲ್ಲಾಮಟ್ಟದ ಅಭಿಯಾನ ಆರಂಭಿಸಿ, ಸ್ಥಳದಲ್ಲೇ ಇವನ್ನು ಪರಿಹರಿಸಬೇಕಾಗಿದೆ. ಆಗ ಮುಖ್ಯಮಂತ್ರಿಗಳ ಸಭೆಗೆ ಅರ್ಥ- ಗಂಭೀರತೆ ಮತ್ತು ಸ್ಪಷ್ಟತೆಗಳು ಬರುತ್ತವೆ. ನಿಮ್ಮನ್ನು ಒಕ್ಕಲೆಬ್ಬಿಸುವುದಿಲ್ಲ. ಮಾನವೀಯ ದೃಷ್ಟಿಯಿಂದ ಕಾಣುತ್ತೇವೆ ಎಂದ ಮಾತ್ರಕ್ಕೆ ಆ ಜನರ ಬದುಕಿಗೆ ಭದ್ರತೆ ದೊರೆಯದು. ದಾಖಲೆಪತ್ರಗಳು ತಕ್ಷಣ ಸರಿಯಾಗಬೇಕು. ಇದನ್ನು ಆದ್ಯತೆಯ ಕೆಲಸವಾಗಿ ಸರ್ಕಾರ ಪರಿಗಣಿಸಿದರೆ ಮಾತ್ರ ಮಾನವೀಯತೆಯ ಮಾತಿಗೆ ಅರ್ಥ. ಅಲ್ಲವೇ?