ಅರ್ಧತಾಸಿನಲ್ಲಿ ಅಮೆರಿಕ…
ಭಾರತದಿಂದ ಕೇವಲ ಅರ್ಧ ತಾಸಿನಲ್ಲಿ ಅಮೆರಿಕ ತಲುಪುವ ವ್ಯವಸ್ಥೆ ಮಾಡುತ್ತೇನೆ. ಇದಕ್ಕಾಗಿ ಎಲ್ಲ ತಯಾರು ಮಾಡಿಕೊಳ್ಳಲಾಗಿದೆ ಎಂದು ಎಲಾನ್‌ಮಸ್ಕ್ ಅಲಿಯಾಸ್ ಎಲ್ಲಪ್ಪ ಮಸ್ಕಿ ಹೇಳಿದ್ದೇ ತಡ ಆತನಿಗೆ ನೂರಾರು ಫೋನ್ ಕರೆಗಳು ಹೋಗುತ್ತಿವೆ. ಸಾವಿರಾರು ಮಿಸ್‌ಕಾಲ್‌ಗಳು ಆಗುತ್ತಿವೆ. ಅರ್ಧತಾಸಿನಲ್ಲಿ ಅಮೆರಿಕ ಅಂದರೆ ಸುಮ್ಮನೇನಾ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಪಂ. ಲೇವೇಗೌಡರು ಸೋದಿಮಾಮಾ ಅವರಿಗೆ ಕಾಲ್ ಮಾಡಿ ಅವನು ಎಲ್ಲ ಏನೇನೋ ಹೇಳುತ್ತಿದ್ದಾನೆ. ಅದು ಸುಳ್ಳೋ ನಿಜವೋ ಅನ್ನುವುದನ್ನು ನೀವೇ ಪತ್ತೆ ಹಚ್ಚಬೇಕು ಎಂದು ಹೇಳಿದರು. `ಹೂಂ…' ಅಂದ ಸೋದಿಮಾಮಾರು ಕಿಸೆಯಿಂದ ಫೋನ್ ತೆಗೆದು ಸೀದಾ ಎಲಾನ್ ಮಸ್ಕ್ ನಂಬರ್‌ಗೆ ಕರೆ ಮಾಡಿದರು. ಆ ಕಡೆಯಿಂದ…
ಎಲಾನ್: ಹಲೋ ಹೂ ಈಸ್ ದಿಸ್? ಅಂದ
ಸೋದಿಮಾಮಾ: ಹಲೋ ನಾನಪ್ಪ ಆರಿಸಿ ಬಂದ ಮೇಲೆ ಮರ್ತಬಿಟ್ಯಾ?
ಎಲಾನ್: ಅರೆರೆ… ಹಂಗೇನಿಲ್ಲ ಮಾಮಾ.. ಏರ್‌ಫೋನ್ ಹಾಕಿಕೊಂಡಿದ್ದೇನಲ್ಲ ಅದಕ್ಕೆ
ಸೋದಿಮಾಮಾ: ಇರಲಿ..ಇರಲಿ…ನೀ ಏನೋ ಹೇಳಿದೆಯಂತಲ್ಲ, ನಿಜವೇನು?
ಎಲಾನ್: ನಾನೇನು ಹೇಳಿದಿನಿ? ನೆನಪಿಲ್ಲ ಬುಡ್ರೀ…
ಸೋದಿಮಾಮಾ: ಹಂಗಲ್ಲೋ, ನಮ್ಮೂರಿಂದ ಅರ್ಧತಾಸಿನಲ್ಲಿ ಅಮೆರಿಕಕ್ಕೆ ಅಂದ್ಯAತೆ…
ಎಲಾನ್: ಹೌದ್ರಿ ಮಾಮಾರ… ಅಲ್ಲಿಂದ ಅರ್ಧ ತಾಸಿನಲ್ಲಿ ಮುಟ್ಟಸ್ತೀನಿ
ಸೋದಿಮಾಮಾ: ಟ್ರ್ಯಾವಲಿಂಗ್ ಬಿಜಿನೆಸ್ ಶುರು ಮಾಡಿದೀಯ?
ಎಲಾನ್: ಹಂಗೇನಿಲ್ಲರೀ… ನೀವೊಳ್ಳೆ..
ಸೋದಿಮಾಮಾ: ಮತ್ತೆ ಹೆಂಗೋ ಮಾರಾಯ? ಇಲ್ಲಿ ಜನ ನನಗ ಗಂಟು ಬಿದ್ದಾರ…
ಎಲಾನ್: ನಿಮ್ಮ ಮುಂದೆ ಏನು ಮುಚ್ಚಿಡೋದು… ಹೇಳಿಬಿಡ್ತೀನಿ ಕೇಳ್ರಿ… ಅರ್ಧ ತಾಸಿನಲ್ಲಿ ಅಮೆರಿಕ ಮುಟ್ಟುಸ್ತೀನಿ ಅಂದರೆ ಯಾರು ಬೇಡ ಅಂದಾರು? ಎಲ್ಲರೂ ಬರುತ್ತಾರೆ… ಆದರೆ ಹಾಗೆ ಬಂದವರ ಕಣ್ಣುಕಟ್ಟಿ ಗಾಡಿಯಲ್ಲಿ ಕೂಡಿಸುತ್ತೇನೆ. ಅಲ್ಲಿಂದ ಹೊಸಗುಡ್ಡ, ಇರಪಾಪುರ, ವರ್ನಖ್ಯಾಡ, ಲಾದುಂಚಿ ಹೀಗೆ ತಿರುಗಾಡಿಸಿ ಗೋಸ್ಲಹಳ್ಳದ ಹತ್ತಿರ ಕರೆದುಕೊಂಡು ಬಂದು ಹಾಂ…ಇಳೀರಿ..ಇಳೀರಿ ಅಮೆರಿಕಾ ಬಂತು ಇಳೀರಿ ಅಂತೀವಿ… ಅವರು ಇಳಿದ ತಕ್ಷಣ ನಾವು ಗಾಡಿ ಬಿಟ್ಟುಕೊಂಡು ಹೋಗುತ್ತೇವೆ ಎಂದು ಹೇಳಿದ. ಅದಕ್ಕೆ ಸೋದಿಮಾಮಾ… ತಥ್ ಇಡೋ ಫೋನು ಎಂದು ಕಾಲ್ ಕಟ್ ಮಾಡಿದರು.