ಅಲ್ಲಿಯೂ ಇಲ್ಲ-ಇಲ್ಲಿಯೂ ಇಲ್ಲ
ಕೇವಲ ಅವರಷ್ಟೇ ಊಟಕ್ಕೆ ಕರೆಯಬೇಕಿಲ್ಲ. ನಾನೂ ಊಟಕ್ಕೆ ಕರೆಯುತ್ತೇನೆ ಎಂದು ಪಂಚಾಯ್ತಿ ಮೆಂಬರ್ ಪಾಮಣ್ಣ ತನಗೆ ಬೇಕಾದವರಿಗೆ ಊಟಕ್ಕೆ ಕರೆಯಬೇಕು ಎಂದು ನಿರ್ಧರಿಸಿದ. ರೊಟ್ಟಿ ಕಾರಬ್ಯಾಳಿ ಮಾಡಿಸಿ ಎಲ್ಲರಿಗೂ ಊಟ ಹಾಕಿದೆನೆಂದರೆ ನಾನೇ ಅಧ್ಯಕ್ಷ ಗ್ಯಾರಂಟಿ ಎಂದು ತಿಳಿದುಕೊಂಡು ಎಲ್ಲರನ್ನೂ ಊಟಕ್ಕೆ ಆಹ್ವಾನಿಸಿದ. ಕರೆದರೂ ಹೋಗದಿದ್ದರೆ ಪ್ರಮಾದವಾದೀತು ಎಂದು ಮೆಂಬರ್‌ಗಳು ಊಟಕ್ಕೆ ಹೋದರು. ಇನ್ನೊಂದೆಡೆ ಎದುರಾಳಿ ಮೆಂಬರ್ ಅರೆ… ಅವನಷ್ಟೇ ಯಾಕೆ ನಾನೂ ಊಟಕ್ಕೆ ಕರೆಯುತ್ತೇನೆ ಎಂದು ಅನ್ನ-ಪುಂಡಿಪಲ್ಯೆ ಮಾಡಿಸಿ ಊಟಕ್ಕೆ ಕರೆದ. ಅಲ್ಲಿಯೂ ಸಹ ಮೆಂಬರ್‌ಗಳು ಊಟ ಮಾಡಿ ಬಂದರು. ಊಟಕ್ಕೆ ಯಾಕೆ ಕರೆದರು ಎಂದು ಗೊತ್ತಿಲ್ಲದೇ ಹಲವು ಮೆಂಬರ್‌ಗಳು ಊಟ ಮಾಡಿ ಬರುತ್ತಿದ್ದರು. ಪಾಮಣ್ಣನಿಗೆ ಆಗದವರು ಯಾರೋ ಮೆಂಬರ್‌ಗಳನ್ನು ಭೇಟಿಯಾಗಿ ತನ್ನ ಲಾಭಕ್ಕಾಗಿ ನಿಮ್ಮನ್ನು ಊಟಕ್ಕೆ ಕರೆದಿದ್ದಾನೆ. ಮುಂದಿನ ದಿನಗಳಲ್ಲಿ ಅವನೇ ಎಲ್ಲ ಆಗಬೇಕು ಅಂತ ಮಾಡಿದ್ದಾನೆ ಎಂದು ಹೇಳಿದರು. ಕೂಡಲೇ ಹಲವು ಮೆಂಬರ್‌ಗಳು ಸಭೆ ಸೇರಿ ಊಟದ ಮೀಟಿಂಗ್‌ನ ಸಲುವಾಗಿ ನಾವು ಏನಾದರೂ ಮಾಡಲೇಬೇಕು ಎಂದು ಐಡಿಯಾ ಮಾಡಿದರು. ಮರುದಿನದಿಂದ ಊರಲ್ಲಿ ಪಟ್ಟಿ ಎತ್ತಿದರು. ಯಾಕೆ ಎಂದು ಕೇಳಿದರೆ ಊಟಕ್ಕೆ ಎಂದು ಹೇಳಿದರು. ಜನರೂ ಸಹ ಸಪೋರ್ಟ್ ಮಾಡಿದರು. ಅಂದಿನಿಂದ ಊಟದ ವ್ಯವಸ್ಥೆ ಆರಂಭವಾಯಿತು. ದಿನಾಲೂ ಒಬ್ಬೊಬ್ಬ ಮೆಂಬರ್ ಎಲ್ಲ ಮೆಂಬರ್‌ಗಳಿಗೆ ಕರೆದು ಊಟ ಹಾಕಿಸತೊಡಗಿದರು. ಇವತ್ತು ಈ ಮೆಂಬರ್ ಊಟ, ನಾಳೆ ಆ ಮೆಂಬರ್ ಊಟ… ಹೀಗೆ ವಾರದ ಏಳೂ ದಿನಗಳೂ ಸಹ ಊಟಕ್ಕೆ ಮೀಸಲಾಯಿತು. ಮೆಂಬರ್‌ಗಳ ತೂಕ ಗಣನೀಯವಾಗಿ ಹೆಚ್ಚಾಗತೊಡಗಿತು. ಪಂಚಾಯ್ತಿ ಮೆಂಬರ್ ಪತ್ನಿಯರು ಮನೆಯಲ್ಲಿ ಮೆಂಬರ್‌ಗಳಿಗೆ ಅಡುಗೆ ಉಳಿಸುವುದನ್ನೇ ಬಿಟ್ಟರು. ಎಷ್ಟು ದಿನಾ ಅಂತ ಊಟ ಹಾಕಿಯಾರು? ಕೊನೆಗೆ ಒಂದು ದಿನ ಊಟ ಹಾಕುವುದು ಬಂದ್ ಆಯಿತು. ಮೆಂಬರ್‌ಗಳು ಇವತ್ತೆಲ್ಲಿ ಊಟ ಅಂದರೆ ಎಲ್ಲಿಯೂ ಇಲ್ಲ ಎಂಬ ಉತ್ತರ ಬರುತ್ತಿತ್ತು. ಇಷ್ಟುದಿನ ಹೊರಗೆ ಮಾಡುತ್ತಿದ್ದಿಯಲ್ಲ ಈಗಲೂ ಅಲ್ಲಿಯೇ ಊಟ ಮಾಡಿ ಎಂದು ಗದರಿದರು. ಆ ಮೆಂಬರ್‌ಗಳಿಗೆ ಈಗ ಅಲ್ಲಿಯೂ ಇಲ್ಲ ಇಲ್ಲಿಯೂ ಇಲ್ಲ ಎಂಬತ ಪರಿಸ್ಥಿತಿ ಬಂದಿದೆ.