For the best experience, open
https://m.samyuktakarnataka.in
on your mobile browser.

ಅಲೆಮಾರಿ ರಾಜಕಾರಣದ ಆಟ

03:02 AM Jan 29, 2024 IST | Samyukta Karnataka
ಅಲೆಮಾರಿ ರಾಜಕಾರಣದ ಆಟ

ಬಿಹಾರ ಒಂದು ಕಾಲದಲ್ಲಿ ಬರಗಾಲಕ್ಕೆ ತದ್ರೂಪಿಯಂತೆ ದೇಶದಲ್ಲಿ ಮನೆಮಾತಾಗಿತ್ತು. ಆದರೆ, ಈಗ ಬರಗಾಲದ ಸ್ಥಿತಿ ಕೊಂಚ ಸುಧಾರಣೆಯತ್ತ ವಾಲುತ್ತಿರುವ ನಡುವೆಯೇ ರಾಜಕಾರಣದ ಪರಿಸ್ಥಿತಿ ದಿಕ್ಕಾಪಾಲಾಗುತ್ತಿರುವ ಬೆಳವಣಿಗೆ ಇನ್ನೊಂದು ರೀತಿಯಲ್ಲಿ ತದ್ರೂಪಿಯಾಗುತ್ತಿರುವುದು ಕೂಡಾ ಮತ್ತೆ ಮನೆ ಮಾತು. ಊಳಿಗಮಾನ್ಯ ಪದ್ಧತಿಯ ಪಳೆಯುಳಿಕೆ ಈಗಲೂ ಮುಂದುವರಿಯುತ್ತಿರುವ ಕಾಲಘಟ್ಟದಲ್ಲಿ ರಾಜಕಾರಣಿಗಳು ತರಹೆವಾರಿ ಮಾಯಾಬಜಾರ್ ರೀತಿಯ ಆಟಗಳನ್ನು ರೂಪಿಸಿ ಸ್ವಯಂಘೋಷಿತ ಮುಖಂಡರಂತೆ ಜನರ ಮೇಲೆ ಸವಾರಿ ಮಾಡುತ್ತಿರುವುದು ನಿಜಕ್ಕೂ ಪ್ರಜಾತಂತ್ರಕ್ಕೆ ದೊಡ್ಡ ಅಪಚಾರ. ವೈಚಾರಿಕ ಬದ್ಧತೆ ಹಾಗೂ ಸಜ್ಜನಿಕೆಗೆ ಹೆಸರಾಗಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸುಲಭ ಕಂತುಗಳಲ್ಲಿ ಮಿತ್ರತ್ವ ಹಾಗೂ ಶತ್ರುತ್ವವನ್ನು ಬದಲಾಯಿಸಿಕೊಳ್ಳುತ್ತಿರುವ ಬೆಳವಣಿಗೆ ನಿಜಕ್ಕೂ ಒಂದು ಒಗಟು. ಒಂದು ಕಾಲದಲ್ಲಿ ಜ್ಞಾನಕ್ಕೆ ಹೆಸರಾಗಿದ್ದ ಬಿಹಾರದಲ್ಲಿ ಈಗ ಅಜ್ಞಾನವೂ ಕೂಡಾ ನಾಚುವ ರೀತಿಯಲ್ಲಿ ರಾಜಕೀಯ ಆಟಗಳು ಗರಿಬಿಚ್ಚಿಕೊಳ್ಳುತ್ತಿರುವ ಬೆಳವಣಿಗೆ ಬಿಹಾರಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಅಪಾಯಕಾರಿ. ಕೇವಲ ೧೧ ವರ್ಷಗಳ ಅವಧಿಯಲ್ಲಿ ೯ ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಅಷ್ಟೂ ಬಾರಿಯೂ ಬೇರೆ ಬೇರೆ ಪಕ್ಷಗಳ ಜೊತೆ ಮೈತ್ರಿ ಏರ್ಪಡಿಸಿಕೊಂಡಿರುವ ನಿತೀಶ್ ಕುಮಾರ್ ತಮ್ಮ ವರ್ತನೆಗೆ ದೇಶದ ಮುಂದೆ ಸಮಜಾಯಿಷಿ ಕೊಡಬೇಕಾದ ಅನಿವಾರ್ಯತೆ ಬಂದೊದಗಿದೆ.
ಈಗ ಅಲೆಮಾರಿ ರಾಜಕಾರಣದ ಯುಗ. ಯಾರು ಯಾವ ಪಕ್ಷದಿಂದ ಯಾವ ಪಕ್ಷಕ್ಕೆ ಜಿಗಿಯುತ್ತಾರೆ ಎಂಬುದನ್ನು ಲೆಕ್ಕ ಹಾಕುವ ಹೊತ್ತಿಗೆ ಇನ್ನೊಂದು ಪಕ್ಷಕ್ಕೆ ಜಿಗಿಯುವ ಸಿದ್ಧತೆ ಕಂಡುಬರುತ್ತಿರುವುದು ದೇಶದ ಆರೋಗ್ಯದ ದೃಷ್ಟಿಯಿಂದ ಒಳ್ಳೆಹಯದಲ್ಲ. ಎಲ್ಲ ಪಕ್ಷಗಳಿಗೂ ಒಂದು ರೀತಿಯ ಖಚಿತ ವೈಚಾರಿಕತೆ ಇದ್ದೇ ಇರುತ್ತದೆ. ಅದನ್ನು ಒಪ್ಪುವುದು ಬಿಡುವುದು ಬೇರೆ ಪ್ರಶ್ನೆ. ಆದರೆ, ಪಕ್ಷವೊಂದಕ್ಕೆ ಸೇರುವಾಗ ಅದರ ವೈಚಾರಿಕತೆಯನ್ನು ಒಪ್ಪಿಕೊಂಡಂತೆಯೇ ಆಗುತ್ತದೆ. ಆದರೆ, ಪಕ್ಷ ಸೇರಿದ ಕೆಲವೇ ಸಮಯದಲ್ಲಿ ಜಿಗಿದು ಇನ್ನೊಂದು ಪಕ್ಷದಲ್ಲಿ ಗುರುತಿಸಿಕೊಳ್ಳುವುದು ಯಾವ ವೈಚಾರಿಕತೆ ಎಂಬುದು ಯಾರೊಬ್ಬರಿಗೂ ಅರ್ಥವಾಗುತ್ತಿಲ್ಲ. ರಾಜಕೀಯ ಪಂಡಿತರೊಬ್ಬರು ವಿಶ್ಲೇಷಿಸುವಂತೆ ರಾಜಕೀಯ ವೈಚಾರಿಕತೆ ಎಂಬುದು ಅಮೀಬಾ ಸಂಸ್ಕೃತಿಯಂತೆ. ಇದಕ್ಕೆ ಆಕಾರವೂ ಇಲ್ಲ ಖಚಿತ ಗುರಿಯೂ ಇಲ್ಲ. ಗಾಳಿ ಬಂದಾಗ ತೂರಿಕೋ ಎಂಬುದಷ್ಟೆ ಇದರ ಹಿಂದಿರುವ ಒತ್ತಾಸೆ. ಇಂತಹ ರಾಜಕೀಯ ಪರಿಸ್ಥಿತಿಯನ್ನು ಮತದಾರರು ಸಹಿಸಿಕೊಳ್ಳುತ್ತಿರುವುದೇ ಸೋಜಿಗದ ಸಂಗತಿ. ಕೆಲವರನ್ನು ಹೊರತುಪಡಿಸಿದರೆ, ಪಕ್ಷಾಂತರ ಮಾಡದ ಮುಖಂಡರಿಲ್ಲ. ಅಂತಹ ಮುಖಂಡರಿದ್ದರೂ ಅವರಿಗೆ ಪಕ್ಷಾಂತರದ ಅವಕಾಶಗಳು ಸೃಷ್ಟಿಯಾಗಿಲ್ಲ. ಇನ್ನು ವೈಚಾರಿಕ ನಿಷ್ಠೆಯಿಟ್ಟುಕೊಂಡು ಒಂದೇ ಪಕ್ಷದಲ್ಲಿ ಇರುವವರು ಒಂದು ರೀತಿಯಲ್ಲಿ ಕಾಲಕಸ. ಇದಕ್ಕೆ ಯಾರು ಹೊಣೆ?
ದೇಶದಲ್ಲಿ ಈಗಿರುವ ಪಕ್ಷಾಂತರ ನಿಷೇಧ ಶಾಸನ ಚಿಲ್ಲರೆ ಪಕ್ಷಾಂತರಕ್ಕೆ ನಿಷೇಧ ಹೇರುತ್ತದೆ ಅಷ್ಟೆ. ಸಗಟು ಪಕ್ಷಾಂತರಕ್ಕೆ ಮುಕ್ತ ಅವಕಾಶ. ಇದರ ಜೊತೆಗೆ ಪಕ್ಷಾಂತರ ಶಾಸನ ಅನ್ವಯವಾಗುವುದು ಕೇವಲ ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ. ಕನಿಷ್ಠ ಪಕ್ಷ ಸರ್ವಸಮ್ಮತವಾಗಿರುವ ನೀತಿ ಸಂಹಿತೆಯಾದರೂ ಜಾರಿಯಲ್ಲಿದ್ದಿದ್ದರೆ ಮುಖಂಡರ ಮಟ್ಟದಲ್ಲಿ ಒಂದು ಶಿಸ್ತನ್ನು ತಂದು ತಕ್ಕಮಟ್ಟಿಗೆ ಸಂಭಾವಿತ ರಾಜಕೀಯ ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಾಗುತ್ತಿತ್ತೇನೋ.
ಬಿಹಾರದ ರಾಜಕಾರಣದಲ್ಲಿ ನಿತೀಶ್ ಕುಮಾರ್ ಒಬ್ಬರೇ ಖಳನಾಯಕರಲ್ಲ. ತುರ್ತು ಪರಿಸ್ಥಿತಿ ನಂತರ ಅಧಿಕಾರಕ್ಕೆ ಬಂದವರ ಪೈಕಿ ಬಹುತೇಕ ಮಂದಿ ಇದೇ ದಾರಿಯನ್ನು ಹಿಡಿದು ಗುಂಪುಗಾರಿಕೆಯ ಮೂಲಕವೇ ಮೇಲುಗೈ ಸಾಧಿಸಿ ಗುರುತ್ವಾಕರ್ಷಣ ಶಕ್ತಿಯ ಮೂಲಕ ಪಕ್ಷಗಳನ್ನು ಧ್ವಂಸ ಮಾಡಿ ಜನಾದೇಶವನ್ನು ವಿಧ್ವಂಸಕ್ಕೆ ಗುರಿ ಮಾಡಿರುವ ಸಂಗತಿಗಳು ಸಾಕಷ್ಟು. ನಿತೀಶ್ ಕುಮಾರ್ ಒಬ್ಬ ಸಜ್ಜನ. ಆದರೆ, ರಾಜಕಾರಣದ ಕೊಪ್ಪರಿಗೆಯಲ್ಲಿ ಸಜ್ಜನಿಕೆ ಚಲಾವಣೆಯಿಲ್ಲದ ನಾಣ್ಯವಾಗಿಬಿಟ್ಟ ಮೇಲೆ ಚಲಾವಣೆಗೆ ಸುಲಭವಾಗುವ ಮಾರ್ಗಗಳನ್ನು ರೂಪಿಸಿಕೊಳ್ಳುತ್ತಲೇ ಒಮ್ಮೆ ಕಾಂಗ್ರೆಸ್ ಪಕ್ಷದ ಸನಿಹಕ್ಕೆ, ಇನ್ನೊಮ್ಮೆ ಎನ್‌ಡಿಎ ಸನಿಹಕ್ಕೆ, ಇವಲ್ಲದೆ ಅಗತ್ಯ ಬಿದ್ದಾಗ ಪರಮವೈರಿ ಲಾಲೂ ಪ್ರಸಾದ್ ನೇತೃತ್ವದ ಆರ್‌ಜೆಡಿ ಜಗಲಿಯಲ್ಲಿ ವಿರಾಜಮಾನವಾಗುವ ನಿತೀಶ್ ಕುಮಾರ್ ಬಹುಶಃ ಈಗಿನ ಕಾಲದ ರಾಜಕೀಯ ಮಾದರಿಯೋ ಅಥವಾ ಎಚ್ಚರಿಕೆಯ ಗಂಟೆಯೋ ಎಂಬುದು ಅರ್ಥವಾಗದೆ ಉಳಿದಿರುವ ಸಂಗತಿ.