ಅಲ್ಲಾನ ಹೆಸರಿನಲ್ಲಿ ವಕ್ಫ್ ಭೂ ಕಬಳಿಕೆ
ಧಾರವಾಡ: ಭಾರತದಲ್ಲಿ ವಕ್ಫ್ ಕಾನೂನು ಮಾಡಿದ್ದೇ ತಪ್ಪು. ಅಲ್ಲಾನ ನೆಪದಲ್ಲಿ ವಕ್ಫ್ ಮೂಲಕ ಭೂ ಕಬಳಿಸುವವರಿಗೆ ಕಡಿವಾಣ ಹಾಕಬೇಕಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೆಹರು ಕಾಲದಲ್ಲಿ ಕಾಂಗ್ರೆಸ್ ಯಾವ ಉದ್ದೇಶಕ್ಕೆ ವಕ್ಫ್ ಕಾನೂನು ಮಾಡಿತು ಗೊತ್ತಿಲ್ಲ. ಆದರೆ, ೨೦೧೩ರಲ್ಲಿ ವಕ್ಫ್‌ಗೆ ಪುನಃ ಅಪರಿಮಿತ ಅಧಿಕಾರ ಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದರು.
ಸದ್ಯದ ಬೆಳವಣಿಗೆ ಗಮನಿಸಿದರೆ ಕೊನೆ ಪಕ್ಷ ವಕ್ಫ್ ಕಾನೂನಿಗೆ ತಿದ್ದುಪಡಿ ತರುವ ಅವಶ್ಯಕತೆ ಇದೆ. ದೇಶದಲ್ಲಿ ವಕ್ಫ್ ಪರಿಮಿತಿಯೇ ಇಲ್ಲದಾಗಿದೆ. ಜಗತ್ತಿನ ಯಾವ ದೇಶದಲ್ಲೂ ಇಂಥ ವಕ್ಫ್ ಕಾನೂನು ಇಲ್ಲ. ಹಿಂದೂಗಳು, ರೈತರು ಎಚ್ಚೆತ್ತುಕೊಳ್ಳಬೇಕು. ಮುಂದೊಂದು ದಿನ ನಾವಿರುವ ಮನೆ, ನಿಂತ ನೆಲವನ್ನೇ ವಕ್ಫ್ ತನ್ನ ಆಸ್ತಿ ಎಂದರೂ ಅಚ್ಚರಿಯಿಲ್ಲ. ಅಷ್ಟೊಂದು ಅಪರಿಮಿತ ಅಧಿಕಾರ ಕೊಟ್ಟು ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.