ಅರಣ್ಯಾಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಶಾಸಕ ಪೂಂಜಾ
06:15 PM Dec 05, 2023 IST | Samyukta Karnataka
ದಕ್ಷಿಣ ಕನ್ನಡ: ಅರಣ್ಯಾಧಿಕಾರಿಗಳಿಂದ ಮನೆ ತೆರವು ಪ್ರಕರಣದ ವಿಷಯವನ್ನು ಬಿಜೆಪಿ ಶಾಸಕ ಹರೀಶ್ ಪೂಂಜಾ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಸದನದಲ್ಲಿ ಶಾಸಕರು ಪಕ್ಷಾತೀತವಾಗಿ ಆಗ್ರಹಿಸಿದರು.
ಬಿಜೆಪಿ ಶಾಸಕ ಹರೀಶ್ ಪೂಂಜಾ ವಿಷಯ ಪ್ರಸ್ತಾಪಿಸಿದ್ದು, ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದರು. ಆದರೆ ಈ ವೇಳೆ ಬರಗಾಲ ಚರ್ಚೆ ಆರಂಭಿಸಿ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು. ಇದರಿಂದಾಗಿ ಕೋಪಗೊಂಡ ಶಾಸಕ ಪೂಂಜಾ ಸದನದ ಬಾವಿಗಿಳಿದು ಪ್ರತಿಭಟನೆ ಮುಂದಾದರು. ಇವರೊಂದಿಗೆ ಜೆಡಿಎಸ್, ಬಿಜೆಪಿ ಸದಸ್ಯರು ಕೂಡ ಪ್ರತಿಭಟನೆಗೆ ಮುಂದಾದರು. ಬಳಿಕ ಹಕ್ಕುಬಾಧ್ಯತಾ ಸಮಿತಿಗೆ ಸ್ಪೀಕರ್ ಖಾದರ್ ಶಿಫಾರಸು ಮಾಡಿದ್ದಾರೆ. ಅರಣ್ಯ ಇಲಾಖೆಯ ಮೂವರು ಅಧಿಕಾರಿಗಳ ಅಮಾನತಿಗೆ ಆಗ್ರಹಿಸಲಾಯಿತು. ಶಾಸಕ ಹರೀಶ್ ಪೂಂಜಾ ವಿರುದ್ಧ ಪ್ರಕರಣ ವಾಪಸ್ಗೆ ಬಿಜೆಪಿ ಸದಸ್ಯರು ಆಗ್ರಹಿಸಿದರು. ಆದರೆ, ಸಚಿವ ಈಶ್ವರ ಖಂಡ್ರೆ ಪ್ರಕರಣವೇ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.