For the best experience, open
https://m.samyuktakarnataka.in
on your mobile browser.

ಅಲ್ಲಿದೆ ಅರಮನೆ ಇಲ್ಲಿ ಬಂದೆ ಸುಮ್ಮನೆ

03:00 AM Nov 22, 2024 IST | Samyukta Karnataka
ಅಲ್ಲಿದೆ ಅರಮನೆ ಇಲ್ಲಿ ಬಂದೆ ಸುಮ್ಮನೆ

ಮಣ್ಣಿನ ಮನೆಯಲ್ಲಿ ವಾಸವಾಗಿದ್ದ ನಿಂಗಪ್ಪನನ್ನು ಎಲ್ಲರೂ ನಿಗೂಢನಿಂಗ ಎಂದು ಕರೆಯುತ್ತಿದ್ದರು. ಆತನನ್ನು ಅರ್ಥವೇ ಮಾಡಿಕೊಳ್ಳಲಾಗುವುದಿಲ್ಲ. ಆತ ಎಲ್ಲಿಂದ ಬಂದ… ಆತನ ನಿಜವಾದ ಊರು ಯಾವುದು? ತಂದೆ, ತಾಯಿ ಯಾರು? ಅಣ್ಣ ತಮ್ಮ, ಅಕ್ಕತಂಗಿ ಇದ್ದಾರೆಯೋ ಇಲ್ಲವೋ ಇದ್ದರೆ ಎಲ್ಲಿದ್ದಾರೆ ಎನ್ನುವ ಕುತೂಹಲ ಊರವರನ್ನು ಕಾಡುತ್ತಿತ್ತು. ಕೆಲವೊಂದು ಬಾರಿ ನಿಂಗನ ಬಾಯಿ ಬಿಡಿಸಬೇಕು ಎಂದು ಅನೇಕರು ಸರ್ಕಸ್ ಮಾಡುತ್ತಿದ್ದರೂ ಆತ ಏನೊಂದೂ ಮಾತನಾಡುತ್ತಿರಲಿಲ್ಲ. ಎಲ್ಲದಕ್ಕೂ ನಕ್ಕು ಸುಮ್ಮನಾಗುತ್ತಿದ್ದ. ಕರಿಭಾಗೀರತಿ ನಿಂಗನನ್ನು ಕರೆದು ತಾಟಿನಲ್ಲಿ ಬೆಲ್ಲದ ಚಹಕೊಟ್ಟು ಏನ್ ನಿಂಗಪ್ಪ ನೀನು ಇನ್ನೂ ಚಿಕ್ಕವನಿರಬೇಕು ಆವಾಗ ನಾನು ನಿಮ್ಮ ಮನೆಗೆ ಬಂದಿದ್ದೆ. ನೀನು ಅವತ್ತು ಭಯಂಕರ ಹಠ ಮಾಡುತ್ತಿದ್ದೆ. ಬೇಕಾದರೆ ನಿಮ್ಮ ಅಮ್ಮನಿಗೆ ಕೇಳು ಎಂದಾಗ ನಿಂಗ ನಕ್ಕು ಸುಮ್ಮನಾದ. ಅಷ್ಟಕ್ಕೂ ಸುಮ್ಮನಾಗದ ಭಾಗೀರತಿ ಬೇಕಾದರೆ ಅಮ್ಮನ ನಂಬರ್ ಕೊಡು ನಾನೇ ಮಾತನಾಡಿ ಜ್ಞಾಪಿಸುತ್ತೇನೆ ಎಂದು ಹೇಳಿದಾಗ… ಅಯ್ಯೋ ಅಮ್ಮನಿಗೆ ಕಿವಿ ಸಮಸ್ಯೆ ಇದೆ ಹಾಗಾಗಿ ಆಕೆ ಮೊಬೈಲ್ ಉಪಯೋಗಿಸುವುದಿಲ್ಲ. ನಿಮಗೇ ಗೊತ್ತಿದೆ ಲ್ಯಾಂಡ್‌ಫೋನು ಈ ದಿನಗಳಲ್ಲಿ ಯಾರೂ ಇಡುವುದಿಲ್ಲ ಎಂದು ಸಮಜಾಯಿಷಿ ಹೇಳಿ ಅಲ್ಲಿಂದ ಎದ್ದುಬಂದ. ಹೇಗಾದರೂ ಮಾಡಿ ನಿಂಗನ ಇತಿಹಾಸ ಪತ್ತೆ ಹಚ್ಚಬೇಕು ತೋಟಿಗೇರಂಬ್ರಿ ಐಡಿಯಾ ಮಾಡಿದ. ಮರುದಿನ ನಿಂಗನನ್ನು ಕರೆದುಕೊಂಡು ಹೋಗಿ ಶೇಷಮ್ಮನ ಹೊಟೆಲ್‌ನಲ್ಲಿ ಎರಡೆರಡು ಪ್ಲೇಟ್ ನಾಷ್ಟಾ ಮಾಡಿಸಿದ. ಆವಾಗಲೇ ಅನುನಯದಿಂದ ಮಾತನಾಡಿ ಸಂಜೆ ಸಿಗು ಬಹಳದಿನವಾಯಿತು ಎಂದು ಹೇಳಿದ. ನಿಂಗ ಹೂಂ ಅಂದ. ಅಂದು ಸಂಜೆ ಇಬ್ಬರೂ ಎಲ್ಲಿ ಸೇರಬೇಕೋ ಅಲ್ಲಿ ಸೇರಿದರು. ಅಂತಹ ಹೊತ್ತಿನಲ್ಲಿ ಎಮೋಶನಲ್ ಆಗೇ ಆಗುತ್ತಾರೆ ಎಂದು ಬಲವಾಗಿ ನಂಬಿದ್ದ ತೋಟಗೇರಂಬ್ರಿ ಅದು ಇದು ಮಾತನಾಡಿದ. ನಿಂಗನೂ ಸಂಬಂಧ ಸಾಟಿ ಇಲ್ಲದ ಮಾತು ಆಡುತ್ತಿದ್ದ. ಇದೇ ಸಮಯ ಅಂದುಕೊಂಡ ಅಂಬ್ರಿ… ಅಲ್ಲ ನಿಂಗೇಸಿ ನಿಮ್ಮ ಊರು ಯಾವುದು? ಎಂದ. ಈಶಾನ್ಯ ದಿಕ್ಕಿನತ್ತ ಕೈ ಮಾಡಿದ. ಹಾಗಾದರೆ ಬೆಂಗಳೂರೇ? ಅಂದ ಹೌದು ಎಂದು ಹೇಳಿದ ನಿಗೂಢ ನಿಂಗ… ಹಾಗಾದರೆ ನಿಮ್ಮ ಮನೆ? ಎಂದು ಕೇಳಿದಾಗ….. ನಿಟ್ಟುಸಿರು ಬಿಟ್ಟ ನಿಂಗ… ಮೂರು ಅಂತಸ್ತು… ಭವ್ಯ ಕಟ್ಟಡ… ಆಜೂ ಬಾಜೂ ಕೊಠಡಿಗಳು…. ಮುಂದೆ ನೂರಾರು ಕಾರುಗಳು… ಹಾ ಹಾ ಹಾ ಅಂದ… ಹಾಗಾದರೆ ನಿಮ್ಮ ಮನೆ ವಿಧಾನಸೌಧವೇ ಎಂದು ಕೇಳಿದಾಗ… ಹೌದೌದು ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂದು ನಿಂಗ ಅಂದ. ಅಂಬ್ರಿ ಮೂರ್ಛೆ ಹೋದ